ಮಹಾಲಯ ಅಮಾವಾಸ್ಯೆ; ಮಹಾಭಾರತದ ಕಥೆಯಲ್ಲೂ ಬಂದಿದೆ ಸರ್ವಪಿತೃ ಅಮಾವಾಸ್ಯೆಯ ವಿಚಾರ, ಏನಿದರ ಮಹತ್ವ-mahalaya amavasya was also mentioned in the story of mahabharata and its significance uks ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಲಯ ಅಮಾವಾಸ್ಯೆ; ಮಹಾಭಾರತದ ಕಥೆಯಲ್ಲೂ ಬಂದಿದೆ ಸರ್ವಪಿತೃ ಅಮಾವಾಸ್ಯೆಯ ವಿಚಾರ, ಏನಿದರ ಮಹತ್ವ

ಮಹಾಲಯ ಅಮಾವಾಸ್ಯೆ; ಮಹಾಭಾರತದ ಕಥೆಯಲ್ಲೂ ಬಂದಿದೆ ಸರ್ವಪಿತೃ ಅಮಾವಾಸ್ಯೆಯ ವಿಚಾರ, ಏನಿದರ ಮಹತ್ವ

ಪಿತೃದೇವತಾರಾಧನೆಗೆ ಬಹಳ ಮಹತ್ವ. ಮಹಾಭಾರತದಲ್ಲಿ ದಾನಶೂರ ಎಂದೇ ಜನಪ್ರಿಯನಾಗಿದ್ದ ಕರ್ಣನಿಗೂ ಸ್ವರ್ಗಕ್ಕೆ ಹೋಗುವಾಗ ಕಾಡಿತ್ತು ಬಹುದೊಡ್ಡ ಸಮಸ್ಯೆ. ಪರಿಹಾರಕ್ಕಾಗಿ ಮತ್ತೆ ಭೂಮಿಗೆ ಬಂದ ಕರ್ಣ ಮಾಡಿದ್ದು ಪಿತೃದೇವತಾರಾಧನೆ. ಹೌದು, ಮಹಾಲಯ ಅಮಾವಾಸ್ಯೆಯ ವಿಚಾರ ಮಹಾಭಾರತದ ಕಥೆಯಲ್ಲೂ ಬಂದಿದೆ. ಸರ್ವಪಿತೃ ಅಮಾವಾಸ್ಯೆಯ ಮಹತ್ವ ಹೀಗಿದೆ ನೋಡಿ.

ಮಹಾಭಾರತದ ಕಥೆಯಲ್ಲೂ ಬಂದಿದೆ ಸರ್ವಪಿತೃ ಅಮಾವಾಸ್ಯೆಯ ವಿಚಾರ, ಮಹಾಲಯ ಅಮಾವಾಸ್ಯೆಯ ಮಹತ್ವವೇನು ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ)
ಮಹಾಭಾರತದ ಕಥೆಯಲ್ಲೂ ಬಂದಿದೆ ಸರ್ವಪಿತೃ ಅಮಾವಾಸ್ಯೆಯ ವಿಚಾರ, ಮಹಾಲಯ ಅಮಾವಾಸ್ಯೆಯ ಮಹತ್ವವೇನು ಎಂಬ ವಿವರ ಇಲ್ಲಿದೆ. (ಸಾಂಕೇತಿಕ ಚಿತ್ರ) (HT Telugu)

ಮಹಾಲಯ ಅಮಾವಾಸ್ಯೆ (ಸರ್ವಪಿತೃ ಅಮಾವಾಸ್ಯೆ) ಈ ಬಾರಿ ಅಕ್ಟೋಬರ್ 2 ರಂದು ಇದೆ. ಮಹಾಲಯ ಅಮಾವಾಸ್ಯೆ ಎಂಬುದು ಪಿತೃ ಪಕ್ಷದ ಕೊನೆಯ ದಿನ. ಈ ಮಹಾಲಯ ಅಮಾವಾಸ್ಯೆ ಬಹಳ ವಿಶೇಷ. ಸಾಮಾನ್ಯವಾಗಿ ಪೂರ್ವಜರು ಮೃತಪಟ್ಟ ತಿಥಿ, ದಿನಗಳು ನೆನಪಿದ್ದರೆ ಅಂಥವರಿಗೆ ಆಯಾ ತಿಥಿಯಂದೇ ಶ್ರಾದ್ಧ ಕರ್ಮ ನೆರವೇರಿಸುತ್ತಾರೆ. ಆದರೆ, ಹಿಂದಿನ ಕಾಲದಲ್ಲಿ ಯಾರಾದರೂ ಮೃತಪಟ್ಟಿದ್ದು, ಅವರು ಯಾವ ತಿಥಿಯಲ್ಲಿ ಮೃತರಾದರು ಎಂದು ತಿಳಿಯದೇ ಇದ್ದರೆ ಅಥವಾ ಹಿಂದೆ ಪೂರ್ವಜರು ಮೃತಪಟ್ಟ ದಿನಾಂಕಗಳು, ತಿಥಿಗಳು ನೆನಪಿರದೇ ಇದ್ದರೆ ಅಂಥವರಿಗೆ ಮಹಾಲಯ ಅಮಾವಾಸ್ಯೆ ಅಥವಾ ಸರ್ವಪಿತೃ ಅಮಾವಾಸ್ಯೆ ದಿನ ಶ್ರಾದ್ಧ ಕರ್ಮ, ಪಿಂಡ, ತರ್ಪಣ ಬಿಡುವುದು ವಾಡಿಕೆ. ಈ ರೀತಿ ಮಾಡುವವರಿಗೆ ಸರ್ವಪಿತೃಗಳ ಆಶೀರ್ವಾದ ಇರುತ್ತದೆ. ಶುಭ ಫಲವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ. ಆದ್ದರಿಂದ ಪ್ರತಿಯೊಬ್ಬ ಮನುಷ್ಯನೂ ವರ್ಷದ ಪ್ರತಿ ಮಹಾಲಯ ಅಮಾವಾಸ್ಯೆಯಂದು ಅಗಲಿದ ಪಿತೃ ದೇವತೆಗಳಿಗೆ ತರ್ಪಣವನ್ನು ಅರ್ಪಿಸಬೇಕು ಎಂದು ಜ್ಯೋತಿಷಿ ಬ್ರಹ್ಮಶ್ರೀ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ ವಿವರಿಸುತ್ತಾರೆ.

ಮಹಾಭಾರತದ ಕಥೆಯಲ್ಲಿ ಕರ್ಣನ ಬದುಕಿನಲ್ಲಿ ಮಹಾಲಯ ಅಮಾವಾಸ್ಯೆ

ಮಹಾಭಾರತದಲ್ಲಿ ಉಲ್ಲೇಖವಾಗಿರುವ ಪ್ರಕಾರ, ಕರ್ಣನು ಯುದ್ಧದಲ್ಲಿ ಮರಣ ಹೊಂದಿದ ನಂತರ ಸ್ವರ್ಗಕ್ಕೆ ಪ್ರಯಾಣಿಸುತ್ತಿದ್ದ. ಆಗ, ದಾರಿಯಲ್ಲಿ ಕರ್ಣನಿಗೆ ಬಾಯಾರಿಕೆಯಾಯಿತು. ಕೂಡಲೇ ಎದುರು ಕಂಡ ನದಿ ಸಮೀಪಕ್ಕೆ ಹೋಗಿ ನೀರು ಕುಡಿಯಲು ಕೈಗೆತ್ತಿಕೊಂಡ ಅದು ಕೂಡಲೇ ಬಂಗಾರವಾಯಿತು. ನಿರಾಸೆಯಿಂದ ಸ್ವಲ್ಪ ಮುಂದುವರಿದ. ಆಗ ನೀರಡಿಕೆಯೊಂದಿಗೆ ಹಸಿವೂ ಆಯಿತು. ಎದುರು ಮಾವಿನ ಮರ ಇತ್ತು. ಅದರಲ್ಲಿ ಹಣ್ಣುಗಳೂ ಇದ್ದವು. ಆದರೆ ಅದನ್ನು ಕೊಯ್ದು ತಿನ್ನಲು ಮುಂದಾದಾಗ ಅದೂ ಚಿನ್ನದ ಹಣ್ಣಾಯಿತು. ಈ ವಿಚಿತ್ರ ಘಟನೆಗಳಿಂದ ವಿಚಲಿತನಾದ ಕರ್ಣನು ತನ್ನ ತಂದೆ ಸೂರ್ಯ ಭಗವಂತನನ್ನು ಪ್ರಾರ್ಥಿಸಿದ.

ಸೂರ್ಯ ಭಗವಂತ ಕರ್ಣ ಬಳಿಗೆ ಬಂದು ಏನೆಂದು ಕೇಳಿ ವಿವರ ಪಡೆದುಕೊಂಡ. ಕರ್ಣನ ಸಮಸ್ಯೆಗೆ ಕಾರಣ ವಿವರಿಸಿದ್ದು ಹೀಗೆ - ನೀನು ಅನೇಕ ದಾನಗಳನ್ನು ಮಾಡಿದ್ದೀಯ. ಆದರೆ ಅನ್ನದಾನ, ಶ್ರಾದ್ಧ ಕರ್ಮಗಳನ್ನು ಮಾಡಿಲ್ಲ. ಪಿತೃತರ್ಪಣ ನೀಡಿಲ್ಲ. ಹಾಗಾಗಿಯೇ ನಿನಗೆ ಈ ಪರಿಸ್ಥಿತಿ.

ನನಗೆ ಈ ವಿಚಾರ ಗೊತ್ತಿರಲಿಲ್ಲ. ಹಾಗಾಗಿ ಇಂತಹ ಕರ್ಮಗಳನ್ನು ಮಾಡಿರಲಿಲ್ಲ ಎಂದು ಕರ್ಣ ವಿವರಿಸಿದ. ಆಗ ಸೂರ್ಯದೇವನು ಕರ್ಣನಿಗೆ ಪುನಃ ಭೂಮಿಗೆ ಹೋಗಿ ಆ ಕರ್ಮಗಳನ್ನು ಪೂರೈಸುವಂತೆ ಸೂಚಿಸುತ್ತಾನೆ. ಇಂದ್ರದೇವನಿಗೆ ಹೇಳಿ ಕರ್ಣನನ್ನು ಭೂಮಿಗೆ ಕಳುಹಿಸುತ್ತಾನೆ. ಕರ್ಣನು ಭೂಮಿಗೆ ಬಂದು 15 ದಿನಗಳ ಅಂದರೆ ಪಿತೃಪಕ್ಷದ 15 ದಿನಗಳ ಅವಧಿಯಲ್ಲಿ ಎಲ್ಲ ಪಿತೃದೇವತೆಗಳಿಗೆ ತರ್ಪಣ ಬಿಟ್ಟ. ಅನ್ನ ಸಂತರ್ಪಣೆ ಮಾಡಿ, ಶ್ರಾದ್ಧ ಕರ್ಮಗಳನ್ನು ನೆರವೇರಿಸಿದ. ಮಹಾಲಯ ಅಮಾವಾಸ್ಯೆ ದಿನವೇ ಸ್ವರ್ಗಕ್ಕೆ ಹಿಂದಿರುಗಿದ ಉಲ್ಲೇಖ ಇದೆ. ಆದುದರಿಂದ ಪ್ರತಿಯೊಬ್ಬರೂ ಕನಿಷ್ಠ ಮಹಾಲಯ ಅಮಾವಾಸ್ಯೆ ದಿನವಾದರೂ ಪಿತೃದೇವತೆಗಳಿಗೆ ಶ್ರಾದ್ಧಕರ್ಮಗಳನ್ನು ಮಾಡಿ ತರ್ಪಣಗಳನ್ನು ಅರ್ಪಿಸಿ ದಾನ ಮಾಡಬೇಕು ಎಂದು ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ ವಿವರಿಸಿದ್ದಾರೆ.

ಪುರಾಣಗಳ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಮೂರು ಸಾಲಗಳನ್ನು ತೀರಿಸಬೇಕು. ದೇವರಿಗೆ ಋಣ, ಋಷಿ ಮತ್ತು ತಂದೆಯ ಋಣ. ಸನಾತನ ಧರ್ಮದ ಪ್ರಕಾರ, ಭಾದ್ರಪದ ಮಾಸದಲ್ಲಿ ಪಿತೃದೇವತೆಗಳ ಆರಾಧನೆಯು ದೇವತೆಗಳ ಪೂಜೆಗಿಂತ 10 ಪಟ್ಟು ಹೆಚ್ಚು ಫಲ ನೀಡುತ್ತದೆ.

ಪಿತೃ ದೇವತಾ ಆರಾಧನೆ

ಪಿತೃ ದೇವತೆಗಳ ಆರಾಧನೆ ಎಂದರೆ ನಮ್ಮ 7 ತಲೆಮಾರುಗಳಲ್ಲಿ ನಮ್ಮ ಬಿಟ್ಟು ಹೋದ ತಂದೆ-ತಾಯಿ, ಅಜ್ಜಿ, ಬಂಧುಗಳು ಮತ್ತು ಗುರುಗಳಿಗೆ ತರ್ಪಣ, ಶ್ರಾದ್ಧಕರ್ಮ ನೆರವೇರಿಸಿ ದಾನ ಮಾಡುವ ಕರ್ಮಗಳು. ಗತಿಸಿದ ಯಾವುದೇ ವ್ಯಕ್ತಿಗೆ ವರ್ಷಕ್ಕೊಮ್ಮೆ ಮೃತರ ತಿಥಿಯಂದು ಶ್ರಾದ್ಧಕರ್ಮಗಳನ್ನು ಮಾಡಬೇಕು. ಹಾಗಾಗಿ ಆ ವರ್ಷದ ಆ ತಿಥಿಯಲ್ಲಿ ಶ್ರಾದ್ಧಕರ್ಮಗಳನ್ನು ಮಾಡದಿದ್ದರೆ.. ಭಾದ್ರಪದ ಮಾಸದ ಕೃಷ್ಣ ಪಕ್ಷ (ಪಿತೃ ಪಕ್ಷ) ದಲ್ಲಿ ಬರುವ ತಿಥಿಯಲ್ಲಿ ಆ ಶ್ರಾದ್ಧಕರ್ಮಗಳನ್ನು ಮಾಡಿದರೆ ಅವರಿಗೆ ಶ್ರಾದ್ಧಕರ್ಮಗಳನ್ನು ಮಾಡಿದರೆ ಸಿಗುವ ಅದೇ ಫಲ ಸಿಗುತ್ತದೆ.

ಯುದ್ಧದಲ್ಲಿ ಮಡಿದವರಿಗೆ.. ಯಾತ್ರೆಯಲ್ಲಿ ಮಡಿದವರಿಗೆ.. ಹಾಗೆಯೇ ಪ್ರಯಾಣದ ವೇಳೆ ಅಪಘಾತದಲ್ಲಿ ಮಡಿದವರಿಗೆ.. ಕೊರೊನಾದಂತಹ ಸಾಂಕ್ರಾಮಿಕ ರೋಗಗಳಿಂದ ಸತ್ತವರಿಗೆ.. ಯಾವಾಗ ಸತ್ತರೋ ಗೊತ್ತಿಲ್ಲದವರಿಗೆ.. ಭಾದ್ರಪದ ಮಾಸದಲ್ಲಿ ಬರುವ ಪಿತೃ ಪಕ್ಷ, ಮಹಾಲಯ ಅಮಾವಾಸ್ಯೆಯಂದು ಅವರಿಗೆ ಶ್ರಾದ್ಧಕರ್ಮ ಮಾಡುವುದು ಉತ್ತಮ. ತಂದೆಯ ಋಣವನ್ನು ಯಾರೂ ಇಟ್ಟುಕೊಳ್ಳಬಾರದು ಎನ್ನುತ್ತದೆ ಶಾಸ್ತ್ರ. ತಂದೆಗೆ ಋಣಭಾರವಿದ್ದರೆ ಮನೆಯಲ್ಲಿ ಮಾನಸಿಕ ಅಶಾಂತಿ, ಕುಟುಂಬದಲ್ಲಿ ಕಲಹ, ಆರ್ಥಿಕ ತೊಂದರೆ, ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಎನ್ನುತ್ತಾರೆ ಪೂರ್ವಜರು. ಪುರಾಣಗಳ ಪ್ರಕಾರ, ಶ್ರಾದ್ಧಕರ್ಮಗಳನ್ನು ಮಾಡುವವರು ಮತ್ತು ತರ್ಪಣಗಳನ್ನು ಬಿಡುವವರು ಪಿತೃದೇವತೆಗಳ ಆಶೀರ್ವಾದದಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ ಎಂದು ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ ವಿವರಿಸಿದ್ದಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.