Makar Sankranti: ಮಕರ ಸಂಕ್ರಾಂತಿ ಸಮಯದಲ್ಲಿ ರಂಗೋಲಿಗೆ ವಿಶೇಷ ಮಹತ್ವ ನೀಡುವುದೇಕೆ, ಈ ಹಬ್ಬದಲ್ಲಿ ರಂಗೋಲಿ ಬಿಡಿಸುವ ಉದ್ದೇಶವಿದು
ಹಿಂದೂ ಸಂಪ್ರದಾಯದಲ್ಲಿ ಹಬ್ಬ ಹರಿದಿನಗಳ ಸಮಯದಲ್ಲಿ ರಂಗೋಲಿ ಹಾಕುವುದಕ್ಕೆ ವಿಶೇಷ ಮಹತ್ವ ನೀಡಲಾಗುತ್ತದೆ. ರಂಗೋಲಿ ಎಂದರೆ ಕೇವಲ ಮನೆ ಅಲಂಕಾರದ ಭಾಗವಷ್ಟೇ ಅಲ್ಲ, ಇದು ಧಾರ್ಮಿಕ ಅಂಶದ ಭಾಗವೂ ಹೌದು. ಮಕರ ಸಂಕ್ರಾಂತಿ ಸಮಯದಲ್ಲಿ ರಂಗೋಲಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಇದಕ್ಕೆ ಕಾರಣವೇನು, ಈ ಹಬ್ಬದಲ್ಲಿ ರಂಗೋಲಿ ಬಿಡಿಸುವ ಉದ್ದೇಶವೇನು ತಿಳಿಯಿರಿ.
ಹಿಂದೂ ಧರ್ಮದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಕೂಡ ಒಂದು. ಭಾರತಾದ್ಯಂತ ಈ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ಸಂಕ್ರಾಂತಿಯು ಹೊಸ ವರ್ಷದಲ್ಲಿ ಬರುವ ಮೊದಲ ಹಾಗೂ ದೊಡ್ಡ ಹಬ್ಬ. ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಊರೇ ಸಿಂಗಾರಗೊಳ್ಳುತ್ತದೆ. ಎಳ್ಳು ಬೆಲ್ಲ ಬೀರುವ ಜೊತೆ ಬಗೆ ಬಗೆಯ ತಿಂಡಿಗಳನ್ನು ತಯಾರಿಸಿ ತಿನ್ನಲಾಗುತ್ತದೆ. ಇದರೊಂದಿಗೆ ಸಂಕ್ರಾಂತಿ ಹಬ್ಬದಲ್ಲಿ ರಂಗೋಲಿಗಳು ಬಹಳ ವಿಶೇಷ.
ಸುಮಾರು 4 ದಿನಗಳ ಕಾಲ ಸಂಕ್ರಾಂತಿಯನ್ನು ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಸಂಕ್ರಾಂತಿ ಆಚರಣೆ ಬಲು ಜೋರು. ಈ ಸಮಯದಲ್ಲಿ ಎಲ್ಲೆಲ್ಲಿ ನೋಡಿದರೂ ದೊಡ್ಡ ದೊಡ್ಡ ಸುಂದರ ರಂಗೋಲಿಗಳು ಕಣ್ಣಿಗೆ ಬೀಳುತ್ತವೆ. ಮನೆ ಮುಂದೆ ಕೂಡ ರಂಗೋಲಿ ಚಿತ್ತಾರವಿಲ್ಲದೇ ಹಬ್ಬ ಆರಂಭವಾಗಲು ಸಾಧ್ಯವಿಲ್ಲ. ಹಾಗಾದರೆ ಸಂಕ್ರಾಂತಿ ಹಬ್ಬದ ಸಮಯದಲ್ಲಿ ರಂಗೋಲಿಗೆ ಅಷ್ಟೊಂದು ಮಹತ್ವ ನೀಡುವುದಕ್ಕೆ, ಸಂಕ್ರಾಂತಿ ರಂಗೋಲಿಯ ವೈಶಿಷ್ಟ್ಯವೇನು ಇಲ್ಲಿದೆ ವಿವರ.
ಸಂಕ್ರಾಂತಿಯಂದು ರಂಗೋಲಿ ಹಾಕಲು ಕಾರಣವೇನು?
ರಂಗೋಲಿಯು ಅಲಂಕಾರದ ಸಂಕೇತ. ಇದನ್ನು ನೋಡಿದಾಗ ಮನಸ್ಸಿಗೆ ಏನೋ ಖುಷಿ ಸಿಗುತ್ತದೆ. ಇದು ಧಾರ್ಮಿಕ ಅಂಶದ ಭಾಗವೂ ಹೌದು. ಪೂಜೆ, ಪುನಸ್ಕಾರವನ್ನೂ ರಂಗೋಲಿ ಬಿಡಿಸುವ ಮೂಲಕವೇ ಆರಂಭಿಸಲಾಗುತ್ತದೆ. ಸಂಕ್ರಾಂತಿ ಸಮಯದಲ್ಲಿ ಕಮಲದ ಹೂ, ಮಾವಿನ ತೋರಣ, ಪೊಂಗಲ್ ಮಡಿಕೆ, ಕಬ್ಬು ಇಂತಹ ರಂಗೋಲಿಗಳನ್ನು ಹೆಚ್ಚು ನೋಡುತ್ತೇವೆ.
ರಂಗೋಲಿಗಳು ನಮಗೆ ಮನಃಶಾಂತಿ ನೀಡುತ್ತವೆ ಎಂದು ಹೇಳಲಾಗುತ್ತದೆ. ಅಲ್ಲದೆ ಇದರಿಂದ ನಾವು ದೈವಿಕ ಶಕ್ತಿಗಳ ಉಪಸ್ಥಿತಿಯನ್ನು ಅನುಭವಿಸುತ್ತೇವೆ. ಮನೆಗೆ ಲಕ್ಷ್ಮೀದೇವಿಯನ್ನು ಸ್ವಾಗತಿಸುವ ಸಲುವಾಗಿ ರಂಗೋಲಿ ಬಿಡಿಸುತ್ತೇವೆ. ಅತಿಥಿಗಳನ್ನು ದೇವರು ಎಂದು ಭಾವಿಸುವ ಹಿಂದೂ ಧರ್ಮದಲ್ಲಿ ಅತಿಥಿಗಳನ್ನು ಸ್ವಾಗತಿಸಲು ರಂಗೋಲಿ ಹಾಕಲಾಗುತ್ತದೆ. ಮನೆಯಿಂದ ಕೆಟ್ಟ ದೃಷ್ಟಿ ಹಾಗೂ ಕೆಟ್ಟ ಅಂಶಗಳು ದೂರಾಗಲಿ ಎನ್ನುವ ಕಾರಣಕ್ಕೆ ಹಾಗೂ ಯಾವುದೇ ಕೆಟ್ಟ ಅಂಶ ಮನೆ ಒಳಗೆ ಬಾರದೇ ಇರಲಿ ಎನ್ನುವ ಕಾರಣಕ್ಕೆ ಹಬ್ಬದ ಸಮಯದಲ್ಲಿ ಮನೆ ಮುಂದೆ ಸುಂದರವಾದ ರಂಗೋಲಿ ಹಾಕಲಾಗುತ್ತದೆ. ಈ ಸಮಯದಲ್ಲಿ ಅಕ್ಕಿಹಿಟ್ಟಿನಿಂದ ರಂಗೋಲಿ ಹಾಕುವುದು ಉತ್ತಮ.
ಸಂಕ್ರಾಂತಿ ರಂಗೋಲಿ ಮತ್ತು ಲಕ್ಷ್ಮೀದೇವಿ ಕೃಪೆ
ಸಂಕ್ರಾಂತಿಯಂದು ಬಣ್ಣಬಣ್ಣದ ರಂಗೋಲಿಗಳನ್ನು ಏಕೆ ಬಿಡಿಸುತ್ತಾರೆ ಎಂಬ ವಿಷಯಕ್ಕೆ ಬಂದರೆ, ಅದು ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಯ ಆಗಮನವನ್ನು ಸೂಚಿಸುತ್ತದೆ. ಲಕ್ಷ್ಮೀದೇವಿಯು ಹಬ್ಬದ ಸಮಯದಲ್ಲಿ ಮುಂಜಾನೆ ಪ್ರತಿ ಬೀದಿಯನ್ನು ಪ್ರವೇಶಿಸುತ್ತಾಳೆ. ಆದರೆ ಯಾರ ಮನೆಯ ಮುಂಭಾಗವನ್ನು ಗುಡಿಸಿ ಶುಭ್ರಗೊಳಿಸುತ್ತಾರೋ, ಎಲ್ಲೆಲ್ಲಿ ಸುಂದರವಾದ ರಂಗೋಲಿ ಇರುತ್ತವೆಯೋ, ಆ ಮನೆಗೆ ಲಕ್ಷ್ಮೀದೇವಿಯು ಪ್ರವೇಶಿಸುತ್ತಾಳೆ ಎಂಬ ನಂಬಿಕೆ ಇದೆ.
ಲಕ್ಷ್ಮೀದೇವಿಯು ದೀರ್ಘಾಯುಷ್ಯ ಮತ್ತು ಸಂಪತ್ತನ್ನು ಆಶೀರ್ವದಿಸುತ್ತಾಳೆ. ಹಾಗೆಯೇ ಅವಳ ಕೃಪೆ ಇದ್ದರೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ. ಆದ್ದರಿಂದ, ಸಂಕ್ರಾಂತಿಯಂದು, ಲಕ್ಷ್ಮೀದೇವಿಯ ಆಶೀರ್ವಾದವನ್ನು ಪಡೆಯಲು ಈ ಸುಂದರವಾದ ರಂಗೋಲಿಗಳ ಮೂಲಕ ಬೀದಿಯನ್ನು ಅಲಂಕರಿಸಲಾಗುತ್ತದೆ.
ಇದಲ್ಲದೆ ರಂಗೋಲಿ ಬಿಡುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ನೆಲವನ್ನು ಚೆನ್ನಾಗಿ ಒರೆಸಿ, ಹಿಟ್ಟಿನಿಂದ ರಂಗೋಲಿ ಬಿಡಿಸಿದರೆ ಕ್ರಿಮಿ, ಕೀಟಗಳು ಬರುವುದಿಲ್ಲ. ಇದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ರಂಗೋಲಿ ಬಿಡುವುದರಿಂದ ದೇಹಕ್ಕೆ ಒಂದು ರೀತಿಯ ವ್ಯಾಯಾಮವೂ ಸಿಗುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)
ವಿಭಾಗ