ಕನ್ನಡ ರಾಜ್ಯೋತ್ಸವ 2024: ಮುರ್ಡೇಶ್ವರದಿಂದ ಕೋಟಿಲಿಂಗದವರಿಗೆ; ಕರ್ನಾಟಕದ 10 ಪ್ರಸಿದ್ಧ ಶಿವನ ದೇವಾಲಯಗಳಿವು
ಧಾರ್ಮಿಕ ಕ್ಷೇತ್ರದಲ್ಲೂ ಶ್ರೀಮಂತವಾಗಿರುವ ಕರ್ನಾಟಕದಲ್ಲಿ 62ಕ್ಕೂ ಅಧಿಕ ಶಿವನ ದೇವಾಲಯಗಳಿವೆ. ಕೆಲವೊಂದು ವಿಚಾರಗಳಿಗೆ ತುಂಬಾ ಪ್ರಸಿದ್ಧವಾಗಿರುವ ದೇವಾಲಯಗಳ ಬಗ್ಗೆ ಇಲ್ಲಿದೆ ಮಾಹಿತಿ. ಮುರ್ಡೇಶ್ವರದಿಂದ ಕೋಟಿಲಿಂಗದವರಿಗೆ ಪ್ರಸಿದ್ಧ 10 ದೇವಾಲಯಗಳ ಬಗ್ಗೆ ತಿಳಿಯಿರಿ.

ಪುರಾತನ ದೇವಾಲಯಗಳಿಗೆ ನೆಲೆಯಾಗಿರುವ ಕರ್ನಾಟಕ ಧಾರ್ಮಿಕ ತಾಣಗಳಿಗೆ ಕೊರತೆಯಿಲ್ಲ. ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ನೆಲೆ ಬೀಡಾಗಿರುವ ಇಲ್ಲಿ ಧಾರ್ಮಿಕ ಕ್ಷೇತ್ರದಲ್ಲೂ ಶ್ರೀಮಂತವಾಗಿದೆ. ಪ್ರಸಿದ್ಧ ಶಿವನ ದೇವಾಲಯಗಳ ಪ್ರಮುಖ ತಾಣಗಳು ಕರುನಾಡಿನಲ್ಲಿ ಸಾಕಷ್ಟು ಕಾಣಸಿಗುತ್ತವೆ. ಐತಿಹಾಸಿಕ ಪ್ರಾಮುಖ್ಯ, ವಾಸ್ತುಶಿಲ್ಪದ ವೈಭವಕ್ಕೆ ಹೆಸರುವಾಸಿಯಾದ ದೇವಾಲಯಗಳನ್ನು ಅಧ್ಯಾತ್ಮಿಕದಲ್ಲಿ ಆಸಕ್ತಿ ಹೊಂದಿರುವ ಪ್ರತಿಯೊಬ್ಬರು ನೋಡಲೇಬೇಕಾದ ಶಿವನ ದೇವಾಲಯಗಳಿವೆ. 62ಕ್ಕೂ ಹೆಚ್ಚು ಶಿವನ ದೇವಾಲಯಗಳು ಕರ್ನಾಟಕದಲ್ಲಿವೆ. ಭಟ್ಕಳದ ಮುರ್ಡೇಶ್ವರ, ಧರ್ಮಸ್ಥಳ, ಹಂಪಿಯ ವಿರೂಪಾಕ್ಷ ದೇವಾಲಯ, ಕೋಲಾರದ ಕೋಟಿಲಿಂಗೇಶ್ವರ, ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ, ಓಂಕಾರೇಶ್ವರ ದೇವಾಲಯ ಸೇರಿದಂತೆ ಹಲವಾರು ಪ್ರಸಿದ್ಧ ಶಿವನ ದೇವಾಲಯಗಳು ಇಲ್ಲಿ ಕಣ್ತುಂಬಿಕೊಳ್ಳಬಹುದು. ಈ ಪೈಕಿ ಪ್ರಸಿದ್ಧ 10 ದೇವಾಲಯಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಮುರ್ಡೇಶ್ವರ, ಭಟ್ಕಳ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪ್ರಮುಖ ಆಕರ್ಷಣೆಯ ಪ್ರವಾಸಿ ತಾಣವಾಗಿರುವ ಮುರ್ಡೇಶ್ವರ ದೇವಾಲಯ ಸಮುದ್ರ ತೀರದಲ್ಲಿದೆ. ವಿಶ್ವದ ಮೂರನೇ ಅತಿ ಎತ್ತರದ ಶಿವನ ಪ್ರತಿಮೆ ಇಲ್ಲಿದೆ. ಮುರ್ಡೇಶ್ವರ ಎಂಬ ಹೆಸರಿನ ಮೂಲವು ರಾಮಾಣಯದ ಕಾಲಕ್ಕೆ ಸೇರಿದೆ. ದೇವಾಲಯದ ಬಗ್ಗೆ ನಾನಾ ರೀತಿಯ ಕಥೆಗಳನ್ನು ಹೇಳುತ್ತಾರೆ. ಮುರ್ಡೇಶ್ವರ ದೇವಾಲಯಕ್ಕೆ ಬಸ್, ರೈಲು ಮಾರ್ಗ ಇದ್ದು, ಮಂಗಳೂರು-ಮುಂಬೈ ಕೊಂಕಣ ರೈಲ್ವೆ ಮಾರ್ಗವು ಈ ದೇವಾಲಯವನ್ನು ಸಂಪರ್ಕಿಸುತ್ತದೆ.
ಭೋಗನಂದೀಶ್ವರ ದೇವಾಲಯ, ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮಲ್ಲಿರುವ ಭೋಗನಂದೀಶ್ವರ ದೇವಾಲಯ ಪ್ರಮುಖ ಶಿವನ ದೇವಾಲಯಗಳಲ್ಲಿ ಒಂದು. ಈ ದೇವಾಲಯವು ವಾಸ್ತುಶಿಲ್ಪಕ್ಕೆ ತುಂಬಾ ಜನಪ್ರಿಯವಾಗಿದೆ. ಕರ್ನಾಟಕದ ದ್ರಾವಿಡ ವಾಸ್ತುಶಿಲ್ಪದ ನೊಳಂಬವಾಡಿ ಶೈಲಿಯಲ್ಲಿ ಈ ದೇವಾಲಯವಿದ್ದು, ಸುಂದರವಾಗಿ ಕೆತ್ತಲಾಗಿದೆ. ಭೋಗನಂದೀಶ್ವರ ದೇವಾಲಯದ ಪಕ್ಕದಲ್ಲೇ ಅರುಣಾಚಲೇಶ್ವರ ದೇವಾಲಯವನ್ನೂ ಕಣ್ತುಂಬಿಕೊಳ್ಳಬಹುದು.
ಮಂಜುನಾಥ ದೇವಾಲಯ, ಧರ್ಮಸ್ಥಳ
ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥನು ಕರ್ನಾಟಕದಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಶಿವನ ದೇವಾಲಯಗಳಲ್ಲಿ ಅಗ್ರ ಸ್ಥಾನದಲ್ಲಿದ್ದಾನೆ. ಇಲ್ಲಿಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಮಂಜುನಾಥನ ದರ್ಶನ ಪಡೆಯುತ್ತಾರೆ. ಈ ದೇವಾಸ್ಥನಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು, ಜೈನ ಬಂಟ್ ಕುಟುಂಬವು ಈ ದೇವಾಲಯವನ್ನು ನಡೆಸಿಕೊಂಡು ಬರುತ್ತಿದೆ. ದೇವರಾಜ ಹೆಗ್ಗಡೆಯವರ ಕೋರಿಕೆಯ ಮೇಲೆ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ.
ವಿರೂಪಾಕ್ಷ ದೇವಾಲಯ, ಹಂಪಿ
ವಿಜಯನಗರ ಜಿಲ್ಲೆಯ ಹಂಪಿಯಲ್ಲಿರುವ ವಿರೂಪಾಕ್ಷ ದೇವಾಲಯ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸ್ಮಾರಕಗಳಿಗೆ ಹೆಸರುವಾಗಿರುವ ಇಲ್ಲಿ 7ನೇ ಶತಮಾನದ ಶಿವನ ಅದ್ಬುತ ದೇವಾಲಯ ಇದಾಗಿದೆ. ಯುನೆಸ್ಕೋ ವಿಸ್ವ ಪರಂಪರೆಯ ತಾಣ ಎಂಬ ಹೆಗ್ಗಳಿಕೆಗೂ ಹಂಪಿಯ ಸ್ಮಾರಕಗಳು ಪಾತ್ರವಾಗಿವೆ. ತುಂಗಭದ್ರಾ ನದಿಗೆ ಸಂಬಂಧಿಸಿದ ಸ್ಥಳೀಯ ದೇವತೆ ಪಂಪಾದೇವಿಯ ಪತ್ನಿಯಾಗಿ ನಿರೂಪಾಕ್ಷ ಅಥವಾ ಪಂಪಾಪತಿ ಎಂದು ಕರೆಯಲ್ಪಡುವ ಶಿವನಿಗೆ ಈ ದೇವಾಲಯ ಸಮರ್ಪಿತವಾಗಿದೆ.
ಕೋಟಿಲಿಂಗೇಶ್ವರ ದೇವಾಲಯ, ಕೋಲಾರ
ಚಿನ್ನನಾದ ಕೋಲಾರ ಕೂಡ ಪುರಾತನ ದೇವಾಲಯಗಳಿಗೆ ಹೆಸರುವಾಸಿಯಾಗಿದ್ದು, ಹಲವಾರು ದೇವಸ್ಥಾನಗಳನ್ನು ಇಲ್ಲಿ ಕಾಣಬಹುದು. ಈ ಪೈಕಿ ಕೋಟಿಲಿಂಗೇಶ್ವರ ದೇವಾಲಯ ರಾಜ್ಯದಲ್ಲಿ ತುಂಬಾ ಆಕರ್ಷಣೆಯ ಹಾಗೂ ಪ್ರಸಿದ್ಧ ತಾಣವಾಗಿದೆ. ಕೋಲಾರ ಸಮೀಪದ ಕಮ್ಮಸಂದ್ರದಲ್ಲಿ ಇರುವ ಕೋಟಿಲಿಂಗಗಳನ್ನು ನೋಡಲು ನಿತ್ಯ ನೂರಾರು ಮಂದಿ ಪ್ರವಾಸಿಗರು ಬರುತ್ತಾರೆ. ದೇವಾಲಯದ ಪ್ರಮುಖ ಆಕರ್ಷಣೆಯೆಂದರೆ 108 ಅಡಿ ಎತ್ತರ ಶಿವನ ಬೃಹತ್ ಲಿಂಗವನ್ನು ಕಾಣಬಹುದು. 60 ಅಡಿಯ ನಂದಿ ಪ್ರತಿಮೆಯನ್ನು ಇಲ್ಲಿ ಕಾಣಬಹುದು. 15 ಎಕರೆ ವಿಸ್ತಾರವಾದ ಪ್ರದೇಶದಲ್ಲಿರುವ ಈ ದೇವಾಲಯದಲ್ಲಿ 1 ಕೋಟಿಗೂ ಅಧಿಕ ಲಿಂಗಗಳಿವೆ.
ಹೊಯ್ಸಳೇಶ್ವರ ದೇವಸ್ಥಾನ, ಹಳೆಬೀಡು
ಕರ್ನಾಟಕದ ಪುರಾತನ ದೇವಾಲಯಗಳಲ್ಲಿ ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯ ಕೂಡ ಒಂದು. 12 ಶತಮಾನದಲ್ಲಿ ಈ ದೇವಾವಯವನ್ನು ನಿರ್ಮಿಸಲಾಗಿರುವ ಶಿವನ ದೇವಾಲಯವಾಗಿದೆ. ಹೊಯ್ಸಳ ಸಾಮ್ರಾಜ್ಯದ ಹಿಂದಿನ ರಾಜಧಾನಿಯಾಗಿದ್ದ ಹಳೆಬೀದಿನ ಅತಿ ದೊಡ್ಡ ಸ್ಮಾರಕ ಅಂತಲೂ ಕರೆಯಲಾಗುತ್ತದೆ. ಹೊಯ್ಸಳ ಸಾಮ್ರಾಜ್ಯದ ರಾಜ ವಿಷ್ಣುವರ್ಧನ ಈ ದೇವಾಯವನ್ನು ನಿರ್ಮಿಸಿದ್ದಾನೆ ಎಂದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. 14ನೇ ಶತಮಾನದಲ್ಲಿ ಈ ದೇವಾಲಯವನ್ನು ದೆಹಲಿಯ ಸುಲ್ತಾನರು ಸೇನೆಗಳ ಮೂಲಕ ಬಂದು ಎರಡು ಬಾರಿ ಲೂಟಿ ಮಾಡಿದ್ದರು.
ಓಂಕಾರೇಶ್ವರ ದೇವಾಲಯ, ಮಡಿಕೇರಿ
ಕೊಡಗು ಜಿಲ್ಲೆಯ ಪ್ರಮುಖ ದೇವಾಲಯವಾಗಿರುವ ಓಂಕಾರೇಶ್ವರ ದೇವಾಲಯ ಶಿವನಿಗೆ ಅರ್ಪಿತವಾಗಿದೆ. ವಿಶಿಷ್ಟವಾದ ವಾಸ್ತುಶಿಲ್ಪ ಮತ್ತು ಶಾಂತಿಯುತ ವಾತಾವರಣಕ್ಕೆ ಇದು ತುಂಬಾ ಜನಪ್ರಿಯವಾಗಿದೆ. ಮಡಿಕೇರಿಯ ಕೋಟೆಯ ಬಳಿ ಕಾವೇರಿ ನದಿಯ ದಡದಲ್ಲಿ ಓಂಕಾರೇಶ್ವರ ದೇವಾಲಯವನ್ನು ನಿರ್ಮಿಸಲಾಗಿದೆ. ಇಲ್ಲಿನ ವಾಸ್ತುಶಿಲ್ಪವನ್ನು ನೋಡವುದಾದರೆ ಇಸ್ಲಾಮಿಕ್ ಶೈಲಿಯ ಗುಮ್ಮಟಗಳು, ಕೇರಳ ಮಾದರಿಯ ಹೆಂಚಿನ ಛಾವಣಿಗಳ ಮಿಶ್ರಣವಾಗಿದೆ. ಯಾವುದೇ ರೀತಿಯ ಕಂಬದ ಸಭಾಂಣಗಳು ಇಲ್ಲಿ ಕಾಣುವುದಿಲ್ಲ. ಇತರೆ ಶಿವನ ದೇವಾಲಯಗಳಿಗಿಂತ ವಿಭಿನ್ನ ಎನಿಸುತ್ತದೆ.
ನನ್ನೇಶ್ವರ ದೇವಾಲಯ, ಗದಗ
ಕರ್ನಾಟಕದ ಪುರಾತನ ದೇವಾಲಯಗಳಲ್ಲಿ ನನ್ನೇಶ್ವರ ದೇವಾಲಯ ಕೂಡ ಒಂದಾಗಿದ್ದು, 11ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ. ವಿಶಿಷ್ಟವಾದ ವಾಸ್ತುಶಿಲ್ಪವನ್ನು ಹೊಂದಿರುವ ಶಿವನ ದೇವಾಲಯ ಇದಾಗಿದೆ. ದೇವಾಲಯವನ್ನುು ಭಾರತೀಯ ಪುರಾತತ್ವ ಸರ್ವೇಕ್ಷಣೆಯ ರಾಷ್ಟ್ರೀಯ ಪ್ರಾಮುಖ್ಯದ ಆಧಾರದಲ್ಲಿ ಸ್ಮಾರಕವಾಗಿ ರಕ್ಷಿಸಲಾಗಿದೆ. ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನನ್ನೇಶ್ವರ ದೇವಾಲಯವಿದೆ.
ನಂಜುಂಡೇಶ್ವರ ದೇವಾಲಯ, ನಂಜನಗೂಡು
ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿರುವ ನಂಜುಂಡೇಶ್ವರ ದೇವಾಲಯವನ್ನು ಶ್ರೀಕಂಠೇಶ್ವರ ದೇವಾಲಯ ಅಂತಲೂ ಕರೆಯಲಾಗುತ್ತದೆ. ಇದು ಶಿವನಿಗೆ ಅರ್ಪಿತವಾದ ಪುರಾತನ ಹಾಗೂ 120 ಎತ್ತರದ ದೇವಾಲಯವಾಗಿದೆ. ನಂಜು ಎಂದರೆ ವಿಷ ಎನ್ನುವ ಅರ್ಥ ಬರುತ್ತದೆ. ನಂಜುಂಡೇಶ್ವರನ ಅರ್ಥ ವಿಷವನ್ನು ಸೇವಿಸಿದ ದೇವರು. ನಂಜನಗೂಡನ್ನು ದಕ್ಷಿಣ ಕಾಶಿ ಅಂತಲೂ ಕರೆಯಲಾಗುತ್ತದೆ.
ತಾರಕೇಶ್ವರ ದೇವಾಲಯ, ಹಾನಗಲ್
ಹಾನಗಲ್‌ನಲ್ಲಿರುವ ತಾರಕೇಶ್ವರ ದೇವಾಲಯವೂ ಶಿವನಿಗೆ ಸಮರ್ಪಿತವಾದ ಪ್ರಸಿದ್ಧ ದೇವಾಲಯವಾಗಿದೆ. ಇಲ್ಲಿನ ಶಿವನ ವಾಹನ ನಂದಿ, ಪುತ್ರ ಭಗವಾನ್ ಗಣಪತಿಯ ದೇವಾಲಯಗಳು ಇಲ್ಲಿ ಕಾಣಬಹುದು. ಇಲ್ಲಿನ ಅಷ್ಟಭುಜಾಕೃತಿಯ ಸಭಾಂಗಣ ತುಂಬಾ ಆಕರ್ಷಿತವಾಗಿದೆ. ಚಾಲುಕ್ಯರು 10 ರಿಂದ 12ನೇ ಶತಮಾನದವರಿಗೆ ಈ ಪ್ರದೇಶವನ್ನು ಆಳ್ವಿಕೆ ಮಾಡಿದ್ದರು. ಇದೇ ಸಮಯದಲ್ಲಿ ಗದಗ, ಲಕ್ಕುಂಡಿ ಹಾಗೂ ಹಾನಗಲ್‌ನಲ್ಲಿ ಸಾಕಷ್ಟು ದೇವಾಲಯಗಳನ್ನು ನಿರ್ಮಿಸಿದ್ದಾರೆ ಎಂದು ಇತಿಹಾಸದಿಂದ ತಿಳಿಯಬಹುದು.
ಗಮನಿಸಿ: ಕರ್ನಾಟಕದಲ್ಲಿ ಇನ್ನೂ ಹಲವಾರು ಪ್ರಸಿದ್ಧ ಶಿವನ ದೇವಾಲಯಗಳಿವೆ. ಆದರೆ ಕೆಲವು ಪ್ರಮುಖ ದೇವಾಲಯಗಳ ವಿವರಗಳನ್ನು ಮಾತ್ರ ಇಲ್ಲಿ ನೀಡಲಾಗಿದೆ.
