ಪಿತೃಪಕ್ಷ ಆರಂಭ: ಸತ್ತ ನಂತರ ಅದ್ಧೂರಿ ಪಿತೃಪಕ್ಷ ಆಚರಿಸುವ ಬದಲು ಬದುಕಿದ್ದಾಗ ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯ, ಏಕೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪಿತೃಪಕ್ಷ ಆರಂಭ: ಸತ್ತ ನಂತರ ಅದ್ಧೂರಿ ಪಿತೃಪಕ್ಷ ಆಚರಿಸುವ ಬದಲು ಬದುಕಿದ್ದಾಗ ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯ, ಏಕೆ?

ಪಿತೃಪಕ್ಷ ಆರಂಭ: ಸತ್ತ ನಂತರ ಅದ್ಧೂರಿ ಪಿತೃಪಕ್ಷ ಆಚರಿಸುವ ಬದಲು ಬದುಕಿದ್ದಾಗ ಚೆನ್ನಾಗಿ ನೋಡಿಕೊಳ್ಳುವುದು ಮುಖ್ಯ, ಏಕೆ?

Pitru Paksha 2023: ಗತಿಸಿದ ಹಿರಿಯರನ್ನು ಸ್ಮರಿಸುವ ಪಿತೃಪಕ್ಷ ಆರಂಭವಾಗಿದೆ. ಅವರಿಷ್ಟದ ಭಕ್ಷ್ಯಭೋಜನ ಮತ್ತು ಇಷ್ಟದ ವಸ್ತುಗಳ ಎಡೆ ಇಟ್ಟು ಪೂಜೆ ಮಾಡಲಾಗುತ್ತದೆ. ಅವರು ಮೃತಪಟ್ಟ ನಂತರ ಅದ್ದೂರಿಯಾಗಿ ಪಿತೃಪಕ್ಷ ಆಚರಿಸುವ ಬದಲು ಬದುಕಿದ್ದಾಗ ಅವರನ್ನು ಸರಳವಾಗಿಯಾದರೂ ನೋಡಿಕೊಳ್ಳುವುದು ಮುಖ್ಯ. ಏಕೆ ಎಂದು ತಿಳಿಯಲು ಈ ಲೇಖನ ಓದಿ. ವರದಿ: ಎಚ್ ಮಾರುತಿ.

ಪಿತೃಪಕ್ಷ ಆರಂಭ.
ಪಿತೃಪಕ್ಷ ಆರಂಭ. (ಸಾಂದರ್ಭಿಕ ಚಿತ್ರ)

ಪಿತೃಪಕ್ಷವನ್ನು (Pitru Paksha 2023) ಮಹಾಲಯ ಅಮಾವಾಸ್ಯೆಗೆ (Mahalaya Amavasya 2023) ಮೊದಲ 15 ದಿನಗಳಲ್ಲಿ ಮಾಡಿದರ ಶ್ರೇಷ್ಠ ಎಂದು ಹೇಳುತ್ತಾರೆ. ಇಡೀ ಊರಿಗೇ ಊರೇ ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಇದೂ ಒಂದು. ಇತ್ತಿಚಿನ ವರ್ಷಗಳಲ್ಲಿ ಹಬ್ಬ ಹರಿದಿನಗಳಿಗೆ ಒಟ್ಟಿಗೆ ಸೇರುವುದು ಅಪರೂಪ. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಹಬ್ಬಗಳನ್ನು ಆಚರಿಸಿಕೊಳ್ಳುತ್ತಾರೆ. ಆದರೆ ಈ ಹಬ್ಬವನ್ನು ಎಲ್ಲರೂ ಪ್ರತ್ಯೇಕವಾಗಿ ಆಚರಿಸಿಕೊಳ್ಳುವಂತಿಲ್ಲ. ಕುಟುಂಬದ ಹಿರಿಯರ ಮನೆಯಲ್ಲಿ ಆಚರಿಸುವ ಪಿತೃಪಕ್ಷಕ್ಕೆ ಉಳಿದ ಎಲ್ಲರೂ ಆಗಮಿಸುವುದು ವಾಡಿಕೆ. ಎಲ್ಲರನ್ನೂ ಒಂದು ಕಡೆ ಸೇರಿಸುವ ತಾಕತ್ತು ಈ ಹಬ್ಬಕ್ಕಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಕುಟುಂಬದ ಮೃತ ಹಿರಿಯರನ್ನು ಗೌರವಯುತವಾಗಿ ನೆನಪಿಸಿಕೊಳ್ಳುವ ದಿನ ಇದು.

ಪ್ರತಿ ದಿನವೂ ನಮ್ಮ ಹಿರಿಯರನ್ನು ನೆನಪು ಮಾಡಿಕೊಳ್ಳದೆ ಇರುವುದಿಲ್ಲ. ಆದರೆ ಈ ದಿನಕ್ಕೂ ಪ್ರತಿದಿನಕ್ಕೂ ವ್ಯತ್ಯಾಸವಿದೆ. ಗತಿಸಿದವರ ಕಷ್ಟ ಸುಖಗಳು ನೆನಪಿಗೆ ಬರುತ್ತವೆ. ಅವರ ಊಟ, ತಿಂಡಿ, ಹವ್ಯಾಸ, ಜಗಳ, ಪ್ರೀತಿ ಎಲ್ಲವೂ ನಮ್ಮ ಸ್ಮೃತಿಪಟಲದಲ್ಲಿ ಹಾದು ಹೋಗುತ್ತವೆ. ಈ ಹಬ್ಬದಲ್ಲಿ ಸಾಮಾನ್ಯವಾಗಿ ಗಂಡಸಿಗೆ ಚೊಂಬು ಮತ್ತು ಹೆಂಗಸಿಗೆ ಕಳಸವನ್ನಿಟ್ಟು ಪೂಜಿಸಲಾಗುತ್ತದೆ. ಪಂಚೆ, ಟವಲ್, ಸೀರೆ ಮತ್ತು ರವಿಕೆಯನ್ನು ತೊಡಿಸಿ, ಚಿನ್ನದ ಸರಗಳನ್ನು ಹಾಕಿ ಗೌರವಿಸಲಾಗುತ್ತದೆ. ಅವರು ಇಷ್ಟಪಡುತ್ತಿದ್ದ ಊಟ ತಿಂಡಿ, ಇಷ್ಟದ ಬೀಡಿ, ಸಿಗರೇಟು, ಬೆಂಕಿ ಪೊಟ್ಟಣ, ವಾಚು, ಮದ್ಯದ ಬಾಟಲ್.. ಹೀಗೆ ಮೃತರು ಬಯಸುತ್ತಿದ್ದ ಎಲ್ಲ ವಸ್ತುಗಳನ್ನೂ ಎಡೆ ಇಡುವುದು ವಾಡಿಕೆ.

ಬೇಕು ಒಂದಿಷ್ಟು ಪ್ರೀತಿಯ ಮಾತುಗಳು

ಇದನ್ನೆಲ್ಲಾ ಏಕೆ ಹೇಳಲು ಕಾರಣವಿದೆ. ಅವರು ನಮ್ಮ ಜತೆ ಇಲ್ಲದೆ ಇದ್ದಾಗ ಅವರ ಬಗ್ಗೆ ಅಕ್ಕರೆ, ಮಮಕಾರ ಪ್ರೀತಿ ತೋರಿಸುತ್ತೇವೆ. ಅಯ್ಯೋ ಅವರು ಇದನ್ನೆಲ್ಲಾ ಇಷ್ಟಪಡುತ್ತಿದ್ದರು. ಅದಕ್ಕೇ ಈ ಭಕ್ಷ್ಯ ಭೋಜನಗಳನ್ನು ಮಾಡಿದ್ದೇವೆ ಎಂದು ಹೇಳುತ್ತೇವೆ. ಅವರು ನಮ್ಮೊಂದಿಗೆ ಇದ್ದಾಗ ಒಂದು ಹೊಸ ಅರಿವೆ ಕೊಡಿಸಿದ್ದು, ಒಂದು ತುಣುಕು ಬಂಗಾರವನ್ನು ಅವರಿಗೆ ತೊಡಿಸಿದ್ದು ಅವರಿಗೆ ಇಷ್ಟವಾದ ಹೋಳಿಗೆ, ಕಜ್ಜಾಯ ಕಡುಬು ಮಾಡಿ ಬಡಿಸಿದ್ದೇವೆಯೆ ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ಮಕ್ಕಳು ದುಡಿಯುವ ಹೊತ್ತಿಗೆ ಹೆತ್ತವರಿಗೆ ವಯಸ್ಸು ಮಾಗಿರುತ್ತದೆ. ಆ ವಯಸ್ಸಿನಲ್ಲಿ ಅವರು ಹೆಚ್ಚೆಂದರೆ ಎರಡು ಹೊತ್ತಿನ ಊಟ ಅವರ ಪ್ರಮುಖ ಬೇಡಿಕೆಯಾಗಿರುತ್ತದೆ. ಜತೆಗೆ ಒಂದಿಷ್ಟು ಪ್ರೀತಿಯ ಮಾತುಗಳು.

ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂಬ ಕೊರಗು ಬೇಡ

ಇದನ್ನೆಲ್ಲಾ ನಾವು ಅವರು ಬದುಕಿದ್ದಾಗಲೇ ತೋರಿಸಿದರೆ ಎಷ್ಟು ಚೆಂದ ಅಲ್ಲವೇ? ಕೊನೆಯ ದಿನಗಳನ್ನು ಅವರೂ ನೆಮ್ಮದಿಯಾಗಿ ಕಳೆಯಬಹುದು. ಅವರು ಬದುಕಿರುವವರೆಗೆ ಚೆನ್ನಾಗಿ ನೋಡಿಕೊಂಡ ತೃಪ್ತಿಯೂ ನಮ್ಮದಾಗುತ್ತದೆ. ಎಡೆಯನ್ನಿಟ್ಟು ಅವರು ಬದುಕಿದ್ದಾಗ ಇದನ್ನೆಲ್ಲಾ ಅವರಿಗೆ ಉಣಬಡಿಸಲಿಲ್ಲ, ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂದು ಕೊರಗುವ ಮಕ್ಕಳನ್ನು ನಾವು ಕಂಡಿದ್ದೇವೆ. ನೀವು ಈ ತಪ್ಪು ಮಾಡಬೇಡಿ ಎಂದು ಅನೇಕ ಹಿರಿಯರು ನಮಗೆ ಬುದ್ದಿವಾದ ಹೇಳಿರುವ ಪ್ರಸಂಗಗಳೂ ಉಂಟು. ನಿಜ! ವಯಸ್ಸಾದವರು ನಮ್ಮ ಹಾಗೆ ಇರಲು ಅಸಾಧ್ಯ. ಒಂದು ಜನಾಂಗದ ಅಂತರ ಅಲ್ಲಿರುತ್ತದೆ. ಅವರನ್ನು ಬದಲಾಯಿಸಲು ಸಾಧ್ಯವಿಲ್ಲ. ಅವರು ಬದಲಾಗುವುದೂ ಇಲ್ಲ. ಅವರಿಷ್ಟದಂತೆ ಅವರನ್ನು ಬಿಡಬೇಕು. ಸಾಧ್ಯವಾದಷ್ಟೂ ಅವರಿಗೆ ನಾವು ಹೊಂದಿಕೊಳ್ಳಬೇಕು. ಅವರನ್ನು ಮಕ್ಕಳು ಎಂದು ಭಾವಿಸಿ. ಬೆಟ್ಟದಂತೆ ಎರಗಿ ಮಂಜಿನಂತೆ ಎಲ್ಲ ಸಮಸ್ಯೆಗಳೂ ಕರಗಿಹೋಗುತ್ತದೆ.

ಇಂತಹ ತಪ್ಪು ಮತ್ತೆ ಮಾಡುವುದು ಬೇಡ

ಹೆತ್ತವರು ಎಲ್ಲ ಮಕ್ಕಳನ್ನು ಸಮಾನವಾಗಿ ಕಾಣುತ್ತಾರೆ. ಎಲ್ಲರಿಗೂ ಪ್ರೀತಿ ಹಂಚುತ್ತಾರೆ. ಆದರೆ ಮಕ್ಕಳು ಇದೇ ಹಾದಿಯಲ್ಲಿ ನಡೆಯುವುದಿಲ್ಲ. ನನಗೆ ತಿಳಿದಿರುವ ಅದೆಷ್ಟೋ ಸರಕಾರಿ ನೌಕರರು, ಸುಶಿಕ್ಷಿತರು ಅಪ್ಪ ಅಮ್ಮನನ್ನು ಸಾಕಲು ಹಂಚಿಕೊಳ್ಳುತ್ತಾರೆ. ಅಪ್ಪನನ್ನು ಒಬ್ಬ ಮಗ ಅಮ್ಮನನ್ನು ಒಬ್ಬ ಮಗ ನೋಡಿಕೊಳ್ಳುವುದಂತೆ. ಒಬ್ಬರು ಮೃತಪಟ್ಟಾಗ ಮತ್ತೊಬ್ಬರನ್ನು ಆರು ತಿಂಗಳು ಹಿರಿಯ ಮಗ ಇನ್ನಾರು ತಿಂಗಳು ಕಿರಿಯ ಮಗ ನೋಡಿಕೊಳ್ಳುವಂತೆ ನ್ಯಾಯ ಪಂಚಾಯಿತಿ ಮಾಡಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಹೀಗೆ ಹಂಚಿಕೊಂಡ ಮಕ್ಕಳನ್ನು ಅವರ ಮಕ್ಕಳು ಏನು ಮಾಡಬಹುದು ಊಹಿಸಿಕೊಳ್ಳಿ. ಇಂತಹ ತಪ್ಪನ್ನು ನಾವ್ಯಾರೂ ಮಾಡುವುದು ಬೇಡ.

ಬದುಕಿದ್ದಾಗ ಚೆನ್ನಾಗಿ ನೋಡಿಕೊಳ್ಳಿ

ನಾವು ನಮ್ಮ ಮಕ್ಕಳಿಗೆ ಪಡುವ ಕಷ್ಟಕ್ಕಿಂತ ಅವರು ನಮಗಾಗಿ ಪಡುತ್ತಿದ್ದ ಕಷ್ಟ ನೂರು ಪಟ್ಟು ದೊಡ್ಡದು ಎನ್ನುವುದನ್ನು ಮರೆಯಬಾರದು. ಸತ್ತಾಗ ಪಿತೃಪಕ್ಷವನ್ನು ಹೇಗೆ ಮಾಡುತ್ತೀರಿ ಎನ್ನುವುದು ಮುಖ್ಯವಲ್ಲ. ಏನೆಲ್ಲಾ ಎಡೆಯನ್ನಿಟ್ಟರೂ ಅವರ ಹೆಸರಿನಲ್ಲಿ ಊಟ ಮಾಡುವವರು ನಾವೇ. ನಿಮ್ಮ ಹಿರಿಯರು ಬದುಕಿದ್ದಾಗ ಅವರನ್ನು ಹೇಗೆ ನೋಡಿಕೊಂಡಿದ್ದೀರಿ ಎನ್ನುವುದಷ್ಟೇ ಉಳಿದುಕೊಳ್ಳುತ್ತದೆ. ಅವರು ಮೃತಪಟ್ಟ ನಂತರ ಅದ್ದೂರಿಯಾಗಿ ಪಿತೃಪಕ್ಷ ಆಚರಿಸುವ ಬದಲು ಬದುಕಿದ್ದಾಗ ಅವರನ್ನು ಸರಳವಾಗಿಯಾದರೂ ನೋಡಿಕೊಳ್ಳಿ. ಹೆಣ ಶೃಂಗಾರ ಅರಿಯದು ಎನ್ನುವುದನ್ನು ಮರೆಯಬೇಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.