ವಸಿಷ್ಠ ಮಹರ್ಷಿ ನಿರ್ಮಿಸಿದ ಹಾಸನ ಅರಸೀಕೆರೆಯ ಮಾಲೇಕಲ್‌ ದೇವಸ್ಥಾನದ ವೆಂಕಟೇಶ್ವರ ಮೂರ್ತಿ; ಇದು ಚಿಕ್ಕ ತಿರುಪತಿ ಎಂದೇ ಫೇಮಸ್‌
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಸಿಷ್ಠ ಮಹರ್ಷಿ ನಿರ್ಮಿಸಿದ ಹಾಸನ ಅರಸೀಕೆರೆಯ ಮಾಲೇಕಲ್‌ ದೇವಸ್ಥಾನದ ವೆಂಕಟೇಶ್ವರ ಮೂರ್ತಿ; ಇದು ಚಿಕ್ಕ ತಿರುಪತಿ ಎಂದೇ ಫೇಮಸ್‌

ವಸಿಷ್ಠ ಮಹರ್ಷಿ ನಿರ್ಮಿಸಿದ ಹಾಸನ ಅರಸೀಕೆರೆಯ ಮಾಲೇಕಲ್‌ ದೇವಸ್ಥಾನದ ವೆಂಕಟೇಶ್ವರ ಮೂರ್ತಿ; ಇದು ಚಿಕ್ಕ ತಿರುಪತಿ ಎಂದೇ ಫೇಮಸ್‌

ಕರ್ನಾಟಕದಲ್ಲಿ ಕೋಲಾರ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿರುವ ವೆಂಕಟೇಶ್ವರ ದೇವಸ್ಥಾನಗಳು ಚಿಕ್ಕ ತಿರುಪತಿ ಎಂದೇ ಫೇಮಸ್‌ ಆಗಿದೆ. ಅದರಲ್ಲಿ ಹಾಸನದ ಅರಸೀಕರೆಯಲ್ಲಿರುವ ಚಿಕ್ಕ ತಿರುಪತಿ ದೇವಸ್ಥಾನ ಕೂಡಾ ಒಂದು. ಈ ದೇವಸ್ಥಾನದ ಮಹತ್ವ, ಪ್ರಮುಖ ಆಚರಣೆಗಳ ಬಗ್ಗೆ ಇಲ್ಲಿ ಮಾಹಿತಿ ಇದೆ.

ವಸಿಷ್ಠ ಮಹರ್ಷಿ ನಿರ್ಮಿಸಿದ ಹಾಸನ ಅರಸೀಕೆರೆಯ ಮಾಲೇಕಲ್‌ ದೇವಸ್ಥಾನ; ಇದು ಚಿಕ್ಕ ತಿರುಪತಿ ಎಂದೇ ಫೇಮಸ್‌
ವಸಿಷ್ಠ ಮಹರ್ಷಿ ನಿರ್ಮಿಸಿದ ಹಾಸನ ಅರಸೀಕೆರೆಯ ಮಾಲೇಕಲ್‌ ದೇವಸ್ಥಾನ; ಇದು ಚಿಕ್ಕ ತಿರುಪತಿ ಎಂದೇ ಫೇಮಸ್‌ (PC: Twitter)

ದಕ್ಷಿಣ ಭಾರತದ ಹೆಸರಾಂತ ದೇವಾಲಯಗಳಲ್ಲಿ ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನ ಕೂಡಾ ಒಂದು. ಪ್ರತಿದಿನ ಲಕ್ಷಾಂತರ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆಯುತ್ತಾರೆ. ಕರ್ನಾಟಕದಲ್ಲಿ ಕೂಡಾ ಅನೇಕ ದೇವಸ್ಥಾನಗಳು ಚಿಕ್ಕ ತಿರುಪತಿ ಎಂದೇ ಹೆಸರಾಗಿದೆ. ಅವುಗಳಲ್ಲಿ ಹಾಸನ ಅರಸೀಕೆರೆಯ ಮಾಲೇಕಲ್‌ ಚಿಕ್ಕ ತಿರುಪತಿ ದೇವಸ್ಥಾನ ಕೂಡಾ ಒಂದು.

ದೇವಸ್ಥಾನದ ಇತಿಹಾಸ

ಅಮರಗಿರಿ ಮಾಲೇಕಲ್ ತಿರುಪತಿ ದೇವಸ್ಥಾನವು ಈ ದೇವಸ್ಥಾನವು ಬೆಂಗಳೂರು-ಹೊನ್ನಾವರ ಹೆದ್ದಾರಿಯಲ್ಲಿ ಹಾಸನದ ಅರಿಸೀಕೆರೆಯಿಂದ 2 ಕಿಮೀ ದೂರದಲ್ಲಿದೆ. ವಸಿಷ್ಠ ಮುನಿ, ಈ ಸ್ಥಳಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದ್ದರು ಎಂಬ ಕಥೆ ಇಲ್ಲಿ ಜನಪ್ರಿಯವಾಗಿದೆ. ಈ ದೇವಸ್ಥಾನಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದೆ.

ಈ ಸ್ಥಳಕ್ಕೆ ಬಂದ ವಸಿಷ್ಠ ಮುನಿಗಳು ಸುಮಾರು ವರ್ಷಗಳ ಕಾಲ ಇಲ್ಲಿ ನೆನೆಸಿ ವೆಂಕಟೇಶ್ವರನ ಪ್ರತಿಮೆ ಪ್ರತಿಷ್ಠಾಪಿಸಿ ಸೇವೆ ಮಾಡುತ್ತಾರೆ. ಕೊನೆಗೆ ಆಷಾಢ ಶುದ್ಧ ದ್ವಾದಶಿಯ ದಿನ, ಶ್ರೀನಿವಾಸನು ಪ್ರತ್ಯಕ್ಷನಾಗಿ ವಸಿಷ್ಠರನ್ನು ಅನುಗ್ರಹಿಸಿದನೆಂದು ನಂಬಲಾಗಿದೆ. ಈ ಸಂದರ್ಭದ ನೆನಪಿಗಾಗಿ ಪ್ರತಿ ವರ್ಷ ಈ ದೇವಸ್ಥಾನದಲ್ಲಿ ಮಹಾರಥೋತ್ಸವ ನಡೆಯುತ್ತದೆ. ಈ ಕಾರ್ಯಕ್ರಮಕ್ಕೆ ಪ್ರತಿ ಬಾರಿ ಲಕ್ಷಾಂತರ ಪ್ರವಾಸಿಗರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ.

ಈ ಸ್ಥಳವನ್ನು ಮೊದಲು ಮಲೆಕಲ್ಲು ಎಂದು ಕರೆಯಲಾಗುತ್ತಿತ್ತು. ಈ ಪ್ರಾಂತ್ಯದ ಪಾಳೇಗಾರನು ಅಲ್ಲಿ ದೇವಾಲಯವನ್ನು ಸ್ಥಾಪಿಸಿದನು. ಅಲ್ಲಿವರೆಗೂ ತಿರುಪತಿಗೆ ವೆಂಕಟೇಶ್ವರನ ದರ್ಶನ ಪಡೆಯಲು ಹೋಗುತ್ತಿದ್ದ ಜನರು, ಈ ದೇವಸ್ಥಾನಕ್ಕೆ ತಂಡೋಪತಂಡವಾಗಿ ಆಗಮಿಸುತ್ತಿದ್ದರು.ಅಂದಿನಿಂದ ಇದನ್ನು ಚಿಕ್ಕ ತಿರುಪತಿ ಎಂದು ಕರೆಯಲಾಗುತ್ತದೆ. ಬೆಟ್ಟ ಹತ್ತಿ, ತಿಮ್ಮಪ್ಪನ ಆಶೀರ್ವಾದ ಪಡೆಯಲು 1200 ಮೆಟ್ಟಿಲುಗಳನ್ನು ಹತ್ತಬೇಕು. ಈ ದೇವಾಲಯವನ್ನು ಅಮರಗಿರಿ ತಿರುಪತಿ ಎಂದೂ ಕರೆಯಲಾಗುತ್ತದೆ.

ದ್ರಾವಿಡ-ನಾಗರ ಶೈಲಿಯ ವಾಸ್ತುಶಿಲ್ಪ ಹೊಂದಿರುವ ದೇವಸ್ಥಾನ

ಈ ದೇವಾಲಯವು ದ್ರಾವಿಡ ವಾಸ್ತುಶಿಲ್ಪ ಮತ್ತು ನಾಗರ ಶೈಲಿಯ ಮಿಶ್ರಣವಾಗಿದೆ. ದೇವಾಲಯದ ಶಿಲ್ಪಗಳನ್ನು ನಯವಾದ ಮತ್ತು ಮೃದುವಾದ ಸಾಬೂನು ಕಲ್ಲು ಬಳಸಿ ನಿರ್ಮಿಸಲಾಗಿದೆ. ಹೊಯ್ಸಳ ವಾಸ್ತುಶೈಲಿಯ ಪ್ರಮುಖ ಲಕ್ಷಣವಾಗಿರುವ ದೇವಾಲಯದ ವಾಸ್ತುಶಿಲ್ಪದಲ್ಲಿ ಸ್ವಚ್ಛವಾದ ವಿವರಗಳು ಮತ್ತು ಕೆತ್ತನೆಗಳನ್ನು ಕಾಣಬಹುದು.

ಪ್ರಮುಖ ಆಚರಣೆಗಳು

ಆಷಾಢ ಮಾಸದ ಏಕಾದಶಿಯಂದು ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ತಿರುಪತಿಯಂತೆ ಇಲ್ಲಿಯೂ ಕಲ್ಯಾಣೋತ್ಸವ, ಬ್ರಹ್ಮೋತ್ಸವ ನಡೆಸಲಾಗುತ್ತದೆ. ನವ ವಿವಾಹಿತರು ವೆಂಕಟರಮಣ ಮತ್ತು ಪದ್ಮಾವತಿ ದೇವಿಯ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಕಲ್ಯಾಣೋತ್ಸವವು ಇಲ್ಲಿ ನಡೆಯುವ ಧಾರ್ಮಿಕ ಆಚರಣೆಯ ಪ್ರಮುಖ ಆಚರಣೆ ಆಗಿದ್ದು ಸಾವಿರಾರು ಭಕ್ತರು ಆಗಮಿಸುತ್ತಾರೆ. ಇದರ ಜೊತೆಗೆ ಯುಗಾದಿ, ಶ್ರೀ ರಾಮನವಮಿ, ಗರುಡೋತ್ಸವ, ಆಷಾಢ ಶುದ್ಧ ದ್ವಾದಶಿ, ಆಷಾಢ ಶುದ್ಧ ತ್ರಯೋದಶಿ ಹೀಗೆ ಹಲವು ಹಬ್ಬಗಳನ್ನು ಇಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತದೆ.

ಮಾಲೇಕಲ್‌ ದೇವಸ್ಥಾನಕ್ಕೆ ತಲುಪುವುದು ಹೇಗೆ?

ಅರಸೀಕರೆ ಮಾಲೇಕಲ್‌ ದೇವಸ್ಥಾನವು ಬೆಂಗಳೂರಿನಿಂದ 180 ಹಾಗೂ ಮೈಸೂರಿನಿಂದ 110 ಕಿಮೀ ದೂರದಲ್ಲಿದೆ. ಅರಸಿಕೆರೆ ರೈಲು ನಿಲ್ದಾಣ ಅಥವಾ ಬಸ್‌ ಸ್ಟ್ಯಾಂಡ್‌ನಲ್ಲಿ ಇಳಿದು ಅಲ್ಲಿಂದ ಆಟೋ ಅಥವಾ ಬಸ್‌ ಮೂಲಕ ಮಾಲೇಕಲ್‌ ದೇವಸ್ಥಾನಕ್ಕೆ ತೆರಳಬಹುದು.

 

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.