Maha Shivratri 2025: ಶಿವನು ಪ್ರಕಾಶಮಾನವಾದ ಬೆಳಕಾಗಿ ಕಾಣಿಸಿಕೊಳ್ಳಲು ಕಾರಣವೇನು; ಜ್ಯೋತಿರ್ಲಿಂಗದ ಹಿಂದಿರುವ ಆಸಕ್ತಿಕರ ಕಥೆ ತಿಳಿಯಿರಿ
ಮಹಾ ಶಿವರಾತ್ರಿ: ಹಿಂದೂ ಧರ್ಮದಲ್ಲಿ ಜ್ಯೋತಿರ್ಲಿಂಗಕ್ಕೆ ಮಹತ್ವವಿದೆ. ಪುರಾಣಗಳ ಪ್ರಕಾರ ದೈವಿಕ ಶಕ್ತಿ ಮತ್ತು ತೇಜಸ್ಸಿನಿಂದ ಕೂಡಿದ ಶಿವಲಿಂಗವಾಗಿದೆ. ಭಾರತದಲ್ಲಿರುವ 12 ಜ್ಯೋತಿರ್ಲಿಂಗಗಳ ವಿವರ ಇಲ್ಲಿದೆ.

ಶಿವ, ಹಿಂದೂ ಧರ್ಮದಲ್ಲಿ ತ್ರಿಮೂರ್ತಿಗಳಲ್ಲಿ ಒಬ್ಬನಾದ ದೇವರು. ಪರಮೇಶ್ವರನನ್ನು ಈ ಬ್ರಹ್ಮಾಂಡದ ಲಯಕಾರಕನೆಂದೂ ಕರೆಯಲಾಗುತ್ತದೆ. ಕೈಲಾಸ ಪರ್ವತ ಇವನ ವಾಸಸ್ಥಾನ. ಶಿವನನ್ನು ಈಶ್ವರ, ಪರಮೇಶ್ವರ, ರುದ್ರ ಎಂದೆಲ್ಲಾ ಕರೆಯುತ್ತಾರೆ. ಸಾಮಾನ್ಯವಾಗಿ ಶಿವನನ್ನು ಲಿಂಗದ ರೂಪದಲ್ಲಿಯೇ ಪೂಜಿಸಲಾಗುತ್ತದೆ. ಅದು ಅವನ ಅನಂತ ಶಕ್ತಿಯ ಸಂಕೇತ. ಮತ್ತು ಶಿವನ ಸಾನಿಧ್ಯವನ್ನು ಪ್ರತಿನಿಧಿಸುತ್ತದೆ. ಶಿವ ಪುರಾಣದ ಪ್ರಕಾರ ಒಟ್ಟು 64 ಜ್ಯೋತಿರ್ಲಿಂಗಗಳಿವೆ. ಅವುಗಳಲ್ಲಿ 12 ಜ್ಯೋತಿರ್ಲಿಂಗಗಳು ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ. ಅವುಗಳನ್ನು ಮಹಾಜ್ಯೋತಿರ್ಲಿಂಗಗಳು ಎಂದೂ ಕರೆಯಲಾಗುತ್ತದೆ. ಪ್ರತಿಯೊಂದು ಜ್ಯೋತಿರ್ಲಿಂಗವೂ ಶಿವನ ಅಪಾರ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಈ ಜ್ಯೋತಿರ್ಲಿಂಗಗಳು ಶಿವನನ್ನು ನೇರವಾಗಿ ಸಂಪರ್ಕಿಸುತ್ತವೆ ಹಾಗೂ ಸುಲಭವಾಗಿ ಅವನ ಕೃಪೆಗೆ ಪಾತ್ರರಾಗಬಹುದಾಗಿದೆ. ಭಾರತದಲ್ಲಿರುವ ಪ್ರಮುಖ 12 ಜ್ಯೋತಿರ್ಲಿಂಗಗಳಿಗೆ ಶಿವನ ಭಕ್ತರು ಭೇಟಿಕೊಡುತ್ತಾರೆ. ಶಿವನ ಆರಾಧನೆ ದಿನವಾದ ಶಿವರಾತ್ರಿಯಂದು ಜ್ಯೋತಿರ್ಲಿಂಗಗಳಿಗೆ ಭೇಟಿ ಕೊಟ್ಟು, ಶಿವನ ಸೇವೆಯನ್ನು ಮಾಡಿದರೆ ಪಾಪಗಳೆಲ್ಲಾ ಕಳೆದು ಪುಣ್ಯ ಲಭಿಸುತ್ತದೆ ಎಂಬ ಬಲವಾದ ನಂಬಿಕೆಯಿದೆ.
ಜ್ಯೋತಿರ್ಲಿಂಗದ ಹಿಂದಿರುವ ಕಥೆ
ವೈದಿಕ ಪುರಾಣಗಳಲ್ಲಿ ಜ್ಯೋತಿರ್ಲಿಂಗಗಳಿಗೆ ಪ್ರಮುಖ ಸ್ಥಾನವಿದೆ. ಜ್ಯೋತಿರ್ಲಿಂಗಗಳ ಮೂಲದ ಕಥೆ ಬಹಳ ಆಸ್ತಕ್ತಿದಾಯಕವಾಗಿದೆ. ಒಮ್ಮೆ ಬ್ರಹ್ಮ ಮತ್ತು ವಿಷ್ಣುವಿನ ಮಧ್ಯೆ ಈ ಲೋಕದಲ್ಲಿ ಯಾರ ಹೆಚ್ಚು ಬಲಶಾಲಿಗಳು ಎಂಬ ವಾಗ್ವಾದ ನಡೆಯಿತು. ಅವರಿಬ್ಬರ ನಡುವಿನ ಸಂಘರ್ಷವನ್ನು ಬಗೆಹರಿಸಲು ಶಿವನು ಪ್ರಕಾಶಮಾನವಾದ ಒಂದು ಬೆಳಕಿನ ಸ್ತಂಭದ ರೂಪದಲ್ಲಿ ಕಾಣಿಸಿಕೊಂಡು ಮೂರು ಲೋಕಗಳನ್ನು ಚುಚ್ಚಿದನು. ಇದನ್ನು ಬ್ರಹ್ಮ ಮತ್ತು ವಿಷ್ಣುವಿಗೆ ಜ್ಯೋತಿರ್ಲಿಂಗದ ತುದಿಯನ್ನು ಗ್ರಹಿಸಲು ಸಾಧ್ಯವಾಗಲಿಲ್ಲ. ಅವರಿಬ್ಬರೂ ಮೇಲೆ ಮತ್ತು ಕೆಳಗೆ ಹುಡುಕುತ್ತಾ ಪ್ರಯತ್ನಪಟ್ಟರು. ಆದರೂ ತುದಿಯನ್ನು ಕುಂಡುಹಿಡಿಯಲು ವಿಫಲರಾದರು. ಇದರ ಅರ್ಥ ಶಿವನೇ ಪರಮ ಶಕ್ತಿ. ಆದರೆ ಅದೇ ಸಮಯದಲ್ಲಿ ಬ್ರಹ್ಮನು ತನಗೆ ಜ್ಯೋತಿರ್ಲಿಂಗದ ತುದಿ ಕಾಣಿಸಿತು ಎಂದು ವಿಷ್ಣುವಿಗೆ ಸುಳ್ಳು ಹೇಳಿದನು. ಇದರಿಂದಾಗಿ ಬ್ರಹ್ಮನು ಈ ಬ್ರಹ್ಮಾಂಡದ ಸೃಷ್ಟಿಕರ್ತನಾಗಿದ್ದರೂ ಅವನನ್ನು ಪೂಜಿಸದಂತೆ ಶಪಿಸಿದನು.
ಭಾರತದಲ್ಲಿರುವ 12 ಜ್ಯೋತಿರ್ಲಿಂಗಗಳು
- ಸೋಮನಾಥ ಜ್ಯೋತಿರ್ಲಿಂಗ, ಗುಜರಾತ್
ಅರೇಬ್ಬಿ ಸಮುದ್ರದ ತಟದಲ್ಲಿರುವ ಸೋಮನಾಥ ದೇವಾಲಯವು ಶಿವನ ಅತ್ಯಂತ ಪ್ರಮುಖವಾದ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಧಾರ್ಮಿಕ ಮಹತ್ವ ಮತ್ತು ವಾಸ್ತುಶಿಲ್ಪದ ಅದ್ಭುತಕ್ಕೆ ಇದು ಹೆಸರುವಾಸಿಯಾಗಿದೆ. ಈ ದೇವಾಲಯವು ಅನೇಕ ಬಾರಿ ನಾಶವಾಗಿದ್ದರೂ ಪುನರ್ನಿರ್ಮಾಣಗೊಂಡ ಇತಿಹಾಸವನ್ನು ಹೊಂದಿದೆ. ಈ ಜ್ಯೋತಿರ್ಲಿಂಗವು ಅಪಾರ ಶಕ್ತಿಯನ್ನು ಹೊಂದಿದೆ ಎಂದು ಶಿವಭಕ್ತಾದಿಗಳ ನಂಬಿಕೆಯಾಗಿದೆ.
2. ಮಲ್ಲಿಕಾರ್ಜುನ ಜ್ಯೋತಿರ್ಲಿಂಗ, ಆಂಧ್ರ ಪ್ರದೇಶ
ಇದು ಆಂಧ್ರ ಪ್ರದೇಶದ ಸುಂದರವಾದ ನಲ್ಲಮಲ ಬೆಟ್ಟಗಳ ಮೇಲೆ ನೆಲೆಗೊಂಡಿದೆ. ಈ ದೇವಾಲಯವು ಅಧ್ಯಾತ್ಮಿಕ ಮತ್ತು ವಾಸ್ತುಶಿಲ್ಪದ ಮೇರುಕೃತಿಯಾಗಿದೆ. ಭ್ರಮರಾಂಬ ದೇವಾಲಯದ ಪಕ್ಕದಲ್ಲಿ ನೆಲೆಸಿರುವ ಮಲ್ಲಿಕಾರ್ಜುನ ಜ್ಯೋತಿರ್ಲಿಂಗವು ಪ್ರಶಾಂತವಾದ ಪರಿಸರದಿಂದ ಶಿವನ ಭಕ್ತಗಣವನ್ನು ಆಕರ್ಷಿಸಿದೆ.
3. ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಮಧ್ಯಪ್ರದೇಶ
ಉಜ್ಜಯಿನಿಯ ರುದ್ರಸಾಗರ ನದಿಯ ದಡದಲ್ಲಿರುವ ಈ ದೇವಾಲಯವು ಪ್ರಸಿದ್ಧ ಭಸ್ಮ ಆರತಿ ಮತ್ತು ಅಧ್ಯಾತ್ಮಿಕ ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಶಿವನ ಪುರಾತನ ದೇವಾಲಯಗಳಲ್ಲಿ ಒಂದಾಗಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗವು ಸ್ವಯಂಭೂ ಲಿಂಗವೆಂದು ಹೇಳಲಾಗುತ್ತದೆ.
4. ಓಂಕಾರೇಶ್ವರ ಜ್ಯೋತಿರ್ಲಿಂಗ, ಮಧ್ಯಪ್ರದೇಶ
ಮಧ್ಯಪ್ರದೇಶದ ನರ್ಮದಾ ನದಿಯ ದಡದ ಹತ್ತಿರದ ದ್ವೀಪದ ಮೇಲಿದೆ. ಪ್ರಶಾಂತವಾದ ಓಂಕಾರೇಶ್ವರ ದ್ವೀಪದಲ್ಲಿರುವ ಈ ಜ್ಯೋತಿರ್ಲಿಂಗವು 'ಓಂ' ಆಕಾರದ ವಾಸ್ತುಶಿಲ್ಪದೊಂದಿಗೆ ಅಧ್ಯಾತ್ಮಿಕ ಮತ್ತು ರಮಣೀಯ ಸೌಂದರ್ಯ ಇವೆರಡರ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ.
5. ಬೈದ್ಯನಾಥ ಜ್ಯೋತಿರ್ಲಿಂಗ, ಜಾರ್ಖಂಡ್
ದಿಯೋಘಡ್‌ನಲ್ಲಿರುವ ಈ ಜ್ಯೋತಿರ್ಲಿಂಗವು ಸೂಕ್ಷ್ಮವಾದ ಕೆತ್ತನೆಗಳಿಂದ ಕೂಡಿದ ದೇವಾಲಯವಾಗಿದೆ. ಶ್ರಾವಣಿ ಮೇಳಕ್ಕೆ ಹೆಸರುವಾಸಿಯಾಗಿದೆ. ಅಲ್ಲಿ ಭಕ್ತರು ಶಿವನಿಗೆ ಜಲಾಭಿಷೇಕವನ್ನು ಮಾಡುತ್ತಾರೆ.
ಇದನ್ನೂ ಓದಿ: ಭಾರತದಲ್ಲಿ ನೋಡಲೇಬೇಕಾದ ಚೋಳ ರಾಜವಂಶದ 9 ದೇವಾಲಯಗಳಿವು
6. ಭೀಮಾಶಂಕರ ಜ್ಯೋತಿರ್ಲಿಂಗ, ಮಹಾರಾಷ್ಟ್ರ
ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿರುವ ಈ ಜ್ಯೋತಿರ್ಲಿಂಗವು ಪ್ರಕೃತಿಯ ಸೌಂದರ್ಯದ ಜೊತೆಗೆ8 ಆಧ್ಯಾತ್ಮಿಕತೆಯನ್ನು ಸಂಯೋಜಿಸುತ್ತದೆ. ಈ ದೇವಾಲಯವು ವಿಶಿಷ್ಟವಾದ ನಾಗರ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.
7. ರಾಮೇಶ್ವರ ಜ್ಯೋತಿರ್ಲಿಂಗ, ತಮಿಳುನಾಡು
ರಾಮೇಶ್ವರಂ ದ್ವೀಪದಲ್ಲಿರುವ ಈ ಜ್ಯೋತಿರ್ಲಿಂಗವು ಚಾರ್ ಧಾಮ್ ತೀರ್ಥಯಾತ್ರೆಯ ಭಾಗವಾಗಿದೆ. ಈ ದೇವಾಲಯದ ವಿಶಾಲವಾದ ಪ್ರಾಂಗಣವು ಆಕರ್ಷಕವಾಗಿದೆ. ಇದು ರಾಮಾಯಣಕ್ಕೂ ಸಂಬಂಧವನ್ನು ಹೊಂದಿದೆ.
8. ನಾಗೇಶ್ವರ ಜ್ಯೋತಿರ್ಲಿಂಗ, ಗುಜರಾತ್
ದ್ವಾರಕೆಯಲ್ಲಿರುವ ಈ ಜ್ಯೋತಿರ್ಲಿಂಗವು ಶಿವನ ದೈತ್ಯ ಪ್ರತಿಮೆಯನ್ನು ಹೊಂದಿದೆ. ಇದು ದಾರುಕ ಎಂಬ ರಾಕ್ಷಸನ ಮೇಲೆ ಶಿವನು ವಿಜಯ ಸಾಧಿಸಿದ ಕಥೆಯನ್ನು ಒಳಗೊಂಡಿದೆ.
9. ಕಾಶಿ ವಿಶ್ವನಾಥ ಜ್ಯೋತಿರ್ಲಿಂಗ, ವಾರಣಾಸಿ
ಭಾರತದ ಅಧ್ಯಾತ್ಮಿಕ ರಾಜಧಾನಿ ಎಂದು ಹೆಸರು ಪಡೆದಿರುವ ವಾರಣಾಸಿಯಲ್ಲಿ ಈ ಜ್ಯೋತಿರ್ಲಿಂಗವಿದೆ. ಈ ಪೂಜ್ಯ ದೇವಾಲಯವು ಗಂಗಾ ನದಿಯ ದಡದಲ್ಲಿದೆ. ಜ್ಯೋತಿರ್ಲಿಂಗವು ಜೀವನ ಮತ್ತು ಮೃತ್ಯುವಿನ ಸಂಗಮವನ್ನು ಸಂಕೇತಿಸುತ್ತದೆ.
10. ತ್ರಯಂಬಕೇಶ್ವರ ಜ್ಯೋತಿರ್ಲಿಂಗ, ಮಹಾರಾಷ್ಟ್ರ
ಗೋದಾವರಿ ನದಿಯ ಬಳಿ ಇರುವ ಈ ದೇವಾಲಯವು ಬ್ರಹ್ಮ, ವಿಷ್ಣು ಮತ್ತು ಶಿವನನ್ನು ಪ್ರತಿನಿಧಿಸುವ ಲಿಂಗವನ್ನು ಹೊಂದಿದೆ. ದೇವಾಲಯವು ಪ್ರಕೃತಿ ಸೌಂದರ್ಯ ಮತ್ತು ದೈವಿಕ ಶಕ್ತಿಯಿಂದ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ.
11. ಕೇದಾರನಾಥ ಜ್ಯೋತಿರ್ಲಿಂಗ, ಉತ್ತರಾಖಂಡ
ಹಿಮಾಲಯದ ಹಿಮದಿಂದ ಆವೃತವಾದ ಶಿಖರಗಳ ನಡುವೆ ಇರುವ ಕೇದಾರನಾಥವು ಆಧ್ಯಾತ್ಮಿಕ ಮತ್ತು ರಮಣೀಯ ಯಾತ್ರಾ ಸ್ಥಳವಾಗಿದೆ. ಇದನ್ನು ಪಾಂಡವರು ಸ್ಥಾಪಿಸಿದ್ದಾರೆಂಬ ನಂಬಕೆಯಿದೆ. ಇದು ಚಾರ್ ಧಾಮ್ ಯಾತ್ರೆಗಳಲ್ಲ ಒಂದಾಗಿದೆ.
12. ಗ್ರೀಷ್ಣೇಶ್ವರ ಜ್ಯೋತಿರ್ಲಿಂಗ, ಮಹಾರಾಷ್ಟ್ರ
ಎಲ್ಲೋರಾ ಗುಹೆಗಳ ಬಳಿಯಿರುವ ಈ ಪ್ರಾಚೀನ ದೇವಾಲಯವು ಸೂಕ್ಷ್ಮ ಕೆತ್ತನೆಗಳಿಂದ ಆಕರ್ಷಕವಾಗಿದೆ. ಇದು ಮಧ್ಯಕಾಲೀನ ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)
