ಪೌರಾಣಿಕ ಕಥೆಗಳು: ಹಂಗಿನಲ್ಲಿ ಸಿಲುಕುವುದೇ ಅಪಾಯ, ದುರ್ಯೋಧನನ ಆತಿಥ್ಯ ನಿರಾಕರಿಸಿ ವಿದುರನ ಮನೆಗೆ ಹೊರಟ ಶ್ರೀಕೃಷ್ಣ
ಐಶ್ವರ್ಯದಲ್ಲಿ, ಹಣದಲ್ಲಿ ಸಿರಿವಂತನಾಗಿರುವುದಕ್ಕಿಂತಲೂ ಗುಣದಲ್ಲಿ ಯೋಗ್ಯರಾಗಿರುವುದು ಬಹಳ ಮುಖ್ಯ ಎಂದು ಶ್ರೀಹರಿ ತನ್ನ ವರ್ತನೆಯಿಂದಲೇ ಎಲ್ಲರಿಗೂ ತಿಳಿಸಿಕೊಟ್ಟ. ಹೀಗೆ ಮಹಾಭಾರತದ ಪ್ರತಿ ಪ್ರಸಂಗವೂ ನಮಗೆ ಸಾಕಷ್ಟು ಪಾಠಗಳನ್ನು ಹೇಳುತ್ತದೆ. ಮುಂದಿನ ದಿನಗಳಲ್ಲಿ ಇಂಥ ಹಲವು ಕಥೆಗಳನ್ನು ಪ್ರಸ್ತುತಪಡಿಸಲಾಗುವುದು.

ಮಹಾಭಾರತದ ಕಥೆ ಓದಿದ ಸಾಕಷ್ಟು ಜನರಲ್ಲಿ ಒಂದು ಪ್ರಶ್ನೆ ಮೂಡುತ್ತದೆ. ಕೌರವರು ಕೆಟ್ಟವರು ಎಂದು ತಿಳಿದಿದ್ದರೂ ಆ ಕಾಲದ ಶ್ರೇಷ್ಠ ಜ್ಞಾನಿಗಳೆಸಿದ್ದ ಭೀಷ್ಮ ಪಿತಾಮಹ ಮತ್ತು ದ್ರೋಣಾಚಾರ್ಯರು ಕೌರವರ ಏಕೆ ನಿಂತರು? ಇವರಿಬ್ಬರು ಮನಸ್ಸು ಮಾಡಿದ್ದರೆ ದ್ರೌಪದಿಯ ವಸ್ತ್ರಾಪಹರಣವನ್ನು ತಪ್ಪಿಸಬಹುದಿತ್ತು, ಯುದ್ಧವನ್ನೂ ತಡೆಯಬಹುದಿತ್ತು. ಇವರಿಬ್ಬರೂ ತನ್ನ ತಪ್ಪುಗಳ ಬಗ್ಗೆ ದುರ್ಯೋಧನನಿಗೆ ಏಕೆ ಗಟ್ಟಿಯಾಗಿ ಹೇಳಲಿಲ್ಲ? ದುರ್ಯೋಧನ ತಪ್ಪಿ ನಡೆದಾಗ ಏಕೆ ಖಂಡಿಸಲಿಲ್ಲ? ಸರಿಯಾದ ರೀತಿಯಲ್ಲಿ ಶಿಕ್ಷಿಸಲಿಲ್ಲ? ಇತ್ಯಾದಿ ಪ್ರಶ್ನೆಗಳು ಹಲವರನ್ನು ಕಾಡುತ್ತವೆ. ಈ ಪ್ರಶ್ನೆಗೆ ಶ್ರೀಕೃಷ್ಣ ತನ್ನ ನಡವಳಿಕೆಯಿಂದ ಮಹಾಭಾರತದಲ್ಲಿ ಒಮ್ಮೆ ಉತ್ತರಿಸಿದ್ದ.
ಯುದ್ಧ ಆರಂಭವಾಗುವುದಕ್ಕೆ ಮೊದಲು ಶ್ರೀಕೃಷ್ಣ ಪಾಂಡವರ ಪರವಾಗಿ ಸಂಧಾನ ಮಾಡಲು ದುರ್ಯೋಧನನ ಅರಮನೆಗೆ ಬಂದಿದ್ದ. ಶ್ರೀಕೃಷ್ಣ ರಾಯಭಾರದ ಪ್ರಸಂಗ ಅದು. ಈ ಸಂದರ್ಭದಲ್ಲಿ ಕೃಷ್ಣನಿಗೆ ಉಪಚಾರ ಮಾಡಲು ದುರ್ಯೋಧನ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದ. ಕೃಷ್ಣ ಎಲ್ಲಿಗೆ ಹೋಗಬಹುದು ಎನ್ನುವ ಬಗ್ಗೆ ಸಾಕಷ್ಟು ಜಿಜ್ಞಾಸೆಗಳೂ ನಡೆದಿತ್ತು. ಆದರೆ ಕೃಷ್ಣ ಅರಮನೆಗೆ ಬಂದವನೇ ಸೀದ ವಿದುರನ ಮನೆಗೆ ಹೊರಟುಬಿಟ್ಟ.
ದುರ್ಯೋಧನ ಈ ಸಂದರ್ಭದಲ್ಲಿ 'ನನ್ನ ಮನೆಯಲ್ಲಿ ಏಕೆ ಊಟ ಮಾಡುವುದಿಲ್ಲ' ಎಂದು ಪ್ರಶ್ನಿಸಿದಾಗ, ಕೃಷ್ಣ ಬಹಳ ಮಾರ್ಮಿಕವಾಗಿ ಉತ್ತರಿಸಿದ. 'ಒಬ್ಬರು ಇನ್ನೊಬ್ಬರ ಮನೆಯಲ್ಲಿ ಊಟ ಮಾಡಲು ಇರುವುದು ಎರಡೇ ಕಾರಣ. ಒಂದೋ ನಾವು ಗತಿಗಟ್ಟಿರಬೇಕು, ಇಲ್ಲವೇ ನಿಮ್ಮಲ್ಲಿ ಪ್ರೀತಿ ಇರಬೇಕು. ಈಗ ಆ ಎರಡೂ ಕಾರಣ ಕಾಣಿಸುತ್ತಿಲ್ಲ' ಎಂದು ಕೃಷ್ಣ ನೇರವಾಗಿ ಹೇಳಿದ. 'ದಾಸಿಪುತ್ರ' ಎಂದು ಕೌರವರ ರಾಜ ಹಂಗಿಸಿ ಕರೆಯುತ್ತಿದ್ದ ವಿದುರನಿಗೆ ತನ್ನ ಮನೆಗೆ ಶ್ರೀಕೃಷ್ಣ ಬರಬಹುದು ಎನ್ನುವ ನಿರೀಕ್ಷೆ ಇರಲಿಲ್ಲ. ಆದರೆ ದುರ್ಯೋಧನ ಮೃಷ್ಟಾನ್ನ ಭೋಜನ ಮಾಡಿಸಿದ್ಧ. ಅದನ್ನು ನಿರಾಕರಿಸಿ ವಿದುರನ ಮನೆಗೆ ಹೋದ ಕೃಷ್ಣನಿಗೆ ಸಿಕ್ಕಿದ್ದು ಒಂದು ಲೋಟ ಹಾಲು ಮಾತ್ರ.
ಈ ಪ್ರಸಂಗವನ್ನು ಪುರಂದರ ದಾಸರು ತಮ್ಮ 'ವಿದುರನ ಭಾಗ್ಯವಿದು' ಕೀರ್ತನೆಯಲ್ಲಿ, 'ನೀಟಾದವರ ಮನೆಗಳ ಜರಿದು | ಕುಟೀರದಲಿ ಬಂದು ಕುಳಿತ ಹರಿ' ಎಂದು ವಿವರಿಸುತ್ತಾರೆ. ಭೀಷ್ಮಾಚಾರ್ಯರು ಕುರುವಂಶದ ಪಿತಾಮಹರಾದರೂ, ದ್ರೋಣಾಚಾರ್ಯರು ಕೌರವರಿಗೆ ಪಾಠ ಹೇಳಿದ ಗುರುಗಳಾದರೂ ಈ ನೇರವಂತಿಕೆ ಬೆಳೆಸಿಕೊಳ್ಳಲಿಲ್ಲ. ತಪ್ಪನ್ನು ತಪ್ಪು ಎಂದು ಖಂಡಿಸುವ, ತಿದ್ದುವ ಗಟ್ಟಿ ಪ್ರಯತ್ನ ಮಾಡಲಿಲ್ಲ. ಇದಕ್ಕೆ ಅಡ್ಡಿಯಾದದ್ದು ತಾವು ಕೌರವರ ಮನೆಯಲ್ಲಿ ಉಂಡಿದ್ದೇವೆ ಎಂಬ ಹಂಗು. ಅದಕ್ಕೇ ಯಾರಿಂದಲಾದರೂ ಉಪಕಾರ ಪಡೆಯುವ ಮೊದಲು, ಮತ್ತೊಬ್ಬರ ಮನೆಯಲ್ಲಿ ಊಟ ಮಾಡುವ ಮೊದಲು ಹತ್ತು ಸಲ ಯೋಚಿಸಬೇಕೆಂದು ತಿಳಿದವರು ಕಿವಿಮಾತು ಹೇಳುತ್ತಾರೆ.
ನಮಗೆ ಊಟ ಕೊಟ್ಟವರು ಯೋಗ್ಯರಾಗಿದ್ದರೆ ಅವರ ಪುಣ್ಯ ಪ್ರಭಾವದಿಂದ ನಾವು ಯೋಗ್ಯ ಹಾದಿಯಲ್ಲಿಯೇ ಮುನ್ನಡೆಯುತ್ತೇವೆ. ಒಂದು ವೇಳೆ ನಮಗೆ ಊಟ ಕೊಟ್ಟವರು ಸ್ವಾರ್ಥಿಗಳಾಗಿದ್ದರೆ, ನಮಗೆ ಊಟ ಕೊಟ್ಟಿದ್ದನ್ನೇ ಅವರು ಮುಂದೆ ಎತ್ತಿ ಆಡುತ್ತಾರೆ. ಅದನ್ನೇ ದೊಡ್ಡದು ಮಾಡಿಕೊಂಡು ತಮಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಾರೆ. ದುರ್ಯೋಧನ ಇಂಥ ಸ್ವಾರ್ಥಿ ಎನ್ನುವುದನ್ನು ಕಂಡುಕೊಂಡಿದ್ದ ಶ್ರೀಕೃಷ್ಣ ಹೀಗಾಗಿಯೇ ಅವನ ಮನೆಯ ಊಟ ನಿರಾಕರಿಸಿ, ಯೋಗ್ಯನಾದ ವಿದುರನ ಮನೆಗೆ ಬಂದು ಹಾಲು ಕುಡಿದ. ಐಶ್ವರ್ಯದಲ್ಲಿ, ಹಣದಲ್ಲಿ ಸಿರಿವಂತನಾಗಿರುವುದಕ್ಕಿಂತಲೂ ಗುಣದಲ್ಲಿ ಯೋಗ್ಯರಾಗಿರುವುದು ಬಹಳ ಮುಖ್ಯ ಎಂದು ಶ್ರೀಹರಿ ತನ್ನ ವರ್ತನೆಯಿಂದಲೇ ಎಲ್ಲರಿಗೂ ತಿಳಿಸಿಕೊಟ್ಟ.
ಹೀಗೆ ಮಹಾಭಾರತದ ಪ್ರತಿ ಪ್ರಸಂಗವೂ ನಮಗೆ ಸಾಕಷ್ಟು ಪಾಠಗಳನ್ನು ಹೇಳುತ್ತದೆ. ಮುಂದಿನ ದಿನಗಳಲ್ಲಿ ಇಂಥ ಹಲವು ಕಥೆಗಳನ್ನು ಪ್ರಸ್ತುತಪಡಿಸಲಾಗುವುದು.
