ವೇದಾಸಕ್ತರು ಗಮನಿಸಿ; ಉಚಿತ ವೇದಾಧ್ಯಯನ ಮಾಡುವ ಜೊತೆಗೆ 10 ಲಕ್ಷ ಬಹುಮಾನವನ್ನೂ ಗೆಲ್ಲುವ ವಿಶೇಷ ಅವಕಾಶ ಇಲ್ಲಿದೆ
ವೇದಾಧ್ಯಯನ ಮಾಡಬೇಕು ಎಂದು ಆಸೆ ನಿಮ್ಮಲ್ಲಿದ್ಯಾ, ವೇದದ ದಶಗ್ರಂಥಗಳನ್ನು ಉಚಿತವಾಗಿ ಅಧ್ಯಯನ ಮಾಡುವ ಜೊತೆಗೆ ನೀವು 10 ಲಕ್ಷ ರೂಪಾಯಿಯನ್ನೂ ಗೆಲ್ಲಬಹುದು. ಕೂಡಲಿ ಶೃಂಗೇರಿ ಮಹಾ ಸಂಸ್ಥಾನ ವೇದಾಸಕ್ತರಿಗಾಗಿ ಈ ವಿಶೇಷ ಆಫರ್ ನೀಡಿದೆ. ಈ ಕುರಿತ ವಿವರ ಇಲ್ಲಿದೆ.
ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮಹಾ ಸಂಸ್ಥಾನ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ, ಕೂಡಲಿ ವತಿಯಿಂದ ಕೂಡಲಿಯಲ್ಲಿ ಗುರುಕುಲ ಪ್ರಾರಂಭಿಸಲಾಗಿದೆ. ಈ ಗುರುಕುಲದಲ್ಲಿ ಪ್ರವೇಶ ಪಡೆದು ಋಗ್ವೇದ ಅಥವಾ ಯಜುರ್ವೇದವನ್ನು ಸಂಪೂರ್ಣ ಅಧ್ಯಯನ ಮಾಡಿ ಪರೀಕ್ಷೆ ಉತ್ತೀರ್ಣವಾದರೆ ಹತ್ತು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಶ್ರೀ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ಘೋಷಣೆ ಮಾಡಿದ್ದಾರೆ.
ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಹಾಗೂ ಕಲ್ಪ ಎಂಬ ಆರು ಶಾಸ್ತ್ರಗಗಳಿಗೆ ವೇದಾಂಗ ಅಥವಾ ಷಡಂಗ ಎಂಬ ಹೆಸರಿದೆ.
ಈ ಆರು ವೇದಾಂಗಗಳು ಮಾತ್ರವಲ್ಲದೇ ಪ್ರಾತಿಶಾಖ್ಯ ಎಂಬ ಗ್ರಂಥ ಸೇರಿದರೆ ಏಳು ಗ್ರಂಥಗಳಾಗುತ್ತವೆ. ಇನ್ನು ವೇದದ ಸಂಹಿತೆ, ಬ್ರಾಹ್ಮಣ ಹಾಗೂ ಆರಣ್ಯಕ ಎಂಬ ಮೂರು ಗ್ರಂಥಗಳು ಸೇರಿದರೆ ಒಟ್ಟು ಹತ್ತು ಗ್ರಂಥಗಳು ಆಗುತ್ತವೆ. ಈ ಹತ್ತು ಗ್ರಂಥಗಳಿಗೆ ʼದಶಗ್ರಂಥʼ ಎಂಬ ಹೆಸರು ಪ್ರಸಿದ್ಧ.
ಈ ದಶಗ್ರಂಥಗಳನ್ನು ಸಂಪೂರ್ಣ ಅಧ್ಯಯನ ಮಾಡಿ ಪರೀಕ್ಷೆ ಉತ್ತೀರ್ಣವಾದಲ್ಲಿ ಅವರಿಗೆ ದಶಗ್ರಂಥಿ ಎಂಬ ಬಿರುದು, ಪ್ರಮಾಣ ಪತ್ರ ನೀಡಲಾಗುತ್ತದೆ ಹಾಗೂ ಐದು ಲಕ್ಷ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ.
ಅದೇ ರೀತಿ, ದಶಗ್ರಂಥಗಳ ನಂತರ ಅಧ್ಯಯನವನ್ನು ಮುಂದುವರೆಸಿ, ಸಲಕ್ಷಣ ಘನಾಂತದವರೆಗೆ ಅಧ್ಯಯನ ಮಾಡಿ, ಪರೀಕ್ಷೆ ಉತ್ತೀರ್ಣವಾದಲ್ಲಿ ʼಸದಶಗ್ರಂಥ, ಸಲಕ್ಷಣ ಘನಪಾಠಿʼ ಎಂಬ ಪ್ರಮಾಣ ಪತ್ರ ನೀಡಲಾಗುತ್ತದೆ ಹಾಗೂ ಹತ್ತು ಲಕ್ಷ ರೂಪಾಯಿ ಬಹುಮಾನ ನೀಡಲಾಗುತ್ತದೆ ಎಂದು ಗುರುಕುಲದ ಪ್ರಕಟಣೆ ತಿಳಿಸಿದೆ.
ಈ ರೀತಿಯ ಅಧ್ಯಯನಕ್ಕೆ ಹತ್ತು ವರ್ಷಗಳ ಸಮಯ ಬೇಕಾಗುತ್ತದೆ ಹಾಗೂ ಈ ಶಿಕ್ಷಣವು ಸಂಪೂರ್ಣ ಉಚಿತವಾಗಿರುತ್ತದೆ. ಕೆಲ ವಿದ್ಯಾರ್ಥಿಗಳಿಗೆ 12 ವರ್ಷ ಕೂಡ ಬೇಕಾಗಬಹುದು.
ಋಗ್ವೇದ ಹಾಗೂ ಯಜುರ್ವೇದ, ಇವೆರಡೂ ಶಾಖೆಗಳಿಗೆ ಈ ನಿಯಮ ಅನ್ವಯಿಸುತ್ತವೆ.
ಮುಂದಿನ ತಲೆಮಾರಿಗೆ ಉನ್ನತ ಮಟ್ಟದ ವೈದಿಕ ವಿದ್ವಾಂಸರ ನಿರ್ಮಾಣ ಹಾಗೂ ವೇದ ವಿದ್ಯೆಯ ರಕ್ಷಣೆಗೆ ಕೂಡಲಿ ಪೀಠದ 72ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ಈ ಯೋಜನೆ ಹಮ್ಮಿಕೊಂಡಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ವಾಟ್ಸಾಪ್ ಮಾಡಿ: 9731731154