ಕೇತು ಸಂಕ್ರಮಣ 2025: ತುಲಾ ರಾಶಿಯವರಿಗೆ ಒಡ ಹುಟ್ಟಿದವರೊಂದಿಗೆ ಘರ್ಷಣೆ, ಧನಸ್ಸು ರಾಶಿಯವರಿಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ
Ketu Transit 2025: ಸುಮಾರು 18 ತಿಂಗಳ ನಂತರ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕೇತುವು 2025 ಮೇ 18 ರಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ, ಇದರಿಂದ ದ್ವಾದಶ ರಾಶಿಗಳಿಗೆ ವಿವಿಧ ಫಲ ದೊರೆಯುತ್ತದೆ. ತುಲಾ, ವೃಶ್ಚಿಕ, ಧನಸ್ಸು ರಾಶಿ ಕೇತು ಸಂಕ್ರಮಣ 2025ರ ಫಲ ಹೀಗಿದೆ.
ಕೇತು ಸಂಕ್ರಮಣ 2025: ಜ್ಯೋತಿಷ್ಯಶಾಸ್ತ್ರದಲ್ಲಿ ಕೇತು, ರಾಹುವಿನ ದ್ವಿತೀಯಾರ್ಧ ಎಂದು ನಂಬಲಾಗಿದೆ. ಸಮುದ್ರ ಮಂಥನದ ಸಮಯದಲ್ಲಿ, ಸ್ವರ್ಭಾನು ಎಂಬ ರಾಕ್ಷಸನು ದೇವತೆಗಳ ನಡುವೆ ಕುಳಿತು ಅಮೃತವನ್ನು ಕುಡಿಯಲು ಪ್ರಯತ್ನಿಸಿದಾಗ, ವಿಷ್ಣುವು ಮೋಹಿನಿ ಅವತಾರದಲ್ಲಿ ಅವನನ್ನು ಗುರುತಿಸಿ ತನ್ನ ಸುದರ್ಶನ ಚಕ್ರದಿಂದ ಅವನ ತಲೆಯನ್ನು ಕತ್ತರಿಸುತ್ತಾನೆ. ಅಮೃತದ ಕೆಲವು ಹನಿಗಳು ಅವನ ಗಂಟಲನ್ನು ಪ್ರವೇಶಿಸಿದ ಪರಿಣಾಮವಾಗಿ ಅವನು ಶಾಶ್ವತನಾಗುತ್ತಾನೆ. ಪರಿಣಾಮವಾಗಿ, ತಲೆಗೆ ರಾಹು ಎಂದೂ, ಮುಂಡಕ್ಕೆ ಕೇತು ಎಂಬ ಹೆಸರು ಬಂತು.
ಮತ್ತೊಂದು ಕಥೆಯ ಪ್ರಕಾರ ಸೂರ್ಯ ಮತ್ತು ಚಂದ್ರರು ಸ್ವರ್ಭಾನುವಿನ ಬಗ್ಗೆ ವಿಷ್ಣುವಿನ ಅವತಾರವಾದ ಮೋಹಿನಿ ಬಳಿ ದೂರು ನೀಡುತ್ತಾರೆ. ಇದರ ಪರಿಣಾಮವಾಗಿ, ರಾಹು ಮತ್ತು ಕೇತುಗಳು ಸೂರ್ಯ ಮತ್ತು ಚಂದ್ರರನ್ನು ಬಾಧಿಸುತ್ತಾರೆ,. ಗ್ರಹಣಗಳು ಉಂಟಾಗುತ್ತವೆ. ವೈದಿಕ ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತುವನ್ನು ನೆರಳು ಗ್ರಹಗಳೆಂದು ಕರೆಯಲಾಗುತ್ತದೆ. ರಾಹು ಮತ್ತು ಕೇತುಗಳು ಪ್ರತಿ 18 ತಿಂಗಳಿಗೊಮ್ಮೆ ಒಂದು ರಾಶಿಯಿಂದ ಮುಂದಿನ ರಾಶಿಗೆ ಸಾಗುತ್ತವೆ. ಅಂತಹ ಸಂದರ್ಭದಲ್ಲಿ ವ್ಯಕ್ತಿಯ ಜೀವನದಲ್ಲಿ ರಾಹು ಕೇತುವಿನ ಪ್ರಭಾವ ಇರುತ್ತದೆ. 2025 ಮೇ 18 ರಂದು ಕೇತು, ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಎಲ್ಲಾ 12 ರಾಶಿಗಳಿಗೆ ವಿವಿಧ ಫಲ ನೀಡುತ್ತಾನೆ.
ತುಲಾ, ವೃಶ್ಚಿಕ, ಧನಸ್ಸು ರಾಶಿ ಕೇತು ಸಂಕ್ರಮಣ 2025ರ ಫಲ
ತುಲಾ ರಾಶಿ
ತುಲಾ ರಾಶಿಯ 11ನೇ ಮನೆಯಲ್ಲಿ ಕೇತು ಸಂಚಾರ ಸಂಭವಿಸುತ್ತದೆ. ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಇದು ನಿಮಗೆ ಅನುಕೂಲಕರವಾಗಿರುತ್ತದೆ. ನೀವು ವಿವಿಧ ಮೂಲಗಳಿಂದ ಹಣ ಗಳಿಸುವ ಅವಕಾಶಗಳನ್ನು ಹೆಚ್ಚಿಸುತ್ತದೆ. ನಿಮ್ಮ ಗುರಿಗಳನ್ನು ಸಾಧಿಸುವಲ್ಲಿ ನೀವು ಹೆಚ್ಚಿನ ಗಮನ ಹರಿಸುವಿರಿ. ಆದರೆ ಕೇತು ಸಂಕ್ರಮಣವು ಪ್ರೇಮ ಸಂಬಂಧಗಳಿಗೆ ಅಷ್ಟು ಅನುಕೂಲಕರವಾಗಿಲ್ಲ, ಆದ್ದರಿಂದ ನೀವು ಅತ್ಯಂತ ಜಾಗರೂಕರಾಗಿರಬೇಕು ಏಕೆಂದರೆ ಚಿಕ್ಕ ಸಮಸ್ಯೆ ಕೂಡಾ ನಿಮ್ಮ ಮತ್ತು ನಿಮ್ಮ ಪ್ರೇಮಿಯ ನಡುವೆ ವಿವಾದ ಮತ್ತು ಘರ್ಷಣೆಗಳನ್ನು ಉಂಟುಮಾಡಬಹುದು, ಅದು ನಿಮ್ಮ ಸಂಬಂಧಕ್ಕೆ ಬಹಳ ಹಾನಿಕಾರಕವಾಗಿರುತ್ತದೆ. ಕಚೇರಿಯಲ್ಲಿ ನಿಮ್ಮ ಮೇಲಧಿಕಾರಿಗಳು ನಿಮ್ಮನ್ನು ಬೆಂಬಲಿಸುತ್ತಾರೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗುತ್ತದೆ. ನಿಮ್ಮ ಹಿರಿಯ ಒಡಹುಟ್ಟಿದವರೊಂದಿಗೆ ಸಣ್ಣ ಪುಟ್ಟ ಸಮಸ್ಯೆಗಳು ಉಂಟಾಗಬಹುದು.
ಪರಿಹಾರ: ಜ್ಯೋತಿಷಿಗಳ ಸಲಹೆ ಮೇರೆಗೆ ನಿಮಗೆ ಒಪ್ಪುವ ರತ್ನವನ್ನು ಧರಿಸಬೇಕು
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಕೇತು ಸಂಕ್ರಮಣ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ. ಜೀವನದಲ್ಲಿ ಉದ್ವಿಗ್ನತೆ ಮತ್ತು ಸಂಘರ್ಷ ಉಂಟಾಗುತ್ತದೆ. ಸಾಮರಸ್ಯದ ಕೊರತೆ ಇರುತ್ತದೆ. ಮನೆಯಲ್ಲಿ ಹಿರಿಯರು, ಅದರಲ್ಲೂ ನಿಮ್ಮ ತಂದೆಗೆ ಅನಾರೋಗ್ಯ ಕಾಡಬಹುದು. ಅವರ ಬಗ್ಗೆ ಕಾಳಜಿ ಇರಲಿ. ಉದ್ಯೋಗಸ್ಥರಿಗೆ ಕೇತುವಿನ ಸ್ಥಾನ ಹೆಚ್ಚು ಸಮತೋಲನದಲ್ಲಿರುತ್ತದೆ. ಶ್ರಮ ವಹಿಸಿ ಕೆಲಸ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ. ಇಲ್ಲವಾದರೆ ನಕಾರಾತ್ಮಕ ಫಲಿತಾಂಶಗಳಿಗೆ ನೀವು ಅತೃಪ್ತರಾಗಬಹುದು. ಇದರಿಂದ ಕಚೇರಿಯಲ್ಲಿ ನಿಮ್ಮ ಸ್ಥಾನಮಾನ ಕಡಿಮೆ ಆಗಬಹುದು. ಆದ್ದರಿಂದ ಬಹಳ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ.
ಪರಿಹಾರ: ನಾಯಿಗಳಿಗೆ ಆಹಾರ ನೀಡಿದರೆ ಶುಭ ಫಲ ದೊರೆಯುತ್ತದೆ.
ಧನಸ್ಸು ರಾಶಿ
ಧನು ರಾಶಿಯವರ 9ನೇ ಮನೆಯಲ್ಲಿ ಕೇತು ಸಂಕ್ರಮಣ ನಡೆಯುತ್ತದೆ. ಇದು ಅದೃಷ್ಟ ಮತ್ತು ಧರ್ಮದ ಮನೆಯಾಗಿದೆ. ಗುರುವು ಈ ಮನೆಯ ಅಧಿಪತಿಯಾಗಿದ್ದಾನೆ. ಇದರಿಂದ ನಿಮಗೆ ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡುವಿರಿ, ಹಿರಿಯರನ್ನು ಕರೆದುಕೊಂಡು ತೀರ್ಥಯಾತ್ರೆಗೆ ತೆರಳುವಿರಿ. ಧ್ಯಾನ, ಪ್ರಾಣಾಯಾಮ ಮುಂತಾದ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಿರಿ. ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸುವ ನೀವು ಏಕಾಂಗಿಯಾಗಿ ಸಮಯ ಕಳೆಯುತ್ತೀರಿ, ಆದರೆ ಕೆಲವೊಂದು ವಿಚಾರಗಳಿಗೆ ನಿಮಗೆ ಅಸಮಾಧಾನ ಇರಲಿದೆ. ಒಂಟಿತನವನ್ನು ನಿವಾರಿಸಲು ಕುಟುಂಬದ ಸದಸ್ಯರು, ಆತ್ಮೀಯರನ್ನು ಭೇಟಿ ಮಾಡಿ. ನೀವು ಉದ್ಯೋಗಸ್ಥರಾಗಿದ್ದಲ್ಲಿ ಬೇರೆ ಊರಿಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ.
ಪರಿಹಾರ: ಕೇತುವಿನ ಋಣಾತ್ಮಕ ಪರಿಣಾಮಗಳನ್ನು ಎದುರಿಸಲು ನೀವು ಗಣೇಶನನ್ನು ಪೂಜಿಸಬೇಕು.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.
ವಿಭಾಗ