ಕನ್ನಡ ಸುದ್ದಿ  /  Astrology  /  Maha Shivaratri 2024 Favourite Things Of Lord Shiva Including Honey Milk Shami Leaf Rsa

Maha Shivaratri 2024: ಮಹಾ ಶಿವರಾತ್ರಿಯಂದು ಶಿವನಿಗೆ ಯಾವ ವಸ್ತುಗಳನ್ನು ಅರ್ಪಿಸುವುದು ಶ್ರೇಷ್ಠ..? ಶಂಕರನಿಗೆ ಇಷ್ಟವಾದ ವಸ್ತುಗಳು ಯಾವುದು?

Maha Shivaratri 2024: ಮಹಾ ಶಿವರಾತ್ರಿ ದಿನ ಶಿವನಿಗೆ ಇಷ್ಟವಾದ ವಸ್ತುಗಳನ್ನು ಸಮರ್ಪಿಸುವುದರಿಂದ ಶಿವ ಪ್ರಸನನ್ನಾಗಿ ಭಕ್ತರಿಗೆ ಬೇಡಿದ ವರಗಳನ್ನು ನೀಡುವನು ಎಂಬ ನಂಬಿಕೆ ಇದೆ. ಶಿವನಿಗೆ ಯಾವೆಲ್ಲಾ ವಸ್ತುಗಳನ್ನು ಅರ್ಪಿಸುವುದು ಶ್ರೇಷ್ಠ..? ಶಿವನಿಗೆ ಇಷ್ಟವಾದ ವಸ್ತುಗಳು ಯಾವುದು..? ಇಲ್ಲಿದೆ ಮಾಹಿತಿ

ಮಹಾ ಶಿವರಾತ್ರಿಯಂದು ಶಿವನಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸಿದರೆ ಶುಭ
ಮಹಾ ಶಿವರಾತ್ರಿಯಂದು ಶಿವನಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸಿದರೆ ಶುಭ

ಮಹಾ ಶಿವರಾತ್ರಿ 2024: ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಶಿವರಾತ್ರಿಯ ದಿನ ಶಿವನಿಗೆ ಇಷ್ಟವಾದ ವಸ್ತುಗಳನ್ನು ಅರ್ಪಿಸಿದರೆ ಶಿವನು ಪುನೀತನಾಗುತ್ತಾನೆ ಎಂಬ ನಂಬಿಕೆಯಿದೆ. ಹಾಗಾದರೆ ಮಹಾ ಕಾಲನಿಗೆ ಯಾವೆಲ್ಲಾ ವಸ್ತುಗಳು ಅತ್ಯಂತ ಪ್ರಿಯ..? ಶಿವನಿಗೆ ಈ ವಸ್ತುಗಳೇ ಪ್ರಿಯ ಎನಿಸಲು ಕಾರಣವೇನು..? ಈ ಎಲ್ಲದರ ಬಗ್ಗೆ ತಿಳಿದುಕೊಳ್ಳೋಣ.

ಧಾತುರ: ಇದು ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುಗಳ ಪೈಕಿ ಒಂದು ಎಂಬುದು ಶಿವ ಭಕ್ತರ ನಂಬಿಕೆ. ಹಿಂದೂ ಪುರಾಣಗಳ ಪ್ರಕಾರ ದೇವಾನು ದೇವತೆಗಳು ನಿಸರ್ಗದಲ್ಲಿ ಮಿತಿ ಮೀರಿದ್ದ ಶಾಖವನ್ನು ಕಡಿಮೆಯಾಗಿಸಲು ಶಿವನೊಬ್ಬನಿಂದಲೇ ಸಾಧ್ಯವೆಂದು ತಿಳಿದು ಪ್ರಜ್ಞೆ ತಪ್ಪಿದ್ದ ಶಿವನನ್ನು ಎಚ್ಚರಿಸಲು ಧಾತುರವನ್ನು ಅರ್ಪಿಸಿದ್ದರು ಎನ್ನಲಾಗಿದೆ. ಇದಾದ ಬಳಿಕ ಶಿವನಿಗೆ ಮತ್ತೆ ಪ್ರಜ್ಞೆ ಬರುತ್ತದೆ. ನಂತರ ಶಿವನ ತಲೆಯಿಂದ ಎಲ್ಲಾ ವಿಷವು ಹೊರ ಬರುತ್ತದೆ. ಅಂದಿನಿಂದ ಶಿವನನ್ನು ಆರಾಧಿಸುವಾಗ ಧಾತುರವನ್ನು ಅರ್ಪಿಸಲಾಗುತ್ತದೆ. ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಧಾತುರವನ್ನು ಅರ್ಪಿಸುವುದು ಅತ್ಯಂತ ಮಂಗಳಕರ ಎಂದು ಹೇಳಲಾಗುತ್ತದೆ.

ಜೇನು ತುಪ್ಪ : ಶಿವನ ಕೃಪೆಗೆ ಪಾತ್ರರಾಗಲು ಶಿವನ ಭಕ್ತರು ಶಿವಲಿಂಗದ ಮೇಲೆ ಹಾಲು , ಮೊಸರು ಸೇರಿದಂತೆ ಪಂಚಾಮೃತ ಅರ್ಪಿಸುತ್ತಾರೆ. ಅವುಗಳಲ್ಲಿ ಜೇನುತುಪ್ಪ ಕೂಡಾ ಒಂದು. ಶಿವನಿಗೆ ಜೇನುತುಪ್ಪ ಅರ್ಪಿಸುವುದು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಯಾರು ಶಿವಲಿಂಗದ ಮೇಲೆ ಜೇನುತುಪ್ಪವನ್ನು ಮನಃಪೂರ್ವಕವಾಗಿ, ಅತ್ಯಂತ ಭಕ್ತಿ ಭಾವದಿಂದ ಅರ್ಪಿಸುತ್ತಾರೆಯೋ ಅಂಥವರ ಮೇಲೆ ಶಿವ ಕೃಪೆ ತೋರಿ ಅವರಿಗೆ ಕೇಳಿದ್ದನ್ನು ಕರುಣಿಸುತ್ತಾನೆ ಎಂಬ ನಂಬಿಕೆಯಿದೆ.

ಬಿಲ್ವ ಪತ್ರೆ : ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುಗಳ ಪೈಕಿ ಬಿಲ್ವಪತ್ರೆ ಕೂಡಾ ಒಂದು. ಶಿವ, ಪಾರ್ವತಿ ಹಾಗೂ ಲಕ್ಷ್ಮೀ ದೇವಿ ಸೇರಿದಂತೆ ಅನೇಕ ದೇವರು ಈ ಬಿಲ್ವಪತ್ರೆ ಎಲೆಯಲ್ಲಿ ನೆಲೆಸಿದ್ದಾರೆ ಎಂದು ಹಿಂದೂ ಪುರಾಣ ಹೇಳುತ್ತದೆ. ಮೂರು ಜೋಡಿ ಎಲೆಗಳ ರೀತಿಯಲ್ಲಿ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಿದರೆ ಶಿವನ ದೇಜ ತಂಪಾಗುತ್ತದೆ ಎಂಬ ನಂಬಿಕೆಯಿದೆ. ಇದರಿಂದ ಭಗವಾನ್ ಶಿವನು ಪ್ರಸನ್ನನಾಗುತ್ತಾನೆ ಹಾಗೂ ಭಕ್ತರ ಮೇಲೆ ಅನುಗ್ರಹ ಕರುಣಿಸುತ್ತಾನೆ. ಮೂರು ಎಲೆಗಳುಳ್ಳ ಬಿಲ್ವಪತ್ರೆಯನ್ನು ತ್ರಿದೇವ ಎಂದು ಸಹ ಕರೆಯಲಾಗುತ್ತದೆ, . ಇದು ಮಹಾದೇವನ ತ್ರಿಶೂಲವನ್ನು ಪ್ರತಿನಿಧಿಸುತ್ತದೆ ಎಂಬ ನಂಬಿಕೆಯಿದೆ.

ಶಮಿ ಎಲೆಗಳು : ಶನಿದೋಷದಿಂದ ಪಾರಾಗಾಲು ಮನೆಯ ಅಂಗಳದಲ್ಲಿ ಶಮಿ ಸಸ್ಯವನ್ನು ಅನೇಕರು ನೆಡುತ್ತಾರೆ. ಶಮಿ ಎಲೆಗಳನ್ನು ಶನಿಗೆ ಅರ್ಪಿಸಲಾಗುತ್ತದೆ. ಆದರೆ ಶಮಿ ಎಲೆಗಳು ಕೇವಲ ಶನಿಗೆ ಮಾತ್ರವಲ್ಲ ಶಿವನಿಗೂ ಅತ್ಯಂತ ಪ್ರಿಯವಾದ ವಸ್ತುಗಳ ಪೈಕಿ ಒಂದಾಗಿದೆ. . ಯಾವ ಭಕ್ತನು ಶಿವಲಿಂಗದ ಮೇಲೆ ಶಮಿ ಎಲೆಗಳನ್ನು ಅರ್ಪಿಸುತ್ತಾನೋ ಅವರು ಶಿವನ ಕೃಪೆಗೆ ಬಹುಬೇಗ ಪಾತ್ರರಾಗುತ್ತಾರೆ ಎಂಬ ನಂಬಿಕೆಯಿದೆ.

ಹಾಲು: ಶಿವನು ಅಭಿಷೇಕ ಪ್ರಿಯ. ಹೀಗಾಗಿ ಶಿವನಿಗೆ ಮಾಡುವ ಅಭಿಷೇಕಗಳ ಪೈಕಿ ಕ್ಷೀರಾಭಿಷೇಕ ಅತ್ಯಂತ ಮಹತ್ವವಾದದ್ದು ಎಂದು ಹೇಳಲಾಗುತ್ತದೆ. ಹಾಲು ಶುದ್ಧತೆಯ ಸಂಕೇತವಾಗಿದೆ. ಹೀಗಾಗಿ ಯಾರು ಭಕ್ತಿ ಭಾವದಿಂದ ಶಿವನಿಗೆ ಕ್ಷೀರಾಭಿಷೇಕ ಮಾಡುವರೋ ಅವರ ಜೀವನ ಕೂಡಾ ಹಾಲಿನಂತೆ ಶುದ್ಧವಾಗಿ, ಸ್ವಚ್ಛವಾಗಿ ಇರುತ್ತದೆ ಎಂಬ ನಂಬಿಕೆಯಿದೆ.