ಕರ್ನಾಟಕದಲ್ಲಿ ಮಾರ್ದನಿಸುತ್ತಿದೆ ವಿಠ್ಠಲ ಭಜನೆ: ಏನಿದು ವಾರಕರಿ ಸಂಪ್ರದಾಯ? ಇಲ್ಲಿದೆ ಸಮಗ್ರ ಮಾಹಿತಿ
ವಾರಕರಿ ಸಂಪ್ರದಾಯದಂತೆ ಮಹಾರಾಷ್ಟ್ರದಲ್ಲಿರುವ ಪಂಢರಪುರಕ್ಕೆ ಕರ್ನಾಟಕದಿಂದಲೂ ಸಾವಿರಾರು ವಾರಕರಿಗಳು ದಿಂಡಿ ಮೂಲಕ ಪಾದಯಾತ್ರೆ ಕೈಗೊಳ್ಳುತ್ತರೆ. ಉತ್ತರ ಕರ್ನಾಟಕದಾದ್ಯಂತೆ ವಿಠ್ಠಲನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆಷಾಡ ಏಕಾದಶಿಯ ಸಮಯದಲ್ಲಿ ವಿಠ್ಠೋಬ ನಾಮ ಜಪ ಮಾಡುತ್ತಿದ್ದಾರೆ.
ಮಹಾರಾಷ್ಟ್ರದ ಪ್ರಮುಖ ತೀರ್ಥಕ್ಷೇತ್ರವಾದ ಪಂಢರಪುರದಲ್ಲಿ ಆಷಾಢ ಏಕಾದಶಿ ಸಂಭ್ರಮ ಮನೆಮಾಡಿದೆ. ಈ ಸಂಭ್ರಮ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಪಂಢರಪುರದಲ್ಲಿ ವಿಠ್ಠಲನಾಗಿ ನೆಲೆಯೂರಿರುವ ವಿಷ್ಣುವಿನ ನಾಮಸ್ಮರಣೆ ಕರ್ನಾಟಕದಲ್ಲಿಯೂ ಜೋರಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಹಾಗೂ ಪಂಢರಪುರಕ್ಕೆ ಭಾರಿ ನಂಟು. ಆಷಾಢ ಏಕಾದಶಿ ಬಂದರೆ ಸಾಕು, ಪಂಢರಪುರಕ್ಕೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳಿಂದ ವಾರಕರಿ ಸೇವೆ ನಡೆಯುತ್ತದೆ. ವಿಠ್ಠನಲ ಪಾದಸ್ಪರ್ಶಿಸಿ ದಿವ್ಯದರ್ಶನ ಪಡೆಯಲು ನಾಡಿನೆಲ್ಲೆಡೆಯಿಂದ ವಾರಕರಿಗಳು ಪಂಢರಪುರದಲ್ಲಿ ಸೇರುತ್ತಾರೆ. ‘ಪುಂಡಲೀಕ ವರದ ಹರಿವಿಠ್ಠಲ’ ಎಂಬ ಉದ್ಘೋಷಗಳು ಪಂಢರಪುರ ಮಾತ್ರವಲ್ಲದೆ, ವಿಠ್ಠಲ ಭಜನೆ ಕರುನಾಡಿನಲ್ಲೂ ಮಾರ್ದನಿಸುತ್ತದೆ.
ಕರ್ನಾಟಕಕ್ಕೆ ಸಮೀಪವಿರುವ ಸೋಲಾಪುರದಿಂದ ಕೇವಲ 80 ಕಿ.ಮೀ ದೂರದಲ್ಲಿರುವ ತೀರ್ಥ ಕ್ಷೇತ್ರವೇ ಪಂಢರಪುರ. ಪವಿತ್ರ ಚಂದ್ರಭಾಗಾ ನದಿ ತಟದ ಐತಿಹಾಸಿಕ ಧಾರ್ಮಿಕ ತಾಣದಲ್ಲಿರುವ ವಿಠ್ಠೋಬನನ್ನು ನೋಡಲು, ಜಯ ಜಯ ರಾಮಕೃಷ್ಣ ಹರಿ ಎನ್ನುತ್ತಾ ಪಾದಯಾತ್ರಿಗಳು ಯಾತ್ರೆ ಹೊರಡುತ್ತಾರೆ. ಇದು ವಾರಕರಿ ಸಂಪ್ರದಾಯದ ಭಾಗ.
ವಿಠ್ಠಲನ ದರ್ಶನಕ್ಕೆ ತೀರ್ಥಯಾತ್ರೆಯ ಮಾಸವನ್ನು ಆಷಾಢ ಏಕಾದಶಿ ಎಂದು ಹೇಳಲಾಗುತ್ತದೆ. ಆಷಾಢ ಮಾಸದ ಹನ್ನೊಂದನೇ ದಿನವೇ ಆಷಾಢ ಏಕಾದಶಿ. ಈ ಬಾರಿ ಜುಲೈ 17ರಂದು ಆಷಾಢ ಏಕಾದಶಿ. ಈ ಸಮಯದಲ್ಲಿ ಪಂಢರಪುರದಲ್ಲಿ ಹೆಚ್ಚಿನ ಸಂಖ್ಯೆಯ ವಾರಕರಿಗಳು ಬಂದು ಸೇರುತ್ತಾರೆ. ಈಗಾಗಲೇ ಹಲವು ಭಾಗಗಳಿಂದ ಯಾತ್ರ ಆರಂಭವಾಗಿ ಪಂಢರಪುರಕ್ಕೆ ವಾರಕರಿಗಳು ಬಂದು ಸೇರಿದ್ದಾರೆ.
ಪಂಢರಪುರದಲ್ಲಿರುವ ವಿಠ್ಠಲ ದೇವಾಲಯವು ವೈಷ್ಣವರ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿ ವಿಷ್ಣುವನ್ನು ವಿಠ್ಠಲ ಅಥವಾ ಪಾಂಡುರಂಗನ ರೂಪದಲ್ಲಿ ಆರಾಧಿಸಲಾಗುತ್ತದೆ. ವೈಷ್ಣವರ ಪವಿತ್ರ ಕ್ಷೇತ್ರವಾಗಿದ್ದರೂ, ಜಾತಿ-ಧರ್ಮದ ಎಲ್ಲೆಯಿಲ್ಲದೆ ವಾರಕರಿಗಳು ವಿಠಲನ ಸ್ಮರಣೆಗೆ ಬರುತ್ತಾರೆ. ಉತ್ತರ ಕರ್ನಾಟಕದ ಬೆಳಗಾವಿ, ಬಿಜಾಪುರ ಸೇರಿದಂತೆ ಹಲವು ಭಾಗಗಳ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಾರೆ.
ಏನಿದು ವಾರಕರಿ ಸಂಪ್ರದಾಯ?
ವಾರಿ ಎಂದರೆ ತೀರ್ಥಯಾತ್ರೆ ಎಂದರ್ಥ. ವಾರಕರಿ ಸಂಪ್ರದಾಯ ಅಥವಾ ಯಾತ್ರಿ ಪಂಥವು ಮಹಾರಾಷ್ಟ್ರದ ಪ್ರಮುಖ ವೈಷ್ಣವ ಪಂಥವಾಗಿದೆ. ಪಾದಯಾತ್ರೆ ಮೂಲಕ ತೀರ್ಥಯಾತ್ರೆ ಕೈಗೊಳ್ಳುವುದೇ ವಾರಕರಿ ಸಂಪ್ರದಾಯ. ಈ ಯಾತ್ರಿಕರನ್ನು ವಾರಕರಿಗಳು ಎಂದು ಕರೆಯಲಾಗುತ್ತದೆ.
ಪಂಢರಪುರಕ್ಕೆ ವಾರಕರಿಗಳು ಬರಿಗಾಲಿನಲ್ಲಿ ಪಾದಯಾತ್ರೆ ಕೈಗೊಳ್ಳುತ್ತಾರೆ. ಇದು ನೂರಾರು ವರ್ಷ ಹಿಂದಿನಿಂದಲೂ ನಡೆಯುತ್ತಿದೆ. ಭಕ್ತಿ ಸಂತರು ಜನಸಾಮಾನ್ಯರನ್ನೂ ಒಟ್ಟುಗೂಡಿಸಿ ಪ್ರೀತಿ ಮತ್ತು ಭಕ್ತಿಯ ಆಧಾರದ ಮೇಲೆ ಸರಳವಾದ ನಂಬಿಕೆಯನ್ನು ಬೋಧಿಸುತ್ತಿದ್ದರು. ಶತಮಾನಗಳ ಹಿಂದೆ ಆರಂಭವಾದ ಈ ಭಕ್ತಿ ಆಂದೋಲನವು ಎಲ್ಲಾ ಜಾತಿ ಮತ್ತು ಧರ್ಮದ ಜನರಿಗೆ ದೇವರ ಆರಾಧನೆ ಸಾಧ್ಯ ಎಂಬಂತೆ ಮಾಡಿತು.
ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ವಾರಕರಿ ಸೇವೆ
ಪಂಢರಪುರಕ್ಕೆ ಕೈಗೊಳ್ಳುವ ವಾರ್ಷಿಕ ತೀರ್ಥಯಾತ್ರೆಯು ವಾರಕರಿ ಸಂಪ್ರದಾಯದ ಪ್ರಮುಖ ಭಾಗವಾಗಿದೆ. ವಾರಿ ಅಥವಾ ತೀರ್ಥಯಾತ್ರೆಯು ಬಹುತೇಕ ಆಷಾಢ ಮಾಸದಲ್ಲಿ ಆರಂಭವಾಗುತ್ತದೆ. ಪಂಢರಪುರಕ್ಕೆ ದೂರವನ್ನು ಅವಲಂಬಿಸಿ ವಿಭಿನ್ನ ಸಮಯಗಳಲ್ಲಿ ಆರಂಭವಾಗುತ್ತದೆ. ವಿಶೇಷವಾಗಿ ಮಹಾರಾಷ್ಟ್ರ ಹೊರತುಪಡಿಸಿ ಕೆಲವು ವಾರಕರಿಗಳು ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ನಡೆದುಕೊಂಡು ಹೋಗುತ್ತಾರೆ.
ಮಹಾರಾಷ್ಟ್ರದಲ್ಲಿ ಜ್ಞಾನೇಶ್ವರ್, ನಾಮದೇವ್ ಮತ್ತು ತುಕಾರಾಂ ಅವರಂತಹ ಮಹಾನ್ ಭಕ್ತಿ ಸಂತರು, ವಾರಕರಿ ಸಂಪ್ರದಾಯದ ಸ್ಥಾಪಕರು ಎಂದು ಹೇಳಲಾಗುತ್ತದೆ. ಇವರಲ್ಲಿ ಒಬ್ಬೊಬ್ಬರು ಒಂದೊಂದು ಜಾತಿಗಳಿಗೆ ಸೇರಿದವರು. ಆದರೆ, ತಳಮಟ್ಟದಲ್ಲಿ ಭಕ್ತಿ ಚಳುವಳಿಯನ್ನು ಪ್ರತಿನಿಧಿಸಿದರು.
ಪಾದಯಾತ್ರೆ ಕೈಗೊಳ್ಳುವ ಜನರೇ ವಾರಕರಿಗಳು. ಇಂಥಾ ವಾರಕರಿಗಳ ಸಮೂಹವನ್ನು ದಿಂಡಿ ಎಂದು ಸಾಂಪ್ರದಾಯಿಕವಾಗಿ ಹೇಳಲಾಗುತ್ತದೆ . ಲಕ್ಷಾಂತರ ದಿಂಡಿಗಳು ಚಂದ್ರಭಾಗ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ. ವಿಠ್ಠೋಬನ ದರ್ಶನ ಪಡೆಯುವ ವಾರಿಗಳಿಗೆ ಪಾದಯಾತ್ರೆ ಯಶಸ್ವಿಯಾದ ಸಂತಸ. ವಿಠ್ಠಲನ ಪಾದಸ್ಪರ್ಶಿಸಿ ದರ್ಶನ ಪಡೆದು ಮನೆಗೆ ಮರಳಿದರೆ ವರ್ಷಪೂರ್ತಿ ಸಂತೋಷವಾಗಿರುತ್ತೇವೆ ಎಂಬ ನಂಬಿಕೆ ವಾರಿಗಳದ್ದು.