Maha Shivratri 2025: ಶ್ರೀಕಾಳಹಸ್ತೀಶ್ವರನಿಂದ ಜಂಬುಕೇಶ್ವರ ದೇವಸ್ಥಾನದವರೆಗೆ; ದಕ್ಷಿಣ ಭಾರತದ 7 ಪ್ರಸಿದ್ಧ ಶಿವ ದೇವಾಲಯಗಳಿವು
ಶಿವರಾತ್ರಿ ವಿಶೇಷ: ದಕ್ಷಿಣ ಭಾರತದ ಭವ್ಯ ದೇಗುಲಗಳು ಗತಕಾಲದ ವೈಭವವನ್ನು ಸಾರಿ ಹೇಳುತ್ತವೆ. ಇಲ್ಲಿ ಆಳಿದ ರಾಜರುಗಳು ದೇವಸ್ಥಾನಗಳನ್ನು ಕಟ್ಟಿ ಭಕ್ತಿಯ ಸುಧೆ ಹರಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿರುವ 7 ಶಿವಾಲಯಗಳ ವಿವರ ಇಲ್ಲಿದೆ. (ಬರಹ: ಅರ್ಚನಾ ವಿ.ಭಟ್)

ಮಹಾ ಶಿವರಾತ್ರಿ ವಿಶೇಷ 2025: ದಕ್ಷಿಣ ಭಾರತವು ಅನೇಕ ಪುರಾತನ ದೇವಾಲಯಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿನ ದೇವಸ್ಥಾನಗಳ ಅದ್ಭುತ ರಚನೆಗಳು ಭಕ್ತರಲ್ಲಿ ಭಕ್ತಿಯ ಸೆಲೆಯನ್ನು ಹೆಚ್ಚಿಸುವಂತೆ ಮಾಡಿದೆ. ದಕ್ಷಿಣ ಭಾರತದಲ್ಲಿ ಶಿವನಿಗೆ ಅರ್ಪಿತವಾದ ಅನೇಕ ದೇವಾಲಯಗಳಿವೆ. ಚೋಳ, ಪಲ್ಲವ ಮತ್ತು ಚಾಲುಕ್ಯರಂತಹ ರಾಜವಂಶಗಳು ತಲೆಮಾರುಗಳವರೆಗೆ ಆಳ್ವಿಕೆಯನ್ನು ನಡೆಸಿ ಭಕ್ತಿಯ ಸಂಕೇತವಾದ ಭವ್ಯ ದೇವಾಲಯಗಳನ್ನು ನಿರ್ಮಿಸಿದರು. ಆ ಮೂಲಕ ವಾಸ್ತುಶಿಲ್ಪಕಲೆಗಳನ್ನು ಶ್ರೀಮಂತಗೊಳಿಸಿದರು. ಈ ರಾಜವಂಶಗಳು ಹಿಂದೂ ದೇವರುಗಳಲ್ಲಿ ಶ್ರೇಷ್ಠನಾದ ಶಿವನ ದೇವಾಲಯಗಳನ್ನು ನಿರ್ಮಿಸಿದ್ದಾರೆ. ಮಹಾ ಶಿವರಾತ್ರಿಯ (Maha Shivratri 2025) ಶುಭ ಸಂದರ್ಭದಲ್ಲಿ ಶಿವನ ಆಲಯಗಳಿಗೆ ಭೇಟಿ ನೀಡುವುದು, ಶಿವ ಭಕ್ತರು ಆಚರಿಸಿಕೊಂಡು ಬಂದ ರೂಢಿಗಳಲ್ಲಿ ಒಂದಾಗಿದೆ. ಪರಶಿವನ ಕೃಪೆಗೆ ಪಾತ್ರರಾಗಲು ನೀವು ದಕ್ಷಿಣ ಭಾರತದ ಶಿವ ದೇವಸ್ಥಾನಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ ಶಿವನಿಗೆ ಅರ್ಪಿತವಾದ ಪುರಾತನ ದೇವಾಲಯಗಳು.
ದಕ್ಷಿಣ ಭಾರತದ 7 ಪ್ರಸಿದ್ಧ ದೇವಾಲಯಗಳು
1. ಶ್ರೀಕಾಳಹಸ್ತೇಶ್ವರ ದೇವಸ್ಥಾನ, ಶ್ರೀಕಾಳಹಸ್ತಿ (ಆಂಧ್ರ ಪ್ರದೇಶ)
ಈ ದೇವಾಲಯವು ಪಂಚಭೂತಗಳಲ್ಲಿ ಒಂದಾದ ವಾಯುವನ್ನು ಪ್ರತಿನಿಧಿಸುವ ದೇವಾಲಯವಾಗಿದೆ. ಇಲ್ಲಿ ಪ್ರಕೃತಿಯ 5 ಅಂಶಗಳಲ್ಲಿ ಒಂದಾದ ವಾಯು ರೂಪದಲ್ಲಿ ಶಿವನು ನೆಲೆಸಿದ್ದಾನೆ. ಈ ದೇವಾಲಯವು ನಮ್ಮ ಖಂಡದಲ್ಲಿಯೇ ಅತಿದೊಡ್ಡ ಶಿವ ದೇವಾಲಯ ಎಂದು ಕರೆಯಲಾಗುತ್ತದೆ. ಹಲವಾರು ಪೌರಾಣಿಕ ಕಥೆಗಳೊಂದಿಗೆ ಸಂಬಂಧವನ್ನೂ ಹೊಂದಿದೆ. ಇನ್ನೊಂದು ವೈಶಿಷ್ಟ್ಯವೆಂದರೆ ಇಲ್ಲಿ ವಾಯು ದೇವರು ಯುಗಯುಗಗಳವರೆಗೆ ಧ್ಯಾನವನ್ನು ಮಾಡಿದ್ದಾನೆ ಎಂಬ ನಂಬಿಕೆಯಿದೆ. ಈ ದೇವಾಲಯದಲ್ಲಿರುವ ಶಿವಲಿಂಗದ ಇನ್ನೊಂದು ಹೆಸರು ವಾಯುಲಿಂಗ. ನಾಲ್ಕು ಯುಗಗಳಲ್ಲಿಯೂ ಬ್ರಹ್ಮದೇವನು ಇಲ್ಲಿ ಧ್ಯಾನ ಮಾಡಿದ್ದಾನೆ ಎಂದು ಹೇಳಲಾಗುತ್ತದೆ.
2. ಶೋರ್ ಟೆಂಪಲ್, ಮಹಾಬಲಿಪುರಂ (ತಮಿಳುನಾಡು)
ಮಹಾಬಲಿಪುರಂನಲ್ಲಿರುವ ಶೋರ್ ಟೆಂಪಲ್ ಕೇವಲ ಒಂದು ದೇವಸ್ಥಾನವಲ್ಲ. ಇದು ಹಲವಾರು ದೇವಾಲಯಗಳ ಸಮುಚ್ಛಯವಾಗಿದೆ. ಇದು ಬಂಗಾಳ ಕೊಲ್ಲಿಯ ಕರಾವಳಿ ತೀರದಲ್ಲಿದೆ. ಹಾಗಾಗಿ ಇದನ್ನು ಶೋರ್ ಟೆಂಪಲ್ ಎಂದು ಕರೆಯಲಾಗುತ್ತದೆ. ಒಂದು ಕಾಲದಲ್ಲಿ ಭಾರತದ ಅತ್ಯಂತ ಸುಂದರ ದೇವಾಲಯವೆಂದು ಪ್ರಸಿದ್ಧಿಯನ್ನು ಪಡೆದಿದ್ದ ಈ ದೇವಾಲಯವು ಇಂದಿಗೂ ಆ ಪ್ರಸಿದ್ಧಿಯನ್ನು ಉಳಿಸಿಕೊಂಡು ಬಂದಿದೆ. ಈ ದೇವಸ್ಥಾನವನ್ನು ಸಂಪೂರ್ಣವಾಗಿ ಧರ್ಮರಾಜ ರಥದಂತೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಶಿವನ ದೇವಾಲಯದ ಜೊತೆಗೆ ವಿಷ್ಣುವಿಗೆ ಅರ್ಪಿತವಾದ ಇತರ ದೇವಾಲಯಗಳೂ ಇವೆ.
3. ಮುರ್ಡೇಶ್ವರ (ಉತ್ತರ ಕನ್ನಡ ಜಿಲ್ಲೆ, ಕರ್ನಾಟಕ)
ಶಿವನ ಅತ್ಯಂತ ಪವಿತ್ರವಾದ ದೇವಾಲಯಗಳಲ್ಲಿ ಒಂದು ಎಂಬ ಪ್ರತೀತಿಯಿದೆ. ಅರಬ್ಬೀ ಸಮುದ್ರದ ಕರಾವಳಿ ತೀರದಲ್ಲಿರುವ ಮುರ್ಡೇಶ್ವರವು ಸುಂದರ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತದೆ. ಶಿವನ ಆತ್ಮಲಿಂಗದ ಒಂದು ಅಂಶ ಇಲ್ಲಿದೆ ಎಂದು ಹೇಳಲಾಗುತ್ತದೆ. ಈ ದೇವಸ್ಥಾನವು ಹಲವಾರು ಪ್ರಸಿದ್ಧಿಗಳನ್ನು ಪಡೆದುಕೊಂಡಿದೆ. ಇದು ವಿಶ್ವದ ಎರಡನೇ ಅತಿದೊಡ್ಡ ಶಿವ ಪ್ರತಿಮೆಯನ್ನು ಹೊಂದಿರುವ ದೇವಾಲಯವಾಗಿದೆ.
4. ರಾಮನಾಥಸ್ವಾಮಿ ದೇವಸ್ಥಾನ, ರಾಮೇಶ್ವರಂ (ತಮಿಳುನಾಡು)
ರಾಮೇಶ್ವರಂನ ದ್ವೀಪದಲ್ಲಿರುವ ರಾಮನಾಥಸ್ವಾಮಿ ದೇವಾಲಯವು ದಕ್ಷಿಣ ಭಾರತದ ಅತ್ಯಂತ ಸುಂದರ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಇದು ಭಾರತದ ಚಾರ್ ಧಾಮ್ ಯಾತ್ರಾ ತೀರ್ಥಯಾತ್ರೆಯ ಸ್ಥಳಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದ ಶಿವನ ಈ ಪವಿತ್ರ ದೇವಾಲಯವು ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾಗಿದೆ. ರಾಮನಾಥಸ್ವಾಮಿ ದೇವಾಲಯದ ವಿಶಾಲವಾದ ಪ್ರಾಂಗಣವು ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
5. ತಿಲ್ಲೈ ನಟರಾಜ ದೇವಾಲಯ, ಚಿದಂಬರಂ (ತಮಿಳುನಾಡು)
ಚಿದಂಬರಂನಲ್ಲಿರುವ ತಿಲ್ಲೈ ನಟರಾಜ ದೇವಾಲಯದ ಶಿವನ ಇನ್ನೊಂದು ಪ್ರಮುಖ ದೇವಾಲಯವಾಗಿದೆ. ಶಿವನು ತಾಂಡವ ನೃತ್ಯ ಮಾಡಿ ನಟರಾಜನೆನಿಸಿಕೊಂಡಿರುವುದು ನಮಗೆಲ್ಲರೂ ತಿಳಿದ ವಿಷಯ. ಇಲ್ಲಿ ಶಿವನು ನಟರಾಜನಾಗಿ ತನ್ನ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ದಕ್ಷಿಣ ಭಾರತದಲ್ಲಿ ಶಿವನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ತಿಲ್ಲೈ ನಟರಾಜ ದೇವಾಲಯವೂ ಒಂದು. ಭಾರತೀಯ ಸಾಂಪ್ರದಾಯಿಕ ನೃತ್ಯ ಪ್ರಕಾರಗಳಲ್ಲಿ ಒಂದಾದ ಭರತನಾಟ್ಯವನ್ನು ಈ ದೇವಾಲಯದ ಗೋಡೆಗಳ ಮೇಲೆ ಚಿತ್ರಿಸಲಾಗಿದೆ.
6. ಉಮಾ ಮಹೇಶ್ವರ ದೇವಸ್ಥಾನ, ಯಾಗಂಟಿ (ಆಂಧ್ರ ಪ್ರದೇಶ)
ಆಂಧ್ರ ಪ್ರದೇಶದ ಅತ್ಯಂತ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಉಮಾ ಮಹೇಶ್ವರ ದೇವಾಲಯವೂ ಒಂದು. ಹದಿನೈದನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಥಾಪಕನಾದ ಹರಿಹರ ಬುಕ್ಕ ರಾಯನು ಈ ದೇವಸ್ಥಾನವನ್ನು ನಿರ್ಮಿಸಿದನು. ಇಲ್ಲಿ ಶಿವನನ್ನು ಅರ್ಧನಾರೀಶ್ವರನಾಗಿ ನೆಲೆಸಿದ್ದಾನೆ. ಇಲ್ಲಿನ ಸ್ಥಳ ಪುರಾಣದ ಪ್ರಕಾರ ಅಗಸ್ತ್ಯ ಋಷಿಯು ಶಿವನನ್ನು ತಾಯಿ ಪಾರ್ವತಿಯ ರೂಪದೊಂದಿಗೆ ಬರಲು ಹೇಳಿದರು ಎಂದು ಹೇಳಲಾಗುತ್ತದೆ. ಈ ಕಾರಣದಿಂದಲೇ ಈ ದೇವಾಲಯವನ್ನು ಉಮಾ ಮಹೇಶ್ವರಿ ದೇಗುಲ ಎಂದೂ ಕರೆಯಲಾಗುತ್ತದೆ.
7. ಜಂಬುಕೇಶ್ವರ ದೇವಸ್ಥಾನ, ತಿರುಚಿರಾಪಳ್ಳಿ (ತಮಿಳುನಾಡು)
ಈ ದೇವಾಲಯವು ಐದು ಪಂಚಭೂತ ಸ್ಥಳಗಳಲ್ಲಿ ಒಂದಾಗಿದೆ. ಈ ಸ್ಥಳದಲ್ಲಿ ಶಿವನು ನೀರಿನ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತದೆ. ಇದು ತಮಿಳುನಾಡಿನ ಅತ್ಯಂತ ಪ್ರಸಿದ್ಧ ಶಿವ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಸ್ಥಾನದಲ್ಲಿ ಶಿವ ಲಿಂಗದ ಕೆಳಗೆ ನೀರು ನಿರಂತರವಾಗಿ ಹರಿಯುತ್ತಲೇ ಇದೆ.
