ಕನ್ನಡ ಸುದ್ದಿ  /  Astrology  /  Maha Shivaratri 2024 What Is The Significance Importance Of Shivaratri Why People Should Do Fasting Rsa

Maha Shivratri 2024: ಮಹಾ ಶಿವರಾತ್ರಿ ಆಚರಣೆ ಹಿಂದಿನ ಮಹತ್ವವೇನು..? ಈ ದಿನ ಜಾಗರಣೆ ಏಕೆ ಮಾಡಬೇಕು?

Maha Shivaratri 2024: ಹಿಂದೂಗಳ ಪ್ರಮುಖ ಹಬ್ಬಗಳ ಪೈಕಿ ಮಹಾ ಶಿವರಾತ್ರಿ ಕೂಡಾ ಒಂದು. ಇನ್ನು ಕೆಲವೇ ದಿನಗಳಲ್ಲಿ ಮಹಾ ಶಿವರಾತ್ರಿ ಹಬ್ಬವಿದೆ. ಶಿವರಾತ್ರಿ ಆಚರಣೆ ಹಿಂದಿನ ಮಹತ್ವವೇನು..? ಈ ದಿನ ಉಪವಾಸ, ಜಾಗರಣೆ ಕೈಗೊಳ್ಳುವುದರ ಹಿಂದಿನ ಗುಟ್ಟೇನು ಎಂಬುದನ್ನು ತಿಳಿಯೋಣ.

ಶಿವರಾತ್ರಿ ಹಿನ್ನೆಲೆ, ಮಹತ್ವ ಹಾಗೂ ಆಚರಣೆಯ ವಿಧಾನ
ಶಿವರಾತ್ರಿ ಹಿನ್ನೆಲೆ, ಮಹತ್ವ ಹಾಗೂ ಆಚರಣೆಯ ವಿಧಾನ

ಮಹಾ ಶಿವರಾತ್ರಿ 2024: ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ಶಿವರಾತ್ರಿ ಕೂಡಾ ಒಂದು. ಶಿವನಿಗೆ ಸಮರ್ಪಿತಗೊಂಡ ಹಬ್ಬ ಇದಾಗಿದೆ ಎನ್ನುವುದು ಹೆಸರಿನಲ್ಲಿಯೇ ತಿಳಿಯುತ್ತದೆ. ಶಿವರಾತ್ರಿ ದಿನ ಜಗತ್ತಿನಾದ್ಯಂತ ಹಿಂದೂಗಳು ಈಶ್ವರನನ್ನು ಆರಾಧಿಸುತ್ತಾರೆ. ಮಹಾಶಿವರಾತ್ರಿಯ ದಿನ ಶಿವನ ಭಕ್ತರು ಉಪವಾಸ ಕೈಗೊಳ್ಳುವ ಮೂಲಕ, ಧ್ಯಾನ , ಜಾಗರಣೆಗಳನ್ನು ಮಾಡುವ ಮೂಲಕ ಶಿವನನ್ನು ಆರಾಧಿಸುತ್ತಾರೆ. ಈ ದಿನ ಶಿವನ ದೇಗುಲದಲ್ಲಿ ಭಕ್ತರು ರಾತ್ರಿಯಿಡೀ ಜಾಗರಣೆ ಕೈಗೊಂಡು ಈಶ್ವರನನ್ನು ಆರಾಧಿಸುತ್ತಾರೆ.

ಹಿಂದೂ ಕ್ಯಾಲೆಂಡರ್‌ ಪ್ರಕಾರ, ಮಹಾ ಶಿವರಾತ್ರಿಯನ್ನು ಪ್ರತಿ ವರ್ಷ ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ವರ್ಷ ಮಹಾ ಶಿವರಾತ್ರಿಯು 2024ರ ಮಾರ್ಚ್8 ಶುಕ್ರವಾರ ಆಚರಿಸಲಾಗುತ್ತಿದೆ. ಹಿಂದೂಗಳ ನಂಬಿಕೆ ಪ್ರಕಾರ ಮಹಾ ಶಿವರಾತ್ರಿಯನ್ನು ಆಚರಿಸಲು ಸಾಕಷ್ಟು ಕಾರಣಗಳಿವೆ. ಈ ದಿನ ಶಿವ ಹಾಗೂ ಪಾರ್ವತಿಯ ವಿವಾಹ ನಡೆಯಿತು ಎಂದು ಹೇಳುವವರು ಅನೇಕರಿದ್ದಾರೆ. ಹೀಗಾಗಿ ಶಿವರಾತ್ರಿ ಪ್ರೀತಿ ಹಾಗೂ ಸಾಮರಸ್ಯದ ಸಂಕೇತ ಎಂದು ಹೇಳುತ್ತಾರೆ.

ಶಿವನ ಗಂಟಲನ್ನು ಒತ್ತಿ ಹಿಡಿದ ಪಾರ್ವತಿ

ಪುರುಷ ಹಾಗೂ ಸ್ತ್ರೀ ಶಕ್ತಿಗಳನ್ನು ಪ್ರತಿನಿಧಿಸುವ ಶಿವ ಹಾಗೂ ಶಕ್ತಿಯು ಒಟ್ಟಾಗಿ ಸೇರಿದ ರಾತ್ರಿಯನ್ನು ಗೌರವಿಸುವುದು ಮಹಾ ಶಿವರಾತ್ರಿಯನ್ನು ಆರಾಧಿಸಲು ಇನ್ನೊಂದು ಕಾರಣ. ಮಹಾಶಿವರಾತ್ರಿಯನ್ನು ಆಚರಿಸಲು ಮತ್ತೊಂದು ಕಾರಣವೂ ಇದೆ. ಸಾಗರ ಮಂಥನದ ಸಂದರ್ಭದಲ್ಲಿ ಹೊರ ಹೊಮ್ಮಿದ್ದ ವಿಷವನ್ನು ಶಿವನು ಕುಡಿಯುತ್ತಾನೆ. ಈ ದಿನದ ಧ್ಯೋತಕವಾಗಿ ಕೂಡಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ ಎಂದು ಹೇಳುವವರೂ ಇದ್ದಾರೆ. ಶಿವ ಈ ರೀತಿ ಮಾಡಿದ್ದರಿಂದ ಜಗತ್ತು ಅಂಧಕಾರಕ್ಕೆ ಹೋಗುವುದು ತಪ್ಪಿತು. ಪಾರ್ವತಿಯು ವಿಷವು ಶಿವನ ದೇಹ ತಲುಪುವುದನ್ನು ತಪ್ಪಿಸಲು ಅವನ ಗಂಟಲನ್ನು ಒತ್ತಿ ಹಿಡಿಯುತ್ತಾಳೆ. ಪರಿಣಾಮ ಶಿವನ ಕಂಠವು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದೇ ಕಾರಣಕ್ಕೆ ಶಿವನಿಗೆ ನೀಲಕಂಠ ಎಂಬ ಹೆಸರು ಬಂದಿತು.

ಪ್ರತಿ ವರ್ಷ ಆಚರಿಸಲ್ಪಡುವ ಒಟ್ಟು 12 ಶಿವರಾತ್ರಿಗಳಲ್ಲಿ ಮಹಾ ಶಿವರಾತ್ರಿಯನ್ನು ಅತ್ಯಂತ ಮಹತ್ವಪೂರ್ಣವಾದದ್ದು ಎಂದು ಪರಿಗಣಿಸಲಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಇದು ಅತ್ಯಂತ ಮಹತ್ವದ ಹಬ್ಬವಾಗಿದೆ. ಕತ್ತಲೆಯಿಂದ, ಅಜ್ಞಾನದ ಹಾದಿಯಿಂದ ಬೆಳಕಿನ ವಿಜಯವನ್ನು ಸಾಧಿಸುವ ಹಬ್ಬ ಇದಾಗಿದೆ.

ವಿವಿಧ ದಂತಕತೆಗಳು ಮಹಾ ಶಿವರಾತ್ರಿಯ ಮಹತ್ವವನ್ನು ತಿಳಿಸುತ್ತವೆ. ಒಂದು ದಂತಕತೆಯ ಪ್ರಕಾರ ಶಿವನು ಈ ರಾತ್ರಿಯಂದು ಸೃಷ್ಟಿ , ಸಂರಕ್ಷಣೆ ಹಾಗೂ ವಿನಾಶದ ತಾಂಡವ ನೃತ್ಯವಾಡುತ್ತಾನೆ ಎಂದು ಹೇಳಲಾಗುತ್ತದೆ. ಮತ್ತೊಂದು ದಂತಕತೆಯ ಪ್ರಕಾರ, ಈ ರಾತ್ರಿಯಲ್ಲಿ ಶಿವನಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ನಮ್ಮ ಪಾಪಗಳನ್ನು ತೊಳೆದುಕೊಳ್ಳಬಹುದು ಎಂದು ಹೇಳುತ್ತಾರೆ. ಸದಾಚಾರದ ಹಾದಿಯಲ್ಲಿ ಸಾಗಲು ಕೊನೆಯಲ್ಲಿ ಮೊಕ್ಷವನ್ನು ಸಂಪಾದಿಸಲು ಶಿವರಾತ್ರಿಯನ್ನು ಮಾಡಬೇಕು ಎಂಬ ನಂಬಿಕೆಯಿದೆ.

ಶಿವರಾತ್ರಿ ಆಚರಣೆ ಹೇಗೆ?

ಮಹಾ ಶಿವರಾತ್ರಿಯ ದಿನದಂದು ಶಿವನನ್ನು ಆರಾಧಿಸುವವರು ದಿನವಿಡೀ ಉಪವಾಸ ಇರುತ್ತಾರೆ. ಇದು ಮಹಿಳೆಯರಿಗೆ ಅತ್ಯಂತ ವಿಶೇಷವಾದ ಹಬ್ಬವಾಗಿದೆ. ವಿವಾಹಿತ ಮಹಿಳೆಯರು ಈ ದಿನದಂದು ಶಿವನ ಬಳಿಯಲ್ಲಿ ತಮ್ಮ ಪತಿಯ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಅವಿವಾಹಿತೆಯರು ಭವಿಷ್ಯದಲ್ಲಿ ತಮಗೆ ಶಿವನಂತಾ ಪತಿ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ.

ಮಹಾ ಶಿವರಾತ್ರಿಯಂದು ದೇಗುಲಗಳಲ್ಲಿ ವಿವಿಧ ಆಚರಣೆಗಳನ್ನು ಮಾಡಲಾಗುತ್ತದೆ. ಶಿವನು ಅಭಿಷೇಕಪ್ರಿಯನಾದ್ದರಿಂದ ನಾನಾ ಅಭಿಷೇಕ ಮಾಡಲಾಗುತ್ತದೆ. ಹಾಲು, ಜೇನುತುಪ್ಪ, ಹೂವುಗಳು ಹಾಗೂ ಬಿಲ್ವ ಪತ್ರೆಯನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಈ ದಿನ ಶಿವನ ಭಕ್ತರು ಏನನ್ನೂ ತಿನ್ನುವುದು ಅಥವಾ ಕುಡಿಯುವುದು ಮಾಡುವುದಿಲ್ಲ. ಕೆಲವರು ರಾತ್ರಿಯಿಡೀ ಜಾಗರಣೆಯಿದ್ದು ಶಿವನ ಧ್ಯಾನ ಮಾಡುತ್ತಿರುತ್ತಾರೆ, ಈ ದಿನ ಶಿವನ ದೇಗುಲ ಕಿಕ್ಕಿರಿದು ತುಂಬಿರುತ್ತದೆ. ಮಹಾ ಮೃತ್ಯುಂಜಯ ಮಂತ್ರ ಹಾಗೂ ಶಿವ ತಾಂಡವ ಸ್ತೋತ್ರದಂತಹ ಮಂತ್ರಗಳನ್ನು ಪಠಿಸುವ ಮೂಲಕ ಮಹಾದೇವನ ಕೃಪೆಗೆ ಭಕ್ತರು ಪಾತ್ರರಾಗುತ್ತಾರೆ.