ದೇವಶಯನಿ ಏಕಾದಶಿ ಪ್ರಯುಕ್ತ ಚಿಕ್ಕ ತಿರುಪತಿಯಲ್ಲಿ ವಿಶೇಷ ಪೂಜೆ; ದೇವಾಲಯದ ಇತಿಹಾಸವೇನು, ಇಲ್ಲಿಗೆ ತಲುಪುವುದು ಹೇಗೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೇವಶಯನಿ ಏಕಾದಶಿ ಪ್ರಯುಕ್ತ ಚಿಕ್ಕ ತಿರುಪತಿಯಲ್ಲಿ ವಿಶೇಷ ಪೂಜೆ; ದೇವಾಲಯದ ಇತಿಹಾಸವೇನು, ಇಲ್ಲಿಗೆ ತಲುಪುವುದು ಹೇಗೆ?

ದೇವಶಯನಿ ಏಕಾದಶಿ ಪ್ರಯುಕ್ತ ಚಿಕ್ಕ ತಿರುಪತಿಯಲ್ಲಿ ವಿಶೇಷ ಪೂಜೆ; ದೇವಾಲಯದ ಇತಿಹಾಸವೇನು, ಇಲ್ಲಿಗೆ ತಲುಪುವುದು ಹೇಗೆ?

ಜುಲೈ 17 ರಂದು ದೇವಶಯನಿ ಏಕಾದಶಿ ಇದೆ. ಈ ವಿಶೇಷ ದಿನದಂದು ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿದೆ. ಕೋಲಾರದ ಮಾಲೂರಿನಲ್ಲಿರುವ ಚಿಕ್ಕ ತಿರುಪತಿಯಲ್ಲಿ ಕೂಡಾ ವಿವಿಧ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಈ ದೇವಾಲಯದ ಬಗ್ಗೆ ಹಿನ್ನೆಲೆ, ಇಲ್ಲಿಗೆ ತಲುಪುವುದು ಹೇಗೆ ಸೇರಿದಂತೆ ಇನ್ನಿತರ ಮಾಹಿತಿ ಹೀಗಿದೆ.

ದೇವಶಯನಿ ಏಕಾದಶಿ ಪ್ರಯುಕ್ತ ಚಿಕ್ಕ ತಿರುಪತಿಯಲ್ಲಿ ವಿಶೇಷ ಪೂಜೆ; ದೇವಾಲಯದ ಇತಿಹಾಸವೇನು, ಇಲ್ಲಿಗೆ ತಲುಪುವುದು ಹೇಗೆ?
ದೇವಶಯನಿ ಏಕಾದಶಿ ಪ್ರಯುಕ್ತ ಚಿಕ್ಕ ತಿರುಪತಿಯಲ್ಲಿ ವಿಶೇಷ ಪೂಜೆ; ದೇವಾಲಯದ ಇತಿಹಾಸವೇನು, ಇಲ್ಲಿಗೆ ತಲುಪುವುದು ಹೇಗೆ?

ಹಿಂದೂಗಳು ಆಚರಿಸುವ ಏಕಾದಶಿಗಳಲ್ಲಿ ಕೆಲವೊಂದು ಏಕಾದಶಿಗಳು ಬಹಳ ಪ್ರಾಮುಖ್ಯತೆ ಪಡೆದಿವೆ. ಅವುಗಳಲ್ಲಿ ಆಷಾಢ ಏಕಾದಶಿ ಕೂಡಾ ಒಂದು. ಇದನ್ನು ದೇವಶಯನಿ ಏಕಾದಶಿ ಎಂದೂ ಕರೆಯಲಾಗುತ್ತದೆ. ಜುಲೈ 17 ರಂದು ಆಷಾಢ ಮಾಸದ ಮೊದಲ ಏಕಾದಶಿ ಇದೆ. ಈ ದಿನ ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆಸಲಾಗುತ್ತದೆ.

ಕೋಲಾರ ಜಿಲ್ಲೆಯ ಮಾಲೂರಿನಲ್ಲಿರುವ ವೆಂಕಟೇಶ್ವರ ದೇವಸ್ಥಾನವು ಚಿಕ್ಕ ತಿರುಪತಿ ಎಂದೇ ಹೆಸರಾಗಿದೆ. ಈ ದೇವಸ್ಥಾನಕ್ಕೆ ಪ್ರತಿವರ್ಷ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಜುಲೈ 17ರ ಆಷಾಢ ಏಕಾದಶಿಯಂದು ಈ ದೇವಸ್ಥಾನದಲ್ಲಿ ಅದ್ದೂರಿ ಪೂಜೆ ಮಾಡಲಾಗುತ್ತದೆ.

ಚಿಕ್ಕ ತಿರುಪತಿ ಇತಿಹಾಸ

ಈ ದೇವಾಲಯವು 4 ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಮಹಾಭಾರತ ಕಾಲದಲ್ಲಿ ಋಷಿ ಮುನಿಗಳು ಮಾಡುತ್ತಿದ್ದ ಯಜ್ಞದಲ್ಲಿ ಅಗ್ನಿಯು ಹೆಚ್ಚು ತುಪ್ಪ ಸೇವನೆ ಮಾಡಿದ್ದರಿಂದಾಗಿ ಅವನಿಗೆ ಹೊಟ್ಟೆನೋವು ಕಾಡುತ್ತದೆ. ಔಷಧೀಯ ಸಸ್ಯಗಳಿರುವ ಖಾಂಡವ ವನವನ್ನು ಸುಟ್ಟು ಅದನ್ನು ಸೇವಿಸುವುದರಿಂದ ಹೊಟ್ಟೆ ನೋವು ಗುಣಮುಖವಾಗುತ್ತದೆ ಎಂದು ದೇವವೈದ್ಯ ಅಶ್ವಿನಿ ಕುಮಾರ, ಅಗ್ನಿಗೆ ಸಲಹೆ ನೀಡುತ್ತಾರೆ.

ಅದರಂತೆ ಅಗ್ನಿಯು ಖಾಂಡವ ವನವನ್ನು ದಹನ ಮಾಡಲು ಆರಂಭಿಸುತ್ತಾನೆ. ಈ ಸಮಯದಲ್ಲಿ ಕೃಷ್ಣ ಹಾಗೂ ಅರ್ಜುನ ಇಬ್ಬರೂ ವನ ದಹನವಾಗದಂತೆ ರಕ್ಷಣೆಗೆ ನಿಲ್ಲುತ್ತಾರೆ. ಆದರೆ ಬೆಂಕಿಯಿಂದ ತಕ್ಷಕನೆಂಬ ನಾಗನ ದೇಹ ಸುಟ್ಟಿದ್ದರಿಂದ ಕೋಪಗೊಂಡು ಅಗ್ನಿಗೆ ಶಾಪ ನೀಡುತ್ತಾನೆ. ಇದರಿಂದ ಬೇಸರ ವ್ಯಕ್ತಪಡಿಸುವ ಅಗ್ನಿಯು ಪ್ರಸನ್ನ ವೆಂಕಟರಮಣನ ಪೂಜೆ ಮಾಡಿ ಶಾಪದಿಂದ ವಿಮುಕ್ತಿ ಹೊಂದುತ್ತಾನೆ.

ತನ್ನ ಶಾಪ ವಿಮೋಚನೆ ಮಾಡಿದ ಶ್ರೀಮನ್ನಾರಾಯಣನಿಗೆ ಕೃತಜ್ಞತೆ ಅರ್ಪಿಸುವ ಸಲುವಾಗಿ ಅಗ್ನಿಯು ಅದೇ ಸ್ಥಳದಲ್ಲಿ ವರದ ನಾರಾಯಣಸ್ವಾಮಿ ಪ್ರತಿಮೆಯನ್ನು ಸ್ಥಾಪಿಸಿ, ನಿರ್ಮಿಸಿದ ದೇವಸ್ಥಾನ ಈಗ ಚಿಕ್ಕ ತಿರುಪತಿ ಎಂದು ಹೆಸರಾಗಿದೆ. ದಕ್ಷಿಣ ಭಾರತದಲ್ಲಿರುವ 7 ತಿರುಪತಿಗಳ ಪೈಕಿ ಈ ದೇವಸ್ಥಾನ ಕೂಡಾ ಒಂದು. ಈ ದೇವಸ್ಥಾನದಲ್ಲಿ ವೆಂಕಟೇಶ್ವರನು ಶ್ರೀದೇವಿ, ಭೂದೇವಿ ಸಹಿತನಾಗಿ ಅಭಯ ಮುದ್ರೆಯಲ್ಲಿರುವುದು ವಿಶೇಷ. ಇದು ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾದ ದೇವಸ್ಥಾನವಾಗಿದೆ. ಮುಖ್ಯ ತಿರುಪತಿಯಲ್ಲಿ ನಡೆಯುವಂತೆ ಈ ಚಿಕ್ಕ ತಿರುಪತಿ ದೇವಸ್ಥಾನದಲ್ಲಿ ಕೂಡಾ ಬ್ರಹ್ಮೋತ್ಸವ, ಕಲ್ಯಾಣೋತ್ಸವ ಸೇರಿದಂತೆ ವಿವಿಧ ಸೇವೆಗಳು ಇಲ್ಲಿ ನಡೆಯುತ್ತದೆ.

ಚಿಕ್ಕ ತಿರುಪತಿಗೆ ಹೋಗುವುದು ಹೇಗೆ?

ಚಿಕ್ಕ ತಿರುಪತಿ ಮಾಲೂರಿನಿಂದ 15 ಕಿಮೀ ದೂರದಲ್ಲಿದೆ. ಇಲ್ಲಿಗೆ ಹೋಗಲು ಬೆಂಗಳೂರಿನಿಂದ ನೇರ ಬಸ್‌ ಸೌಲಭ್ಯವಿದೆ. ಕೋಲಾರ, ಮಾಲೂರಿನಿಂದಲೂ ಬಸ್‌ ವ್ಯವಸ್ಥೆ ಇದೆ. ಬೆಂಗಳೂರಿನಿಂದ ಚಿಕ್ಕ ತಿರುಪತಿಗೆ 38 ಕಿಮೀ ದೂರ ಇದ್ದು, ಬಸ್‌ನಲ್ಲಿ ಪ್ರಯಾಣಿಸಿದರೆ 1 ಗಂಟೆ 45 ನಿಮಿಷ ಪ್ರಯಾಣ ಮಾಡಬೇಕಾಗುತ್ತದೆ. ನಿಮ್ಮದೇ ಸ್ವಂತ ವಾಹನದಲ್ಲಿ ಹೋಗುವುದಾದರೆ ನೀವು ಇನ್ನು ಬೇಗ ತಲುಪಬಹುದು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.