ಅರಳಿಮರ ಪೂಜೆ ಮಾಡಿದರೆ ಸಿಗುವ 5 ಶುಭ ಫಲಗಳಿವು: ದಿನಕ್ಕೊಮ್ಮೆ ಕೈಮುಗೀರಿ, ಒಳ್ಳೇದಾಗುತ್ತೆ
Benefits of Worshiping Peepal Tree: ಹಿಂದೂ ಧರ್ಮದಲ್ಲಿ ಅರಳಿಮರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಅದನ್ನು ಅಶ್ವತ್ಥ ಎಂದೂ ಕರೆಯುತ್ತಾರೆ. ವಾಸುದೇವ, ಚೈತನ್ಯ ಮುಂತಾದ ಹೆಸರುಗಳಿಂದ ಕರೆಯುವ ಈ ಮರವನ್ನು ಪವಿತ್ರವಾದ ಮರ ಎಂದು ಪರಿಗಣಿಸಲಾಗಿದೆ. ಈ ಅರಳಿಮರವನ್ನು ಪೂಜಿಸುವುದರಿಂದ ಸಿಗುವ ಶುಭ ಫಲಗಳ ಬಗ್ಗೆ ತಿಳಿಯೋಣ.

ಹಿಂದೂಗಳು ಪ್ರಕೃತಿ ಮಾತೆಯ ಆರಾಧಕರು. ನೆಲ, ಜಲ, ವಾಯು, ಗಿಡ–ಮರ, ಪ್ರಾಣಿ–ಪಕ್ಷಿಗಳಲ್ಲಿ ದೇವರನ್ನು ಕಾಣುತ್ತಾರೆ. ಗಿಡ ಮರಗಳನ್ನು ದೇವರ ಪ್ರತಿರೂಪವೆಂದು ತಿಳಿದು ಪೂಜಿಸುತ್ತಾರೆ. ಕೆಲವು ಮರಗಳು ಪೂಜನೀಯ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅರಳಿಮರದಲ್ಲಿ ಎಲ್ಲಾ ದೇವರುಗಳು ನೆಲೆಸಿರುತ್ತಾರೆ ಎಂದು ಅದನ್ನು ಬಹಳ ಭಕ್ತಿಯಿಂದ ಪೂಜಿಸಲಾಗುತ್ತದೆ. ಅರಳಿಮರವನ್ನು ಅಶ್ವತ್ಥ ಎಂದೂ ಕರೆಯುತ್ತಾರೆ. ಈ ಪೂಜನೀಯ ಮರವನ್ನು ವಾಸುದೇವ, ಚೈತನ್ಯ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಈ ಮರದ ಒಂದೊಂದು ಭಾಗದಲ್ಲಿ ಒಂದೊಂದು ದೇವರು ನೆಲೆಸಿದ್ದಾರೆ ಎಂದು ನಂಬಲಾಗಿದೆ. ಹಿಂದೂ ಪುರಾಣಗಳ ಪ್ರಕಾರ ಅಶ್ವತ್ಥ ಮರದಲ್ಲಿ ತ್ರಿಮೂರ್ತಿಗಳು ನೆಲೆಸಿದ್ದಾರೆ. ಈ ಮರದ ಬೇರಿನಲ್ಲಿ ಬ್ರಹ್ಮ ದೇವ, ಕಾಂಡದಲ್ಲಿ ಭಗವಾನ್ ವಿಷ್ಣು ಮತ್ತು ಎಲೆಗಳಲ್ಲಿ ಸಾಕ್ಷಾತ್ ಶಿವನು ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಮರ ಪೂಜನೀಯ ಎಂದು ಎನಿಸಿಕೊಂಡಿದೆ. ಅರಳಿಮರವು ಅನೇಕ ರೋಗಗಳನ್ನು ಗುಣಪಡಿಸುತ್ತದೆ ಎಂಬ ನಂಬಿಕೆಯಿಂದ ಅದನ್ನು ಪೂಜಿಸುತ್ತಾರೆ. ಧಾರ್ಮಿಕ ಕಾರ್ಯಗಳಲ್ಲೂ ಈ ಮರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅರಳಿಮರಕ್ಕೆ ನೀರೆರೆಯುವುದು, ದೀಪ ಹಚ್ಚುವುದು, ಪವಿತ್ರ ದಾರಗಳನ್ನು ಕಟ್ಟಿ ಪೂಜಿಸುವುದರಿಂದ ಗ್ರಹ ದೋಷಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗಿದೆ. ಅರಳಿಮರವನ್ನು ಪೂಜಿಸಲು ಇರುವ 5 ಕಾರಣಗಳು ಈ ರೀತಿಯಾಗಿವೆ.
ಇದನ್ನೂ ಓದಿ: ಎಷ್ಟು ವರ್ಷ ತುಂಬಿದ ನಂತರ ವಜ್ರ ಧರಿಸಬೇಕು, ಯಾವ ರಾಶಿಯವರಿಗೆ ವಜ್ರ ಧರಿಸುವುದರಿಂದ ಅದೃಷ್ಟ, ಯಾರು ಧರಿಸಕೂಡದು? ಇಲ್ಲಿದೆ ಮಾಹಿತಿ
ಅರಳಿಮರ ಪೂಜೆ ಮಾಡುವಿದರಿಂದ ಸಿಗುವ 5 ಶುಭ ಫಲಗಳು
1) ಅರಳಿಮರವು ದೇವರುಗಳ ವಾಸಸ್ಥಾನವೆಂದು ಛಾಂದೋಗ್ಯ ಉಪನಿಷತ್ ಮತ್ತು ಅಥರ್ವ ವೇದದಲ್ಲಿ ಹೇಳಲಾಗಿದೆ. ಶನಿವಾರದಂದು ಭಗವಾನ್ ವಿಷ್ಣು ಮತ್ತು ಆತನ ಪತ್ನಿ ಲಕ್ಷ್ಮೀ ದೇವಿಯು ಮರದ ಮೇಲೆ ಬಂದು ನೆಲೆಸುತ್ತಾರೆ ಎಂಬ ನಂಬಿಕೆಯಿದೆ. ಹಾಗಾಗಿ ಅರಳಿಮರದ ಬೇರಿಗೆ ನೀರೆರೆಯುವುದರಿಂದ ಅದೃಷ್ಟ ಒಲಿದು ಬರುತ್ತದೆ. ಅದರಲ್ಲೂ ಶನಿವಾರದಂದು ಅಶ್ವತ್ಥ ಮರಕ್ಕೆ ನೀರೆರೆದು ಪ್ರದಕ್ಷಿಣೆ ಹಾಕುವುದರಿಂದ ಜೀವನದಲ್ಲಿ ಸಮೃದ್ಧಿ ನೆಲೆಸುತ್ತದೆ ಎಂದು ಹೇಳುತ್ತಾರೆ.
2) ಅಶ್ವತ್ಥ ಮರದಲ್ಲಿ ಹಲವಾರು ದೇವರುಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಬ್ರಹ್ಮ ಪುರಾಣದ ಪ್ರಕಾರ ಅರಳಿಮರಕ್ಕೆ ಮತ್ತು ಮಹಾವಿಷ್ಣುವಿಗೆ ಬಹಳಷ್ಟು ಸಂಬಂಧವಿದೆ. ಏಕೆಂದರೆ ಅರಳಿಮರವು ವಿಷ್ಣುವಿನ ರೂಪ ಎಂಬ ನಂಬಿಕೆಯಿದೆ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಮರಗಳಲ್ಲಿ ನಾನು ಅಶ್ವತ್ಥಮರ ಎಂದು ಹೇಳುವುದರ ಮೂಲಕ ಅರಳಿಮರದ ಮಹತ್ವವನ್ನು ಉಲ್ಲೇಖಿಸಿದ್ದಾನೆ. ಮತ್ತೊಂದು ನಂಬಿಕೆಗಳ ಪ್ರಕಾರ ಶ್ರೀಕೃಷ್ಣನು ಈ ಮರದ ಕೆಳಗೆ ತನ್ನ ಕೃಷ್ಣಾವತಾರವನ್ನು ಕೊನೆಗೊಳಿಸಿದನು ಎಂದು ಹೇಳಲಾಗುತ್ತದೆ.
3) ದಂತೆಕಥೆಗಳ ಪ್ರಕಾರ, ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಈ ತ್ರಿಮೂರ್ತಿಗಳು ಚರ್ಚೆಗಳನ್ನು ನಡೆಸಲು ಈ ಮರವನ್ನೇ ಆಯ್ದುಕೊಂಡಿದ್ದರು ಎಂದು ಹೇಳಲಾಗಿದೆ. ಈ ಮೂಲಕ ಅರಳಿಮರದ ಪ್ರಾಮುಖ್ಯತೆಯನ್ನು ಹೆಚ್ಚಿಸಿದ್ದಾರೆ. ಸೃಷ್ಟಿಕರ್ತ ಬ್ರಹ್ಮನು ಈ ಮರದ ಬೇರುಗಳಲ್ಲಿ, ಭಗವಾನ್ ವಿಷ್ಣುವು ಕಾಂಡದಲ್ಲಿ ಮತ್ತು ಪರಮೇಶ್ವರನು ಎಲೆಗಳಲ್ಲಿ ನೆಲೆಸಿದ್ದಾನೆ ಎಂದು ಹೇಳುವುದರ ಮೂಲಕ ಅರಳಿಮರವು ತ್ರಿಮೂರ್ತಿಗಳ ವಾಸಸ್ಥಾನ ಎಂದು ಹೇಳಲಾಗಿದೆ.
4) ಗುರು ಗ್ರಹದ ಬಲವನ್ನು ಹೆಚ್ಚಿಸಲು ಅಶ್ವತ್ಥ ಮರವನ್ನು ಪೂಜಿಸಲು ಹೇಳಲಾಗುತ್ತದೆ. ಹೀಗೆ ಅರಳಿಮರ ಮತ್ತು ಗುರು ಗ್ರಹಕ್ಕೆ ನೇರ ಸಂಪರ್ಕವನ್ನು ಹೊಂದಿವೆ. ಹಾಗಾಗಿ ಅರಳಿಮರವನ್ನು ಪೂಜಿಸುವುದು ಅದೃಷ್ಟವನ್ನು ತರುತ್ತದೆ ಎಂಬ ನಂಬಿಕೆಯಿದೆ.
5) ಅರಳಿಮರವನ್ನು ಪೂಜಿಸುವುದರಿಂದ ಅನೇಕ ರೋಗಗಳಿಂದ ಮುಕ್ತಿ ದೊರೆಯುತ್ತದೆ. ಭಗವದ್ಗೀತೆಯಲ್ಲಿ ಹೇಳಿದಂತೆ ಶ್ರೀಕೃಷ್ಣ ಪರಮಾತ್ಮನು ಈ ಮರದಲ್ಲಿ ನೆಲೆಸಿರುವುದರಿಂದ ಭಗವಂತನ ಕರುಣೆಗೆ ಪಾತ್ರರಾಗಬಹುದು. ಅಶ್ವತ್ಥ ಪ್ರದಕ್ಷಿಣೆ ಮಾಡುವುದರಿಂದ ಕಷ್ಟಗಳೆಲ್ಲವೂ ದೂರವಾಗಿ ಜೀವನದಲ್ಲಿ ಶಾಂತಿ ನೆಲೆಸುತ್ತದೆ ಎಂದು ಹೇಳುತ್ತಾರೆ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(ಬರಹ: ಅರ್ಚನಾ ವಿ. ಭಟ್)
