ಜ 21 ಕ್ಕೆ ಮಿಥುನ ರಾಶಿಗೆ ವಕ್ರೀ ಕುಜ ಪ್ರವೇಶ: ಕನ್ಯಾ, ಸಿಂಹ, ಮೀನ ಸೇರಿ ಈ 6 ರಾಶಿಗಳಿಗೆ ಶುಭ, ವೃತ್ತಿಯಲ್ಲಿ ಮೇಲ್ಮೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜ 21 ಕ್ಕೆ ಮಿಥುನ ರಾಶಿಗೆ ವಕ್ರೀ ಕುಜ ಪ್ರವೇಶ: ಕನ್ಯಾ, ಸಿಂಹ, ಮೀನ ಸೇರಿ ಈ 6 ರಾಶಿಗಳಿಗೆ ಶುಭ, ವೃತ್ತಿಯಲ್ಲಿ ಮೇಲ್ಮೆ

ಜ 21 ಕ್ಕೆ ಮಿಥುನ ರಾಶಿಗೆ ವಕ್ರೀ ಕುಜ ಪ್ರವೇಶ: ಕನ್ಯಾ, ಸಿಂಹ, ಮೀನ ಸೇರಿ ಈ 6 ರಾಶಿಗಳಿಗೆ ಶುಭ, ವೃತ್ತಿಯಲ್ಲಿ ಮೇಲ್ಮೆ

Mars Transit: ಇದೇ ತಿಂಗಳು 21 ರಿಂದ ಮಿಥುನ ರಾಶಿಯಲ್ಲಿ ಮಂಗಳ ಗ್ರಹ ವಕ್ರಿಯಾಗಲಿದೆ. ಈ ಸಮಯದಲ್ಲಿ ದ್ವಾದಶ ರಾಶಿಗಳಿಗೆ ವಿವಿಧ ಫಲ ದೊರೆಯುತ್ತದೆ. ಅದರಲ್ಲಿ ಮಿಥುನ, ಸಿಂಹ ಸೇರಿದಂತೆ 6 ರಾಶಿಗಳಿಗೆ ಕುಜನು ಶುಭ ಫಲಗಳನ್ನು ನೀಡಲಿದ್ದಾನೆ. ಯಾವ ರಾಶಿಯವರಿಗೆ ಏನು ಫಲ ದೊರೆಯಲಿದೆ ನೋಡೋಣ. (ಬರಹ: ಹೆಚ್‌ ಸತೀಶ್‌)

ಜನವರಿ 21 ರಿಂದ ಮಿಥುನ ರಾಶಿಯಲ್ಲಿ ಮಂಗಳ ಗ್ರಹ ವಕ್ರೀ ಚಲನೆ
ಜನವರಿ 21 ರಿಂದ ಮಿಥುನ ರಾಶಿಯಲ್ಲಿ ಮಂಗಳ ಗ್ರಹ ವಕ್ರೀ ಚಲನೆ

ಜನವರಿ 21̧, ಮಂಗಳವಾರ ಕುಜನು ವಕ್ರಿಯಾಗಿ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಫೆಬ್ರವರಿ 24ರ ಸೋಮವಾರದವರೆಗೂ ಇದೇ ರಾಶಿಯಲ್ಲಿರುತ್ತಾನೆ. ಕುಜನಿಂದ ಮಾನಸಿಕ ಶಕ್ತಿಯ ಬಗ್ಗೆ ತಿಳಿಯಬಹುದು. ಭೂ ಸಂಬಂಧಿತ ವಿಚಾರಗಳ ಬಗ್ಗೆ ತಿಳಿಯಬಹುದು. ಸೋದರರ ನಡುವಿನ ಒಡನಾಟದ ಬಗ್ಗೆಯೂ ತಿಳಿಯಬಹುದು. ಧೈರ್ಯ ಸಾಹಸದ ಕೆಲಸ ಕಾರ್ಯಗಳ ಬಗ್ಗೆ ತಿಳಿಯಬಹುದು. ಕುಜನಿಗೆ ಬುಧನು ಶತ್ರು ಗ್ರಹವಾಗುತ್ತಾನೆ. ಆದರೆ ಬುಧನಿಗೆ ಕುಜನು ಸಮನಾಗುತ್ತಾನೆ. ಈ ಕಾರಣದಿಂದಾಗಿ ಈ ಅವಧಿಯಲ್ಲಿ ಕೋಪ ತಾಪಗಳು ಕಡಿಮೆ ಆಗುತ್ತವೆ. ಹೊಂದಾಣಿಕೆಯ ಮನೋಭಾವನೆ ಮೂಡುತ್ತದೆ. ಬಂದು ಬಳಗದವರ ಜೊತೆಯಲ್ಲಿ ಉತ್ತಮ ಒಡನಾಟ ಇರುತ್ತದೆ. ಮನದಲ್ಲಿ ಅಳುಕಿನ ಭಾವನೆ ಇರುತ್ತದೆ. ವೃತ್ತಿಕ್ಷೇತ್ರದಲ್ಲಿಯೂ ಸುಧಾರಣೆ ಕಾಣುತ್ತದೆ. ವಕ್ರೀ ಕುಜನಿಂದ ಈ 6 ರಾಶಿಗಗೆ ಶುಭವಾಗುತ್ತದೆ.

ಮಿಥುನ ರಾಶಿ

ಬುದ್ಧಿವಂತಿಕೆಯಿಂದ ತೀರ್ಮಾನ ತೆಗೆದುಕೊಳ್ಳುವಿರಿ. ಇದರಿಂದ ಜೀವನದಲ್ಲಿನ ಅಡ್ಡಿ ಆತಂಕಗಳು ದೂರವಾಗುತ್ತವೆ. ತಾಳ್ಮೆಯಿಂದ ತಮ್ಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಆದರೆ ಆರಂಭದಲ್ಲಿ ಆತಂಕದಿಂದ ವರ್ತಿಸುವಿರಿ. ಸೋದರನ ಜೀವನದಲ್ಲಿ ಇದ್ದ ತೊಂದರೆಗಳು ನಿಮ್ಮ ಸಹಾಯದಿಂದ ಕಡಿಮೆಯಾಗುತ್ತವೆ. ಉದ್ಯೋಗದಲ್ಲಿ ಎದುರಾಗುವ ಬದಲಾವಣೆಗಳು ನಿಮಗೆ ಅನುಕೂಲಕಾರಿ ಆಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ವಾದ ವಿವಾದಗಳಿಂದ ದೂರ ಉಳಿಯಲು ಬಯಸುವಿರಿ. ಕೃಷಿಯನ್ನು ಅವಲಂಬಿಸಿದವರಿಗೆ ಉತ್ತಮ ಆದಾಯ ದೊರೆಯುತ್ತದೆ.

ಸಿಂಹ ರಾಶಿ

ಮನೆತನಕ್ಕೆ ಹೆಮ್ಮೆ ಬರುವಂತಹ ಕಾರ್ಯಗಳನ್ನು ಮಾಡುವಿರಿ. ಕುಟುಂಬದಲ್ಲಿ ಮಾತ್ರವಲ್ಲದೆ ಸಮಾಜದಲ್ಲಿಯೂ ಉತ್ತಮ ಗೌರವ ಲಭಿಸುತ್ತದೆ. ಮನದಲ್ಲಿ ಇರುವ ಆಸೆ ಆಕಾಂಕ್ಷೆಗಳು ನಿಧಾನವಾಗಿ ಈಡೇರಲಿವೆ. ಉನ್ನತ ಅಧಿಕಾರಿಗಳಾಗಿದ್ದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗುವಿರಿ. ಮನೆತನಕ್ಕೆ ಸಂಬಂಧಿಸಿದ ಆಸ್ತಿಯಲ್ಲಿ ಸಿಂಹ ಪಾಲು ದೊರೆಯುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಮತ್ತೆ ಬದಲಾಯಿಸುವುದಿಲ್ಲ. ಉತ್ತಮ ಆರೋಗ್ಯವಿರುತ್ತದೆ. ಜನೋಪಯೋಗಿ ಕೆಲಸಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಕುಟುಂಬದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ.

ಕನ್ಯಾ ರಾಶಿ

ದುಡುಕುತನ ತೋರದೆ ಶಾಂತಿ ನೆಮ್ಮದಿಯಿಂದ ವರ್ತಿಸುವಿರಿ. ನಿಮ್ಮ ಮೃದುವಾದ ಮಾತಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತದೆ. ಕಷ್ಟಪಡದೆ ಚಾತುರ್ಯದಿಂದ ನಿಮಗೆ ಅವಶ್ಯಕತೆ ಇದ್ದಷ್ಟು ಹಣ ಗಳಿಸುವಿರಿ. ಸ್ತ್ರೀಯರಿಗೆ ವಿವಾಹ ಯೋಗ ಇರುತ್ತದೆ. ಹೆಚ್ಚಿನ ನಿರೀಕ್ಷೆ ಇಲ್ಲದ ಕಾರಣ ಶಾಂತಿ ನೆಮ್ಮದಿಯಿಂದ ಬಾಳುವಿರಿ. ಬಂಧು-ಬಳಗದವರು ಸಹಾಯ ಮಾಡಲಿದ್ದಾರೆ. ಉದ್ಯೋಗದಲ್ಲಿ ಜವಾಬ್ದಾರಿಯುತ ಹುದ್ದೆ ನಿಮಗೆ ದೊರೆಯುತ್ತದೆ.

ತುಲಾ ರಾಶಿ

ಜೀವನದಲ್ಲಿ ಹೊಸ ಆಸೆಗಳು ಮೂಡುತ್ತವೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಬಾಳುವಿರಿ. ಹಣಕಾಸಿನ ಬಗ್ಗೆ ಹೆಚ್ಚಿನ ಆಸೆ ಇರುವುದಿಲ್ಲ. ದೊರಕಿದ ಅವಕಾಶಗಳನ್ನು ಬಳಸಿಕೊಳ್ಳುವಿರಿ. ಬೇಸರ ಅಥವಾ ಜಗಳದಿಂದ ದೂರ ಹೋದ ಕುಟುಂಬದ ಸದಸ್ಯರೊಬ್ಬರು ಮರಳಿ ಬರಲಿದ್ದಾರೆ. ಉತ್ತಮ ಉದ್ಯೋಗ ದೊರೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರವಿದ್ದಲ್ಲಿ ಆತ್ಮೀಯರ ಸಹಾಯ ದೊರೆಯುತ್ತದೆ. ಭೂ ವಿವಾದವನ್ನು ಮಾತುಕತೆಯಿಂದ ಪರಿಹರಿಸುವಿರಿ. ಬೇರೆಯವರ ಕೆಲಸ ಕಾರ್ಯಗಳಲ್ಲಿ ತಪ್ಪನ್ನು ಹುಡುಕಲು ಯತ್ನಿಸುವಿರಿ. ಮಕ್ಕಳ ಆರೋಗ್ಯದಲ್ಲಿ ಮತ್ತು ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರುತ್ತದೆ.

ಕುಂಭ ರಾಶಿ

ಅನಾವಶ್ಯಕವಾಗಿ ಯಾವುದೇ ವಿಚಾರದಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸುವುದಿಲ್ಲ. ಶಾಂತಿಯಿಂದ ವರ್ತಿಸಿದರೂ ಕೋಪಗೊಂಡಾಗ ಉದ್ವೇಗಗೊಳ್ಳುವಿರಿ. ಗುರು ಹಿರಿಯರ ಜೊತೆ ಗೌರವದಿಂದ ವರ್ತಿಸುವಿರಿ. ಎದುರಾಗುವ ಆಡಚಣೆಗಳನ್ನು ಬುದ್ಧಿವಂತಿಕೆಯಿಂದ ಗೆಲ್ಲುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಯಶಸ್ಸು ದೊರೆಯುತ್ತದೆ. ನಿಮ್ಮ ಮಕ್ಕಳಿಗೆ ಸಹೋದರರ ಸಹಾಯ ದೊರೆಯುತ್ತದೆ. ಮಕ್ಕಳಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಉತ್ತಮ ಅವಕಾಶ ದೊರೆಯುವ ಕಾರಣ ಉದ್ಯೋಗವನ್ನು ಬದಲಾಯಿಸುವಿರಿ.

ಮೀನ ರಾಶಿ

ಧಾರ್ಮಿಕ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಆತ್ಮೀಯರಿಗೆ ಸಂಪೂರ್ಣ ಸಹಾಯ ಸಹಕಾರ ನೀಡುವಿರಿ. ಪ್ರಯತ್ನ ಪೂರ್ವಕವಾಗಿ ಉದ್ಯೋಗದಲ್ಲಿ ಉತ್ತಮ ಬದಲಾವಣೆಗಳನ್ನು ಕಾಣುವಿರಿ. ಕುಟುಂಬದಲ್ಲಿ ಹೊಂದಾಣಿಕೆಯ ಗುಣ ಕಂಡು ಬರುತ್ತದೆ. ಕುಟುಂಬದ ಆಸ್ತಿಯನ್ನು ಕಾಪಾಡುವಿರಿ. ಸಂತಾನ ಲಾಭವಿದೆ. ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಹೆಚ್ಚಿನ ಪ್ರಯತ್ನ ಬೇಕಾಗಲಿದೆ.‌

ಬರಹ: ಹೆಚ್‌. ಸತೀಶ್‌, ಜ್ಯೋತಿಷಿ, ಬೆಂಗಳೂರು

ಮೊಬೈಲ್:‌ 8546865832

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.