ಮಹಾಲಯ ಅಮಾವಾಸ್ಯೆ ದಿನವೇ ಸೂರ್ಯ ಗ್ರಹಣ ಇರುವ ಕಾರಣ ಶ್ರಾದ್ಧ ಕರ್ಮ ಮಾಡಬಹುದಾ, ತೊಂದರೆ ಏನೂ ಇಲ್ವಾ-mahalaya amavasya and the solar eclipse should you perform shraddha karma on sarvapitr amavasya uks ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಲಯ ಅಮಾವಾಸ್ಯೆ ದಿನವೇ ಸೂರ್ಯ ಗ್ರಹಣ ಇರುವ ಕಾರಣ ಶ್ರಾದ್ಧ ಕರ್ಮ ಮಾಡಬಹುದಾ, ತೊಂದರೆ ಏನೂ ಇಲ್ವಾ

ಮಹಾಲಯ ಅಮಾವಾಸ್ಯೆ ದಿನವೇ ಸೂರ್ಯ ಗ್ರಹಣ ಇರುವ ಕಾರಣ ಶ್ರಾದ್ಧ ಕರ್ಮ ಮಾಡಬಹುದಾ, ತೊಂದರೆ ಏನೂ ಇಲ್ವಾ

ಮಹಾಲಯ ಅಮಾವಾಸ್ಯೆ ದಿನವೇ ಈ ಬಾರಿ ಸೂರ್ಯಗ್ರಹಣ ನಡೆಯುತ್ತಿದೆ. ಹೀಗಾಗಿ ಹಲವು ಗೊಂದಲ, ಸಂದೇಹಗಳು ಸಹಜವಾಗಿಯೇ ಆಗಿರುವಂಥದ್ದು. ವಿಶೇಷವಾಗಿ ಸೂತಕ ಕಾಲ ಇದೆಯೋ ಇಲ್ವೋ, ಮಹಾಲಯ ಅಮಾವಾಸ್ಯೆ ದಿನವೇ ಸೂರ್ಯ ಗ್ರಹಣ ಇರುವ ಕಾರಣ ಶ್ರಾದ್ಧ ಕರ್ಮ ಮಾಡಬಹುದಾ, ತೊಂದರೆ ಏನೂ ಇಲ್ವಾ ಹೀಗೆ ಪ್ರಶ್ನೆಗಳಿವೆ. ಲಭ್ಯ ಮಾಹಿತಿ ಆಧರಿಸಿದ ವಿವರ ಇಲ್ಲಿದೆ.

ಮಹಾಲಯ ಅಮಾವಾಸ್ಯೆ ದಿನವೇ ಸೂರ್ಯ ಗ್ರಹಣ ಇರುವ ಕಾರಣ ಶ್ರಾದ್ಧ ಕರ್ಮ ಮಾಡಬಹುದಾ ಎಂಬ ವಿವರ. (ಸಾಂಕೇತಿಕ ಚಿತ್ರ)
ಮಹಾಲಯ ಅಮಾವಾಸ್ಯೆ ದಿನವೇ ಸೂರ್ಯ ಗ್ರಹಣ ಇರುವ ಕಾರಣ ಶ್ರಾದ್ಧ ಕರ್ಮ ಮಾಡಬಹುದಾ ಎಂಬ ವಿವರ. (ಸಾಂಕೇತಿಕ ಚಿತ್ರ) (Pexels / SM)

ಪಿತೃ ಪಕ್ಷ ಮುಕ್ತಾಯದಲ್ಲಿ ಅಂದರೆ ಮಹಾಲಯ ಅಮಾವಾಸ್ಯೆ ದಿನವೇ ಈ ಬಾರಿ ಸೂರ್ಯ ಗ್ರಹಣ ಬಂದಿದೆ. ಅಕ್ಟೋಬರ್ 2 ರಂದು ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಮಹಾಲಯ ಅಮಾವಾಸ್ಯೆ ಎಂದರೆ ಸರ್ವಪಿತೃ ಅಮಾವಾಸ್ಯೆ. ಅದೇ ದಿನ ಸೂರ್ಯ ಗ್ರಹಣವೂ ನಡೆಯುತ್ತಿರುವ ಕಾರಣ ಪಿತೃದೇವತಾರಾಧನೆ, ಪಿಂಡ ಕಾರ್ಯ, ಶ್ರಾದ್ಧ ಕರ್ಮಗಳನ್ನು ಮಾಡಬಹುದಾ ಎಂಬ ಸಂದೇಹ ಸಾಮಾನ್ಯ. ಸೂರ್ಯ ಗ್ರಹಣದ ಅವಧಿಯಲ್ಲಿ ಆಚರಿಸಬೇಕಾದ ಮತ್ತು ಆಚರಿಸಬಾರದ ಕೆಲವು ಆಚರಣೆಗಳಿವೆ. ಅವು ಈ ಸಲ ಅನ್ವಯ ಆಗೋದಿಲ್ವ. ಹೀಗೆ ಹಲವು ಪ್ರಶ್ನೆಗಳು ಕಾಡುವುದು ಸಹಜ. ಇರಲಿ ಸೂರ್ಯಗ್ರಹಣದ ವಿಚಾರ ಅರ್ಥ ಮಾಡಿಕೊಳ್ಳೋಣ ಮೊದಲು. ಈ ಹಿಂದೆ ಅಂದರೆ ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 8 ರಂದು ನಡೆಯಿತು. ಈ ವರ್ಷದ ಎರಡನೇಯದ್ದು ಮತ್ತು ಕೊನೆಯ ಸೂರ್ಯ ಗ್ರಹಣ ಅಕ್ಟೋಬರ್ 2 ರಂದು ನಡೆಯಲಿದೆ. ಸರ್ವಪಿತೃ ಅಮಾವಾಸ್ಯೆ ದಿನ ನಡೆಯುವ ಈ ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸುತ್ತದೆಯೇ, ಗೋಚರಿಸುವುದೇ ಆದರೆ ಎಷ್ಟು ಹೊತ್ತಿಗೆ ಎಂಬಿತ್ಯಾದಿ ವಿಷಯ ತಿಳಿಯೋಣ.

ಭಾರತದಲ್ಲಿ ಸೂರ್ಯ ಗ್ರಹಣ ಗೋಚರವಿಲ್ಲ, ಸೂತಕ ಕಾಲವೂ ಇಲ್ಲ

ಈ ಬಾರಿ ಪಿತೃ ಪಕ್ಷ ಅಮಾವಾಸ್ಯೆಯಂದು ಸಂಭವಿಸುವ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಈ ಗ್ರಹಣಕ್ಕೆ ಭಾರತದಲ್ಲಿ ಯಾವುದೇ ಮಹತ್ವವಿಲ್ಲ. ಈ ಬಾರಿ ಭಾಗಶಃ ಸೂರ್ಯಗ್ರಹಣ ನಡೆಯಲಿದೆ. ಇದು ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೋ, ಕೆನಡಾ ಮತ್ತು ಉತ್ತರ ಅಮೆರಿಕಾದ ಇತರ ಭಾಗಗಳು ಸೇರಿ ವಿವಿಧ ದೇಶಗಳಲ್ಲಿ ಕಂಡುಬರುತ್ತದೆ. ಆದ್ದರಿಂದ ಈ ಗ್ರಹಣವನ್ನು ಭಾರತದಲ್ಲಿ ಸೂತಕ ಕಾಲವೆಂದು ಪರಿಗಣಿಸಲಾಗುವುದಿಲ್ಲ. ಪೂಜೆಗೆ ಅಥವಾ ಶ್ರಾದ್ಧ ಕರ್ಮಗಳಿಗೆ ಸಂಬಂಧಿಸಿದಂತೆ ಯಾವುದೇ ನಿಯಮಗಳು ಅನ್ವಯವಾಗುವುದಿಲ್ಲ.

ಭಾರತೀಯ ಕಾಲಮಾನದ ಪ್ರಕಾರ, ವರ್ಷದ ಎರಡನೇ ಸೂರ್ಯಗ್ರಹಣವು ಅಕ್ಟೋಬರ್ 2 ರಂದು ರಾತ್ರಿ 09:13 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ನಸುಕಿನಲ್ಲಿ 03:17 ಕ್ಕೆ ಕೊನೆಗೊಳ್ಳುತ್ತದೆ. ಸೂರ್ಯಗ್ರಹಣದ ಸಮಯದಲ್ಲಿ ಭಾರತದಲ್ಲಿ ರಾತ್ರಿಯಾಗಿರುತ್ತದೆ.. ಈ ಸೂರ್ಯಗ್ರಹಣವು ಸುಮಾರು 6 ಗಂಟೆ 4 ನಿಮಿಷ ಕಾಲ ಇದ್ದರೂ ಭಾರತದಲ್ಲಿ ಗೋಚರಿಸದ ಕಾರಣ, ಸೂತಕ ಅವಧಿಯು ಮಾನ್ಯವಾಗಿಲ್ಲ. ಆದುದರಿಂದ ಇಂದು ಶ್ರಾದ್ಧ, ತರ್ಪಣ ಕಾರ್ಯಕ್ರಮಗಳನ್ನು ನಡೆಸಬಹುದು. ಅವರ ಮೇಲೆ ಯಾವುದೇ ಗ್ರಹಿಕೆಯ ಪರಿಣಾಮವಿಲ್ಲ.

ಭಾರತದಲ್ಲಿ ಕೊನೆಯ ಬಾರಿಗೆ ಸೂರ್ಯಗ್ರಹಣವನ್ನು 2019ರ ಡಿಸೆಂಬರ್ 26 ರಂದು ನೋಡಲಾಯಿತು. ಇದು 05:18:53 ಕ್ಕೆ ಪ್ರಾರಂಭವಾಯಿತು ಮತ್ತು ಮೂರು ನಿಮಿಷ ಮತ್ತು 39 ಸೆಕೆಂಡುಗಳ ಕಾಲ ಇತ್ತು. ಭಾರತವಲ್ಲದೆ ಏಷ್ಯಾ, ಆಸ್ಟ್ರೇಲಿಯಾ, ಸೌದಿ ಅರೇಬಿಯಾ, ಸುಮಾತ್ರಾ, ಬೊರ್ನಿಯೊಗಳಲ್ಲಿಯೂ ಈ ಗ್ರಹಣ ಗೋಚರಿಸಿತ್ತು. ಅಂದು ಸೂತಕ ಕಾಲ ಆಚರಿಸಲಾಗಿತ್ತು.

ಸರ್ವಪಿತೃಗಳಿಗೆ ಶ್ರಾದ್ಧಕರ್ಮ ನೆರವೇರಿಸುವುದಕ್ಕಿಲ್ಲ ಅಡ್ಡಿ

ಹಿಂದೂ ಪಂಚಾಂಗದ ಪ್ರಕಾರ ಅಕ್ಟೋಬರ್ 2 ರಂದು ಬರುವ ಭಾದ್ರಪದ ಅಮಾವಾಸ್ಯೆಯು ಪಿತೃಪಕ್ಷದ ಕೊನೆಯ ದಿನವಾಗಿದೆ. ಇದನ್ನು ಸರ್ವಪಿತೃ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಈ ಪಿತೃ ಪಕ್ಷದ 15 ದಿನಗಳಲ್ಲಿ ತಮ್ಮ ಪೂರ್ವಜರಿಗೆ ಶ್ರಾದ್ಧವನ್ನು ಮಾಡದವರು ಇಂದು ಮಾಡುತ್ತಾರೆ. ಅಮಾವಾಸ್ಯೆಯಂದು ಪಿತೃದೇವತೆಗಳಿಗೆ ಶ್ರಾದ್ಧ ಮತ್ತು ತರ್ಪಣವನ್ನು ಅರ್ಪಿಸುವುದರಿಂದ ಪಿತೃ ದೋಷಗಳು ದೂರವಾಗುತ್ತವೆ. ಸರ್ವ ಪಿತೃಗಳ ಆಶೀರ್ವಾದ ಪಡೆದು ಧನಕನಕಾದಿ ಸಂಪತ್ತು, ನೆಮ್ಮದಿ, ಸಂತತಿ, ಕುಲಾಭಿವೃದ್ಧಿಯನ್ನೂ ನಿರೀಕ್ಷಿಸಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.