Maha Shivaratri: ದಕ್ಷಿಣಕಾಶಿ ತಲಕಾಡಿನ ಪಂಚಲಿಂಗ ದರ್ಶನ; ಇಲ್ಲಿ 5 ರೂಪದಲ್ಲಿ ನಾವು ಶಿವನನ್ನು ನೋಡಬಹುದು-maha shivaratri 2024 panchalinga temple in talakadu five shiva temples in talakadu mysuru news mgb ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Shivaratri: ದಕ್ಷಿಣಕಾಶಿ ತಲಕಾಡಿನ ಪಂಚಲಿಂಗ ದರ್ಶನ; ಇಲ್ಲಿ 5 ರೂಪದಲ್ಲಿ ನಾವು ಶಿವನನ್ನು ನೋಡಬಹುದು

Maha Shivaratri: ದಕ್ಷಿಣಕಾಶಿ ತಲಕಾಡಿನ ಪಂಚಲಿಂಗ ದರ್ಶನ; ಇಲ್ಲಿ 5 ರೂಪದಲ್ಲಿ ನಾವು ಶಿವನನ್ನು ನೋಡಬಹುದು

Talakadu: ತಲಕಾಡಿನಲ್ಲಿ ವೈದ್ಯೇಶ್ವರ, ಪಾತಾಳೇಶ್ವರ, ಮರುಳೇಶ್ವರ, ಅರ್ಕೇಶ್ವರ ಮತ್ತು ಮಲ್ಲಿಕಾರ್ಜುನ ಸ್ವಾಮಿ ಈ ಐದು ರೂಪದಲ್ಲಿ ಶಿವನನ್ನು ನಾವು ನೋಡಬಹುದು. ಈ ಕುರಿತ ಲೇಖನ ಇಲ್ಲಿದೆ. (ಲೇಖನ: ಎಚ್‌. ಸತೀಶ್‌, ಜ್ಯೋತಿಷಿ)

ತಲಕಾಡಿನ ಪಂಚಲಿಂಗಗಳು (PC: Twitter/@KannadaNaduu)
ತಲಕಾಡಿನ ಪಂಚಲಿಂಗಗಳು (PC: Twitter/@KannadaNaduu)

ದಕ್ಷಿಣಕಾಶಿ ಎಂದು ಕರೆಯಲ್ಪಡುವ ತಲಕಾಡು ಸಾವಿರಾರು ವರ್ಷಗಳ ಹಳೆಯ ತಾಣವಾಗಿದೆ. ಕಾವೇರಿ ನದಿಯ ಎಡದಂಡೆಯ ಮೇಲಿರುವ ಪಟ್ಟಣವಾದ ಇದು ಮೈಸೂರಿನಿಂದ 45 ಕಿಮೀ ದೂರದಲ್ಲಿದೆ. ಇದು ಚೋಳರ ಮತ್ತು ಇನ್ನೂ ಅನೇಕ ರಾಜವಂಶಗಳಿಗೆ ರಾಜಧಾನಿಯಾಗಿದ್ದ ಸ್ಥಳ. ಈ ಸ್ಥಳದ ಮೂರು ದಿಕ್ಕಿನಲ್ಲಿಯೂ ನೀರು ಆವೃತವಾಗಿದೆ. ಆದ್ದರಿಂದ ಇದನ್ನು ಪರ್ಯಾಯ ದ್ವೀಪ ಎಂದು ಕರೆಯಬಹುದು. ಸೋಮದತ್ತನೆಂಬ ವ್ಯಕ್ತಿಯು ಸಂಸಾರದಲ್ಲಿ ಜಿಗುಪ್ಸೆ ಹೊಂದಿ ವಾರಣಾಸಿಯಲ್ಲಿ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ಆದರೆ ಕಾಶಿ ವಿಶ್ವನಾಥನ ಆಜ್ಞೆಯಂತೆ ಆತನು ತನ್ನ ಶಿಷ್ಯರೊಂದಿಗೆ ದಕ್ಷಿಣ ಭಾಗದ ಈ ಗಜಾರಣ್ಯಕ್ಕೆ ಬರುತ್ತಾನೆ. ಅಲ್ಲಿದ್ದ ಋಚಿಕ ಮಹಾಮುನಿಯ ಆಶ್ರಮದಲ್ಲಿ ಎಲ್ಲರೂ ತಪಸ್ಸನ್ನು ಆಚರಿಸುತ್ತಾರೆ. ಆ ನಂತರ ಎಲ್ಲರೂ ಶಿವನ ಅನುಗ್ರಹದಿಂದ ಸದ್ಗತಿಯನ್ನು ಪಡೆಯುತ್ತಾರೆ.

ಇಲ್ಲಿ ವೈದ್ಯೇಶ್ವರ, ಪಾತಾಳೇಶ್ವರ, ಮರುಳೇಶ್ವರ, ಅರ್ಕೇಶ್ವರ ಮತ್ತು ಮಲ್ಲಿಕಾರ್ಜುನ ಸ್ವಾಮಿ ಈ ಐದು ರೂಪದಲ್ಲಿ ಶಿವನನ್ನು ನಾವು ನೋಡಬಹುದು. ಇಲ್ಲಿಯ ಕ್ಷೇತ್ರ ಪಾಲಕನಾಗಿ ಸ್ವಯಂ ಶಿವನೇ ನಿಲ್ಲುತ್ತಾನೆ. ಈ ಎಲ್ಲಾ ಶಿವನ ರೂಪಗಳು ಲಿಂಗದ ರೂಪದಲ್ಲಿ ಕಾಣಸಿಗುತ್ತವೆ. ಆದ್ದರಿಂದ ಇದನ್ನು ಪಂಚಲಿಂಗ ಕ್ಷೇತ್ರ ಎಂದು ಕರೆಯುತ್ತೇವೆ. ರಾಜವಂಶದವರ ಶಾಪದ ಕಾರಣ ತಲಕಾಡು ಮರಳಿನಿಂದ ಮುಳುಗಿ ಕೆಲವು ದೇವರುಗಳು ಕಾಣದಂತಾಗುತ್ತದೆ. ಆದರೆ ದೈವ ಸಂಕಲ್ಪದಿಂದ ಮರಳೆಲ್ಲ ದೂರ ಸರಿದು ಪಂಚಲಿಂಗವನ್ನು ದರ್ಶನ ಮಾಡುವ ಪುಣ್ಯ ನಮಗೆ ದೊರೆಯುತ್ತದೆ. ಇತ್ತೀಚಿನ ದಿನವೆಂದರೆ 2009 ರಲ್ಲಿ ಪಂಚಲಿಂಗ ದರ್ಶನವಾಗಿತ್ತು. ಮುಂದಿನ ಪಂಚಲಿಂಗ ದರ್ಶನದ ಉತ್ಸವವು 2033ರಲ್ಲಿ ಆಗಲಿದೆ.

ಈ ಸ್ಥಳದ ಅಧಿಪತಿಯೇ ಶ್ರೀ ವೈದ್ಯನಾಥೇಶ್ವರ. ಅನೇಕ ಶಿವಭಕ್ತರಿಗೆ ಇಷ್ಟಾರ್ಥ ಕರುಣಿಸಿ ಕಾಪಾಡಿದ ಮಹಾ ಶಕ್ತಿ ಸ್ವರೂಪ. ಅನಾರೋಗ್ಯದಿಂದ ಬಳಲುವವರು ಈತನ ದರ್ಶನ ಪಡೆದು ಸೇವೆಯನ್ನು ಮಾಡಿದರೆ ಉತ್ತಮ ಆರೋಗ್ಯ ಆರಂಭಿಸುವುದು. ಈ ಕಾರಣದಿಂದಲೇ ಈ ದೇವರನ್ನು ವೈದ್ಯನಾಥೇಶ್ವರ ಎಂಬ ಹೆಸರಿನಿಂದ ಕರೆಯುತ್ತೇವೆ. ನಂಜನಗೂಡಿನಲ್ಲಿಯೂ ಸಹ ಹಕೀಮ ನಂಜುಂಡೇಶ್ವರನ ದೇವಸ್ಥಾನವಿದೆ. ಇಲ್ಲಿಯೂ ಸಹ ಗಾಯಗೊಂಡ ಟಿಪ್ಪುವಿನ ಆನೆಗೆ ಕಣ್ಣು ಬಂದ ಕಥೆ ಇದೆ.

ಶ್ರೀ ಪಾತಾಳೇಶ್ವರ ನಾಗ ಲೋಕವನ್ನು ಪ್ರತಿನಿಧಿಸುವ ದೇವರಾಗಿದೆ. ಈ ದೇವಾಲಯವು ಮರಳಿನ ಮಧ್ಯೆ ದಕ್ಷಿಣ ಭಾಗದಲ್ಲಿದೆ. ವಿಶೇಷವಾಗಿ ಶ್ರಾವಣ ಶುದ್ಧ ಪಂಚಮಿ ಎಂದು ಪಾತಾಳೇಶ್ವರನಿಗೆ ಪೂಜೆ ಮಾಡಿಸಿದರೆ ಸರ್ಪದೋಷದಿಂದ ಮುಕ್ತಿ ದೊರೆಯುತ್ತದೆ. ಇಲ್ಲಿ ಪಾತಾಳೇಶ್ವರನ ಜೊತೆಯಲ್ಲಿ ವಾಸುಕೇಶ್ವರನ ಸನ್ನಿಧಿಯೂ ಇದೆ. ವೈದ್ಯನಾಥೇಶ್ವರ ದೇವಾಲಯದ ಪಶ್ಚಿಮ ಭಾಗದಲ್ಲಿ ಮರುಳೇಶ್ವರ ಸನ್ನಿಧಿ ಇದೆ. ಬ್ರಹ್ಮದೇವನು ಇಲ್ಲಿ ಪೂಜೆ ಸಲ್ಲಿಸಿದ ಕಾರಣ ಬ್ರಹ್ಮನ ವಿವಾಹ ನಡೆಯಿತೆಂಬ ನಂಬಿಕೆ ಇದೆ. ಮಾಘ ಮಾಸದಲ್ಲಿ ಈ ದೇವರಿಗೆ ಪೂಜೆ ಸಲ್ಲಿಸಿದರೆ ವಿಶೇಷ ಫಲಗಳು ದೊರಕುತ್ತವೆ.

ತಲಕಾಡಿನ ಉತ್ತರ ದಿಕ್ಕಿನಲ್ಲಿ ಸೋಮ ಪರ್ವತವಿದೆ. ಇಲ್ಲಿರುವ ದೇವರೇ ಶ್ರೀ ಮಲ್ಲಿಕಾರ್ಜುನೇಶ್ವರ ಸ್ವಾಮಿ. ಇಲ್ಲಿ ಪೂಜೆ ಸಲ್ಲಿಸಿದರೆ ಕಾಮಧೇನುವಿನ ಅನುಗ್ರಹವು ದೊರೆಯುತ್ತದೆ. ಈ ದೇವಾಲಯದ ಬಳಿ ಕಾಮಧೇನುವಿನ ಪಾದವನ್ನು ನೋಡಬಹುದು. ಶ್ರೀಶೈಲದಲ್ಲಿ ಇರುವಂತೆ ಭ್ರಮರಾಂಬ ಸಮೇತ ಶ್ರೀ ಮಲ್ಲಿಕಾರ್ಜುನ ಸ್ವಾಮಿಯನ್ನು ಇಲ್ಲಿಯೂ ಕಾಣಬಹುದು. ಇದನ್ನು ಪ್ರತಿಷ್ಠಾಪಿಸಿದವರು ಶ್ರೀ ಶಂಕರಚಾರ್ಯರು ಎಂದು ತಿಳಿದುಬರುತ್ತದೆ.

ವೈದ್ಯನಾಥೇಶ್ವರನ ದೇವಾಲಯದ ಪೂರ್ವದಲ್ಲಿ ಇರುವ ಶಿವನ ರೂಪವೇ ಅರ್ಕೇಶ್ವರ. ಇಲ್ಲಿಯ ವಿಶೇಷವೆಂದರೆ ರಥಸಪ್ತಮಿಯಾದ ದಿನದಿಂದ 25 ದಿನಗಳ ಕಾಲ ಅರ್ಕೇಶ್ವರನ ತಲೆಯ ಮೇಲೆ ಸೂರ್ಯನ ಕಿರಣಗಳು ರಾರಾಜಿಸುತ್ತದೆ. ಸೂರ್ಯದೇವನು ಗ್ರಹಗಳ ರಾಜ ಎಂದು ಕರೆಯಲ್ಪಡುತ್ತಾನೆ. ಸೂರ್ಯದೇವನು ಅರ್ಕೇಶ್ವರನ ಪೂಜೆ ಮಾಡಿದ ಫಲವಾಗಿ ರಾಜನ ಸ್ಥಾನ ದೊರೆಯಿತು ಎಂದು ಹೇಳಲಾಗುತ್ತದೆ.

ಈ ದೇವರುಗಳ ದರ್ಶನ ಪಡೆಯುವ ಮುನ್ನ ಸೂರ್ಯೋದಯದ ವೇಳೆ ಕಾವೇರಿ ನದಿಯಲ್ಲಿ ಪುಣ್ಯ ಸ್ನಾನವನ್ನು ಮಾಡಿ ಸೂರ್ಯನಿಗೆ ಅರ್ಘ್ಯವನ್ನು ನೀಡಬೇಕು. ಆನಂತರ ಕ್ರಮವಾಗಿ ಅರ್ಕೇಶ್ವರ, ವೈದ್ಯನಾಥೇಶ್ವ, ಪಾತಾಳೇಶ್ವರ, ಮರುಳೇಶ್ವರ, ಆನಂತರ ಮಲ್ಲಿಕಾರ್ಜುನೇಶ್ವರ ಸ್ವಾಮಿಯ ದರ್ಶನವನ್ನು ಮಾಡಬೇಕು, ಇಲ್ಲಿರುವ ಅಮ್ಮನವರ ದೇಗುಲಗಳಲ್ಲಿ ಮಡಿಲು ತುಂಬುವ ಪದಾರ್ಥಗಳನ್ನು ನೀಡಿದಲ್ಲಿ ಎಲ್ಲಾ ರೀತಿಯ ಮನದ ಕಾಮನೆಗಳು ಈಡೇರುತ್ತವೆ ಎಂದು ಹೇಳಲಾಗಿದೆ.

ಲೇಖನ: ಎಚ್‌. ಸತೀಶ್‌, ಜ್ಯೋತಿಷಿ -ಬೆಂಗಳೂರು

ಮೊಬೈಲ್:‌ 8546865832

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.