Maha Shivaratri: ಮೂರು ದಳಗಳ ಬಿಲ್ವಪತ್ರೆ ಶಿವನಿಗೆ ಶ್ರೇಷ್ಠ: ಪೂಜೆಗೆ ಇವೆ ಒಂದಿಷ್ಟು ನಿಯಮಗಳು-maha shivaratri 2024 rules to worship shiva with bilva patre leaves bilva patra pooja methods sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Shivaratri: ಮೂರು ದಳಗಳ ಬಿಲ್ವಪತ್ರೆ ಶಿವನಿಗೆ ಶ್ರೇಷ್ಠ: ಪೂಜೆಗೆ ಇವೆ ಒಂದಿಷ್ಟು ನಿಯಮಗಳು

Maha Shivaratri: ಮೂರು ದಳಗಳ ಬಿಲ್ವಪತ್ರೆ ಶಿವನಿಗೆ ಶ್ರೇಷ್ಠ: ಪೂಜೆಗೆ ಇವೆ ಒಂದಿಷ್ಟು ನಿಯಮಗಳು

ಮೂರು ದಳದ ಬಿಲ್ವಪತ್ರೆಯ ಮೂಲಕ ನಮ್ಮಲ್ಲಿನ ಗುಣಗಳನ್ನೇ ಶಿವನಿಗೆ ಅರ್ಪಿಸುತ್ತೇವೆ. ಇದರಿಂದ ನಮ್ಮ ಮನಸ್ಸು ಶುದ್ದಿಯಾಗುತ್ತದೆ. ಮನಸ್ಸು ನಿರ್ಮಲವಾಗುತ್ತದೆ. ಬಿಲ್ವಪತ್ರೆಯಿಂದ ಶಿವಪೂಜೆ ಮಾಡಲು ನಿಯಮಗಳು ಇಲ್ಲಿವೆ. (ಲೇಖನ: ಎಚ್‌. ಸತೀಶ್‌, ಜ್ಯೋತಿಷಿ)

ಬಿಲ್ವಪತ್ರೆಯಿಂದ ಶಿವಪೂಜೆ
ಬಿಲ್ವಪತ್ರೆಯಿಂದ ಶಿವಪೂಜೆ

ಮಾಡುವ ಪೂಜೆಯನ್ನು ಮೆಚ್ಚಿ ಬೇಗನೆ ವರವನ್ನು ನೀಡುವ ದೇವರಂದರೆ ಪರಮೇಶ್ವರ. ರಾವಣನಂತ ಭಕ್ತನಿಗೂ ಶಿವನು ಒಲಿಯುತ್ತಾನೆ. ಹಾಗೆಯೇ ಮಾರ್ಕಂಡೇಯನಂತಹ ಭಕ್ತನಿಗೂ ಶಿವನ ಆಸರೆ ದೊರೆಯುತ್ತದೆ. ಕೊನೆಗೆ ಏನು ಅರಿಯದ ಬೇಡರ ಕಣ್ಣಪ್ಪನಿಗೂ ಶಿವನು ಒಲಿಯುತ್ತಾನೆ. ಅಂದರೆ ಶಿವನಿಗೆ ಬೇಕಿರುವುದು ಆಡಂಬರವಲ್ಲ ಒಳ್ಳೆಯ ಭಕ್ತಿ ಮಾತ್ರ. ಶಿವನಿಂದನೆಯಿಂದ ಶಿವನಿಗೆ ಕೋಪ ಬರುವುದಿಲ್ಲ. ಆದರೆ ಶಿವನ ಭಕ್ತರಿಗೆ ತೊಂದರೆ ನೀಡುವವರನ್ನು ಮಾತ್ರ ಶಿಕ್ಷಿಸದೆ ಇರುವುದಿಲ್ಲ ಎಂದು ನಂಬಲಾಗಿದೆ.

ಶಿವನ ಪೂಜೆ ಮಾಡುವವರಿಗೆ ನಾಲಿಗೆ ಶುದ್ಧಿ ಇರಬೇಕು. ಒಂದು ಶ್ಲೋಕದಲ್ಲಿ ಶಿವಃ ಪಾತು ವೇದ ಜಿಹ್ವಃ ಎಂದು ಬರುತ್ತದೆ. ಅಂದರೆ ಶಿವನ ಮಂತ್ರಗಳನ್ನು ಸ್ತುತಿಸುವವರ ಮತ್ತು ಶಿವನ ನಾಮಸ್ತುತಿ ಮಾಡುವವರ ನಾಲಿಗೆಯಲ್ಲಿ ಸಾಕ್ಷಾತ್ ಶಿವನೆ ನೆಲೆಸಿರುತ್ತಾನೆ. ಆದ್ದರಿಂದ ಶಿವನ ಭಕ್ತರು ಕೆಟ್ಟಮಾತುಗಳನ್ನು ಆಡುವುದನ್ನು ಬಿಡಬೇಕು. ಯಾರಿಗೂ ಕೆಟ್ಟದ್ದನ್ನು ಕೋರಬಾರದು. ಇಲ್ಲವಾದರೆ ತಮಗೆ ಅರಿಯಂದಂತೆ ಬೇರೆಯವರಿಗೆ ತೊಂದರೆ ನೀಡಿದಂತೆ ಆಗುತ್ತದೆ. ನಿಜವಾದ ಶಿವಭಕ್ತರು ಒಳ್ಳೆಯದನ್ನು ಹರೆಸಿದಲ್ಲಿ ಖಂಡಿತ ನೆರವೇರುತ್ತದೆ.

ಪೂಜೆ ಮಾಡಲು ಪೂಜೆಗೆ ಮೀಸಲಾದ ಪಾತ್ರೆಗಳನ್ನು ಮಾತ್ರಾ ಬಳಸಬೇಕು. ಅಭಿಷೇಕ ಮಾಡುವ ತಟ್ಟೆಯ ಮಧ್ಯಭಾಗದಲ್ಲಿ ಶಿವ, ಈಶಾನ್ಯದಲ್ಲಿ ವಿಷ್ಣು, ಆಗ್ನೇಯದಲ್ಲಿ ರವಿ, ನೈರುತ್ಯದಲ್ಲಿ ಗಣಪತಿ ಮತ್ತು ವಾಯುವ್ಯದಲ್ಲಿ ದುರ್ಗಾಮಾತೆಯ ವಿಗ್ರಹಗಳನ್ನು ಇರಿಸಬೇಕು. ಸಾಲಿಗ್ರಾಮವನ್ನು ಪೂಜಿಸುತ್ತಿದ್ದರೆ ವಿಶೇಷ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಾಲಿಗ್ರಾಮಕ್ಕೆ ಪೂಜೆ ಮಾಡಿದಷ್ಟು, ಅಭಿಷೇಕ ಮಾಡಿದಷ್ಟು ಅದರಲ್ಲಿರುವ ಶಕ್ತಿಯು ಇಮ್ಮಡಿ ಆಗುತ್ತದೆ.

ಶಿವನಿಗೆ ಇಷ್ಟವಾಗುವುದು ಬಿಲ್ವಪತ್ರೆಯಿಂದ ಮಾಡುವ ಪೂಜೆ. ಬಿಲ್ವಪತ್ರೆಯಲ್ಲಿ ಸಾಮಾನ್ಯವಾಗಿ ಮೂರು ದಳಗಳಿರುವ ಪತ್ರೆಯನ್ನು ಕಾಣಬಹುದು. ಕೆಳಗಡೆ ಮತ್ತು ಕೆಲವೊಮ್ಮೆ ನಾಲ್ಕು, ಐದು ಮತ್ತು ಆರು ದಳಗಳ ಬಿಲ್ವಪತ್ರೆಗಳನ್ನು ಕಾಣಬಹುದು. ಕೆಲವರ ಪ್ರಕಾರ ನಾಲ್ಕು ದಳಗಳು ದುರ್ಗಾ ಮಾತೆಯನ್ನು, ಐದು ದಳಗಳು ಗುರುದೇವರನ್ನು ಮತ್ತು ಆರು ದಳಗಳು ಶ್ರೀ ಸುಬ್ರಹ್ಮಣ್ಯ ಸ್ವಾಮಿಯನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತದೆ. ಆದರೆ ಶಿವನಿಗೆ ಅತಿ ಮುಖ್ಯವಾದಂತಹ ಮತ್ತು ಪವಿತ್ರವಾದಂತಹ ಬಿಲ್ವಪತ್ರೆ ಎಂದರೆ ಮೂರು ದಳಗಳ ಬಿಲ್ವಪತ್ರೆ ಎಂದು ಹೇಳಬಹುದು. ಇದು ತ್ರಿಮೂರ್ತಿಗಳನ್ನು ಸೂಚಿಸುತ್ತದೆ. ಇದಲ್ಲದೆ ಪಂಡಿತರ ಅನುಸಾರ ಮೂರು ದಳಗಳು ನಮ್ಮಲ್ಲಿರಬಹುದಾದ ಸತ್ವಗುಣ ( ಶುದ್ಧತೆ ಮತ್ತು ಜ್ಞಾನ ), ರಜಸ್ಸು ( ಚಟುವಟಿಕೆ ಮತ್ತು ಬಯಕೆ ) ಮತ್ತು ತಮಸ್ಸು ( ಕತ್ತಲೆ ಮತ್ತು ವಿನಾಶ ) ಗುಣಗಳನ್ನು ಸೂಚಿಸುತ್ತದೆ. ಅಂದರೆ ಮೂರು ದಳದ ಬಿಲ್ವಪತ್ರೆಯ ಮೂಲಕ ನಮ್ಮಲ್ಲಿನ ಗುಣಗಳನ್ನೇ ಶಿವನಿಗೆ ಅರ್ಪಿಸುತ್ತೇವೆ. ಇದರಿಂದ ನಮ್ಮ ಮನಸ್ಸು ಶುದ್ದಿಯಾಗುತ್ತದೆ. ಮನಸ್ಸು ನಿರ್ಮಲವಾಗುತ್ತದೆ.

ಬಿಲ್ವಪತ್ರೆಯಿಂದ ಶಿವಪೂಜೆ ಮಾಡಲು ನಿಯಮಗಳು:

1) ನೆಲದ ಮೇಲೆ ಬಿದ್ದಿರುವ ಬಿಲ್ವಪತ್ರೆಗಳನ್ನು ಆರಿಸಿ ಪೂಜೆ ಮಾಡಬಾರದು.

2) ಸೀಳಿದಂತಿರುವ ಬಿಲ್ವಪತ್ರೆಗಳನ್ನು ಪೂಜೆ ಮಾಡಬಾರದು.

3) ಹುಳುವಿನಿಂದ ರಂಧ್ರಗಳಿರುವ ಬಿಲ್ವಪತ್ರೆಯನ್ನು ಪೂಜಿಸಬಾರದು.

4) ಮೂರಕ್ಕಿಂತಲೂ ಕಡಿಮೆ ದಳಗಳಿರುವ ಬಿಲ್ವಪತ್ರೆಯನ್ನು ಪೂಜಿಸಬಾರದು.

5) ಬಾಡಿಹೋದ ಅಥವಾ ಕೊಳೆತು ಹೋದ ಬಿಲ್ವಪತ್ರೆಗಳು ಪೂಜೆಗೆ ನಿಷಿದ್ಧವಾಗಿದೆ.

6) ಒಣಗಿಹೋದ ಬಿಲ್ವಪತ್ರೆಗಳಿಂದ ಪೂಜೆ ಮಾಡಿದರೆ ಪ್ರಾಣಿ ಹತ್ಯಾ ದೋಷ ಬರುತ್ತದೆ.

7) ಬಿಲ್ವಪತ್ರೆಯ ದಳಗಳು ಒಂದೇ ಮೂಲದಿಂದ ಬಂದಿರಬೇಕು. ಕಡ್ಡಿಯ ಬೇರೆ ಬೇರೆ ಭಾಗದಲ್ಲಿ ಅಂಟಿಕೊಂಡಂತಿರಬಾರದು.

8) ದೇವರಿಗೆ ಬಿಲ್ವಪತ್ರೆಯನ್ನು ಪೂಜಿಸಿದಾಗ ಬಿಲ್ವಪತ್ರೆಯ ಮೂಲವೂ ನೆಲವನ್ನು ನೋಡುವಂತೆ ಇರಬೇಕು.

9) ಪೂಜೆ ಮಾಡುವ ವೇಳೆ ಬಿಲ್ವಪತ್ರೆಯ ದಳಗಳ ಹಸಿರು ಬಣ್ಣವು ನಮ್ಮ ಕಡೆ ತಿರುಗಿರಬೇಕು.

10) ಶಿವನಿಗೆ ಪೂಜೆ ಮಾಡುವ ವೇಳೆ ನಮ್ಮ ಮುಖವು ಉತ್ತರ ಅಥವಾ ಪೂರ್ವ ದಿಕ್ಕನ್ನು ನೋಡುವಂತಿರಬೇಕು.

11) ಕೆಲವರು ಪೂಜೆ ಮಾಡಿದ ಒಣಗಿದ ಬಿಲ್ವಪತ್ರೆಯನ್ನು ಪುಡಿ ಮಾಡಿಸುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಇದನ್ನು ನಾಭಿಗಿಂತ ಕೆಳಗೆ ಬಳಸಲೇಬಾರದು.

12) ಅಷ್ಟೋತ್ತರದ ಮೂಲಕ ಬಿಲ್ವಪತ್ರೆಯ ಪೂಜೆಯನ್ನು ಮಾಡಬಹುದು. ಮುಖ್ಯವಾಗಿ ಅಮಾವಾಸ್ಯೆಯ ದಿನ ಶಿವನಿಗೆ ಬಿಲ್ವಪತ್ರೆಯಿಂದ ಪೂಜೆ ಮಾಡಿದರೆ ದೃಷ್ಠಿ ದೋಷದಿಂದ ಪಾರಾಗಬಹುದು. ಇದರೊಂದಿಗೆ ಬೆಲ್ಲವನ್ನು ದಾನ ನೀಡಿದರೆ ಅಪಮೃತ್ಯುವನ್ನು ಗೆಲ್ಲಬಹುದು. ಈ ಪೂಜೆಯಿಂದ ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳನ್ನು ದೂರಗೊಳಿಸಬಹುದು.

ಲೇಖನ: ಎಚ್‌. ಸತೀಶ್‌, ಜ್ಯೋತಿಷಿ -ಬೆಂಗಳೂರು

ಮೊಬೈಲ್:‌ 8546865832

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.