ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿದೆ ವಿದುರ ಸ್ಥಾಪಿಸಿರುವ ವಿದುರಾಶ್ವತ್ಥ ಕ್ಷೇತ್ರ; ನಾಗದೋಷ ಪರಿಹರಿಸುವ ಪುಣ್ಯಭೂಮಿಯಿದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿದೆ ವಿದುರ ಸ್ಥಾಪಿಸಿರುವ ವಿದುರಾಶ್ವತ್ಥ ಕ್ಷೇತ್ರ; ನಾಗದೋಷ ಪರಿಹರಿಸುವ ಪುಣ್ಯಭೂಮಿಯಿದು

ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿದೆ ವಿದುರ ಸ್ಥಾಪಿಸಿರುವ ವಿದುರಾಶ್ವತ್ಥ ಕ್ಷೇತ್ರ; ನಾಗದೋಷ ಪರಿಹರಿಸುವ ಪುಣ್ಯಭೂಮಿಯಿದು

ನಾಗದೋಷ, ಕಾಳಸರ್ಪ ದೋಷಗಳ ನಿವಾರಣೆಗೆ ನಾಗಪ್ರತಿಷ್ಠೆ ಮಾಡಲು ಜ್ಯೋತಿಷಿಗಳು ಸೂಚಿಸುತ್ತಾರೆ. ಈ ದೇವಸ್ಥಾನದಲ್ಲಿ ನಾಗಪ್ರತಿಷ್ಠೆ ಮಾಡಿಸುವುದರಿಂದ ದೋಷ ಖಂಡಿತ ಪರಿಹಾರವಾಗುತ್ತದೆ ಎಂದು ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ಹೇಳುತ್ತಾರೆ. (ಬರಹ: ಅರ್ಚನಾ ವಿ ಭಟ್‌)

ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿದೆ ವಿದುರ ಸ್ಥಾಪಿಸಿರುವ ವಿದುರಾಶ್ವತ್ಥ ಕ್ಷೇತ್ರ; ನಾಗದೋಷ ಪರಿಹರಿಸುವ ಪುಣ್ಯಭೂಮಿಯಿದು
ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿದೆ ವಿದುರ ಸ್ಥಾಪಿಸಿರುವ ವಿದುರಾಶ್ವತ್ಥ ಕ್ಷೇತ್ರ; ನಾಗದೋಷ ಪರಿಹರಿಸುವ ಪುಣ್ಯಭೂಮಿಯಿದು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜಾತಕದಲ್ಲಿರುವ ದೋಷಗಳು ಆ ವ್ಯಕ್ತಿಯ ಜೀವನದಲ್ಲಿ ಹಿನ್ನಡೆಯನ್ನುಂಟು ಮಾಡುತ್ತವೆ ಎಂದು ಹೇಳಲಾಗುತ್ತದೆ. ಕೆಲವು ದೋಷಗಳಿಂದ ಗಂಭೀರ ಸಮಸ್ಯೆಗಳು ಉದ್ಭವವಾದರೆ ಇನ್ನು ಕೆಲವು ದೋಷಗಳು ಅಷ್ಟೇನೂ ಹಾನಿಯುಂಟು ಮಾಡುವುದಿಲ್ಲ. ಆದರೆ ಗಂಭೀರ ಸಮಸ್ಯೆಗಳನ್ನು ತರುವ ದೋಷಗಳಿಂದ ವ್ಯಕ್ತಿಯ ಜೀವನವೇ ಕಷ್ಟಗಳಿಂದ ಕೂಡಿರುವ ಸಾಧ್ಯತೆಯೂ ಇರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಕಾಳಸರ್ಪ ದೋಷ ಪರಿಹಾರ

ಜಾತಕದಲ್ಲಿ ನಾಗದೋಷ, ಕಾಳಸರ್ಪ ದೋಷ, ರಾಹು–ಕೇತು ದೋಷವಿದ್ದರೆ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಕೆಲವು ಪುಣ್ಯಕ್ಷೇತ್ರಗಳು ರಾಹು, ಕುಜ, ಬುಧ, ಚಂದ್ರ, ಶನಿ ದೋಷ ನಿವಾರಣೆಗೆ ಸಹಾಯ ಮಾಡುತ್ತದೆ. ಅಂತೆಯೇ ನಾಗದೋಷ, ಕಾಳ ಸರ್ಪದೋಷಗಳ ನಿವಾರಣೆಗೆ ಕರ್ನಾಟಕದಲ್ಲಿರುವ ವಿದುರಾಶ್ವತ್ಥ ದೇವಾಲಯವು ಸಹಾಯ ಮಾಡುತ್ತದೆ ಎಂದು ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ಹೇಳುತ್ತಾರೆ.

ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಬಳಿ ವಿದುರಾಶ್ವತ್ಥ ಪುಣ್ಯಕ್ಷೇತ್ರವಿದೆ. ಇದು ಪುರಾತನ ಅಶ್ವತ್ಥನಾರಾಯಣಸ್ವಾಮಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ದೇಗುಲವಿರುವ ಪವಿತ್ರ ಭೂಮಿಯಾಗಿದೆ. ಈ ಸ್ವಾಮಿಯ ದರ್ಶನ ಮಾಡಿ ಪೂಜೆ ಸಲ್ಲಿಸಿ, ನಾಗಪ್ರತಿಷ್ಠೆ, ರಾಹುಕೇತು ಪೂಜೆ ಸಲ್ಲಿಸಿದವರಿಗೆ ನಾಗದೋಷ ದೂರವಾಗುತ್ತದೆ ಎಂಬ ನಂಬಿಕೆಯಿದೆ. ವಿದುರಾಶ್ವತ್ಥ ದೇವಾಲಯವು ಪಿನಾಕಿನಿ ನದಿಯ ದಡದಲ್ಲಿದೆ. ಇದು ಅತ್ಯಂತ ಹಳೆಯ ದೇವಸ್ಥಾನಗಳಲ್ಲಿ ಒಂದಾಗಿದೆ. ನಾಗದೋಷವಿದ್ದು ಸಂತಾನ ಸಮಸ್ಯೆ, ಕಣ್ಣಿನ ಸಮಸ್ಯೆ, ಅಂಗವಿಕಲತೆ, ಮಾನಸಿಕ ಸಮಸ್ಯೆ, ವಿವಾಹ ಸಮಸ್ಯೆ, ಕೌಟುಂಬಿಕ ಸಮಸ್ಯೆಯಂತಹ ಗಂಭೀರ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅವುಗಳಿಂದ ಮುಕ್ತಿ ಹೊಂದಲು ಈ ಕ್ಷೇತ್ರ ಉತ್ತಮವಾಗಿದೆ.

ವಿದುರಾಶ್ವತ್ಥ ಹೆಸರು ಬರಲು ಕಾರಣವೇನು?

ದ್ವಾಪರ ಯುಗದಲ್ಲಿ, ವಿದುರನು ತೀರ್ಥಯಾತ್ರೆಗಾಗಿ ಈ ನದಿ ತೀರಕ್ಕೆ ಬಂದು ನೆಲೆಸಿದನು. ಅಲ್ಲಿ ಮೈತ್ರೇಯ ಮಹರ್ಷಿಗಳ ಬಳಿ ಶಿಷ್ಯನಾದನು. ಇಬ್ಬರೂ ಮಹಾವಿಷ್ಣುವಿಗಾಗಿ ಪಿನಾಕಿನಿ ನದಿಯಲ್ಲಿ ಘೋರ ತಪಸ್ಸನ್ನು ಮಾಡಿದರು. ಆ ಸಮಯದಲ್ಲಿ, ಅಶ್ವತ್ಥ ಮರದ ಕೊಂಬೆಯೊಂದು ನದಿಯಲ್ಲಿ ತೇಲುತ್ತಾ ಅವರ ಬಳಿಗೆ ಬಂದಿತು. ಋಷಿಗಳ ಸಲಹೆಯಂತೆ ಆ ಶಾಖೆಯನ್ನು ವಿದುರನು ಪ್ರತಿಷ್ಠಾಪಿಸಿದನು. ಅದು ಮರವಾಯಿತು ಮತ್ತು ಅದನ್ನು ವಿದುರಾಶ್ವತ್ಥ ಎಂದು ಕರೆಯಲಾಯಿತು. ಮರ ಇಂದಿಗೂ ಮಹಾವೃಕ್ಷವಾಗಿ ನಿಂತಿದೆ. ಆ ಮರದ ಮುಂದಿರುವ ಜಾಗ ವಿದುರಾಶ್ವತ್ಥ ಕ್ಷೇತ್ರ. ಆ ಮರದ ಬಳಿ ನಾಗರ ಕಲ್ಲನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಲಾಗುತ್ತದೆ. ಹಾಗೆ ಮಾಡುವುದರಿಂದ ಸರ್ಪದೋಷ ನಿವಾರಣೆಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಅರ್ಚನಾ ವಿ ಭಟ್‌

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.