Gokarna: ಕರ್ನಾಟಕದ ಗೋಕರ್ಣವೇ ಭೂಮಿಯ ಮೇಲಿರುವ ಕೈಲಾಸ; ಶಿವನ ಆತ್ಮಲಿಂಗ ಇಲ್ಲಿ ಪ್ರತಿಷ್ಠಾಪನೆಯಾದ ರೋಚಕ ಕಥೆ ಕೇಳಿ
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣವನ್ನು ಭೂಮಿಯ ಮೇಲಿರುವ ಕೈಲಾಸ ಎಂದೇ ಕರೆಯಬಹುದು. ಈ ಕ್ಷೇತ್ರದಲ್ಲಿ ಮಹಾಶಿವನ ಆತ್ಮಲಿಂಗವೇ ಪ್ರತಿಷ್ಠಾಪನೆಯಾಗಿದೆ. ಇದರ ಹಿಂದೆ ಮಹಾ ಗಣಪತಿ ಶ್ರಮವೂ ಇದೆ. (ಲೇಖನ: ಎಚ್. ಸತೀಶ್, ಜ್ಯೋತಿಷಿ)

ಕಾಶಿಯಲ್ಲಿ ಪೂಜೆ ಸಲ್ಲಿಸುವುದರಿಂದ ದೊರೆಯುವ ಫಲಗಳಿಗೆ ಸಮನಾದ ಫಲಾಫಲಗಳನ್ನು ನೀಡುವ ದೇವಸ್ಥಾನವೊಂದು ನಮ್ಮ ಕರ್ನಾಟಕದಲ್ಲಿ ಇದೆ. ಅದುವೇ ಗೋಕರ್ಣ. ಗೋಕರ್ಣವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕಡಲತೀರದಲ್ಲಿದೆ. ಈ ಪ್ರದೇಶವು ಕಾರವಾರದಿಂದ ಸುಮಾರು 60 ಕಿ.ಮಿ. ದೂರದಲ್ಲಿದೆ. ಈ ಸ್ಥಳದಲ್ಲಿ ಶಿವನು ಮಹಾಬಲೇಶ್ವರ ಎಂಬ ಹೆಸರಿನಿಂದ ನೆಲೆಸಿದ್ದಾನೆ. ಇದೇ ಸ್ಥಳದಲ್ಲಿ ಅಂಗಾರಕನ ಜನನವಾಯಿತು ಎಂದು ತಿಳಿದು ಬರುತ್ತದೆ. ಇದು ಪರಶುರಾಮನಿಂದ ನಿರ್ಮಿತವಾದ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಆದಿಶಂಕರರು ಸಹ ಪೂಜೆಯನ್ನು ಸಲ್ಲಿಸಿದರು ಎಂಬ ಮಾತಿದೆ. ಶಿವನಿಗೆ ನೀಡಿರುವಷ್ಟೇ ಪ್ರಾಮುಖ್ಯತೆಯನ್ನು ಗಣಪತಿಗೆ ಈ ಕ್ಷೇತ್ರದಲ್ಲಿ ನೀಡಲಾಗಿದೆ.
ದೇವತೆಗಳಿಗೆ ಎದುರಾಗಿದ್ದ ಘನ ಘೋರ ದುರಂತವನ್ನು ಬುದ್ಧಿವಂತಿಕೆಯಿಂದ ಗಣಪತಿಯು ತಪ್ಪಿಸುತ್ತಾನೆ. ಆ ಕಥೆಯು ಒಂದು ರೀತಿಯಲ್ಲಿ ಭಕ್ತಿಯ ಜೊತೆಯಲ್ಲಿ ಮನರಂಜನೆಯನ್ನೂ ನೀಡುತ್ತದೆ. ಇಲ್ಲಿ ಸಾಮಾನ್ಯ ಮಗುವಿನಂತೆ ಗಣಪತಿಯು ರಾವಣನನ್ನು ಬಹಳವಾಗಿ ಕಾಡುತ್ತಾನೆ.ರಾವಣನು ಶ್ರೀ ಪರಮೇಶ್ವರನ ಪರಮಭಕ್ತ. ಈತನಿಗೆ ಅತೀವ ಶಕ್ತಿ ಮತ್ತು ಮಾಡುವ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ದೊರೆಯುವಂತೆ ಮಾಡಲು ರಾವಣನ ತಾಯಿಯಾದ ಕೈಕಸೆಯು ಶಿವನ ಪೂಜೆಯನ್ನು ಮಾಡಲು ನಿರ್ಧರಿಸುತ್ತಾಳೆ. ಸಮುದ್ರದ ಬಳಿ ಮರಳಿನಿಂದ ಶಿವಲಿಂಗವನ್ನು ತಯಾರಿಸಿ ಪೂಜೆಯನ್ನು ಆರಂಭಿಸುತ್ತಾಳೆ. ಇದನ್ನು ಕಂಡ ದೇವತೆಗಳು ಭಯಗೊಂಡು ಆ ಲಿಂಗವನ್ನು ಕದ್ದು ಸಮುದ್ರದಲ್ಲಿ ಎಸೆಯುತ್ತಾರೆ. ಇದರಿಂದ ಕ್ರೋದಗೊಂಡ ರಾವಣನು ಶಿವನ ಪೂಜೆಗಾಗಿ ಆತನ ಆತ್ಮಲಿಂಗವನ್ನೇ ತಂದು ಕೊಡುವುದಾಗಿ ತಾಯಿಗೆ ವಚನ ನೀಡುತ್ತಾನೆ.
ಆದರೆ ಕೈಲಾಸಕ್ಕೆಆಗಮಿಸಿದ ರಾವಣನ ಮನಸ್ಸಿನಲ್ಲಿ ಒಂದು ಕೆಟ್ಟ ಯೋಚನೆ ಮೂಡುತ್ತದೆ. ಕೇವಲ ಆತ್ಮಲಿಂಗದ ಬದಲು ಶಿವ ಪಾರ್ವತಿಯರ ಸಮೇತ ಕೈಲಾಸ ಪರ್ವತವನ್ನೇ ಕೊಂಡೊಯ್ಯುವ ತೀರ್ಮಾನಕ್ಕೆ ಬರುತ್ತಾನೆ. ಕೈಲಾಸ ಶಿಖರದ ಬುಡಕ್ಕೆ ಕೈ ಹಾಕಿ ರಾವಣನು ಅದನ್ನು ಮೇಲೆತ್ತಲು ಪ್ರಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ಕೈಲಾಸ ಪರ್ವತವು ಅಲುಗಾಡಲು ಆರಂಭಿಸುತ್ತದೆ. ಭಯಗೊಂಡ ಪಾರ್ವತಿಯನ್ನು ಸಮಾಧಾನಪಡಿಸುತ್ತಾ, ಶಿವನು ತನ್ನ ಉಂಗುಷ್ಟದಿಂದ (ಹೆಬ್ಬೆರಳು) ಪರ್ವತವನ್ನು ನೆಲಕ್ಕೆ ಒತ್ತುತ್ತಾನೆ. ಆಗ ರಾವಣನ ಕೈಗಳು ಪರ್ವತದ ಕೆಳಗೆ ಸಿಲುಕಿ ಕೊಳ್ಳುತ್ತವೆ. ಸಂಕಷ್ಟದಿಂದ ಬಿಡುಗಡೆಗೊಂಡ ರಾವಣನು ತನ್ನ ಒಂದು ಶಿರವನ್ನು ವೀಣೆಯ ಬುರುಡೆಯನ್ನಾಗಿ ಮಾಡುತ್ತಾನೆ. ತನ್ನ ದೇಹದ ನರ ಮತ್ತು ರಕ್ತನಾಳಗಳನ್ನು ತಂತಿಯನ್ನಾಗಿಸಿ ವೀಣೆಯನ್ನು ಸಿದ್ಧಪಡಿಸುತ್ತಾನೆ. ಆನಂತರ ಸಂಗೀತದ ಮೂಲಕ ಶಿವನನ್ನು ವರಿಸಿಕೊಳ್ಳುತ್ತಾನೆ.
ಶಿವನು ರಾವಣನಿಗೆ ವರವೊಂದನ್ನು ಕೇಳಲು ಹೇಳುತ್ತಾನೆ. ಆಗ ರಾವಣನು ಶಿವನ ಆತ್ಮಲಿಂಗವನ್ನು ನೀಡಲು ಬೇಡಿಕೊಳ್ಳುತ್ತಾನೆ. ಭಕ್ತನಿಗೆ ಒಲಿದ ಶಿವನು ಯೋಚನೆಯನ್ನೇ ಮಾಡದೆ ಆತ್ಮಲಿಂಗವನ್ನು ರಾವಣನಿಗೆ ನೀಡುತ್ತಾನೆ. ಆತ್ಮಲಿಂಗವನ್ನು ನೀಡುವ ವೇಳೆ ಶಿವನು ಇದನ್ನು ನೆಲದ ಮೇಲೆ ಇಟ್ಟಲ್ಲಿ , ಆ ಸ್ಥಳದಲ್ಲಿಯೇ ಪ್ರತಿಷ್ಠಾಪನೆಗೊಳ್ಳುತ್ತದೆ. ಪುನಃ ಅದನ್ನು ಮೇಲೆತ್ತಲು ಸಾಧ್ಯವಾಗುವುದಿಲ್ಲ ಎನ್ನುತ್ತಾನೆ. ಇದನ್ನು ಒಪ್ಪಿದ ರಾವಣನು ಆತ್ಮಲಿಂಗದ ಸಮೇತ ಮರಳಿ ತಾಯಿಯ ಬಳಿ ಪ್ರಯಾಣ ಬೆಳೆಸುತ್ತಾನೆ.
ಇದನ್ನು ಗಮನಿಸಿದ ನಾರದರು ದೇವತೆಗಳಿಗೆ ಈ ವಿಚಾರವನ್ನು ತಿಳಿಸುತ್ತಾರೆ. ಹಾಗೆಯೇ, ಉಪಾಯದಿಂದ ಆತ್ಮಲಿಂಗವು ಭೂ ಸ್ಪಷ್ಟವಾಗುವಂತೆ ಮಾಡಬೇಕೆಂಬ ಸಲಹೆ ನೀಡುತ್ತಾನೆ. ದೇವತೆಗಳು ಈ ಸಂಕಷ್ಟದಿಂದ ಹೊರಬರಲು ಗಣಪತಿಯ ಸಹಾಯವನ್ನು ಕೇಳುತ್ತಾನೆ. ಇದನ್ನು ಒಪ್ಪಿದ ಗಣಪತಿಯು ಬ್ರಹ್ಮಚಾರಿಯ ರೂಪವನ್ನು ಧರಿಸುತ್ತಾನೆ. ರಾವಣನು ಸಂಚರಿಸುತ್ತಿದ್ದ ಗೋಕರ್ಣಕ್ಕೆ ಬರುತ್ತಾನೆ.
ರಾವಣನು ಮಹಾ ಆಚಾರವಂತ. ಪ್ರತಿದಿನವೂ ತ್ರಿಕಾಲ ಸಂಧ್ಯಾವಂದನೆಯನ್ನು, ದೇವರ ಪೂಜೆಯನ್ನು ಮತ್ತು ವೇದಾಧ್ಯಯನವನ್ನು ಮಾಡುತ್ತಿರುತ್ತಾನೆ. ಇದನ್ನು ಅರಿತ ಶ್ರೀ ವಿಷ್ಣು ತನ್ನ ಸುದರ್ಶನಚಕ್ರವನ್ನು ಸೂರ್ಯನಿಗೆ ಅಡ್ಡಲಾಗಿ ಇಡುತ್ತಾನೆ. ಆಗ ಸೂರ್ಯನು ಮುಳುಗಿ ಸಂಧ್ಯಾ ಕಾಲವು ಸಮೀಪಿಸಿದಂತೆ ರಾವಣನಿಗೆ ಭಾಸವಾಗುತ್ತದೆ. ಆಗ ದಿನನಿತ್ಯದಂತೆ ಸಂಧ್ಯಾವಂದನೆಯನ್ನು ಮಾಡಲು ನಿರ್ಧರಿಸುತ್ತಾನೆ. ಆದರೆ ಕೈಯಲ್ಲಿರುವ ಶಿವನ ಆತ್ಮ ಲಿಂಗವನ್ನು ನೆಲದ ಮೇಲೆ ಇಡುವಂತಿಲ್ಲ. ಹಾಗೆಯೇ ಸುತ್ತಮುತ್ತಲು ಯಾರೊಬ್ಬರೂ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ವಟುರೂಪಿಯಾದ ಗಣಪತಿಯು ರಾವಣನಿಗೆ ಕಾಣಿಸುತ್ತಾನೆ.
ವಿನಮ್ರನಾಗಿ, ರಾವಣನು ತಾನು ಸಂಧ್ಯಾವಂದನೆಯನ್ನು ಮುಗಿಸಿ ಬರುವವರೆಗೂ, ಶಿವನ ಆತ್ಮ ಲಿಂಗವನ್ನು ಕೈಯಲ್ಲಿ ಹಿಡಿದಿರು ಎಂದು ಗಣಪತಿಯಲ್ಲಿ ಬೇಡಿಕೊಳ್ಳುತ್ತಾನೆ. ಆಗ ಗಣಪತಿಯು “ನಾನು ಮೂರು ಬಾರಿ ನಿನ್ನ ಹೆಸರನ್ನು ಹಿಡಿದು ಕರೆಯುತ್ತೇನೆ. ಒಂದು ವೇಳೆ ನೀನು ಬಾರದೆ ಹೋದಲ್ಲಿ ಇದನ್ನು ನೆಲದ ಮೇಲೆ ಇಡುತ್ತೇನೆ “ ಎಂಬ ಷರತ್ತನ್ನು ಹಾಕುತ್ತಾನೆ. ರಾವಣನು ಸಂಧ್ಯಾವಂದನೆ ಮಾಡಲು ಆರಂಭಿಸುತ್ತಾನೆ.
ತುಂಟ ಗಣಪತಿಯು ರಾವಣನು ಅರ್ಘ್ಯ ಬಿಡುವ ವೇಳೆಯಲ್ಲಿ ಮೂರು ಬಾರಿ ರಾವಣನನ್ನು ಹೆಸರಿಡಿದು ಕರೆಯುತ್ತಾನೆ. ಆದರೆ ಸಂಧ್ಯಾವಂದನೆಯನ್ನು ಪೂರ್ಣಗೊಳಿಸದೆ ರಾವಣನು ಬರಲಾಗುವುದಿಲ್ಲ. ಇದೇ ಸಂದರ್ಭವನ್ನು ಬಳಸಿಕೊಂಡು ಗಣಪತಿಯು ಆತ್ಮಲಿಂಗವನ್ನು ನೆಲದ ಮೇಲೆ ಇಟ್ಟುಬಿಡುತ್ತಾನೆ. ಅತಿಯಾದ ಬಲಶಾಲಿಯಾದ ರಾವಣನು ಲಿಂಗವನ್ನು ಮತ್ತೆ ಕೈಗೆತ್ತಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಸಹನೆ ಕಳೆದುಕೊಂಡು ಪಕ್ಕದಲ್ಲಿಯೇ ನಿಂತಿದ್ದ ಗಣಪತಿಯ ಜೋರಾಗಿ ಮುಷ್ಟಿ ಬಿಗಿದು ಗಣಪತಿಯ ತಲೆಯ ಮೇಲೆ ಗುದ್ದುತ್ತಾನೆ. ಈ ಏಟಿಗೆ ಗಣಪತಿಯ ನೆತ್ತಿಯ ಮೇಲೆ ಗುದ್ದಿದ ಗುರುತು ಮೂಡುತ್ತದೆ. ಇಂದಿಗೂ ನಾವು ಗೋಕರ್ಣದಲ್ಲಿ ಗಣಪತಿ ವಿಗ್ರಹದ ತಲೆಯ ಮೇಲೆ ಮುಷ್ಟಿಯಿಂದ ಗುದ್ದಿದ ಗುರುತನ್ನು ಕಾಣಬಹುದು.
ಈ ಕಾರಣದಿಂದ ಗೋಕರ್ಣದಲ್ಲಿ ಮೊದಲು ಗಣಪತಿಗೆ ಪೂಜೆ ಸಲ್ಲಿಸಿ, ಆನಂತರ ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸಬೇಕೆಂಬ ನಿಯಮವಿದೆ. ಶಿವನ ಆತ್ಮಲಿಂಗವೇ ಇಲ್ಲಿ ಸ್ಥಾಪಿಸಿರುವುದರಿಂದ ಇದನ್ನು ಭೂಕೈಲಾಸ ಎಂದು ಕರೆಯುತ್ತೇವೆ. ಇಲ್ಲಿ ಪೂಜೆ ಸಲ್ಲಿಸುವುದರಿಂದ ಜನ್ಮಜನ್ಮಾಂತರದ ಪಾಪವು ನಶಿಸಿ ಹೋಗುತ್ತದೆ ಎಂದು ಧಾರ್ಮಿಕ ಗ್ರಂಥಗಳಿಂದ ತಿಳಿದು ಬರುತ್ತದೆ.
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
