ಪ್ರಯಾಗ್‌ರಾಜ್‌ನಲ್ಲಿ ಇಂದಿನಿಂದ ಮಹಾಕುಂಭ ಮೇಳ ಆರಂಭ: ವಿಶ್ವದ ಅತಿ ದೊಡ್ಡ ಆಧ್ಯಾತ್ಮಿಕ ಸಭೆಯ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳಿವು
Mahakumbh Mela 2025: ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ಇಂದಿನಿಂದ ಆರಂಭವಾಗಿದೆ. ಗುರುವು ಕುಂಭ ರಾಶಿಗೆ ಚಲಿಸಿದಾಗ ಮತ್ತು ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಶುಭ ಮಹೂರ್ತದಲ್ಲಿ ಕುಂಭ ಮೇಳವನ್ನು ಆಚರಿಸಲಾಗುತ್ತದೆ. ಈ ಈ ಆಧ್ಯಾತ್ಮಿಕ ಸಭೆಯ ಬಗ್ಗೆ ತಿಳಿದುಕೊಳ್ಳಬೇಕಾದ ಆಸಕ್ತಿಕರ ವಿಚಾರಗಳಿವು

ಪ್ರಯಾಗ್‌ರಾಜ್‌ನಲ್ಲಿ ಇಂದಿನಿಂದ (ಜ 13) ಆರಂಭವಾಗಿರುವ ಮಹಾಕುಂಭಮೇಳದಲ್ಲಿ ಭಾಗವಹಿಸಿರುವ ಭಕ್ತ ಸಮೂಹ (PC: @MIB_India)
ಮಹಾಕುಂಭಮೇಳವು ವಿಶ್ವದಲ್ಲೇ ಅತಿ ದೊಡ್ಡ ಆಧ್ಯಾತ್ಮಿಕ ಸಭೆಯಾಗಿದೆ. ಇಂದಿನಿಂದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಕುಂಭಮೇಳದಲ್ಲಿ 4 ವಿಧಗಳಿವೆ. ಮಾಘ ಕುಂಭಮೇಳ ಪ್ರತಿ ವರ್ಷ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿದೆ. 4 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯುತ್ತದೆ. 6 ವರ್ಷಗಳಿಗೆ ಅರ್ಧ ಕುಂಭ ಮೇಳ, ಪೂರ್ಣ ಕುಂಭ ಮೇಳ 12 ವರ್ಷಗಳಿಗೊಮ್ಮೆ ಹಾಗೂ ಮಹಾಕುಂಭ ಮೇಳ 144 ವರ್ಷಗಳ ನಂತರ ಅಂದರೆ 12 ಪೂರ್ಣ ಕುಂಭಮೇಳಗಳ ನಂತರ ಬರುತ್ತದೆ.
ಕುಂಭಮೇಳದ ಬಗ್ಗೆ ತಿಳಿದುಕೊಳ್ಳಬೇಕಾದ ಆಸಕ್ತಿಕರ ವಿಚಾರಗಳು ಹೀಗಿವೆ
- ಮಹಾಕುಂಭ ಮೇಳವು ವಿಶ್ವದಲ್ಲೇ ಅತಿ ಹೆಚ್ಚು ಜನರು ಸೇರುವ ಅತಿದೊಡ್ಡ ಆಧ್ಯಾತ್ಮಿಕ ಸಭೆ ಎನಿಸಿಕೊಂಡಿದೆ. ಈ ಜಾತ್ರೆಯಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಜನರು ಸೇರುತ್ತಾರೆ. ಭಾರತದ ಭಕ್ತರು ಮಾತ್ರವಲ್ಲದೆ ವಿದೇಶದಿಂದಲೂ ಕೂಡಾ ಆಗಮಿಸಿ ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತಿ ನದಿಗಳ ಪವಿತ್ರ ತ್ರಿವೇಣಿ ಸಂಗಮದಲ್ಲಿ ಮಿಂದು ಹೋಗುತ್ತಾರೆ.
- ಕುಂಭಮೇಳಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ಇದರ ಉಲ್ಲೇಖವಿದೆ. ಇದು ಸಮುದ್ರ ಮಂಥನದ ಸಮಯದಲ್ಲಿ ಅಮರತ್ವದ ಅಮೃತದ ಹನಿಗಳು ಪ್ರಯಾಗ್‌ರಾಜ್, ಹರಿದ್ವಾರ, ನಾಸಿಕ್ ಮತ್ತು ಉಜ್ಜಯಿನಿಯಲ್ಲಿ ಬಿದ್ದಿದ್ದರಿಂದ ವಿವಿದ ಕುಂಭಮೇಳಗಳನ್ನು ಈ ಸ್ಥಳದಲ್ಲಿ ನಡೆಸಲಾಗುತ್ತದೆ.
ಇದನ್ನೂ ಓದಿ: ನದಿಯಲ್ಲಿ ಡ್ರೋಣ್, ಎಐ ಕ್ಯಾಮರಾಗಳ ಕಣ್ಗಾವಲಿನಲ್ಲಿ ಮಹಾಕುಂಭ ಮೇಳ ಶುರು, 45 ಕೋಟಿ ಭಕ್ತರು ಭಾಗಿಯಾಗಿರುವ ನಿರೀಕ್ಷೆ
- ಮಹಾಕುಂಭ ಮೇಳದ ಸಮಯದಲ್ಲಿ ಮೂವರು ಪವಿತ್ರ ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರೆ ಪಾಪಗಳು ನಿವಾರಣೆಯಾಗಿ ಮೋಕ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ನಂಬಿಕೆ ಮನೆ ಮಾಡಿದೆ.
- ಮಹಾ ಕುಂಭಮೇಳದ ಸಮಯವನ್ನು ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಗುರುವು ಕುಂಭ ರಾಶಿಗೆ ಚಲಿಸಿದಾಗ ಮತ್ತು ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಶುಭ ಮಹೂರ್ತದಲ್ಲಿ ಕುಂಭ ಮೇಳವನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಸಮಯವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ.
- ಈ ಮೇಳವು ನಾಗಾ ಸಾಧುಗಳು, ಅಘೋರಿಗಳು, ಸಂತರು, ವೈಷ್ಣವರು, ಶೈವರು ಸೇರಿದಂತೆ ವೈವಿಧ್ಯಮಯ ಆಧ್ಯಾತ್ಮಿಕ ಆಚರಣೆಗಳು ಮತ್ತು ಪಂಥಗಳನ್ನು ಒಟ್ಟುಗೂಡಿಸುತ್ತದೆ.
- ಕುಂಭಮೇಳ ನಡೆಯುವ ಸಮಯದಲ್ಲಿ ಪ್ರಯಾಗ್‌ರಾಜ್ ತಾತ್ಕಾಲಿಕ ವಿಸ್ತಾರವಾದ ಮಹಾನಗರವಾಗಿ ರೂಪಾಂತರಗೊಳ್ಳುತ್ತದೆ. ಇಲ್ಲಿ ಕೋಟ್ಯಂತರ ಭಕ್ತರು ಭಾಗವಹಿಸಲಿದ್ದು ವೈದ್ಯಕೀಯ ಸೇವೆಗಳು ಮತ್ತು ಭದ್ರತೆ ಸೇರಿದಂತೆ ರಾಜ್ಯ ಸರ್ಕಾರವು ಮೂಲಭೂತ ಸೌಕರ್ಯಗಳನ್ನು ನೀಡುತ್ತದೆ.
ಇದನ್ನೂ ಓದಿ: ಶನಿ ದೋಷವನ್ನು ನಿವಾರಿಸಲು ಶನಿ ತ್ರಯೋದಶಿ ಪೂಜೆ ಮತ್ತು ವ್ರತಾಚರಣೆ ನಡೆಸುವುದು ಹೇಗೆ, ಇಲ್ಲಿದೆ ವಿವರ
- ಧಾರ್ಮಿಕ ಮಹತ್ವವನ್ನೂ ಮೀರಿ, ಮಹಾ ಕುಂಭಮೇಳವು ಒಂದು ಸಾಂಸ್ಕೃತಿಕ ಆಚರಣೆಯಾಗಿದೆ. ಕುಂಭಮೇಳದ ಸಮಯದಲ್ಲಿ ಭಕ್ತರು ವರ್ಣರಂಜಿತ ಮೆರವಣಿಗೆಗಳು, ಸಾಂಪ್ರದಾಯಿಕ ಸಂಗೀತ, ನೃತ್ಯ ಪ್ರದರ್ಶನಗಳು ಮತ್ತು ಆಧ್ಯಾತ್ಮಿಕ ಪ್ರವಚನಗಳಿಗೆ ಸಾಕ್ಷಿಯಾಗಬಹುದು, ಇದು ಸಮಗ್ರ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಅನುಭವವನ್ನು ನೀಡುತ್ತದೆ.
- ಇತ್ತೀಚಿನ ವರ್ಷಗಳಲ್ಲಿ, ಕುಂಭಮೇಳವು ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ನಿಷೇಧ ಮತ್ತು ಸುಸ್ಥಿರ ಪ್ರವಾಸೋದ್ಯಮದ ಪ್ರಚಾರದಂತಹ ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಂಡಿದೆ. ಈ ವರ್ಷದ ಕುಂಭಮೇಳದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
- ಕುಂಭಮೇಳವನ್ನು ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಮನ್ನಣೆಯು ಅದರ ಜಾಗತಿಕ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಎತ್ತಿ ತೋರಿಸುತ್ತದೆ.
- ಮಹಾ ಕುಂಭಮೇಳದಲ್ಲಿ ಹಿಂದೂ ಭಕ್ತರು ಮಾತ್ರವಲ್ಲದೆ ವಿವಿಧ ಧರ್ಮಗಳ ಭಕ್ತರು ಭಾಗವಹಿಸುತ್ತಾರೆ. ವಿದೇಶಿ ಪ್ರವಾಸಿಗರು ಮತ್ತು ಆಧ್ಯಾತ್ಮದ ಬಗ್ಗೆ ಆಸಕ್ತಿ ಇರುವವರು ಮಹಾಕುಂಭಮೇಳದಂಥ ಪವಿತ್ರ ಕಾರ್ಯಕ್ರಮದ ವಿಶಿಷ್ಟ ಶಕ್ತಿಯನ್ನು ಅನುಭವಿಸಲು ಬರುತ್ತಾರೆ.
ಸಾಧ್ಯವಾದರೆ ನೀವು ಮಹಾಕುಂಭಮೇಳಕ್ಕೆ ಹೋಗಿ ಬನ್ನಿ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.