ಸಿಂಹ ರಾಶಿ ಭವಿಷ್ಯ 2025: ಮಾನಸಿಕ ನೆಮ್ಮದಿ ಕಡಿಮೆ, ಕೆಲಸ ಕಾರ್ಯಗಳ ನಡುವೆ ಆರೋಗ್ಯ ಕಡೆಗಣಿಸದಿರಿ
Leo Horoscope 2025: ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುತ್ತಿದ್ದಂತೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಬರುತ್ತಿದ್ದಂತೆ ತಮ್ಮ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. 2025 ರಲ್ಲಿ ಸಿಂಹ ರಾಶಿಯವರ ಭವಿಷ್ಯ ಹೇಗಿದೆ ನೋಡೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಸಿಂಹ ರಾಶಿ ಭವಿಷ್ಯ 2025: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. 2024ರ ಹಳೆಯ ವರ್ಷ ಮುಗಿದು ಹೊಸ ವರ್ಷಕ್ಕೆ ಪ್ರವೇಶಿಸುವ ಮುನ್ನ 2025ರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕಾತುರ ಎಲ್ಲರಿಗೂ ಇರುತ್ತದೆ. ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು '2025ರ ಭವಿಷ್ಯ' ಹೇಗಿದೆ ಎಂದು ನೋಡುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಸಿಂಹ ರಾಶಿಯವರಿಗೆ 2025 ವರ್ಷ ಹೇಗಿರಲಿದೆ ಎಂಬುದನ್ನು ತಿಳಿಯೋಣ.
ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
ಬೇಸರದ ಹಿಂದೆಯೇ ನಲಿವು ಸಹ ನಿಮ್ಮದಾಗುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳು ಯಾವುದೇ ತೊಂದರೆ ಇಲ್ಲದೆ ಮುಂದುವರೆಯಲಿದೆ. ಆದರೆ ಆರಂಭದಲ್ಲಿ ಅಡ್ಡಿ ಆತಂಕ ಸಹಜವಾಗಿರುತ್ತದೆ. ಹಟದ ಗುಣವನ್ನು ತೊರೆದು ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ನಡೆದುಕೊಂಡಲ್ಲಿ ಜೀವನದಲ್ಲಿ ಯಶಸ್ಸನ್ನು ಗಳಿಸುವಿರಿ. ಸ್ವಗೃಹ ಭೂಲಾಭವಿದೆ. ಕುಟುಂಬದಲ್ಲಿನ ಹೆಚ್ಚಿನ ಜವಾಬ್ದಾರಿಯನ್ನು ಒಪ್ಪಿಕೊಳ್ಳುವಿರಿ. ಮಕ್ಕಳು ನಿಮ್ಮ ಇಷ್ಟಕ್ಕೆ ಅನುಗುಣವಾಗಿ ಬೆಳೆಯುತ್ತಾರೆ. ಇದರಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ.
ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಅನಿರೀಕ್ಷಿತವಾದ ಹಣಕಾಸಿನ ಸಹಾಯ ಹೊಸತನಕ್ಕೆ ನಾಂದಿಯಾಗುತ್ತದೆ. ಮಕ್ಕಳ ತಲೆಗೆ ಪೆಟ್ಟಾಗುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಎಲ್ಲರೂ ಗಮನ ಸೆಳೆಯುವಂತಹ ಸಾಧನೆಯನ್ನು ಮಾಡುತ್ತಾರೆ. ಕಲಿಕೆಯ ಅವಧಿಯಲ್ಲಿ ಉದ್ಯೋಗ ಲಭಿಸುತ್ತದೆ. ಉತ್ತಮ ಆದಾಯವಿಲ್ಲದ ಯಾವುದೇ ಕೆಲಸವನ್ನು ಆರಂಭಿಸಲು ನೀವು ಬಯಸುವುದಿಲ್ಲ. ದೇವರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ಎಲ್ಲರೊಂದಿಗೆ ನಿಷ್ಕಲ್ಮಶದಿಂದ ನಡೆದುಕೊಳ್ಳುವ ಮನೋಭಾವ ನಿಮ್ಮದು. ಕುಟುಂಬದಲ್ಲಿಎಲ್ಲರೊಡನೆ ಹೊಂದಿಕೊಂಡು ನಡೆಯುವ ಭಾವನೆ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಯೋಚನೆ ಇರುತ್ತದೆ. ಮಕ್ಕಳಲ್ಲಿನ ಆಲಸ್ಯದ ಭಾವನೆ ಸಮಸ್ಯೆಯನ್ನು ಉಂಟುಮಾಡುವ ಸಾಧ್ಯತೆ ಇದೆ. ಶಿಕ್ಷಿಸುವ ಬದಲು ಪ್ರೀತಿಯಿಂದ ಮಕ್ಕಳನ್ನು ನಿಮ್ಮ ದಾರಿಗೆ ಸೆಳೆದುಕೊಳ್ಳುವಿರಿ. ಮಕ್ಕಳು ಕ್ರಮೇಣ ವಿದ್ಯಾಭ್ಯಾಸದಲ್ಲಿ ಉನ್ನತ ಮಟ್ಟ ತಲುಪುತ್ತಾರೆ.
ಉನ್ನತ ವಿದ್ಯಾಭ್ಯಾಸ ಮಾಡುವವರಿಗೆ ಹಿನ್ನಡೆ
ಉದ್ಯೋಗ ಬದಲಿಸಿದರೆ ಸಮಸ್ಯೆ ಎದುರಿಸುವಿರಿ. ನರಗಳ ಸಮಸ್ಯೆ ಇದ್ದಲ್ಲಿ ಉತ್ತಮ ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಕಲುಷಿತ ಆಹಾರ ಸೇವನೆಯ ಬಗ್ಗೆ ಎಚ್ಚರಿಕೆ ಇರಲಿ. ಚಿಕ್ಕ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಯುತ್ತದೆ. ನಿಮ್ಮಲ್ಲಿನ ಆತ್ಮವಿಶ್ವಾಸವು ಎಲ್ಲರ ಪ್ರೀತಿ ವಿಶ್ವಾಸವನ್ನು ಗೆಲ್ಲುತ್ತದೆ. ನಿರುದ್ಯೋಗಿಗಳಿಗೆ ಆತ್ಮೀಯರ ಸಹಾಯ ದೊರೆಯುತ್ತದೆ. ಉನ್ನತ ವಿದ್ಯಾಭ್ಯಾಸದಲ್ಲಿ ಅಲ್ಪಮಟ್ಟದ ಹಿನ್ನಡೆ ಎದುರಾಗಲಿದೆ. ಮನೆಯಲ್ಲಿರುವ ಗೃಹಿಣಿಯರು ಹಣ ಸಂಗ್ರಹಣೆಯಲ್ಲಿ ಯಶಸ್ಸನ್ನು ಕಾಣುತ್ತಾರೆ. ಅವಿವಾಹಿತರಿಗೆ ತಿಂಗಳ ನಂತರ ವಿವಾಹ ಯೋಗವಿದೆ. ಆತ್ಮೀಯರ ಸಹಕಾರವಿಲ್ಲದೆ ಯಾವುದೇ ಕೆಲಸವನ್ನು ಮಾಡಲಾರಿರಿ. ಅತಿಯಾದ ನಂಬಿಕೆ ಜೀವನದ ಹಾದಿಯನ್ನು ಬದಲಿಸುತ್ತದೆ. ಉದ್ಯೋಗದಲ್ಲಿ ನಿಮ್ಮ ಕಾರ್ಯವ್ಯಾಪ್ತಿ ಹೆಚ್ಚುತ್ತದೆ. ಅನಿವಾರ್ಯವಾಗಿ ಬೇರೆಯವರ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕು.
ಉದ್ಯೋಗದಲ್ಲಿನ ಕೆಲಸದ ಒತ್ತಡ ನಿಮ್ಮ ಸ್ವಂತಿಕೆಯನ್ನು ಮರೆಮಾಚುತ್ತದೆ. ಸಮಯ ಸಂದರ್ಭಕ್ಕೆ ಹೊಂದಿಕೊಂಡು ನಡೆಯಬೇಕಾದ ಅನಿವಾರ್ಯತೆ ಇರುತ್ತದೆ. ಮಾನಸಿಕ ನೆಮ್ಮದಿ ಇರುವುದಿಲ್ಲ. ವಿವಾಹಿತರಲ್ಲಿ ಸುಖ ದುಃಖಗಳು ಸಮಾನ ಪ್ರಮಾಣದಲ್ಲಿ ಇರುತ್ತವೆ. ಪರಸ್ಪರ ಹೊಂದಾಣಿಕೆ ಇದ್ದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಮಹಿಳಾ ಉದ್ಯೋಗಿಗಳಿಗೆ ಉನ್ನತ ಪದವಿ ದೊರೆಯುತ್ತದೆ. ಸ್ವಾರ್ಥವಿಲ್ಲದ ಜನರ ಸಹವಾಸವು ಜೀವನಕ್ಕೆ ಹೊಸ ಹಾದಿಯನ್ನು ತೋರಿಸುತ್ತದೆ. ಜನಸೇವೆ ಮಾಡುವ ಅವಕಾಶ ನಿಮಗೆ ದೊರೆಯಲಿದೆ. ಕೆಲಸ ಕಾರ್ಯಗಳ ನಡುವೆ ನಿಮ್ಮ ಆರೋಗ್ಯವನ್ನು ಕಡೆಗಣಿಸದಿರಿ. ಸ್ತ್ರೀಯರಿಗೆ ಚರ್ಮದ ದೋಷ ಉಂಟಾಗಬಹುದು. ರಕ್ತದ ದೋಷ ಅಥವಾ ಮಧುಮೇಹ ಇರುವವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಹೊಂದಿಕೊಂಡು ಬಾಳುವಿರಿ.
ವಾಹನ ಚಲಾಯಿಸುವಾಗ ಜಾಗ್ರತೆ
ಹಣಕಾಸಿನ ವ್ಯವಹಾರಗಳು ನಿಧಾನಗತಿಯಲ್ಲಿ ಸಾಗಲಿವೆ. ಆದರೆ ನಿಮ್ಮಲ್ಲಿನ ಸಹನೆಯ ವ್ಯಕ್ತಿತ್ವವು ಕೆಲಸ ಕಾರ್ಯಗಳು ಶೀಘ್ರವಾಗಿ ನಡೆಯಲು ಕಾರಣವಾಗುತ್ತದೆ. ಭೂ ಖರೀದಿ ವಿಚಾರದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ವಾಹನ ಚಾಲನೆ ಮಾಡುವ ವೇಳೆ ಜಾಗರೂಕತೆ ಇರಲಿ. ದಂಪತಿಗಳು ಮಕ್ಕಳ ಜೊತೆ ಯಾತ್ರಾಸ್ಥಳಗಳಿಗೆ ಭೇಟಿ ನೀಡುವರು. ನವವಿವಾಹಿತರಿಗೆ ಸಂತಾನ ಲಾಭವಿದೆ. ಸ್ವಂತ ಉದ್ದಿಮೆ ಹೊಂದಿರುವವರಿಗೆ ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ದೊರೆಯುವುದಿಲ್ಲ. ವಯಸ್ಸಾದ ನಂತರವೂ ಮಕ್ಕಳಂತೆ ಕೆಲಸ ನಿರ್ವಹಿಸುವ ಗುರಿ ನಿಮಗಿರುತ್ತದೆ. ಬೇರೆಯವರ ಹಣಕಾಸಿನ ವ್ಯವಹಾರದಲ್ಲಿ ಆಸಕ್ತಿ ತೋರುವುದಿಲ್ಲ. ಆತ್ಮೀಯರೊಂದಿಗೆ ಹಣದ ವ್ಯವಹಾರದ ಬಗ್ಗೆ ಆಸಕ್ತಿ ಇರದು. ಎಲ್ಲರೊಂದಿಗೆ ಧೀರ್ಘಕಾಲದ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುವಿರಿ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).