Karnataka Temple: ದುಂಬಿಯ ರೂಪ ತಾಳಿ ಅರುಣಾಸುರನನ್ನು ಕೊಂದ ಕಟೀಲು ದುರ್ಗಾ ಪರಮೇಶ್ವರಿ; ಈ ಸ್ಥಳದ ಮಹಿಮೆ ಹೀಗಿದೆ
Kateel Durgaaparameshwari Temple: ದಕ್ಷಿಣ ಕನ್ನಡದ ಮಂಗಳೂರಿನ ಸಮೀಪದಲ್ಲಿರುವ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ ರಾಜ್ಯದ ಖ್ಯಾತ ದೇವಾಲಯಗಳಲ್ಲಿ ಒಂದು. ಬಂಡೆಯಾಗಿ ನಂತರ ದುಂಬಿ ರೂಪ ತಾಳಿ ರಾಕ್ಷಸನನ್ನು ಸಂಹರಿಸಿದ ದುರ್ಗೆಯು ಇಲ್ಲಿ ನೆಲೆಸಿದ್ದಾಳೆ.
Karnataka Temple: ದಕ್ಷಿಣ ಕನ್ನಡದ ಖ್ಯಾತ ದೇವಾಲಯಗಳಲ್ಲಿ ಕಟೀಲು ಕೂಡಾ ಒಂದು. ಇಲ್ಲಿ ದುರ್ಗಾ ಪರಮೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಿದ್ದು ತಾಯಿ, ತನ್ನದೇ ಆದ ಪವಾಡಕ್ಕೆ ಹೆಸರುವಾಸಿಯಾಗಿದ್ದಾಳೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿ ಅಮ್ಮನವರ ದರ್ಶನ ಪಡೆದು ಪುನೀತರಾಗುತ್ತಾರೆ.
ಕಟೀಲು ದೇವಸ್ಥಾನ ಮಂಗಳೂರಿನಿಂದ ಸುಮಾರು 20 ಕಿಮೀ ದೂರದಲ್ಲಿದೆ. ನಂದಿನಿ ನದಿಯ ಮಧ್ಯಭಾಗದಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ. ಕಟಿ ಎಂದರೆ ಸೊಂಟ ಇಳೆ ಎಂದರೆ ಭೂಮಿ ಎಂದರ್ಥ. ಈ ಎರಡೂ ಪದಗಳಿಂದ ಕಟೀಲು ಎಂಬ ಪದ ಸೃಷ್ಟಿಯಾಗಿದೆ. ಒಟ್ಟಾರೆ ಕಟೀಲು ಎಂದರೆ ಭೂಮಿಯ ಮಧ್ಯಪ್ರದೇಶ ಎಂಬ ಅರ್ಥ ಬರಲಿದೆ. ರಾಜ್ಯದ ಖ್ಯಾತ ದೇವಾಲಯಗಳಲ್ಲಿ ಕಟೀಲು ದುರ್ಗಾ ಪರಮೇಶ್ವರಿ ಕೂಡಾ ಒಂದಾಗಿದೆ. ದುರ್ಗಾ ಪರಮೇಶ್ವರಿ ದೇವಾಲಯದ ವಾಸ್ತುಶಿಲ್ಪವು ಕೇರಳದ ನಿರ್ಮಾಣ ಶೈಲಿಯನ್ನು ಹೋಲುತ್ತದೆ. ಈ ದೇವಸ್ಥಾನದಲ್ಲಿ ದುರ್ಗಾ ಪರಮೇಶ್ವರಿ ಹೊರತಾಗಿ ಹಲವಾರು ಸಣ್ಣ ಸಣ್ಣ ದೇವಾಲಯಗಳೂ ಇವೆ.
ದೇವಸ್ಥಾನದ ಇತಿಹಾಸ ಹೀಗಿದೆ
ಪ್ರತಿಯೊಂದು ದೇವಸ್ಥಾನಕ್ಕೂ ಒಂದೊಂದು ಮಹಿಮೆ, ಇತಿಹಾಸ ಇದೆ. ಹಾಗೇ ಕಟೀಲು ದುರ್ಗಾಪರಮೇಶ್ವರಿಗೂ ಒಂದು ಕಥೆ ಇದೆ. ಹಿಂದೆ ಅರುಣಾಸುರ ಎಂಬ ರಾಕ್ಷಸನು ತನಗೆ 2 ಅಥವಾ 4 ಕಾಲಿನ ಯಾವುದೇ ಜೀವಿಯಿಂದ ಸಾವು ಬರಬಾರದು ಎಂದು ಬ್ರಹ್ಮದೇವನಿಂದ ವರ ಪಡೆಯುತ್ತಾನೆ. ಅದಾದ ನಂತರ ಆತ ಎಲ್ಲರಿಗೂ ತೊಂದರೆ ನೀಡುತ್ತಾ ಬದುಕುತ್ತಾನೆ. ಇದೇ ಸಮಯದಲ್ಲಿ ದುರ್ಗಾದೇವಿಯು ರಾಕ್ಷಸ ಅರುಣಾಸುರನನ್ನು ಸಂಹರಿಸಲು ಭೂಮಿಗೆ ಬರುತ್ತಾಳೆ. ಬಂಡೆಯಾಗಿ ರೂಪ ತಾಳುತ್ತಾಳೆ. ಆಗ ಅರುಣಾಸುರನು ಬಂಡೆಯನ್ನು ಪುಡಿ ಪುಡಿ ಮಾಡಲು ಯತ್ನಿಸುತ್ತಾನೆ. ಈ ಸಮಯದಲ್ಲಿ ದೇವಿಯು ದುಂಬಿ ರೂಪ ತಾಳಿ ರಾಕ್ಷಸನನ್ನು ಸಂಹರಿಸುತ್ತಾಳೆ. ಈ ಕಾರಣದಿಂದಲೇ ದೇವಿಯನ್ನು ಭ್ರಾಮರಿ ಎಂದು ಕರೆಯುತ್ತಾರೆ.
ದೇವಿಯ ಸೇವೆ
ಅರುಣಾಸುರ ಸಂಹಾರವನ್ನು ಆಚರಿಸಲು ಮುನಿಗಳು ಅದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿದರು. ಮುಂದೆ ಇದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವಾಗಿ ಖ್ಯಾತಿ ಪಡೆಯಿತು. ಪ್ರತಿ ವರ್ಷ ಜನವರಿ-ಫೆಬ್ರವರಿ ತಿಂಗಳಲ್ಲಿ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಆಚರಿಸಲಾಗುತ್ತದೆ. ದೇವಸ್ಥಾನದಲ್ಲಿ ಮಧುರ ನೈವೇದ್ಯಂ, ಪಂಚಾಮೃತ ಅಭಿಷೇಕ, ರಂಗಪೂಜೆ, ಅಕ್ಷರಾಭ್ಯಾಸ, ಸತ್ಯನಾರಾಯಣ ಪೂಜೆ, ಚಂಡಿಕಾ ಯಜ್ಞ, ತುಲಾಭಾರ ಸೇವೆ, ಅನ್ನದಾನ ಸೇವೆ ಸೇರಿದಂತೆ ವಿವಿಧ ಸೇವೆಗೆ ಅವಕಾಶವಿದೆ. ಪ್ರತಿದಿನ ಇಲ್ಲಿ ಅನ್ನದಾನ ನಡೆಯುತ್ತದೆ. ಇಲ್ಲಿ ಬರುವ ಭಕ್ತರು ಅನ್ನದಾನಕ್ಕಾಗಿ ಆಹಾರ ಪದಾರ್ಥಗಳು, ಹಣವನ್ನು ದೇವಾಲಯಕ್ಕೆ ನೀಡುತ್ತಾರೆ.
ದುರ್ಗಾಪರಮೇಶ್ವರಿ ವಿಗ್ರಹವು ಉದ್ಭವಮೂರ್ತಿಯಾಗಿದೆ. ಇಲ್ಲಿ ದೇವಿಗೆ ಮೊದಲು ಎಳನೀರಿನಿಂದ ಅಭಿಷೇಕ ಮಾಡಲಾಗುತ್ತದೆ. ಮೊದಲು ದೇವಿಗೆ ಎಳನೀರು ಅರ್ಪಿಸಿ ನಂತರ ಬೇರೆ ಅಭಿಷೇಕ ಮಾಡಲಾಗುತ್ತದೆ. ದೇವಿಯ ಗರ್ಭಗುಡಿ ಯಾವಾಗಲೂ ತೇವವಾಗಿರುತ್ತದೆ. ಭಕ್ತರಿಗೆ ನೀಡುವ ಕುಂಕುಮ ಕೂಡಾ ಒದ್ದೆಯಾಗಿರುತ್ತದೆ. ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡಿ ಇಲ್ಲಿ ಸೇವೆ ಮಾಡಿ, ಪ್ರಸಾದ ಸೇವಿಸಿದರೆ ಬಹುತೇಕ ಆರೋಗ್ಯ ಸಮಸ್ಯೆಗಳು ನಿವಾರಣೆ ಆಗಲಿದೆ ಎಂಬ ನಂಬಿಕೆ ಇದೆ. ದೇವಸ್ಥಾನದಲ್ಲಿ ಪ್ರತಿದಿನ 2 ಬಾರಿ ಅನ್ನದಾನ ನಡೆಯುತ್ತದೆ.
ದೇವಸ್ಥಾನಕ್ಕೆ ಹೇಗೆ ಹೋಗಬೇಕು?
ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಅಥವಾ ಹೊರ ರಾಜ್ಯಗಳಿಂದ ಬರುವವರು ಮಂಗಳೂರು ತಲುಪಿ ಅಲ್ಲಿಂದ ಕಟೀಲಿಗೆ ತೆರಳಬಹುದು. ಅಥವಾ ಮುಲ್ಕಿ ನಿಲ್ದಾಣದಲ್ಲಿ ಇಳಿದುಕೊಂಡು ಅಲ್ಲಿಂದ 11 ಕಿಮೀ ದೂರದಲ್ಲಿನ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಬಹುದು. ದೆಹಲಿ, ಮುಂಬೈ, ಗೋವಾ, ಚೆನ್ನೈ ಬೆಂಗಳೂರಿನಿಂದ ಮಂಗಳೂರಿಗೆ ವಿಮಾನ ಸೇವೆ ಇದೆ.