ಮಹಾ ಕುಂಭಮೇಳ 2025: ಕಳೆದ ಬಾರಿ ಕುಂಭಮೇಳ ಎಲ್ಲಿ ನಡೆದಿತ್ತು, ಮುಂದಿನ ಬಾರಿ ಎಲ್ಲಿ,ಯಾವಾಗ ನಡೆಯಲಿದೆ? ಇಲ್ಲಿದೆ ಮಾಹಿತಿ
Maha Kumbhamela 2025: ಈ ಬಾರಿ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಪ್ರತಿ 12 ವರ್ಷಗಳಿಗೆ ಒಮ್ಮೆ ಕುಂಭಮೇಳ ನಡೆಯುತ್ತದೆ, ಆದರೆ ಈ ಬಾರಿ ನಡೆಯುತ್ತಿರುವುದು ಮಹಾ ಕುಂಭಮೇಳ. ಕಳೆದ ಬಾರಿ ಕುಂಭಮೇಳ ಎಲ್ಲಿ ನಡೆದಿತ್ತು, ಮುಂದಿನ ಬಾರಿ ಎಲ್ಲಿ ನಡೆಯಲಿದೆ? ಇಲ್ಲಿದೆ ಮಾಹಿತಿ.
ಮಹಾ ಕುಂಭಮೇಳ 2025: ಜನವರಿ 13 ರಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಲಿರುವ ಮಹಾ ಕುಂಭಮೇಳಕ್ಕೆ ಸಕಲ ತಯಾರಿ ನಡೆಸಿದೆ. ಈಗಾಗಲೇ ದೇಶದ ವಿವಿಧ ರಾಜ್ಯಗಳಿಂದ ಸಂತರು, ನಾಗಾಸಾಧುಗಳು ಮಹಾಕುಂಭ ನಡೆಯುವ ಸ್ಥಳಕ್ಕೆ ಆಗಮಿಸಿದ್ದಾರೆ, ಶ್ರೀಮಂತ ಉದ್ಯಮಿಗಳು ಕೂಡಾ ಮಹಾಕುಂಭ ನೋಡಲು ಆಗಮಿಸುತ್ತಾರೆ.
12 ವರ್ಷಗಳಿಗೆ ಒಮ್ಮೆ ನಡೆಯಲಿರುವ ಕುಂಭಮೇಳ
ಜನವರಿ 13 ರಿಂದ ಪ್ರಾರಂಭವಾಗುವ ಮಹಾ ಕುಂಭಮೇಳ 26 ಫೆಬ್ರವರಿಯಂದು ಕೊನೆಗೊಳ್ಳುತ್ತದೆ. ಕುಂಭಮೇಳವು 12 ವರ್ಷಗಳಿಗೊಮ್ಮೆ ನಡೆಯುತ್ತದೆ. ಕುಂಭಮೇಳದಲ್ಲಿ ರಾಜ ಸ್ನಾನಕ್ಕೆ ವಿಶೇಷ ಮಹತ್ವವಿದೆ. ಇದನ್ನು ಅಮೃತ ಸ್ನಾನ ಎಂದೂ ಕರೆಯುತ್ತಾರೆ. ಶಾಹಿ ಸ್ನಾನವು ಮಹಾಕುಂಭದೊಂದಿಗೆ ಸಂಬಂಧಿಸಿದ ಒಂದು ವಿಶೇಷ ಧಾರ್ಮಿಕ ಸಂಪ್ರದಾಯವಾಗಿದೆ. ಗಂಗಾ, ಯುಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಭಕ್ತರ ಪಾಪಗಳು ತೊಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈ ಸ್ನಾನವು ಜನರನ್ನು ಆಧ್ಯಾತ್ಮಿಕ ವಿಮೋಚನೆಗೆ ಹತ್ತಿರ ತರುತ್ತದೆ. ಹಾಗಾದರೆ ಕೊನೆಯ ಕುಂಭಮೇಳ ನಡೆದದ್ದು ಎಲ್ಲಿ ಎಂಬ ಕುತೂಹಲ ಬಹಳ ಜನರಿಗೆ ಇದೆ, ಇದರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
2021 ರಲ್ಲಿ ಹರಿದ್ವಾರದಲ್ಲಿ ನಡೆದಿದ್ದ ಕುಂಭಮೇಳ
ಕೊನೆಯ ಕುಂಭಮೇಳವನ್ನು 2021 ರಲ್ಲಿ ಧಾರ್ಮಿಕ ನಗರಿ ಹರಿದ್ವಾರದಲ್ಲಿ ಆಯೋಜಿಸಲಾಗಿತ್ತು. ಕಳೆದ ಬಾರಿ 4 ತಿಂಗಳ ಕಾಲ ಕುಂಭಮೇಳ ನಡೆಸಲು ಯೋಜಿಸಲಾಗಿತ್ತು. ಆದರೆ ಅ ಸಮಯದಲ್ಲಿ ಕೊರೊನಾ ಸಮಸ್ಯೆ ಇದ್ದಿದ್ದರಿಂದ ಕುಂಭಮೇಳವನ್ನು ಕೇವಲ 17 ದಿನಗಳ ಕಾಲ ಆಯೋಜಿಸಲಾಗಿತ್ತು. 2021 ಏಪ್ರಿಲ್ 1ರಿಂದ ಆರಂಭವಾಗಿ 17ರಲ್ಲಿ ಮುಗಿದಿತ್ತು. ಈ ಬಾರಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವುದು ಮಹಾಕುಂಭ ಮೇಳ. ಇದು 144 ವರ್ಷಗಳಿಗೊಮ್ಮೆ ನಡೆಯುವ ಅಪರೂಪದ ಕಾರ್ಯಕ್ರಮವಾಗಿದೆ.
ಪ್ರತಿ 12 ವರ್ಷಗಳಿಗೆ ಒಮ್ಮೆ ಕುಂಭಮೇಳವು ಹರಿದ್ವಾರದಲ್ಲಿ ನಡೆಯುತ್ತದೆ. ಗುರುವು ಕುಂಭ ರಾಶಿಯಲ್ಲಿ, ಸೂರ್ಯನು ಮೇಷ ರಾಶಿಯಲ್ಲಿ ಇದ್ದಾಗ ಕುಂಭಮೇಳ ನಡೆಯುತ್ತದೆ.
ಮುಂದಿನ ಕುಂಭಮೇಳ ನಡೆಯುವುದು ಎಲ್ಲಿ, ಯಾವಾಗ?
ಮುಂದಿನ ಕುಂಭಮೇಳವು ಹರಿದ್ವಾರದಲ್ಲಿ 2033ರಲ್ಲಿ ನಡೆಯಲಿದೆ. 2033 ಮಾರ್ಚ್ ತಿಂಗಳ 17,18ರ ನಡುವೆ ಗುರುವು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ.
ಹರಿದ್ವಾರದಲ್ಲಿ ನಡೆಯಲಿರುವ ಮುಂದಿನ ಕುಂಭಮೇಳದಲ್ಲಿ ಮೊದಲ ರಾಜಸ್ನಾನವು 28 ಫೆಬ್ರವರಿ 2033 ರಂದು ನಡೆಯುತ್ತದೆ. 30 ಮಾರ್ಚ್ 2033 ರಂದು ಚೈತ್ರ ಅಮವಾಸ್ಯೆಯಂದು ಎರಡನೇ ಶಾಹಿ ಸ್ನಾನ, 14 ಏಪ್ರಿಲ್ 2033 ರಂದು ಸಂಕ್ರಾಂತಿ ಮತ್ತು ಪೂರ್ಣಿಮಾ ಸ್ನಾನ. ಅಕ್ಷಯ ತೃತೀಯದ ರಾಜ ಸ್ನಾನವು 1 ಮೇ 2033 ರಂದು ನಡೆಯುತ್ತದೆ.
ಕುಂಭದ ಸಮಯದಲ್ಲಿ ಕೆಲವು ಪ್ರಮುಖ ದಿನಾಂಕಗಳಲ್ಲಿ ಮಾಡುವ ಸ್ನಾನವನ್ನು ಶಾಹಿ ಸ್ನಾನ ಎಂದು ಕರೆಯಲಾಗುತ್ತದೆ. ಈ ಹೆಸರನ್ನು ಸಾಂಸ್ಕೃತಿಕವಾಗಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ನಾಗಾ ಸಾಧುಗಳಿಗೆ ಮಹಾಕುಂಭದಲ್ಲಿ ಮೊದಲು ಸ್ನಾನ ಮಾಡಲು ಅವಕಾಶವಿದೆ.
ಇದನ್ನೂ ಓದಿ: ಚಿನ್ನ ದಾನ ನೀಡುವುದರಿಂದ ಏನು ಪ್ರಯೋಜನ, ಏನು ಅನಾನುಕೂಲ
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಶಾಹಿಸ್ನಾನದ ದಿನಾಂಕಗಳು
13 ಜನವರಿ (ಸೋಮವಾರ) - ಸ್ನಾನ, ಪುಷ್ಯ ಹುಣ್ಣಿಮೆ
14 ಜನವರಿ (ಮಂಗಳವಾರ) - ಶಾಹಿ ಸ್ನಾನ, ಮಕರ ಸಕ್ರಾಂತಿ
29 ಜನವರಿ (ಬುಧವಾರ) - ಶಾಹಿ ಸ್ನಾನ, ಮೌನಿ ಅಮವಾಸ್ಯೆ
3 ಫೆಬ್ರವರಿ (ಸೋಮವಾರ) - ಶಾಹಿ ಸ್ನಾನ, ವಸಂತ ಪಂಚಮಿ
12 ಫೆಬ್ರವರಿ (ಬುಧವಾರ) - ಸ್ನಾನ, ಮಾಘಿ ಹುಣ್ಣಿಮೆ
26 ಫೆಬ್ರವರಿ (ಬುಧವಾರ) - ಸ್ನಾನ, ಮಹಾ ಶಿವರಾತ್ರಿ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ