Maha Shivaratri 2024: ತಂಬಿಟ್ಟು, ಹುರಿದ ಗೋಧಿ ಹಿಟ್ಟು ಸೇರಿದಂತೆ ಅರ್ಧನಾರೀಶ್ವರನಿಗೆ ಇಷ್ಟವಾದ ಮಹಾ ಶಿವರಾತ್ರಿ ನೈವೇದ್ಯಗಳಿವು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Maha Shivaratri 2024: ತಂಬಿಟ್ಟು, ಹುರಿದ ಗೋಧಿ ಹಿಟ್ಟು ಸೇರಿದಂತೆ ಅರ್ಧನಾರೀಶ್ವರನಿಗೆ ಇಷ್ಟವಾದ ಮಹಾ ಶಿವರಾತ್ರಿ ನೈವೇದ್ಯಗಳಿವು

Maha Shivaratri 2024: ತಂಬಿಟ್ಟು, ಹುರಿದ ಗೋಧಿ ಹಿಟ್ಟು ಸೇರಿದಂತೆ ಅರ್ಧನಾರೀಶ್ವರನಿಗೆ ಇಷ್ಟವಾದ ಮಹಾ ಶಿವರಾತ್ರಿ ನೈವೇದ್ಯಗಳಿವು

Maha Shivaratri 2024: ಪ್ರತಿದಿನ ಪೂಜೆ ಮಾಡುವಾಗ ದೇವರಿಗೆ ಪ್ರಿಯವಾದ ನೈವೇದ್ಯ ಇಡಲಾಗುತ್ತದೆ. ಹಬ್ಬ ಹರಿದಿನಗಳಂದು ಇನ್ನೂ ವಿಶೇಷವಾದ ನೈವೇದ್ಯ ತಯಾರಿಸಲಾಗುತ್ತದೆ. ಮಾರ್ಚ್‌ 8ಕ್ಕೆ ಮಹಾ ಶಿವರಾತ್ರಿ ಇದ್ದು ಶಿವನಿಗೆ ತಂಬಿಟ್ಟು, ಹುರಿದ ಗೋಧಿ ಹಿಟ್ಟು ಸೇರಿದಂತೆ ವಿವಿಧ ಪದಾರ್ಥಗಳನ್ನು ನೈವೇದ್ಯವನ್ನಾಗಿ ಅರ್ಪಿಸಲಾಗುತ್ತದೆ.

ಅರ್ಧನಾರೀಶ್ವರನಿಗೆ ಇಷ್ಟವಾದ ಮಹಾ ಶಿವರಾತ್ರಿ ನೈವೇದ್ಯಗಳಿವು
ಅರ್ಧನಾರೀಶ್ವರನಿಗೆ ಇಷ್ಟವಾದ ಮಹಾ ಶಿವರಾತ್ರಿ ನೈವೇದ್ಯಗಳಿವು (PC: Pixaby, @itsmanju_Dimple)

ಮಹಾ ಶಿವರಾತ್ರಿ 2024: ಮಾರ್ಚ್‌ 8 ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತದೆ. ಅದರ ಜೊತೆಗೆ ಶಿವನ ಭಕ್ತರು ಕಾತರದಿಂದ ಕಾಯುತ್ತಿರುವ ಮಹಾ ಶಿವರಾತ್ರಿ ಕೂಡಾ ಇದೆ. ಈಗಾಗಲೇ ಎಲ್ಲೆಡೆ ಶಿವರಾತ್ರಿ ಆಚರಣೆಗೆ ತಯಾರಿ ನಡೆದಿದೆ. ದೇಶದ ಪ್ರಮುಖ ದೇವಾಲಯಗಳು, ಚಿಕ್ಕ ಚಿಕ್ಕ ಶಿವಾಲಯಗಳಲ್ಲಿ ಕೂಡಾ ಶಿವರಾತ್ರಿಯಂದು ವಿಶೇಷ ಪೂಜೆ ನೆರವೇರಿಸಲಾಗುತ್ತದೆ.

ಶಿವರಾತ್ರಿ ಆಚರಣೆ ಹಿಂದೆ ಪುರಾಣದಲ್ಲಿ ಕೆಲವೊಂದು ಕಥೆಗಳಿವೆ. ಈ ದಿನ ಶಿವನು ಪಾರ್ವತಿಯನ್ನು ವರಿಸಿದ ದಿನ ಎಂಬ ನಂಬಿಕೆ ಒಂದೆಡೆಯಾದ್ರೆ, ಭಗೀರಥನ ಮನವಿಯಂತೆ ತನ್ನ ಜಟೆಯಲ್ಲಿ ಬಂಧಿಸಿದ ಗಂಗೆಯನ್ನು ಶಿವನು ಭೂಮಿಗೆ ಹರಿಬಿಟ್ಟ ದಿನ ಎಂಬ ಕಥೆ ಕೂಡಾ ಪ್ರಚಲಿತವಾಗಲಿ, ಕಥೆ ಏನೇ ಇರಲಿ ಹಬ್ಬದ ದಿನ ಭಕ್ತರು ಉಪವಾಸ ಮಾಡಿ, ಜಾಗರಣೆ ಇದ್ದು ಶಿವನನ್ನು ಸ್ಮರಿಸುತ್ತಾರೆ. ಶಿವನಾಮ ಪಠಣೆ ಮಾಡುತ್ತಾರೆ. ಶಿವನಿಗೆ ಬಿಳಿ ಹೂಗಳು ಇಷ್ಟವಾದ್ದರಿಂದ ಈ ದಿನ ಬಿಲ್ವಪತ್ರೆ ಜೊತೆಗೆ ವಿವಿಧ ರೀತಿ ಬಿಳಿ ಹೂಗಳು, ಶ್ರೀಗಂಧ, ವಿಭೂತಿ, ಧೂಪ , ದೀಪ ನೈವೇದ್ಯಗಳೊಂದಿಗೆ ಶಂಕರನನ್ನು ಆರಾಧಿಸಲಾಗುತ್ತದೆ.

ಶಿವರಾತ್ರಿಯಂದು ಶಿವನಿಗೆ ಕೆಲವೊಂದು ನೈವೇದ್ಯಗಳನ್ನು ಇಟ್ಟು ಪೂಜೆ ಮಾಡಲಾಗುತ್ತದೆ. ಹಾಗಾದರೆ ಭೋಲೇನಾಥನಿಗೆ ಇಷ್ಟವಾದ ನೈವೇದ್ಯಗಳಾವುವು, ನೋಡೋಣ.

ತಂಬಿಟ್ಟು

ಅಕ್ಕಿ ತಂಬಿಟ್ಟು, ಶಿವನಿಗೆ ಬಹಳ ಪ್ರಿಯವಾದ ಆಹಾರ. ಶಿವರಾತ್ರಿ ಹಬ್ಬಕ್ಕೆ ಕೆಲವರು ನೈವೇದ್ಯವನ್ನಾಗಿ ತಂಬಿಟ್ಟು ತಯಾರಿಸಿದರೆ, ಇನ್ನೂ ಕೆಲವರು ತಂಬಿಟ್ಟಿನ ಆರತಿ ಮಾಡುತ್ತಾರೆ. ಒಂದೊಂದು ಕಡೆ ಒಂದೊಂದು ರೀತಿ ತಂಬಿಟ್ಟು ತಯಾರಿಸುತ್ತಾರೆ. ಅಕ್ಕಿಹಿಟ್ಟು, ಶೇಂಗಾ ಬೀಜ, ಬೆಲ್ಲ, ಕೊಬ್ಬರಿ, ಏಲಕ್ಕಿ, ತುಪ್ಪದಿಂದ ತಯಾರಿಸಿದ ಈ ನೇವೇದ್ಯ ಮಹೇಶ್ವರನಿಗೆ ಬಹಳ ಇಷ್ಟ.

ಪಂಚಾಮೃತ

ಅರ್ಧನಾರೀಶ್ವರನು ಅಭಿಷೇಕ ಪ್ರಿಯನಾಗಿರುವುದರಿಂದ ಎಲ್ಲೆಡೆ ಪಂಚಾಮೃತ ಅಭಿಷೇಕ ಮಾಡುತ್ತಾರೆ. ನಂತರ ಇದನ್ನು ದೇವರ ಮುಂದೆ ಇಟ್ಟು ಪ್ರಸಾದವಾಗಿ ಹಂಚಲಾಗುತ್ತದೆ. ಹಾಲು, ತುಪ್ಪ, ಸಕ್ಕರೆ, ಮೊಸರು, ಜೇನುತುಪ್ಪ ಈ 5 ಪದಾರ್ಥಗಳನ್ನು ಪಂಚಾಮೃತಕ್ಕೆ ಬಳಸಲಾಗುತ್ತದೆ. ಇದರ ಜೊತೆಗೆ ಕೆಲವರು ಎಳನೀರು, ಬಾಳೆಹಣ್ಣನ್ನು ಕೂಡಾ ಸೇರಿಸುತ್ತಾರೆ.

ಹಾಲು ಪಾಯಸ

ಶಿವನಿಗೆ ತಂಬಿಟ್ಟಿನ ಜೊತೆಗೆ ಹಾಲು ಪಾಯಸವನ್ನು ಕೂಡಾ ನೈವೇದ್ಯವನ್ನಾಗಿ ಇಡಲಾಗುತ್ತದೆ. ಅಕ್ಕಿ, ಹಾಲು, ಸಕ್ಕರೆ , ಗೋಡಂಬಿ, ದ್ರಾಕ್ಷಿ ಬಳಸಿ ತಯಾರಿಸಲಾದ ಹಾಲಿನ ಪಾಯಸ ರುದ್ರನಿಗೆ ಬಹಳ ಇಷ್ಟ. ಶಿವರಾತ್ರಿಯಂದು ಮಾತ್ರವಲ್ಲ ಪ್ರತಿ ಸೋಮವಾರ ಹಾಲಿನ ಪಾಯಸ ತಯಾರಿಸಿ ನೈವೇದ್ಯ ಇಡಲಾಗುತ್ತದೆ.

ಹುರಿದ ಗೋಧಿ ಹಿಟ್ಟು

ಸಾಮಾನ್ಯವಾಗಿ 16 ಸೋಮವಾರ ವ್ರತ ಮಾಡುವಾಗ ಶಿವನಿಗೆ ಹುರಿದ ಗೋಧಿಯಿಂದ ತಯಾರಿಸಿದ ಪ್ರಸಾದವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಗೋಧಿಯನ್ನು ಹುರಿದು, ಅದನ್ನು ಮಿಕ್ಸಿಯಲ್ಲಿ ತರಿ ತರಿಯಾಗಿ ಪುಡಿ ಮಾಡಿ ಜರಡಿ ಹಿಡಿಯಬೇಕು. ನಂತರ ಒಂದು ಪಾತ್ರೆಗೆ ತುಪ್ಪ ಸೇರಿಸಿ ಅದಕ್ಕೆ ಗೋಧಿ ಹಿಟ್ಟಿನ ಪುಡಿ, ಬೆಲ್ಲದ ಪುಡಿ ಸೇರಿಸಿ ಸುವಾಸನೆ ಬರುವರೆಗೂ ಹುರಿಯಿರಿ. ಕೊನೆಗೆ ತೆಂಗಿನ ತುರಿ ಸೇರಿಸಿ ಉಂಡೆಗಳ್ನಾಗಿ ಮಾಡಿ ಶಿವನಿಗೆ ನೈವೇದ್ಯ ಅರ್ಪಿಸಿ.

ಇದನ್ನು ಹೊರತುಪಡಿಸಿ ಹೆಸರು ಬೇಳೆ ಪಾಯಸ, ಸಿಹಿ ಅವಲಕ್ಕಿ, ಖರ್ಜೂರ, ಲಾಡುವನ್ನು ಕೂಡಾ ನೈವೇದ್ಯವನ್ನಾಗಿ ಅರ್ಪಿಸಲಾಗುತ್ತದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.