ಕನ್ಯಾ ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಕೆಲಸದಲ್ಲಿ ನಿಮಗಿರುವ ಶ್ರದ್ಧೆಯೇ ನಿಮ್ಮ ಶಕ್ತಿಯಾಗಿ ಕಾಪಾಡುತ್ತದೆ
ಯುಗಾದಿ ರಾಶಿ ಭವಿಷ್ಯ: ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ಅಪರೂಪದ ಬುದ್ಧಿವಂತಿಕೆ ತೋರುವ ಕನ್ಯಾ ರಾಶಿಯವರು ತಮ್ಮ ಕಾಯಕ ಪ್ರಜ್ಞೆಯಿಂದ ಎಲ್ಲರ ಗಮನ ಸೆಳೆಯುತ್ತಾರೆ. ಕನ್ಯಾ ರಾಶಿಗೆ ಈ ವರ್ಷ ಯಾವುದರಲ್ಲಿ ಬೇವು, ಯಾವುದರಲ್ಲಿ ಬೆಲ್ಲ. ಜ್ಯೋತಿಷಿ ಎಚ್.ಸತೀಶ್ ಅವರು ಈ ಬರಹದಲ್ಲಿ ವಿವರ ನೀಡಿದ್ದಾರೆ.
ಕನ್ಯಾ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಉತ್ತರ ನಕ್ಷತ್ರದ 2, 3 ಮತ್ತು 4ನೇ ಪಾದಗಳು, ಹಸ್ತ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಚಿತ್ತ ನಕ್ಷತ್ರದ 1 ಮತ್ತು 2ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಕನ್ಯಾ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಟೊ, ಪ ಮತ್ತು ಪಿ ಆಗಿದ್ದರೆ ಉತ್ತರ ನಕ್ಷತ್ರ, ಪು, ಷ, ಣ ಮತ್ತು ಠ ಆದಲ್ಲಿ ಹಸ್ತ ನಕ್ಷತ್ರ ಹಾಗೂ ಪೆ, ಪೊ ಆಗಿದ್ದಲ್ಲಿ ಚಿತ್ತ ನಕ್ಷತ್ರ ಮತ್ತು ಕನ್ಯಾ ರಾಶಿ ಆಗುತ್ತದೆ. ಸೂಕ್ಷ್ಮ ಗಮನಿಕೆ ಕನ್ಯಾ ರಾಶಿಯವರ ವೈಶಿಷ್ಟ್ಯ. ವಾಸ್ತವ ಏನು ಎಂದು ಗ್ರಹಿಸುವುದು ಇವರ ವೈಶಿಷ್ಟ್ಯ. ಕಾಯಕಪ್ರಜ್ಞೆ ಸ್ವಭಾವ ಸಹಜವಾಗಿ ಇರುತ್ತದೆ. ಅದರೊಂದಿಗೆ ಸಕಾಲದಲ್ಲಿ ತಮ್ಮ ಬುದ್ಧಿವಂತಿಕೆಯಿಂದ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಇವರ ಕಡೆಗೆ ಎಲ್ಲರೂ ತಿರುಗಿ ನೋಡುತ್ತಾರೆ.
ಕನ್ಯಾ ರಾಶಿಯ ಗುಣಲಕ್ಷಣಗಳು (Virgo characteristics in Kannada)
ಕನ್ಯಾ ರಾಶಿಯಲ್ಲಿ ಜನಿಸಿರುವ ಮಹಿಳೆಯರು ನೋಡಲು ಶಾಂತರಾಗಿ ಕಂಡರೂ ಸಾಮಾನ್ಯವಾಗಿ ಅವರಿಗೆ ಕೋಪ ಹೆಚ್ಚು. ಎಲ್ಲರೊಂದಿಗೆ ಸ್ನೇಹ, ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ನಾಚಿಕೆ ಸಂಕೋಚದ ಸ್ವಭಾವ ಇರುವ ಕಾರಣ ಮನದ ಭಾವನೆಯನ್ನು ಯಾರಿಗೂ ತಿಳಿಸುವುದಿಲ್ಲ. ಹಿಂದಿನ ಕಾಲದ ಶಾಸ್ತ್ರ ಸಂಪ್ರದಾಯಗಳನ್ನು ಇಷ್ಟಪಡುವರು. ವಿಶೇಷ ಬುದ್ಧಿಶಕ್ತಿ ಇರುತ್ತದೆ. ಯಾವುದೇ ವಿಚಾರವಾದರೂ ವಿಮರ್ಶೆ ಮಾಡುವ ಬುದ್ದಿವಂತಿಕೆ ಇರುತ್ತದೆ. ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಬಾಳುತ್ತಾರೆ. ಜೀವನದಲ್ಲಿ ಆಸಕ್ತಿ ಕಳೆದುಕೊಂಡವರಿಗೆ ಪ್ರೇರಣಾ ಶಕ್ತಿಯಾಗಿ ಭರವಸೆ ಕೊಡುತ್ತಾರೆ. ಸ್ವಂತ ಕೆಲಸ ಕಾರ್ಯಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ತಮ್ಮನ್ನು ನಂಬಿದ ಜನರನ್ನು ಎಂದಿಗೂ ಕೈ ಬಿಡುವುದಿಲ್ಲ. ಆದರೆ ಸಣ್ಣ ಪುಟ್ಟ ವಿಚಾರಗಳಿಗೂ ಚಿಂತೆ ಮಾಡುತ್ತಾರೆ.
ಪುರುಷರಾದರೆ ಶಿಸ್ತಿನ ಜೀವನವನ್ನು ನಡೆಸುತ್ತಾರೆ. ಉತ್ತಮ ಸಂಘಟನಾ ಚಾತುರ್ಯ ಇವರಿಗೆ ಇರುತ್ತದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುತ್ತಾರೆ. ಬೇರೆಯವರು ಒಪ್ಪುವ ಮತ್ತು ಮೆಚ್ಚುವ ಗುಣಗಳು ಇವರಲ್ಲಿ ಇರುತ್ತವೆ. ಅನುಕರಣಾಶೀಲರು, ನಂಬಿದವರ ಜೊತೆ ಪ್ರಾಮಾಣಿಕತೆಯಿಂದ ಜೀವನ ನಡೆಸುತ್ತಾರೆ. ವಿಶ್ರಾಂತಿ ಪಡೆಯುವ ಹವ್ಯಾಸ ಇವರಲ್ಲಿ ಇರುತ್ತದೆ. ಹಣದ ವಿಚಾರದಲ್ಲಾಗಲಿ ಅಥವಾ ಇನ್ನಾವುದೇ ವಿಚಾರದಲ್ಲಾಗಲಿ ಯಾರಿಗೂ ಮೋಸ ಮಾಡುವುದಿಲ್ಲ.
ಸ್ತ್ರೀಯರಾಗಲಿ ಪುರುಷರಾಗಲಿ ಇಷ್ಟವಾಗದ ಜನರನ್ನು ಮತ್ತು ಇಷ್ಟವಾಗದ ಕೆಲಸವನ್ನು ಕಟುವಾಗಿ ಟೀಕಿಸುತ್ತಾರೆ. ಸ್ಥಿರವಾದ ಮನಸ್ಸಿರುವುದಿಲ್ಲ. ಉತ್ತಮ ವಿದ್ಯೆ ಇರುತ್ತದೆ. ಒಂದಕ್ಕಿಂತಲೂ ಹೆಚ್ಚಿನ ಕೆಲಸವನ್ನು ಮಾಡುವ ಕಾರಣ ಹಣದ ಕೊರತೆ ಇರುವುದಿಲ್ಲ. ಸಾಮಾನ್ಯವಾಗಿ ಇವರ ಜೀವನದಲ್ಲಿ ಕಷ್ಟಸುಖ ಮತ್ತು ಲಾಭನಷ್ಟಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ಕನ್ಯಾ ರಾಶಿಗೆ ಶುಭ ದಿನಾಂಕ, ವಾರ, ಬಣ್ಣ
ಕನ್ಯಾ ರಾಶಿಯಲ್ಲಿ ಜನಿಸಿದವರು ನೆನಪಿಟ್ಟುಕೊಳ್ಳಬೇಕಾದ ವಿಚಾರಗಳು. ಶುಭ ದಿನಾಂಕಗಳು: 2, 3, 5, 6, 7, 14, 24, 31, 19. ಶುಭ ದಿನಗಳು: ಭಾನುವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ವರ್ಣ: ಹಳದಿ, ಬಿಳಿ ಮತ್ತು ಹಸಿರು. ಅಶುಭ ವರ್ಣ: ನೀಲಿ ಮತ್ತು ಕೆಂಪು. ಶುಭ ದಿಕ್ಕು: ದಕ್ಷಿಣ. ಶುಭ ತಿಂಗಳು: ಜೂನ್ 15ರಿಂದ ಆಗಸ್ಟ್ 14 ಮತ್ತು ಡಿಸೆಂಬರ್ 15ರಿಂದ ಜನವರಿ 14. ಶುಭ ಹರಳು: ಹಸಿರು ಪಚ್ಚೆ, ಝೆರ್ಕೋನ್ ಮತ್ತು ನೀಲಮಣಿ. ಶುಭ ರಾಶಿ: ಮಕರ, ವೃಷಭ ಮತ್ತು ಮಿಥುನ. ಅಶುಭ ರಾಶಿ: ವೃಶ್ಚಿಕ, ಮೇಷ ಮತ್ತು ಸಿಂಹ.
ಶ್ರೀ ಕ್ರೋಧಿನಾಮ ಸಂವತ್ಸರದ ಕನ್ಯಾ ರಾಶಿಯ ಗೋಚಾರ ಫಲ
ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಕನ್ಯಾ ರಾಶಿಯವರು ಆರಂಭದಿಂದಲೇ ಉತ್ತಮ ಫಲಗಳನ್ನು ಪಡೆಯುತ್ತಾರೆ. ಬಹುದಿನದಿಂದ ಕಾಡುತ್ತಿದ್ದ ಅನಾರೋಗ್ಯದ ತೊಂದರೆ ದೂರವಾಗುತ್ತದೆ. ವಿನಾಕಾರಣ ನಿಂತು ಹೋಗಿದ್ದ ಮದುವೆ ಮುಂತಾದ ಮಂಗಳ ಕಾರ್ಯಗಳು ನೆರವೇರುತ್ತವೆ. ಆದರೆ ತಪ್ಪು ನಿರ್ಧಾರ ಮತ್ತು ತಪ್ಪಾದ ದೈಹಿಕ ಚಟುವಟಿಕೆಗಳಿಂದ ಅನಾರೋಗ್ಯ ಉಂಟಾಗುತ್ತದೆ. ಸುಲಭವಾಗಿ ಬೇರೆಯವರ ಪ್ರಭಾವಕ್ಕೆ ಮಣಿಯುತ್ತಾರೆ. ತಮ್ಮ ಬುದ್ದಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಮುಂದುವರಿದರೆ ಯಾವುದೇ ತೊಂದರೆ ಎದುರಾಗುವುದಿಲ್ಲ.
ಕನ್ಯಾ ರಾಶಿಯವರಿಗೆ ಈ ವರ್ಷದ ಸ್ನೇಹ, ವಿಶ್ವಾಸದ ಬಂಧ
ಕನ್ಯಾ ರಾಶಿಯವರಿಗೆ ಯಾರ ಬಗ್ಗೆಯೂ ಮನಸ್ಸಿನಲ್ಲಿ ಯಾವುದೇ ತಪ್ಪು ಅಭಿಪ್ರಾಯ ಇರುವುದಿಲ್ಲ. ಆದರೆ ಮನಸ್ಸಿನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ವಿಫಲರಾಗುತ್ತಾರೆ. ಅವರ ತಪ್ಪಾದ ಮಾತುಕತೆ ಆತ್ಮೀಯರಲ್ಲಿಯೂ ಬೇಸರ ಉಂಟುಮಾಡುತ್ತದೆ. ಆದ್ದರಿಂದ ಮಾತನಾಡುವ ಮುನ್ನ ಒಮ್ಮೆ ಯೋಚಿಸಿ. ಮನದಲ್ಲಿರುವ ಭಾವನೆಗಳನ್ನು ಯಾರಿಗೂ ಸುಲಭವಾಗಿ ತಿಳಿಸುವುದಿಲ್ಲ. ಆದರೆ ಆತ್ಮೀಯರ ಪ್ರೀತಿಯನ್ನು ಅಸಡ್ಡೆಯಿಂದ ನೋಡುವುದಿಲ್ಲ. ಬೇರೆಯವರ ಮನಸ್ಸಿಗೆ ಬೇಸರ ಉಂಟಾಗುವಂತೆ ನಡೆದುಕೊಳ್ಳುತ್ತಾರೆ. ದಿನ ಕಳೆದಂತೆ ಸಂತಸದಿಂದ ಬಾಳುವುದನ್ನು ಕಲಿಯುವಿರಿ. ಸ್ನೇಹ ಮತ್ತು ಸಂಬಂಧಗಳಿಗೆ ಹೆಚ್ಚಿನ ಬೆಲೆ ನೀಡುತ್ತಾರೆ.
ಉದ್ಯೋಗ: ಕರಗಲಿವೆ ಔದ್ಯೋಗಿಕ ಸಮಸ್ಯೆಗಳು
ಕನ್ಯಾ ರಾಶಿಯವರಿಗೆ ಉದ್ಯೋಗದಲ್ಲಿನ ಸಮಸ್ಯೆಗಳು ಮಂಜಿನಂತೆ ಕರಗುತ್ತವೆ. ವೃತ್ತಿಯನ್ನು ಬದಲಿಸಬೇಕಾಗಲ್ಲಿ ಅನುಕೂಲಕರ ಅವಕಾಶಗಳು ದೊರೆಯಲಿವೆ. ಸಣ್ಣಪುಟ್ಟ ಕೆಲಸ ಕಾರ್ಯವಾದರೂ ಆಸಕ್ತಿಯಿಂದ ಮಾಡುವಿರಿ. ಇದರಿಂದ ಕೇವಲ ಯಶಸ್ಸು ಮಾತ್ರವಲ್ಲದೆ ಹಿರಿಯ ಅಧಿಕಾರಿಗಳ ಪ್ರಶಂಸೆ ದೊರೆಯುತ್ತದೆ. ನಿಮ್ಮ ಅಭಿವೃದ್ಧಿಯನ್ನು ಕಂಡು ಅಸೂಯೆ ಪಡುವ ಜನರು ತೊಂದರೆ ನೀಡಬಹುದು. ಎಚ್ಚರಿಕೆಯಿಂದ ಇರಬೇಕು. ಈ ಸಂವತ್ಸರ ಪೂರ್ತಿ ನಿಮಗೆ ಉದ್ಯೋಗದಲ್ಲಿ ಎಲ್ಲಾ ರೀತಿಯ ಅನುಕೂಲತೆ ದೊರೆಯುತ್ತದೆ. ನಿಮ್ಮ ಯೋಜನೆಗಳನ್ನು ಯಾರಲ್ಲಿಯೂ ಹಂಚಿಕೊಳ್ಳಬೇಡಿರಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಅತಿ ಮುಖ್ಯವಾದ ವಿಚಾರಗಳನ್ನು ರಹಸ್ಯವಾಗಿಡಿ.
ವಿದ್ಯಾಭ್ಯಾಸ: ಕಲಿಕೆಯಲ್ಲಿ ಸಿಗಲಿದೆ ಪ್ರಗತಿ
ಕನ್ಯಾ ರಾಶಿಗೆ ಸೇರಿದ ವಿದ್ಯಾರ್ಥಿಗಳು ಕ್ರೋಧಿನಾಮ ಸಂವತ್ಸರದಲ್ಲಿ ವಿದ್ಯಾಭ್ಯಾಸವನ್ನು ಗಂಭೀರವಾಗಿ ಪರಿಗಣಿಸುವಿರಿ. ಸುಲಭವಾಗಿ ಯಶಸ್ಸು ದೊರೆಯಲಿದೆ. ಎಲ್ಲರಿಂದ ದೂರವಿದ್ದು ಕಲಿಕೆಯಲ್ಲಿ ಮುಂದುವರಿಯುತ್ತಾರೆ. ಸತತ ಪರಿಶ್ರಮ ಮತ್ತು ನಿರಂತರ ಪ್ರಯತ್ನದಿಂದ ವಿದ್ಯಾರ್ಥಿಗಳು ಉನ್ನತ ಸ್ಥಾನ ಗಳಿಸುತ್ತಾರೆ. ಹೆಚ್ಚಿನ ಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವಿರಿ. ಹೆಚ್ಚಿನ ಪ್ರಯತ್ನದಿಂದ ವಿದೇಶದಲ್ಲಿ ವ್ಯಾಸಂಗವನ್ನು ಮುಂದುವರಿಸುವ ಅವಕಾಶ ದೊರೆಯುತ್ತದೆ. ವಿದ್ಯಾರ್ಥಿಗಳು ಯಾವಾಗಲೂ ಆರೋಗ್ಯದ ವಿಚಾರದಲ್ಲಿ ಎಚ್ಚರದಿಂದ ಇರಬೇಕು. ಮುಖ್ಯವಾಗಿ ಪರೀಕ್ಷೆಯ ವೇಳೆ ಆರೋಗ್ಯವನ್ನು ಹುಷಾರಾಗಿ ನೋಡಿಕೊಳ್ಳಬೇಕು. ಈ ವರ್ಷ ಕೈಕಾಲುಗಳಿಗೆ ಪೆಟ್ಟುಬಿದ್ದು ತೊಂದರೆಯಾಗುವ ಸಾಧ್ಯತೆಗಳಿವೆ ಎಚ್ಚರವಿರಲಿ.
ಹಣಕಾಸು: ಹೂಡಿಕೆ ವಿಚಾರದಲ್ಲಿ ಜಾಗರೂಕತೆಯೇ ಶ್ರೀರಕ್ಷೆ
ಕನ್ಯಾ ರಾಶಿಯವರಿಗೆ ಈ ವರ್ಷ ಆರ್ಥಿಕ ಪರಿಸ್ಥಿತಿ ಏರಿಳಿತಗಳಿಂದ ಕೂಡಿರುತ್ತದೆ. ಹಣಕಾಸಿನ ಸಮಸ್ಯೆಗಳಿಂದ ಹೊರ ಬರುವಿರಾದರೂ, ಕೈಲಿರುವ ಕಾಸು ಹೇಗೆ ಖರ್ಚು ಮಾಡಬೇಕು, ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ವಿಚಾರದಲ್ಲಿ ಜಾಗರೂಕರಾಗಿರಬೇಕು. ಹಣಕಾಸಿನ ಅಪಾಯವನ್ನು ಕಡಿಮೆ ಮಾಡಲು ನಿಮಗೆ ಆತ್ಮೀಯರ ಸಹಾಯ ದೊರೆಯುತ್ತದೆ. ಹೂಡಿಕೆ ಮಾಡುವಾಗಲೂ ಹೆಚ್ಚು ಜಾಗರೂಕತೆ ಬೇಕು. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಈ ವರ್ಷ ಇದೆ. ಅಷ್ಟೇ ಅಲ್ಲದೆ, ಅನಿರೀಕ್ಷಿತ ಧನಲಾಭದ ಲಕ್ಷಣಗಳೂ ಗೋಚರಿಸುತ್ತಿವೆ. ಖರ್ಚು ವೆಚ್ಚಗಳನ್ನು ನಿಯಂತ್ರಿಸಿದರೆ ಯಾವುದೇ ತೊಂದರೆ ಕಂಡುಬರುವುದಿಲ್ಲ.
ಕೌಟುಂಬಿಕ ಜೀವನ: ಹಿರಿಯರ ಮಧ್ಯಸ್ಥಿಕೆಯಿಂದ ಸಿಗಲಿದೆ ನೆಮ್ಮದಿ
ಕನ್ಯಾ ರಾಶಿಯವರಿಗೆ ಕುಟುಂಬದ ವಿಚಾರದಲ್ಲಿ ಹೆಚ್ಚಿನ ಆಶಾಭಾವನೆ ಇರುತ್ತದೆ. ಬೇರೆಯವರ ವಿಚಾರವಾಗಿ ಅನಗತ್ಯ ವಾದ-ವಿವಾದ ಸಂಭವಿಸುತ್ತದೆ. ಆದರೆ ಮೇ ತಿಂಗಳ ನಂತರ ಗುರುಬಲದ ಪರಿಣಾಮವಾಗಿ ಕುಟುಂಬದಲ್ಲಿ ತೊಂದರೆ ಉಂಟಾಗುವುದಿಲ್ಲ. ಹಿರಿಯರ ಮಧ್ಯಸ್ಥಿಕೆಯು ವಿವಾದಗಳನ್ನು ಕೊನೆಗೊಳಿಸುತ್ತದೆ. ಮಕ್ಕಳ ಸಲುವಾಗಿ ಕುಟುಂಬದ ಎಲ್ಲರೂ ಒಂದೇ ನಿರ್ಧಾರಕ್ಕೆ ಬದ್ದರಾಗುತ್ತಾರೆ. ಒಟ್ಟಾರೆ ಒಗ್ಗಟ್ಟಿನ ಫಲವಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ ಸದಾ ನೆಲೆಸಿರುತ್ತದೆ. ಕುಟುಂಬದ ಹಿರಿಯರು ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳುವುದರಿಂದ ಮಾನಸಿಕ ಒತ್ತಡ ಇರುವುದಿಲ್ಲ. ಅನೇಕ ಧಾರ್ಮಿಕ ಮತ್ತು ಮಂಗಳ ಕಾರ್ಯಗಳು ಯಶಸ್ವಿಯಾಗಿ ನಡೆಯಲಿವೆ.
ಮಕ್ಕಳ ವಿಚಾರ: ಮಕ್ಕಳ ಅಕ್ಕರೆಗೆ ಕನ್ಯಾ ರಾಶಿಗೆ ಯಾರು ಸಾಟಿ
ಕನ್ಯಾ ರಾಶಿಗೆ ಸೇರಿದವರು ಮಕ್ಕಳಿಲ್ಲ ಎನ್ನುವ ಕೊರಗು ಅನುಭವಿಸುತ್ತಿದ್ದರೆ ಈ ವರ್ಷ ಶುಭ ಸುದ್ದಿ ಕೇಳುವಿರಿ. ಮೇ ತಿಂಗಳ ನಂತರ ಸಂತಾನ ಲಾಭವಿದೆ. ಮಕ್ಕಳನ್ನು ಅಕ್ಕರೆಯಿಂದ ಪೋಷಿಸುವಿರಿ. ಆದರೆ ವಿದ್ಯಾಭ್ಯಾಸ ಮತ್ತು ನಡವಳಿಕೆಯ ಬಗ್ಗೆರಾಜಿ ಮಾಡಿಕೊಳ್ಳುವುದಿಲ್ಲ. ಸದಾಕಾಲ ಮಕ್ಕಳೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ. ಮಕ್ಕಳನ್ನು ಶಿಕ್ಷಿಸುವುದರ ಬದಲು ಹೆಚ್ಚಿನ ಪ್ರೀತಿ ತೋರಿಸಿ ಸರಿದಾರಿಗೆ ತರುವಿರಿ. ಉತ್ತಮ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಲೆಕ್ಕವಿಲ್ಲದೆ ಖರ್ಚು ಮಾಡುವಿರಿ. ಕುಟುಂಬದ ಹಿರಿಯರ ನೆರಳಿನಲ್ಲಿ ಮಕ್ಕಳು ಬೆಳೆಯುವ ಕಾರಣ ತೊಂದರೆಗಳು ಕಡಿಮೆ. ಕುಟುಂಬದವರೊಂದಿಗೆ, ಮುಖ್ಯವಾಗಿ ಮಕ್ಕಳೊಂದಿಗೆ ಬೆರೆಯಲು ಸಮಯ ಮೀಸಲಿಡುವಿರಿ. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಕಂಡು ಬರಬಹುದು. ಒಟ್ಟಾರೆ ಮಕ್ಕಳ ವಿಚಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ.
ವಿವಾಹ ಮತ್ತು ದಾಂಪತ್ಯ: ಸಂಬಂಧಿಕರ ನೆರವಿನಿಂದ ನೆರವೇರಲಿದೆ ವಿವಾಹ
ಕನ್ಯಾ ರಾಶಿಯವರ ದಾಂಪತ್ಯ ಜೀವನದಲ್ಲಿ ಸಂತಸದ ವಾತಾವರಣ ಇರಲಿದೆ. ಅವಿವಾಹಿತರಿಗೆ ಮೇ ನಂತರದ ದಿನಗಳಲ್ಲಿ ವಿವಾಹವಾಗುತ್ತದೆ. ದೂರದ ಸಂಬಂಧಿಕರ ಸಹಾಯದಿಂದ ವಿವಾಹ ನಿಶ್ಚಯವಾಗುತ್ತದೆ. ನವದಂಪತಿಗಳು ಸಂತೋಷದಿಂದ ಜೀವನ ನಡೆಸುವರು. ಚಾಡಿ ಮಾತಿದ್ದರೂ ಅನುಮಾನದ ಬದಲು ನಂಬಿಕೆಯನ್ನು ಹೆಚ್ಚಿಸಿಕೊಳ್ಳಿ. ಸಂಗಾತಿಯ ಆರೋಗ್ಯದಲ್ಲಿ ಅಲ್ಪ ಪ್ರಮಾಣದ ತೊಂದರೆ ಕಾಣಬಹುದು. ದಂಪತಿಗಳು ಒಬ್ಬರನ್ನೊಬ್ಬರು ಕ್ಷಮಿಸಿದಲ್ಲಿ ಸಂತೋಷ ಸಂಭ್ರಮಕ್ಕೆ ಪಾರವಿರುವುದಿಲ್ಲ.
ವ್ಯಾಪಾರ ಮತ್ತು ವ್ಯವಹಾರ: ಹೊಸ ಉದ್ದಿಮೆ ಒಲಿಯಬಹುದು
ಕನ್ಯಾ ರಾಶಿಗೆ ಸೇರಿದವರು ವ್ಯಾಪಾರದಲ್ಲಿ ಯಾರ ಮಾತನ್ನೂ ಸುಲಭವಾಗಿ ನಂಬುವುದಿಲ್ಲ. ಸಮಾಜದಲ್ಲಿ ಪ್ರತಿಷ್ಠೆ ಗಳಿಸಲು ಕಷ್ಟವಾದರೂ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ಗಳಿಸುತ್ತಾರೆ. ಸ್ವಂತ ಉದ್ದಿಮೆ ಇದ್ದರೂ ಕೆಲಸ ಮಾಡಲು ಕಾರ್ಮಿಕರು ಸಮಯಕ್ಕೆ ತಕ್ಕಂತೆ ದೊರೆಯಲಾರರು. ಇದರಿಂದ ನಷ್ಟವಾಗದೆ ಹೋದರು, ಹಣಕಾಸಿನ ಕೊರತೆ ಕಂಡುಬರುತ್ತದೆ. ಪಾಲುಗಾರಿಕೆ ವ್ಯಾಪಾರದಲ್ಲಿ ಹಿನ್ನೆಡೆ ಇರುತ್ತದೆ. ಒಂದೇ ರೀತಿಯ ಕೆಲಸ ಕಾರ್ಯಗಳು ನೆಚ್ಚಿ ಕೊಳ್ಳದೆ ಕುಟುಂಬದವರ ಜೊತೆಗೂಡಿ ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಅದೃಷ್ಟದಿಂದ ಹಣವು ದ್ವಿಗುಣಗೊಳ್ಳಲಿದೆ. ಈ ವರ್ಷ ಬಹುತೇಕ, ಸಾಲ ಮಾಡಿ ವ್ಯಾಪಾರ ಮಾಡಬೇಕಾಗುವ ಪ್ರಸಂಗ ಬರುವುದಿಲ್ಲ.
ವಾಹನ ವಿಚಾರ: ಕಾನೂನು ವಿಚಾರದಲ್ಲಿ ಇರಲಿ ಎಚ್ಚರ
ಕನ್ಯಾ ರಾಶಿಗೆ ಸೇರಿದವರು ಈ ವರ್ಷ ದಿನಬಳಕೆಗಾಗಿ ಹೊಸ ವಾಹನ ಕೊಳ್ಳುವಿರಿ. ಅಪರಿಚಿತರಿಂದ ವಾಹನ ಕೊಳ್ಳುವುದಾದರೆ ಕಾನೂನಿಗೆ ಅನುಗುಣವಾಗಿಯೇ ಮುಂದುವರೆಯಿರಿ. ಹಿರಿಯರೊಬ್ಬರು ವಾಹನದಿಂದ ತೊಂದರೆ ಅನುಭವಿಸಬೇಕಾಗಬಹುದು. ನೀಲಿ, ಹಸಿರು ಬಣ್ಣದ ವಾಹನಗಳು ಕನ್ಯಾ ರಾಶಿಗೆ ಆಗಿಬರುತ್ತವೆ. ಹೊಸ ವಾಹನ ಕೊಳ್ಳುವ ಸೂಚನೆ ಇದೆ. ವಾಹನಗಳ ಮುಖಾಂತರ ಕುಟುಂಬದ ಆದಾಯ ಹೆಚ್ಚುತ್ತದೆ. ಕೆಂಪು ಮತ್ತು ಬಿಳಿ ಬಣ್ಣದ ವಾಹನ ಕೊಳ್ಳಬೇಡಿ. ವಾಹನ ಚಾಲನೆ ಮಾಡುವ ವೇಳೆ ಮನಸ್ಸು ನಿಮ್ಮ ನಿಯಂತ್ರಣದಲ್ಲಿ ಇರಲಿ.
ಆರೋಗ್ಯದ ವಿಚಾರ: ಇದು ಹೊಯ್ದಾಟದ ವರ್ಷ
ಕನ್ಯಾ ರಾಶಿಯವರಿಗೆ ಆರೋಗ್ಯದಲ್ಲಿ ಏರಿಳಿತ ಸಾಮಾನ್ಯ. ಆದರೆ ಸಪ್ತಮದಲ್ಲಿ ರಾಹು ಇರುವ ಕಾರಣ ಸಂಗಾತಿಯ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ. ಅರೆತಲೆ ಶೂಲೆ ಇದ್ದಲ್ಲಿ ಎಚ್ಚರಿಕೆ ವಹಿಸಿ. ಅನಗತ್ಯವಾಗಿ ನೀವು ಮಾನಸಿಕ ಒತ್ತಡದಿಂದ ಬಳಲುವಿರಿ. ಉಸಿರಾಟಕ್ಕೆ ಸಂಬಂಧಿಸಿದ ತೊಂದರೆ ಇರುತ್ತದೆ. ಆದರೆ ಯಾವುದೇ ಅಪಾಯ ಕಾಣದು. ದೈಹಿಕ ವ್ಯಾಯಾಮದ ಬಗ್ಗೆ ಗಮನ ಇರಲಿ. ದೈಹಿಕ ಚಟುವಟಿಕೆಗಳಲ್ಲಿ ನಿಯಮಿತವಾಗಿ ಪಾಲ್ಗೊಳ್ಲಿ. ಮಕ್ಕಳಿಗೂ ಪದೇಪದೆ ಆರೋಗ್ಯ ಕೈಕೊಡಬಹುದು. ಸ್ತ್ರೀಯರಲ್ಲಿ ಹಾರ್ಮೋನ್ ಸ್ರವಿಕೆಯಲ್ಲಿ ವ್ಯತ್ಯಾಸ ಉಂಟಾಗಲಿದೆ. ಆರೋಗ್ಯಕರ ಆಹಾರ ಸೇವನೆ ವಿಚಾರದಲ್ಲಿ ಎಂದಿಗೂ ರಾಜಿಯಾಗಬೇಡಿ.
ಕನ್ಯಾ ರಾಶಿಗೆ ಪರಿಹಾರಗಳು
1) ಪ್ರತಿದಿನ ಶ್ರೀ ವಿಷ್ಣು ಸಹಸ್ರನಾಮ ಪಠಿಸುವುದರಿಂದ ಅಥವ ಕೇಳುವುದರಿಂದ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಆತ್ಮವಿಶ್ವಾಸ ಹೆಚ್ಚುವುದರೊಂದಿಗೆ ಮಾನಸಿಕ ಒತ್ತಡವೂ ಕಡಿಮೆ ಆಗುತ್ತದೆ.
2) ಬಿಳಿ ಬಟ್ಟೆ ಮತ್ತು ಗೋಧಿಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.
3) ಶ್ರೀ ಲಕ್ಷ್ಮೀದೇವಿಯ ದೇವಸ್ಥಾನಕ್ಕೆ ಅಕ್ಕಿ, ಬೆಲ್ಲ ಮತ್ತು ತೊಗರಿ ಬೇಳೆ ನೀಡುವುದರಿಂದ ಎಲ್ಲ ವಿಧದಲ್ಲಿಯೂ ಪ್ರಗತಿ ದೊರೆಯುತ್ತದೆ.
4) ಶ್ರೀ ದುರ್ಗಾಮಾತೆಗೆ ಅಭಿಷೇಕ ಮಾಡಿಸುವುದರಿಂದ ವಾದ-ವಿವಾದಗಳು ಕಡಿಮೆಯಾಗಲಿವೆ.
5) ಹಸಿರು, ನೀಲಿ ಮತ್ತು ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಯುಗಾದಿಗೆ ಸಂಬಂಧಿಸಿದ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ಯುಗಾದಿ ಹಬ್ಬ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ಮಾಹಿತಿಗೆ kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)