Maha Shivaratri: ಮಹಾಶಿವನ ಪರಮ ಭಕ್ತ ರಾವಣ; ಈತನ ತಪಸ್ಸು ಮೆಚ್ಚಿ ಶಿವ ನೀಡಿದ ವರವೇನು? ಈ ಕಥೆ ಓದಿ-maha shivaratri 2024 shiva and ravana story in kannada ravana get boon from lord shiva sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Shivaratri: ಮಹಾಶಿವನ ಪರಮ ಭಕ್ತ ರಾವಣ; ಈತನ ತಪಸ್ಸು ಮೆಚ್ಚಿ ಶಿವ ನೀಡಿದ ವರವೇನು? ಈ ಕಥೆ ಓದಿ

Maha Shivaratri: ಮಹಾಶಿವನ ಪರಮ ಭಕ್ತ ರಾವಣ; ಈತನ ತಪಸ್ಸು ಮೆಚ್ಚಿ ಶಿವ ನೀಡಿದ ವರವೇನು? ಈ ಕಥೆ ಓದಿ

Shiva and Ravana Story: ಶಿವನನ್ನು ಕುರಿತು ತಪಸ್ಸು ಮಾಡಿದಾಗಲೆಲ್ಲ ರಾವಣನಿಗೆ ಶಿವನಿಂದ ನಿರೀಕ್ಷಿತ ವರಗಳು ಲಭಿಸುತ್ತವೆ. ಇದಕ್ಕೆ ಸಂಬಂಧಿಸಿದ ಕಥೆ ಇಲ್ಲಿದೆ. ಮಹಾ ಶಿವರಾತ್ರಿ ಸಮೀಪಿಸುತ್ತಿರುವ ಈ ವೇಳೆಯಲ್ಲಿ ಈ ಕಥೆ ಓದಿ. (ಲೇಖನ: ಎಚ್‌. ಸತೀಶ್‌, ಜ್ಯೋತಿಷಿ)

ರಾವಣ ಮತ್ತು ಶಿವನ ಕಥೆ (ಪ್ರಾತಿನಿಧಿಕ ಚಿತ್ರ)
ರಾವಣ ಮತ್ತು ಶಿವನ ಕಥೆ (ಪ್ರಾತಿನಿಧಿಕ ಚಿತ್ರ)

ರಾವಣನು ಶಿವನ ಪರಮ ಭಕ್ತ. ಈ ಕಾರಣ ಶಿವನನ್ನು ಕುರಿತು ತಪಸ್ಸು ಮಾಡಿದಾಗಲೆಲ್ಲ ರಾವಣನಿಗೆ ಶಿವನಿಂದ ನಿರೀಕ್ಷಿತ ವರಗಳು ಲಭಿಸುತ್ತವೆ. ಒಮ್ಮೆ ರಾವಣನಿಗೆ ತನ್ನ ಜೀವದ ಬಗ್ಗೆ ಅಂಜಿಕೆ ಉಂಟಾಗುತ್ತದೆ. ಇದಕ್ಕೆ ಕಾರಣ, ಗುರುವಾದ ಶುಕ್ರಾಚಾರ್ಯರು ಒಮ್ಮೆ ರಾವಣನನ್ನು ಕುರಿತು, ಅಸುರರಿಗೆ ದೇವತೆಗಳು ಮೋಸದ ಯುದ್ದದಿಂದ ಸೋಲಿಸುತ್ತಾರೆ. ಆದ್ದರಿಂದ ಸದಾಕಾಲ ಎಚ್ಚರಿಕೆಯಿಂದಲೇ ನಡೆದುಕೊಳ್ಳಬೇಕು ಎಂದು ಹೇಳಿರುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ರಾವಣನು ಶಿವನನ್ನು ಕುರಿತು ತಪಸ್ಸು ಮಾಡಲು ನಿರ್ಧರಿಸುತ್ತಾನೆ. ಆಗ ವಿಭೀಷಣನು ರಾವಣನನ್ನು ಕುರಿತು ಅಣ್ಣ, ದೇವತೆಗಳ ಬಗ್ಗೆ ಬಳಿ ಇರುವ ಆಯುಧಗಳನ್ನು ನಾವು ಎದುರಿಸಲಾರವು. ಅಲ್ಲದೆ ನೀನು ಧರ್ಮ ಮಾರ್ಗದಲ್ಲಿ ನಡೆಯುತ್ತಿಲ್ಲ. ಆದ್ದರಿಂದ ಅವರಿಗೆ ಶರಣಾಗುವುದೇ ನಮ್ಮ ಮುಂದಿರುವ ದಾರಿ ಎಂದು ಹೇಳುತ್ತಾನೆ.

ಆಗ ರಾವಣ ಆಹಾರವನ್ನು ತ್ಯಜಿಸಿ, ನೀರನ್ನು ಕುಡಿಯದೆ ಕೇವಲ ಗಾಳಿಯನ್ನು ಸೇವಿಸಿ ಕಠಿಣವಾದ ತಪಸ್ಸನ್ನುಆಚರಿಸುತ್ತಾನೆ. ರಾವಣನ ತಪ್ಪನ್ನೆಲ್ಲಾ ಮನ್ನಿಸಿದ ಶಿವನು ಇವನ ಭಕ್ತಿಯಿಂದ ಸಂತೃಷ್ಟನಾಗುತ್ತಾನೆ. ಇವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ ಶಿವನು ನಿನಗೆ ಏನು ವರ ಬೇಕೆಂದು ಕೇಳುತ್ತಾನೆ. ಆಗ ರಾವಣನು ತನ್ನ ವಿರೋಧಿಗಳನ್ನು ಯುದ್ಧದಲ್ಲಿ ಗೆಲ್ಲಲು ಅಥವಾ ಕೊಲ್ಲಲು ತನಗೊಂದು ಶಕ್ತಿಶಾಲಿ ಆಯುಧ ಬೇಕೆಂದು ಕೇಳುತ್ತಾನೆ. ಆಗ ಶಿವನು ರಾವಣನಿಗೆ ಕತ್ತಿಯೊಂದನ್ನು ನೀಡುತ್ತಾನೆ. ರಾವಣನನ್ನು ಕುರಿತು ಈ ಕತ್ತಿಯು ನಿನ್ನ ಬಳಿ ಇರುವವರೆಗೂ ಯಾರೂ ನಿನ್ನನ್ನು ಜಯಿಸಲಾರರು ಎಂಬ ವರವನ್ನು ನೀಡುತ್ತಾನೆ. ಈ ಕತ್ತಿಯ ಹೆಸರೇ ಚಂದ್ರಹಾಸ.

ರಾವಣನಿಗೆ ದೇವತೆಗಳ ಬಗ್ಗೆ ಇದ್ದ ಅನುಮಾನವು ಕಡಿಮೆಯಾಗುವುದಿಲ್ಲ. ಶಿವ ನೀಡಿರುವುದು ಕೇವಲ ಆಯುಧವನ್ನು. ಆದರೆ ದೇವತೆಗಳಲ್ಲಿ ಅಮರತ್ವವಿದೆ. ಆದ್ದರಿಂದ ತನ್ನ ಬಳಿ ಇರುವ ಆಯುಧಗಳಿಗೆ ಎಷ್ಟೇ ಶಕ್ತಿ ಇದ್ದರೂ ಅಮರರಾದ ದೇವತೆಗಳನ್ನು ಕೊಲ್ಲುವುದಿರಲಿ ಜಯಿಸಲೂ ಸಾಧ್ಯವಿಲ್ಲ ಎಂದು ಮನಗಾಣುತ್ತಾನೆ. ಇದರಿಂದ ಶಿವನಿಂದ ಅಮರತ್ವವನ್ನೇ ಪಡೆಯಬೇಕೆಂದು ನಿರ್ಧರಿಸುತ್ತಾನೆ. ಮತ್ತೊಮ್ಮೆ ಶಿವನನ್ನು ಕುರಿತು ತಪಸ್ಸು ಮಾಡಲು ಹೊರಡಲು ಅನುವಾಗುತ್ತಾನೆ. ಆಗ ದೇವರ್ಷಿಗಳಾದ ನಾರದರು ಎದುರಾಗುತ್ತಾರೆ. ರಾವಣನನ್ನು ನಾರದರು ಇಷ್ಟೊಂದು ಅವಸರವಾಗಿ ಹೋಗುತ್ತಿರುವ ಕಾರಣವಾದರು ಏನು ಎಂದು ಕೇಳುತ್ತಾರೆ. ಆಗ ರಾವಣನು ದೇವತೆಗಳಂತೆ ಅಮರತ್ವವನ್ನು ಪಡೆಯಲು ಶಿವನನ್ನು ಕುರಿತು ತಪಸ್ಸು ಮಾಡುವುದಾಗಿ ಹೇಳುತ್ತಾನೆ. ಇದರಿಂದ ವಿಚಲಿತರಾದ ನಾರದರು ರಾವಣನ ಮನಸ್ಸನ್ನು ಬದಲಾಯಿಸಲು ತೀರ್ಮಾನಿಸುತ್ತಾರೆ.

ಮತ್ತೊಮ್ಮೆ ರಾವಣನು ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ. ರಾವಣನ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗುತ್ತಾನೆ. ಆದರೆ ರಾವಣನು ಮೋಹಕ್ಕೆ ಒಳಗಾಗಿ ಅಮರತ್ವದ ಬದಲು ಪಾರ್ವತಿಯನ್ನು ಅರಮನೆಗೆ ಕಳಿಸೆಂದು ಕೇಳುತ್ತಾನೆ. ಭಕ್ತರಾಧೀನನಾದ ಪರಮೇಶ್ವರನು ರಾವಣನ ಮಾತಿಗೆ ಒಪ್ಪಿ ಪಾರ್ವತಿಯನ್ನು ರಾವಣನೊಂದಿಗೆ ತೆರಳಲು ಸೂಚಿಸುತ್ತಾನೆ. ಆದರೆ ನಾರದರು ಸುಂದರವಾದ ಮಹಿಳೆಯ ರೂಪವನ್ನು ಧರಿಸುತ್ತಾರೆ. ಸ್ತ್ರೀರೂಪಿ ನಾರದರನ್ನು ಕಂಡು ರಾವಣನು ಪಾರ್ವತಿಯನ್ನು ತೊರೆದು ನಾರದರ ಹಿಂದೆ ಬರುತ್ತಾರೆ. ಈ ರೀತಿ ನಾರದರು ದಿಢೀರನೇ ಮಾಯವಾಗಿ ರಾವಣನನ್ನು ವಂಚಿಸುತ್ತಾರೆ. ಮತ್ತೊಮ್ಮೆ ನಾರದರು ದೇವತೆಯ ಪಕ್ಷಪಾತಿ ಎಂದು ನಿರೂಪಿಸುತ್ತಾರೆ.

ಮತ್ತೊಮ್ಮೆ ನಿರಾಸೆಗೊಂಡರೂ ಹಠ ಬಿಡದ ರಾವಣನು ಪುನ: ತಪಸ್ಸನ್ನು ಮಾಡಿ ಶಿವನನ್ನು ಮೆಚ್ಚಿಸಿ ಅಮರತ್ವವನ್ನು ಪಡೆಯಲೇಬೇಕೆಂದು ನಿರ್ಧರಿಸುತ್ತಾನೆ. ಆಗ ರಾವಣನ ಆಸ್ಥಾನ ಪಂಡಿತರು ಶಿವನ ಬಗ್ಗೆ ಶ್ಲೋಕ ಅಥವಾ ಮಂತ್ರಗಳನ್ನು ಬರೆದು ಶಿವನನ್ನು ಒಲಿಸಿಕೊಳ್ಳಲು ತಿಳಿಸುತ್ತಾರೆ. ಅದರಂತೆ ನಡೆದು ಶಿವನ ಬಗ್ಗೆ ಸೂತ್ರವನ್ನು ಸಾಮರಾಗದಲ್ಲಿ ಹಾಡುತ್ತಾನೆ. ಆಗ ಶಿವನು ಮತ್ತೊಮ್ಮೆ ಪ್ರತ್ಯಕ್ಷನಾಗಿ ನಿನಗೆ ಬೇಕಾದ ವರವನ್ನು ಕೇಳು ಎಂದು ರಾವಣನಿಗೆ ಹೇಳುತ್ತಾನೆ. ಆಗ ಮತ್ತೊಮ್ಮೆ ರಾವಣನು ಶಿವನಿಂದ ಅಮರತ್ವದ ವರವನ್ನು ನೀಡಲು ಬೇಡುತ್ತಾನೆ. ಆದರೆ ಅಮರತ್ವವನ್ನು ನೀಡಲು ಶಿವನು ಒಪ್ಪುವುದಿಲ್ಲ. ಅದರ ಬದಲಾಗಿ ದೇವಲೋಕದ ಅಮೃತ ಪಾನವನ್ನು ರಾವಣನಿಗೆ ನೀಡುತ್ತಾನೆ. ಅದನ್ನು ಮಕರಂದ ಎಂದು ಕರೆಯುತ್ತಾರೆ. ಅದನ್ನು ರಾವಣನ ಹೊಕ್ಕುಳ ಕೆಳಗೆ ಸಂಗ್ರಹಿಸುವಂತೆ ಮಾಡುತ್ತಾನೆ. ರಾವಣನ ಬಳಿ ಈ ಅಮೃತವು ಇರುವವರೆಗೂ ನಿನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಶಿವನು ಅಭಯ ನೀಡುತ್ತಾನೆ. ಇದೇ ರೀತಿಯ ಹತ್ತು ಹಲವು ಕಥಾಪ್ರಸಂಗಗಳು ಪರಮೇಶ್ವರ ಮತ್ತು ರಾವಣನ ನಡುವೆ ಕಂಡು ಬರುತ್ತದೆ.

ಲೇಖನ: ಎಚ್‌. ಸತೀಶ್‌, ಜ್ಯೋತಿಷಿ -ಬೆಂಗಳೂರು

ಮೊಬೈಲ್:‌ 8546865832

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.