ಮಹಾಶಿವರಾತ್ರಿ: ಶಿವ ನಾಮಸ್ಮರಣೆಯೊಂದಿಗೆ ಕಾಲ್ನಡಿಗೆಯಲ್ಲೇ ಧರ್ಮಸ್ಥಳಕ್ಕೆ ಬರುತ್ತಾರೆ ಭಕ್ತರು, ಹೀಗಿರುತ್ತವೆ ಸಿದ್ಧತೆಗಳು
Mahashivaratri 2025: ಮಹಾಶಿವರಾತ್ರಿ ಆಚರಣೆಗೆ ದಿನಗಣನೆ ಶುರುವಾಗಿದೆ. ಫೆ 26ರಂದು ಈ ಬಾರಿ ಶಿವರಾತ್ರಿ. ಧರ್ಮಸ್ಥಳಕ್ಕೆ ಶಿವ ನಾಮಸ್ಮರಣೆ ಮಾಡುತ್ತ ಕಾಲ್ನಡಿಗೆಯಲ್ಲೇ ಭಕ್ತರು ಬರುತ್ತಾರೆ. ಈ ಕಾಲ್ನಡಿಗೆ ಯಾತ್ರೆಗೆ ಅವರ ಸಿದ್ಧತೆಗಳು ಹೇಗಿರುತ್ತದೆ? - ಇಲ್ಲಿದೆ ವಿವರ. (ವರದಿ- ಹರೀಶ ಮಾಂಬಾಡಿ, ಮಂಗಳೂರು)

Mahashivaratri 2025: ದೇಶದಾದ್ಯಾಂತ ಈ ಬಾರಿ ಫೆಬ್ರವರಿ 26ರಂದು ಮಹಾಶಿವರಾತ್ರಿಯನ್ನು ಭಕ್ತರು ಆಚರಿಸಲು ಅಣಿಯಾಗಿದ್ದಾರೆ. ಶ್ರದ್ಧಾ ಭಕ್ತಿಯಿಂದ ಶಿವ ಪಾರ್ವತಿಯನ್ನು ಅಹೋರಾತ್ರಿ ಶಿವನಾಮ ಸ್ಮರಣೆಯೊಂದಿಗೆ ಆಚರಿಸುವುದು ರೂಢಿ. ಶಿವರಾತ್ರಿ ಎಂದರೆ ಶಿವನನ್ನು ಧ್ಯಾನಿಸುವ ರಾತ್ರಿ. ಇಡೀ ರಾತ್ರಿ ಶಿವನಾಮಸ್ಮರಣೆ ಮಾಡುತ್ತಾ, ಶಿವನನ್ನು ಆರಾಧಿಸುತ್ತಾ, ಶಿವನ ಬಗ್ಗೆಯೇ ಚಿಂತಿಸುತ್ತಾ ಕತ್ತಲೊಳಗೆ ಬೆಳಕನ್ನು ಕಾಣುವ ದಿನವೆಂದು ಹೇಳಬಹುದು. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಹಾಶಿವರಾತ್ರಿಯಂದು ಸಹಸ್ರ ಸಂಖ್ಯೆಯಲ್ಲಿ ಶಿವಭಕ್ತ ಪಾದಯಾತ್ರಿಗಳ ಆಗಮನವಾಗುತ್ತದೆ.
ಶಿವ ನಾಮಸ್ಮರಣೆಯೊಂದಿಗೆ ಕಾಲ್ನಡಿಗೆಯಲ್ಲೇ ಧರ್ಮಸ್ಥಳಕ್ಕೆ ಬರುತ್ತಾರೆ ಭಕ್ತರು
ಶ್ರೀ ಮಂಜುನಾಥ ಸ್ವಾಮಿ ಪರಮಭಕ್ತರು ಕಾಲ್ನಡಿಗೆಯಿಂದಲೇ ಕರ್ನಾಟಕದಾದ್ಯಂತ ಶ್ರೀ ಕ್ಷೇತ್ರಕ್ಕೆ ಶಿವರಾತ್ರಿಯ 15-20 ದಿನಗಳ ಮೊದಲೇ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತಲುಪುತ್ತಾರೆ. ಶುಭ ದಿನವನ್ನು, ಸಂಕಲ್ಪಮಾಡಿ ತಮ್ಮ ಊರಿನಿಂದ ಹೊರಡುವ ಪಾದಯಾತ್ರಿಗಳು ಬೆಂಗಳೂರು ಸಹಿತ ರಾಜ್ಯದ ಹಲವು ಭಾಗಗಳಿಂದ ಆಗಮಿಸುತ್ತಾರೆ.
ಶ್ರೀಮಂತ, ಬಡವ ಬೇಧವಿಲ್ಲ: ಪಾದಯಾತ್ರೆಯಲ್ಲಿ ಶ್ರೀಮಂತರು, ಬಡವ ಬಲ್ಲಿದರೆಂಬ ವ್ಯತ್ಯಾಸವಿಲ್ಲದೆ ಎಲ್ಲರೂ ಶಿವನ ಪರಮ ಭಕ್ತರೆಂಬ ಯೋಚನೆಯೊಂದಿಗೆ ಹೊರಡುತ್ತಾರೆ. ವಿಶೇಷವಾಗಿ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರಿಗಳಾಗಿ ಭಾಗವಹಿಸುವುದು ಗಮನೀಯ.
ಉಚಿತ ಕೌಂಟರ್, ವಿಶೇಷ ವ್ಯವಸ್ಥೆ: ಹಬ್ಬಕ್ಕೂ ಮೊದಲು ಆಗಮಿಸುವ ಪಾದಯಾತ್ರಿಕರಿಗೆ ಕ್ಷೇತ್ರದ ಮಹಾದ್ವಾರದ ಎದುರುಗಡೆಯಲ್ಲಿ ಯಾತ್ರಾತ್ರಿಗಳಿಗೆ ಉಚಿತ ಪಾನೀಯ ವ್ಯವಸ್ಥೆ, ಸೂಚನೆ ನೀಡಲು ವಿಚಾರಣ ಕಚೇರಿ, ರಕ್ಷಣೆಗಾಗಿ ಪೊಲೀಸ್ ಕೌಂಟರ್ ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆಗಾಗಿ ಕೌಂಟರ್‌ಗಳನ್ನು ತೆರೆಯಲಾಗುತ್ತದೆ.
ಪಾದಯಾತ್ರೆಯಲ್ಲಿ ಬರುವ ತಂಡಗಳ ಮುಖ್ಯಸ್ಥರಿಗೆ ದ್ವಾರದಲ್ಲಿ ಹಾರ ಹಾಕಿ ಸ್ವಾಗತಿಸುವ ವ್ಯವಸ್ಥೆ ಮಾಡಲಾಗುತ್ತದೆ. ಪಾದಯಾತ್ರಿಗಳಾಗಿ ಬಂದಿರುವ ಜನಸ್ತೋಮ ಹಿಂದಿರುಗಿ ಹೋಗಲು ಹೆಚ್ಚುವರಿ ಬಸ್ಸುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೂಲಕ ದೊರಕಿಸಲು ಕ್ಷೇತ್ರದ ಮೂಲಕ ವಿನಂತಿಸಲಾಗುತ್ತದೆ. ಹೆಚ್ಚುವರಿ ಬಸ್ಸುಗಳು ಕ್ಷೇತ್ರದಿಂದ ಹೊರಡಲು ತಯಾರಾಗಿ ಮಹಾದ್ವಾರದ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದವರು ಯಾತ್ರಾತ್ರಿಗಳ ಅನುಕೂಲಕ್ಕಾಗಿ ವಿಶೇಷ ಕೌಂಟರ್‌ಗಳನ್ನು ತೆರೆಯುವುದು ವಾಡಿಕೆ. ರಸ್ತೆಯುದ್ದಕ್ಕೂ ಕಾಲ್ನಡಿಗೆಯಲ್ಲಿ ಬರುತ್ತಿರುವ ಸಂದರ್ಭ ವಾಹನ ಚಾಲಕರೂ ಕೂಡಾ ಕ್ಷೇತ್ರದಿಂದ ಹಾಕಲಾಗಿರುವ ಸೂಚನಾ ಫಲಕಗಳನ್ನು ಗಮನಿಸಿ ಸಹಕರಿಸುವುದು ಪ್ರತಿ ವರ್ಷವೂ ಕಂಡುಬರುವ ದೃಶ್ಯ. ಇದರೊಂದಿಗೆ ಉಚಿತ ಸೇವಾ ಮನೋಭಾವದಿಂದ ಚಿಕಿತ್ಸೆ ನೀಡಲು ಸ್ವಯಂಸೇವಕರಾಗಿ ವೈದ್ಯರು ಆಗಮಿಸುತ್ತಾರೆ. ಕ್ಷೇತ್ರದ ವತಿಯಿಂದ ನಿರ್ಮಿಸಲಾದ ವೈದ್ಯಕೀಯ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಾರೆ.
ಡಾ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನ
ಬೂಡುಜಾಲು, ಸತ್ಯನಪಲ್ಕೆ, ಚಾರ್ಮಾಡಿ ಹಾಗೂ ಉಜಿರೆ ಮುಂತಾದ ಕಡೆಗಳಲ್ಲಿ ಪಾದಯಾತ್ರೆಗಳಿಗೆ ಶಿಬಿರವನ್ನು ಏರ್ಪಡಿಸಲಾಗುತ್ತದೆ. ಅಲ್ಲೆಲ್ಲಾ ಹೋಗಿ ಶ್ರೀ ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ಆಗಮಿಸುತ್ತಿರುವ ಭಕ್ತಾದಿಗಳ ಕ್ಷೇಮ ಸಮಾಚಾರದ ಜೊತೆ ಪಾದಯಾತ್ರಿಗಳೊಂದಿಗೆ ಮಾತನಾಡಿ ಅವರಿಗೆ ಸರಿಯಾದ ಜಾಗೃತಾ ಕ್ರಮಗಳೊಂದಿಗೆ ಮಾರ್ಗದರ್ಶನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮಾಡುತ್ತಾರೆ. ಕ್ಷೇತ್ರದ ಎಲ್ಲಾ ವಿಶೇಷ ವ್ಯವಸ್ಥೆಗಳು ಅವರಿಗೆ ದೊರಕುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡುವ ಹೆಗ್ಗಡೆಯವರಲ್ಲದೆ, ಹರ್ಷೇಂದ್ರ ಕುಮಾರ್‌ರವರು ಈ ಕುರಿತಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಅನುಕೂಲ ಮಾಡಿಕೊಡುತ್ತಾರೆ. ಪ್ರತಿ ವರ್ಷವೂ ಇದು ನಡೆದುಕೊಂಡು ಬರುತ್ತದೆ.
ಪಾದಯಾತ್ರೆಯಲ್ಲಿ ಬಂದ ಗುರೂಜಿಗಳ ಜೊತೆಗೂಡಿ ದೀಪ ಪ್ರಜ್ವಲಿಸಿ ’ಓಂ ನಮ: ಶಿವಾಯ’ ಪಂಚಾಕ್ಷರಿ ಮಂತ್ರಕ್ಕೆ ಚಾಲನೆಯನ್ನು ನೀಡಿ ಡಾ. ಹೆಗ್ಗಡೆಯವರು ಸಂದೇಶ ನೀಡುತ್ತಾರೆ. ಬೃಹತ್ ಸಂಖ್ಯೆಯಲ್ಲಿ ಊರ-ಪರವೂರ ಭಕ್ತಾದಿಗಳು ಸೇರಿ ಈ ಕಾರ್ಯಕ್ರಮದಲ್ಲಿ ಪಂಚಾಕ್ಷರಿ ಮಂತ್ರ ಪಠನದೊಂದಿಗೆ ಭಕ್ತಿ ರಸವನ್ನು ಹರಿಸಲಿದ್ದಾರೆ. ರಾತ್ರಿ ಇಡಿ ಶಿವನ ಧ್ಯಾನದಲ್ಲಿ ತೊಡಗಿಕೊಳ್ಳಲು ಕ್ಷೇತ್ರದ ಪ್ರವಚನ ಮಂಟಪ ತಯಾರಾಗುತ್ತಿದೆ.
ಸ್ವಾಗತಕ್ಕಾಗಿ ಪೂರ್ವತಯಾರಿ: ಶ್ರೀ ಕ್ಷೇತ್ರಕ್ಕೆ ಬರುವ ಪಾದಯಾತ್ರಿಗಳನ್ನು ಡಾ. ಡಿ. ವೀರೇಂದ್ರಹೆಗ್ಗಡೆಯವರು ಅತ್ಯಂತ ಗೌರವದಿಂದ ಬರಮಾಡಿಕೊಳ್ಳುತ್ತಾರೆ. ಇವರ ಸ್ವಾಗತಕ್ಕಾಗಿ ಕ್ಷೇತ್ರದಲ್ಲಿ 1 ತಿಂಗಳ ಮೊದಲೇ ಪೂರ್ವ ತಯಾರಿ ಸಭೆಯನ್ನು ಕರೆದು ಸಮಿತಿಯನ್ನು ಮಾಡಿ ಅವರ ಸಹೋದರರಾದ ಡಿ. ಹರ್ಷೇಂದ್ರ ಕುಮಾರ್‌ರವರ ಉಸ್ತುವಾರಿಯೊಂದಿಗೆ ಕೆಲಸದ ಜವಾಬ್ದಾರಿಯನ್ನು ಹಂಚುತ್ತಾರೆ. ಪಾದಯಾತ್ರಿಗಳಿಗೆ ಕಾಲ್ನಡಿಗೆಯಿಂದಾಗುವ ಆರೋಗ್ಯದ ಅಡಚಣೆಗಳಿಗಾಗಿ ತುರ್ತು ಚಿಕಿತ್ಸಾ ಘಟಕವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮೆಡಿಕಲ್ ಟ್ರಸ್ಟ್ ವತಿಯಿಂದ ವ್ಯವಸ್ಥೆ ಮಾಡಲಾಗಿದೆ. ಮೂಡಿಗೆರೆಯಲ್ಲಿ ಹಾಸನದ ಎಸ್.ಡಿ.ಎಂ. ಆಸ್ಪತ್ರೆಯಿಂದ ವೈದ್ಯರುಗಳನ್ನು ಚಿಕಿತ್ಸೆಗಾಗಿ ನಿಯೋಜಿಸಲಾಗಿದೆ. ಅಂತೆಯೇ ಈ ತುರ್ತು ಚಿಕಿತ್ಸಾ ಕೇಂದ್ರಗಳನ್ನು ಚಾರ್ಮಾಡಿ, ಮುಂಡಾಜೆ, ಸೋಮಂತ್ತಡ್ಕ, ಕಲ್ಮಂಜ, ಸತ್ಯನಪಲ್ಕೆ, ಉಜಿರೆ ಎಸ್.ಡಿ.ಎಂ. ಆಸ್ಪತ್ರೆ ಎದುರು, ಧರ್ಮಸ್ಥಳದ ಮಹಾದ್ವಾರದ ಬಳಿ ಘಟಕವನ್ನು ತೆರೆದು, 24 ಗಂಟೆಗಳ ಕಾಲ ತುರ್ತು ಚಿಕಿತ್ಸಾ ವಾಹನಗಳು ನಿರಂತರ ಸೇವೆಯಲ್ಲಿರುವಂತೆ ತಯಾರಿ ನಡೆಸಲಾಗುತ್ತದೆ. ಭಕ್ತಾದಿಗಳು ನೇತ್ರಾವತಿಯಲ್ಲಿ ಬಂದು ಸ್ನಾನ ಮಾಡಿ ಶ್ರೀ ಮಂಜುನಾಥ ಸ್ವಾಮಿ ದರ್ಶನಕ್ಕೆ ತೆರಳುತ್ತಾರೆ. ಈ ಸಂದರ್ಭ ನೇತ್ರಾವತಿ ಸ್ನಾನಘಟ್ಟದಲ್ಲಿ ಸ್ವಚ್ಛತೆಯ ಬಗ್ಯೆ ವಿಶೇಷ ಕಾಳಜಿ ವಹಿಸಲಾಗಿದೆ. ನೇತ್ರಾವತಿ ಸ್ನಾನ ಘಟ್ಟದಲ್ಲಿ ಹೆಚ್ಚುವರಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಬರುವ ಪಾದಯಾತ್ರಿಗಳಿಗೂ ಕೂಡಾ ಸ್ವಚ್ಛತೆಯ ಬಗ್ಯೆ ಹೆಚ್ಚಿನ ಗಮನವನ್ನು ನೀಡಲು ವಿನಂತಿಸಲಾಗಿದೆ.
ಪಾದಯಾತ್ರೆ ಬರುವವರಿಗೆ ಸೂಚನೆ
ಶಿವರಾತ್ರಿಯ 15 ದಿನದ ಮೊದಲೇ ಪಾದಯಾತ್ರಿಗಳು ಬರುವ ದಾರಿಯನ್ನು ಆಯ್ಕೆ ಮಾಡಿ ರಸ್ತೆಯ ಇಕ್ಕೆಲಗಳಲ್ಲಿ ಸೂಚನಾ ಫಲಕಗಳನ್ನು ಈ ಕೆಳಗಿನ ಸೂಚನೆಗಳೊಂದಿಗೆ ಹಾಕಲಾಗುತ್ತದೆ ಸೂಚನೆಗಳು ಹೀಗಿರುತ್ತದೆ.
- ದೇವಸ್ಥಾನಕ್ಕೆ ಪಾದಯಾತ್ರೆಯಲ್ಲಿ ಹೋಗುವಾಗ ಕಪ್ಪು ಬಣ್ಣದ ವಸ್ತ್ರ ಹೊರತುಪಡಿಸಿ ಬೇರೆ ಬಣ್ಣದ ವಸ್ತ್ರ ಧರಿಸುವುದು ಮತ್ತು ಸಾಲಾಗಿ ಬರುವುದು.
- ಅಸಭ್ಯ ಉಡುಪು ಧರಿಸಬಾರದು.
- ನೀವು ವಾಸ್ತವ್ಯ ಇರುವ ಸ್ಥಳದಲ್ಲಿ ಮತ್ತು ದಾರಿಯಲ್ಲಿ ಬರುವಾಗ ಉಗುಳುವುದು, ಗಲೀಜು ಇತ್ಯಾದಿ ಮಾಡುವುದರಿಂದ ಇತರ ಸದ್ಭಕ್ತರನ್ನು ಹೀಯಾಳಿಸಿದಂತಾಗುತ್ತದೆ.
- ಧೂಮಪಾನ ಮಾಡಬಾರದು.
- ತಂಗುವ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಬೇಕು. ಸ್ವಯಂ ಸ್ಪೂರ್ತಿಯಿಂದ ಸ್ಥಳವನ್ನು ಸ್ವಚ್ಛ ಮಾಡಿರಿ.
- ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಇರುವುದರಿಂದ ಕಡ್ಡಾಯವಾಗಿ ಉಡುವ ಬಟ್ಟೆಯ ಬೆನ್ನಿನಲ್ಲಿ/ತೋಳಿನಲ್ಲಿ/ ತಲೆಯ ದಿರಿಸಿನಲ್ಲಿ ಪ್ರತಿಫಲಕ ಇರಲೇಬೇಕು.
- ದೃಢ ಸಂಕಲ್ಪದಿಂದ ಪಾದಯಾತ್ರೆ ಮಾಡಬೇಕು.
- ಪಾದಯಾತ್ರೆಯಲ್ಲಿ ಬರುವಾಗ ಶಿವ ಪಂಚಾಕ್ಷರಿ ಮಂತ್ರ ಪಠಿಸುತ್ತಾ ಬನ್ನಿ.
- ಊಟ, ತಿಂಡಿ ಮಿತವಾಗಿ ಬಳಸುವುದು.
ವಾಹನ ಚಾಲಕರ ಸೂಚನೆಗಾಗಿ: ಮಹಾ ಶಿವರಾತ್ರಿಯ ಪ್ರಯುಕ್ತ ಭಕ್ತಾದಿಗಳು ಪಾದಯಾತ್ರೆಯನ್ನು ಕೈಗೊಂಡಿರುತ್ತಾರೆ. ಜಾಗ್ರತೆಯಿಂದ ವಾಹನವನ್ನು ಚಲಾಯಿಸಿರಿ. ಪಾದಯಾತ್ರಿಗಳನ್ನು ಗೌರವಿಸಿರಿ.
ಪಾದಯಾತ್ರಿಗಳಿಗಾಗಿ ಸೂಚನೆ: ಘಾಟ್‌ರಸ್ತೆಯಲ್ಲಿ ವಾಹನದಟ್ಟಣೆ ಅಧಿಕವಾಗಿರುವುದರಿಂದ, ನಿಯಮದಂತೆ ಆದಷ್ಟು ನಿಧಾನವಾಗಿ ಮಾರ್ಗದ ಬದಿಯಲ್ಲೇ ಚಲಿಸಿರಿ. ಕಡ್ಡಾಯವಾಗಿ ಸಾಲಿನಲ್ಲಿಯೇ ಮುಂದುವರಿಯಿರಿ. ನಿಮ್ಮ ಶರ್ಟುಗಳ ಹಿಂಭಾಗದಲ್ಲಿ ರಿಫ್ಲೆಕ್ಟರ್‌ಗಳನ್ನು ಅಳವಡಿಸಲು ಮರೆಯದಿರಿ. ಹುಷಾರಾಗಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸಿಕೊಂಡು ಮಹಾ ಶಿವರಾತ್ರಿಗೆ ಧರ್ಮಸ್ಥಳಕ್ಕೆ ಕಾಲ್ನಡಿಗೆ ಯಾತ್ರೆ ಶುರುಮಾಡಬಹುದು. ಶುಭವಾಗಲಿ.
(ವರದಿ- ಹರೀಶ ಮಾಂಬಾಡಿ, ಮಂಗಳೂರು)

ವಿಭಾಗ