ಮಕರ ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಮಾತೇ ಮುತ್ತು ಮಾತೇ ಮೃತ್ಯು, ಮನಸ್ಸು ಮೃದುವಿದ್ದರೂ ಕಠಿಣ ಮಾತಿನಿಂದ ಬರದಿರಲಿ ಆಪತ್ತು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಕರ ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಮಾತೇ ಮುತ್ತು ಮಾತೇ ಮೃತ್ಯು, ಮನಸ್ಸು ಮೃದುವಿದ್ದರೂ ಕಠಿಣ ಮಾತಿನಿಂದ ಬರದಿರಲಿ ಆಪತ್ತು

ಮಕರ ರಾಶಿಯ ಶ್ರೀ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಮಾತೇ ಮುತ್ತು ಮಾತೇ ಮೃತ್ಯು, ಮನಸ್ಸು ಮೃದುವಿದ್ದರೂ ಕಠಿಣ ಮಾತಿನಿಂದ ಬರದಿರಲಿ ಆಪತ್ತು

ಯುಗಾದಿ ರಾಶಿ ಭವಿಷ್ಯ: ಗಾಂಭೀರ್ಯ, ಹಿಗ್ಗದ-ಕುಗ್ಗದ ಸಮಚಿತ್ತದ ಸ್ವಭಾವದಿಂದ ಗಮನ ಸೆಳೆಯುವ ಮಕರ ರಾಶಿಯವರು ಆಂತರ್ಯದಲ್ಲಿ ಮೃದು. ಮಾತಿನ ಮೇಲೆ ಹಿಡಿದ ಸಾಧಿಸುವುದೇ ಇವರಿಗೆ ದೊಡ್ಡ ಸವಾಲು. ಮಕರ ರಾಶಿಗೆ ಈ ವರ್ಷ ಯಾವುದರಲ್ಲಿ ಬೇವು, ಯಾವುದಲ್ಲಿ ಬೆಲ್ಲ. ಜ್ಯೋತಿಷಿ ಎಚ್.ಸತೀಶ್ ಅವರು ಈ ಬರಹದಲ್ಲಿ ವಿವರ ನೀಡಿದ್ದಾರೆ.

ಶ್ರೀ ಕ್ರೋಧಿನಾಮ ಸಂವತ್ಸರ ಮಕರ ರಾಶಿಯ ಯುಗಾದಿ ವರ್ಷ ಭವಿಷ್ಯ
ಶ್ರೀ ಕ್ರೋಧಿನಾಮ ಸಂವತ್ಸರ ಮಕರ ರಾಶಿಯ ಯುಗಾದಿ ವರ್ಷ ಭವಿಷ್ಯ (PC: Canva)

ಮಕರ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಉತ್ತಾರಾಷಾಢ ನಕ್ಷತ್ರದ 2, 3 ಮತ್ತು 4ನೇ ಪಾದ, ಶ್ರವಣ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಧನಿಷ್ಠ ನಕ್ಷತ್ರದ 1 ಮತ್ತು 2ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಮಕರ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಬೊ, ಜ ಅಥವಾ ಜಿ ಆಗಿದ್ದಲ್ಲಿ ಉತ್ತಾರಾಷಾಢ ನಕ್ಷತ್ರ, ಶಿ, ಶು, ಶೆ ಮತ್ತು ಶೊ ಆದಲ್ಲಿ ಶ್ರವಣ ನಕ್ಷತ್ರ ಹಾಗೂ ಗ ಅಥವಾ ಗಿ ಆಗಿದ್ದಲ್ಲಿ ಧನಿಷ್ಠ ನಕ್ಷತ್ರ ಹಾಗೂ ಮಕರ ರಾಶಿ ಆಗುತ್ತದೆ. ದ್ವಾದಶ ರಾಶಿಗಳ ರಾಶಿ ಚಕ್ರದಲ್ಲಿ ಮಕರ ರಾಶಿಯದ್ದು 10ನೇ ಸ್ಥಾನ. ಮೇಕೆ ಈ ರಾಶಿಯ ಚಿಹ್ನೆ. ಈ ರಾಶಿಗೆ ಸೇರಿದವರು ಸ್ವಭಾವತಃ ವಾಸ್ತವಕ್ಕೆ ಒತ್ತುಕೊಡುವ ಬುದ್ಧಿವಂತ ಮನಃಸ್ಥಿತಿಯವರು. ಜೀವನದಲ್ಲಿ ಮಹಾತ್ವಾಕಾಂಕ್ಷೆ ಹೊಂದಿರುತ್ತಾರೆ. ಸಂದರ್ಭಕ್ಕೆ ತಕ್ಕಂತೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಸಕಾಲಕ್ಕೆ ನಿಯಂತ್ರಣಕ್ಕೆ ತಂದುಕೊಳ್ಳದಿದ್ದರೆ, ಸರಿಯಾದ ಕ್ರಮದಲ್ಲಿ ನಿರ್ವಹಿಸದಿದ್ದರೆ ಕೋಪ ಮತ್ತು ಅತೃಪ್ತಿ ಇವರ ಬದುಕಿನಲ್ಲಿ ದೌರ್ಬಲ್ಯಗಳಂತೆ ಕಾಡುತ್ತವೆ.

ಮಕರ ರಾಶಿಯ ಗುಣಲಕ್ಷಣಗಳು (Capricorn characteristics in Kannada)

ಮಕರ ರಾಶಿಯಲ್ಲಿ ಜನಿಸಿದ ಮಹಿಳೆಯರು ಸಿರಿತನ-ಬಡತನ ಎನ್ನದೆ ಎಲ್ಲ ರೀತಿಯ ಜೀವನಕ್ಕೂ ಹೊಂದಿಕೊಳ್ಳುತ್ತಾರೆ. ಸದಾ ಗಾಂಭೀರ್ಯದಿಂದ ಕೂಡಿರುತ್ತಾರೆ. ನೋಡಲು ಸಿಡುಕಿನ ಸ್ವಭಾವದವರಂತೆ ಕಂಡರೂ ಆಂತರ್ಯದಲ್ಲಿ ಕರುಣೆ, ನಂಬಿಕೆ, ಸ್ನೇಹದಂಥ ಗುಣಗಳು ಮನೆ ಮಾಡಿರುತ್ತವೆ. ಸಮಯಕ್ಕೆ ಗೌರವ ನೀಡುತ್ತಾರೆ. ಸದಾಕಾಲ ಯಾವುದಾದರೂ ಒಂದು ಕೆಲಸ ಮಾಡುತ್ತಾ ಚಟುವಟಿಕೆಯಿಂದ ಕೂಡಿರುತ್ತಾರೆ. ಪ್ರಾಮಾಣಿಕತೆ ಜನ್ಮದಿಂದಲೇ ಇವರಿಗೆ ಲಭಿಸಿರುತ್ತದೆ. ಬೇರೆಯವರಿಗೆ ಸಹಾಯ ಮಾಡಲು ಹಿಂಜರಿಯುವುದಿಲ್ಲ. ಮನಸ್ಸಿಗೆ ಬೇಸರ ತರಿಸುವ ವಿಚಾರ ನಡೆದರೆ ಉದ್ವೇಗದಿಂದ ನಡೆದುಕೊಳ್ಳುತ್ತಾರೆ.

ಈ ರಾಶಿಯಲ್ಲಿ ಜನಿಸಿರುವ ಪುರುಷರು ಯಾವುದೇ ವಿಚಾರದಲ್ಲಿಯೂ ಬೇರೆಯವರ ಮೇಲೆ ಅವಲಂಬಿತರಾಗುವುದಿಲ್ಲ. ಹೆಚ್ಚಿನ ಪರಿಶ್ರಮದಿಂದ ಸ್ವಂತ ಕೆಲಸಗಳನ್ನು ಪೂರ್ಣಗೊಳಿಸುತ್ತಾರೆ. ಅಧಿಕಾರಪ್ರಿಯರಾದ ಇವರು ವಿಶೇಷ ಕಾರ್ಯಗಳನ್ನು ಮಾಡಿ ಸಮಾಜದಲ್ಲಿ ಒಳ್ಳೆಯ ಹೆಸರು ಗಳಿಸುತ್ತಾರೆ. ಮನದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಇರುತ್ತದೆ. ಆರೋಗ್ಯದಲ್ಲಿ ಆಗಾಗ ತೊಂದರೆ ಕಾಣಿಸಿಕೊಳ್ಳುತ್ತದೆ.

ಸಾಮಾನ್ಯವಾಗಿ ಯಾರನ್ನೂ ಅವಲಂಬಿಸದೆ ಸ್ವತಂತ್ರವಾಗಿ ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಗಳಿಸುತ್ತಾರೆ. ಬೇರೆಯವರಿಗೆ ಬೇಸರ ಬರುವಂತೆ ಮಾತನಾಡುತ್ತಾರೆ. ಕೈಹಿಡಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತಾರೆ. ತಾವಾಗಿಯೇ ಬೇರೆಯವರಿಗೆ ಸಹಾಯ ಮಾಡಿ ತೊಂದರೆ ಅನುಭವಿಸುತ್ತಾರೆ. ಆದಾಯ ತಕ್ಕಮಟ್ಟಿಗೆ ಉತ್ತಮವಾಗಿರುತ್ತದೆ. ಆದರೆ ಕೇವಲ ಒಂದೇ ರೀತಿಯ ಕೆಲಸ ಮಾಡುವಲ್ಲಿ ನಿರತರಾಗುತ್ತಾರೆ. ಅನವಶ್ಯಕವಾಗಿ ಮಾಡಬೇಕಾದ ಕೆಲಸಗಳನ್ನು ಜಾಣತನದಿಂದ ತಪ್ಪಿಸಿಕೊಳ್ಳುತ್ತಾರೆ.

ಮಕರ ರಾಶಿಗೆ ಶುಭ ದಿನಾಂಕ, ವಾರ, ಬಣ್ಣ

ಮಕರ ರಾಶಿಯಲ್ಲಿ ಜನಿಸಿದವರು ನೆನಪಿಟ್ಟುಕೊಳ್ಳಬೇಕಾದ ವಿಚಾರಗಳಿವು. ಶುಭ ದಿನಾಂಕಗಳು: 6, 8 ಮತ್ತು 9. ಶುಭ ವಾರಗಳು: ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ. ಶುಭ ವರ್ಣ: ನೀಲಿ, ಬಿಳಿ ಮತ್ತು ಕೆಂಪು. ಅಶುಭ ವರ್ಣ: ಹಳದಿ ಮತ್ತು ಬಾದಾಮಿ ಬಣ್ಣ. ಶುಭ ದಿಕ್ಕು: ದಕ್ಷಿಣ ಮತ್ತು ಪಶ್ಚಿಮ. ಶುಭ ತಿಂಗಳು: ಮೇ 15ರಿಂದ ಜೂನ್ 14 ಮತ್ತು ಸೆಪ್ಟೆಂಬರ್ 15ರಿಂದ ಅಕ್ಟೋಬರ್ 14. ಶುಭ ಹರಳು: ನೀಲಮಣಿ, ಝೆರ್ಕೋನ್ ಮತ್ತು ಹಸಿರು ಪಚ್ಚೆ. ಹೊಂದಾಣಿಕೆ ಇರುವ ರಾಶಿ: ಕುಂಭ, ವೃಷಭ ಮತ್ತು ಕನ್ಯಾ. ಹೊಂದಾಣಿಕೆ ಕಷ್ಟವಾಗುವ ರಾಶಿ: ಕಟಕ, ಸಿಂಹ ಮತ್ತು ಧನು.

ಶ್ರೀ ಕ್ರೋಧಿನಾಮ ಸಂವತ್ಸರದ ಮಕರ ರಾಶಿಯ ಗೋಚಾರ ಫಲ

ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಮಕರ ರಾಶಿಯವರಿಗೆ ಉತ್ತಮ ಫಲಗಳು ಲಭ್ಯವಾಗುತ್ತವೆ. ಶನಿ ಮತ್ತು ರಾಹು ಗ್ರಹಗಳು ಸಂವತ್ಸರದ ಕೊನೆಯವರೆಗೂ ಶಕ್ತಿಶಾಲಿಯಾಗಿರುತ್ತವೆ. ಆನಂತರ ಗುರುಗ್ರಹವು ಸಹ ಉತ್ತಮ ಸ್ಥಾನಕ್ಕೆ ಬರಲಿದೆ. ಈ ಕಾರಣದಿಂದಾಗಿ ಮಕರ ರಾಶಿಯವರು ಅನೇಕ ಸಕಾರಾತ್ಮಕ ಫಲಗಳನ್ನು ಪಡೆಯುತ್ತಾರೆ. ಎಲ್ಲರನ್ನೂ ನಂಬದೆ, ಜೀವನದಲ್ಲಿ ಮುಂದುವರೆಯುವುದು ಒಳ್ಳೆಯದು. ನೀವು ಯಾವುದೇ ಕೆಲಸವನ್ನು ಸುಲಭವಾಗಿ ಮಾಡಬಲ್ಲಿರಿ. ಮನಸ್ಸು ಎಷ್ಟೇ ಶುದ್ಧವಾಗಿದ್ದರೂ ಆಡುವ ಮಾತಿನಿಂದ ಕೆಟ್ಟ ಹೆಸರು ಪಡೆಯುವಿರಿ. ಕ್ರಿಯಾಶೀಲತೆ ಒಳ್ಳೆಯದು ಆದರೆ ಅತಿಯಾದ ಅತುರ ಹಾನಿಯನ್ನು ಉಂಟುಮಾಡುತ್ತದೆ.

ಮೇಷ ರಾಶಿಯವರಿಗೆ ಈ ವರ್ಷದ ಸ್ನೇಹ, ವಿಶ್ವಾಸದ ಬಂಧ

ಮಕರ ರಾಶಿಯವರಿಗೆ ಈ ವರ್ಷ ಸಂಬಂಧಿಕರ ನಡುವೆ ಉತ್ತಮ ಬಾಂಧವ್ಯ ರೂಪುಗೊಳ್ಳುತ್ತದೆ. ದಾಂಪತ್ಯದಲ್ಲಿ ಅನ್ಯೋನ್ಯತೆ ಇರುತ್ತದೆ. ಕುಟುಂಬದಲ್ಲಿ ಕೌಟುಂಬಿಕ ಸಮಸ್ಯೆಯೊಂದು ಎದುರಾದರೂ ಬಹುಕಾಲ ಉಳಿಯುವುದಿಲ್ಲ. ನಿಮ್ಮ ನಿಸ್ವಾರ್ಥ ಪ್ರಯತ್ನ ಕುಟುಂಬದಲ್ಲಿ ಶಾಂತಿ ನೆಮ್ಮದಿ ಉಳಿಸಲು ಕಾರಣವಾಗುತ್ತದೆ. ಕುಟುಂಬದ ಕಷ್ಟನಷ್ಟಗಳನ್ನು ಸಮಾನವಾಗಿ ಸ್ವೀಕರಿಸುವ ಕಾರಣ ಎಲ್ಲರೊಡನೆ ಉತ್ತಮ ಬಾಂಧವ್ಯ ಬೆಸೆದಿರುತ್ತದೆ. ಕುಟುಂಬದ ಹಿರಿಯರ ಜವಾಬ್ದಾರಿಯನ್ನು ಒಪ್ಪಿಕೊಂಡು ಮುನ್ನಡೆಯುವಿರಿ. ತಂದೆ ಮೇಲೆ ವಿಶೇಷ ಪ್ರೀತಿ ವಿಶ್ವಾಸವಿರುತ್ತದೆ. ಮಕ್ಕಳೊಂದಿಗೆ ಸ್ನೇಹಿತರಂತೆ ಬಾಳುವುದು ನಿಮ್ಮ ವಿಶೇಷ ಗುಣ.

ಉದ್ಯೋಗ: ಅಸಡ್ಡೆ ತೋರಿದರೆ ಕಷ್ಟ ಎದುರಿಸಬೇಕಾದೀತು

ಮಕರ ರಾಶಿಯವರಿಗೆ ಕ್ರೋಧಿನಾಮ ಸಂವತ್ಸರದಲ್ಲಿ ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೆ ಕೆಲಸದ ವಿಚಾರದಲ್ಲಿ ಅಸಡ್ಡೆ ತೋರಿದರೆ ಕಷ್ಟ ಎದುರಿಸಬೇಕಾಗುತ್ತದೆ. ನಿಮ್ಮ ವೃತ್ತಿ ಜೀವನವು ಸಂಪೂರ್ಣವಾಗಿ ಆಡುವ ಮಾತಿನ ಮೇಲೆ ಅವಲಂಬಿತವಾಗಿರುತ್ತದೆ. ಆತ್ಮವಿಶ್ವಾಸವು ಹೆಚ್ಚುವ ಕಾರಣ ಯಾವುದೇ ಕೆಲಸ ಮಾಡಬಲ್ಲಿರಿ. ಈ ವರ್ಷ ಉದ್ಯೋಗದಲ್ಲಿ ಹೊಸ ಜವಾಬ್ದಾರಿ ನಿಮಗೆ ಸಿಗಬಹುದು. ಕುಟುಂಬದ ಹಿರಿಯರ ಮತ್ತು ಉನ್ನತ ಅಧಿಕಾರಿಗಳ ಸಹಾಯ ದೊರೆಯುತ್ತದೆ. ಉದ್ಯೋಗದಲ್ಲಿ ಎದುರಾಗುವ ಯಾವುದೇ ಸವಾಲುಗಳನ್ನು ಎದುರಿಸಬಲ್ಲಿರಿ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸದಾ ದೊರೆಯುತ್ತದೆ.

ವಿದ್ಯಾಭ್ಯಾಸ: ಕಲಿಕೆಯಲ್ಲಿ ಉತ್ಸಾಹ

ಮಕರ ರಾಶಿಗೆ ಸೇರಿದ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಕುತೂಹಲ ಇರುವ ಕಾರಣ ಕಲಿಕೆಯಲ್ಲಿ ಉತ್ಸಾಹ ತೋರುವಿರಿ. ನಿಮ್ಮಲ್ಲಿರುವ ವಿದ್ಯೆಯನ್ನು ಬೇರೆಯವರಿಗೂ ಕಲಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಪರಿಶ್ರಮದಿಂದ ಯಶಸ್ಸು ಕಾಣಬಹುದು. ಉನ್ನತ ಶಿಕ್ಷಣ ಅಭ್ಯಾಸ ಮಾಡುತ್ತಿದ್ದಲ್ಲಿ ಆರಂಭದಲ್ಲಿ ಎರಡು ತೊಡರು ಉಂಟಾದರೂ ಯಾವುದೇ ತೊಂದರೆ ಕಂಡುಬರುವುದಿಲ್ಲ. ಆದರೆ ನಿದ್ದೆಯನ್ನು ಕಡಿಮೆ ಮಾಡಬೇಕು. ಬೆಳಗಿನ ವೇಳೆ ಅಭ್ಯಾಸ ಬೆಳೆಸಿಕೊಳ್ಳಬೇಕು. ಶಿಕ್ಷಕರ ಸಹಕಾರ ನಿಮಗೆ ಹೆಚ್ಚಿನ ಅವಕಾಶವನ್ನು ನೀಡುತ್ತದೆ.

ಹಣಕಾಸು: ನಿಧಾನಗತಿಯ ಆರ್ಥಿಕ ಪ್ರಗತಿ

ಮಕರ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿಅದೃಷ್ಟವಿರುತ್ತದೆ. ಆದರೆ ನಿಧಾನಗತಿಯಲ್ಲಿ ಆರ್ಥಿಕ ಪ್ರಗತಿ ಉಂಟಾಗುತ್ತದೆ. ಗಳಿಸಿದ ಹಣದಲ್ಲಿ ಉಳಿತಾಯ ಮಾಡಲು ಸಫಲರಾಗುವಿರಿ. ಸ್ವಂತ ಇಚ್ಛೆಯಿಂದ ಖರ್ಚುಗಳನ್ನು ಕಡಿಮೆ ಮಾಡುವಿರಿ. ತಂದೆ ಅಥವಾ ತಾಯಿಯಿಂದ ಹಣದ ಸಹಾಯ ದೊರೆಯಲಿದೆ. ಸದಾ ಕ್ರಿಯಾಶೀಲತೆಯಿಂದ ಮುಂದುವರೆಯುವಿರಿ. ನೀವಾಗಿಯೇ ಯಾರಲ್ಲಿಯೂ ಹಣದ ಸಹಾಯ ಕೇಳುವುದಿಲ್ಲ. ಆದರೆ ತಾನಾಗಿಯೇ ಒದಗಿ ಬರುವ ಸಹಾಯವನ್ನು ತಿರಸ್ಕರಿಸುವುದಿಲ್ಲ. ಜನಸೇವೆಗಾಗಿ ಸ್ವಲ್ಪ ಹಣವನ್ನು ಮೀಸಲಿಡುವಿರಿ. ಈ ಕಾರಣದಿಂದ ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆಯುತ್ತದೆ.

ಕೌಟುಂಬಿಕ ಜೀವನ: ಕೋಪಕ್ಕೆ ಕಡಿವಾಣ ಬಿದ್ದರೆ, ಕಲಹಕ್ಕೆ ವಿರಾಮ

ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪ ಉಂಟಾದರೂ ಶಾಂತಿ ನೆಮ್ಮದಿಗೆ ಕೊರತೆ ಇರುವುದಿಲ್ಲ. ಎಲ್ಲರೊಂದಿಗೆ ಒಳ್ಳೆಯ ಸ್ನೇಹಿತರಂತೆ ಬಾಳುವಿರಿ. ತಾಯಿಯ ಮೇಲೆ ಮತ್ತು ಮಗಳ ಮೇಲೆ ವಿಶೇಷ ಪ್ರೀತಿ ಇರುತ್ತದೆ. ಕುಟುಂಬದ ಯಾರೊಬ್ಬರಿಗೂ ನಿರಾಸೆಯನ್ನು ಉಂಟು ಮಾಡುವುದಿಲ್ಲ. ಕುಟುಂಬದ ಆಸ್ತಿ ಅಥವಾ ಹಣವನ್ನು ಸಮಪಾಲು ಮಾಡುವ ಕಾರಣ ಬಾಂಧವ್ಯ ಮತ್ತಷ್ಟು ಹೆಚ್ಚುತ್ತದೆ. ಕೆಲವೊಮ್ಮೆ ದುಡುಕತನದ ಮಾತುಕತೆಯಿಂದ ಮನಸ್ತಾಪ ಉಂಟಾಗಬಹುದು. ಆದರೆ ತಪ್ಪನ್ನು ಒಪ್ಪಿಕೊಳ್ಳುವ ಗುಣ ನಿಮ್ಮಲ್ಲಿದೆ. ಇದು ಸದಾ ಒಳ್ಳೆಯ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಇದರಿಂದಾಗಿ ಕುಟುಂಬದಲ್ಲಿ ಸಂತೋಷ ಸದಾ ನೆಲೆಸಿರುತ್ತದೆ. ದೂರ ಹೋದವರು ಮತ್ತೊಮ್ಮೆ ನಿಮ್ಮ ಪ್ರೀತಿಯನ್ನು ಅರಸಿ ಮರಳಿ ಬರುತ್ತಾರೆ.

ಮಕ್ಕಳ ವಿಚಾರ: ಮಕ್ಕಳಲ್ಲಿ ಬೆಳೆಯಲಿದೆ ಉತ್ತಮ ಗುಣ

ಮಕ್ಕಳ ವಿಚಾರದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಮಕ್ಕಳಲ್ಲಿ ಒಳ್ಳೆಯ ಗುಣ ಬೆಳೆಯುತ್ತದೆ. ಸಂತಾನ ಇಲ್ಲದವರಿಗೆ ಏಪ್ರಿಲ್ ನಂತರ ಸಂತಾನ ಲಾಭವಿರುತ್ತದೆ. ತಂದೆ ಮತ್ತು ತಾಯಿಯ ಜೊತೆ ಮಕ್ಕಳಿಗೆ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ. ವಿದ್ಯಾರ್ಥಿಗಳು ವಂಶದಲ್ಲಿಯೇ ವಿಶೇಷವಾದ ಸಾಧನೆಯನ್ನು ಮಾಡುತ್ತಾರೆ. ಚಿಕ್ಕವಯಸ್ಸಿನಲ್ಲಿ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳುತ್ತಾರೆ. ಸೋದರ ಸೋದರಿಯ ನಡುವೆ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ. ವಾದ ವಿವಾದದಲ್ಲಿ ತೊಡಗಿದೆ ಮಕ್ಕಳು ಹಿರಿಯರ ಮಾತಿಗೆ ಗೌರವ ತೋರಿಸುತ್ತಾರೆ. ಅದೇ ರೀತಿ ಮಕ್ಕಳ ವಿಚಾರದಲ್ಲಿ ಹಿರಿಯರು ಯಾವುದೇ ತಪ್ಪನ್ನು ಮಾಡುವುದಿಲ್ಲ.

ವಿವಾಹ ಮತ್ತು ದಾಂಪತ್ಯ: ದಾಂಪತ್ಯಕ್ಕೆ ಮನಸ್ತಾಪದ ಕಹಿ ಬೇಡ

ಮಕರ ರಾಶಿಯ ಅವಿವಾಹಿತರಿಗೆ ಆತ್ಮೀಯರ ಸಹಾಯದಿಂದ ವಿವಾಹವಾಗುತ್ತದೆ. ದಂಪತಿಗಳ ನಡುವೆ ಪರಸ್ಪರ ಉತ್ತಮ ಪ್ರೀತಿ ವಿಶ್ವಾಸ ಬೆಳೆಯಲಿದೆ. ಇಷ್ಟಪಟ್ಟವರನ್ನು ಮದುವೆಯಾಗುವ ಯೋಗವಿದೆ. ಅಕ್ಟೋಬರ್ ತಿಂಗಳಿನಲ್ಲಿ ಅನಾವಶ್ಯಕವಾಗಿ ದಂಪತಿಗಳ ನಡುವೆ ಮನಸ್ತಾಪ ಉಂಟಾಗುತ್ತದೆ. ಆದರೆ ಕುಟುಂಬದ ಹಿರಿಯರ ಮಧ್ಯಸ್ಥಿಕೆಯಿಂದ ಸಮಸ್ಯೆ ಪರಿಹಾರಗೊಳ್ಳಲಿದೆ. ಸಂಗಾತಿಯ ಆರೋಗ್ಯದಲ್ಲಿ ತೊಂದರೆ ಉಂಟಾಗುವ ಕಾರಣ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಕೋಪದಲ್ಲಿ ಪತಿ-ಪತ್ನಿಯರು ಒಬ್ಬರು ಇನ್ನೊಬ್ಬರನ್ನು ಮೀರಿಸುತ್ತಾರೆ. ಆದ್ದರಿಂದ ಶಾಂತಿಯಿಂದ ಇರುವುದು ಬಹು ಮುಖ್ಯ. ಪತ್ನಿ ಮಾಡಿದ ತಪ್ಪುಗಳನ್ನು ಪತಿಯು ಮರೆಮಾಚುವ ಸಾಧ್ಯತೆ ಇದೆ. ದಂಪತಿಗಳು ಬೇಸರ ಕಳೆಯಲು ದೀರ್ಘಕಾಲದ ಪ್ರಯಾಣಗಳನ್ನು ಮಾಡಲಿದ್ದಾರೆ.

ವ್ಯಾಪಾರ ಮತ್ತು ವ್ಯವಹಾರ: ದೊಡ್ಡಮಟ್ಟದಲ್ಲಿ ಬೆಳೆಯಲಿದೆ ವ್ಯವಹಾರ

ಸಣ್ಣ ಬಂಡವಾಳದ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭ ದೊರೆಯುತ್ತದೆ. ಆದರೆ ಉದ್ಯಮಿಗಳ ಆದಾಯದಲ್ಲಿ ಕೊಂಚ ಹಿನ್ನೆಡೆ ಉಂಟಾಗುತ್ತದೆ. ಕಾರ್ಮಿಕರ ಸಹಕಾರ ಗಳಿಸಿದರೆ ಯಾವುದೇ ತೊಂದರೆ ಇರುವುದಿಲ್ಲ. ಕಷ್ಟನಷ್ಟಗಳಿಗೆ ಎಂದಿಗೂ ಭಯ ಪಡುವುದಿಲ್ಲ. ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಉತ್ತಮ ಲಾಭ ಗಳಿಸುವಿರಿ. ವ್ಯಾಪಾರ-ವ್ಯವಹಾರಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಿರಿ. ಬೇಜವಾಬ್ದಾರಿಯಿಂದ ಉದ್ಯಮದ ಜವಾಬ್ದಾರಿಯನ್ನು ಬೇರೆಯವರಿಗೆ ಒಪ್ಪಿಸುವ ಸಾಧ್ಯತೆ ಇದೆ. ಇಂಥ ವಿಚಾರಗಳಲ್ಲಿ ಎಚ್ಚರಿಕೆ ಇರಲಿ. ಉತ್ತಮ ಆದಾಯವನ್ನು ಗಳಿಸುವಿರಿ. ಆತುರದಿಂದ ಹಣಕಾಸಿನ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಲೆಕ್ಕವಿಲ್ಲದಂತೆ ಹಣವನ್ನು ಖರ್ಚು ಮಾಡಿದರೂ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಖರ್ಚುವೆಚ್ಚದ ಮೇಲೆ ಸಾಧ್ಯವಾದಷ್ಟೂ ಹಿಡಿತ ಸಾಧಿಸುವುದು ಒಳ್ಳೆಯದು.

ವಾಹನ ವಿಚಾರ: ಐಷಾರಾಮಿ ವಾಹನ ಕೊಳ್ಳುವ ಸಾಧ್ಯತೆ

ಮಕರ ರಾಶಿಯವರು ಈ ವರ್ಷ ಐಷಾರಾಮಿ ವಾಹನಗಳನ್ನು ಕೊಳ್ಳುವ ಸಾಧ್ಯತೆ ಇದೆ. ಮಕ್ಕಳಿಗೆ ಉಡುಗೊರೆಯಾಗಿ ವಾಹನವನ್ನು ನೀಡುವಿರಿ. ಆದರೆ ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ. ನೀಲಿ ಬಣ್ಣದ ವಾಹನ ಅದೃಷ್ಟದಾಯಕವಾಗಿರುತ್ತದೆ.

ಆರೋಗ್ಯದ ವಿಚಾರ: ಆಹಾರ ಸೇವಿಸುವ ಮೊದಲು ಎಚ್ಚರ ವಹಿಸಿ

ಮಕರ ರಾಶಿಯವರಿಗೆ ಈ ವರ್ಷ ಉತ್ತಮ ಆರೋಗ್ಯ ಇರುತ್ತದೆ. ಆದರೆ ಗಂಟಲಲ್ಲಿ ನೋವಿನ ಅನುಭವವಾಗುತ್ತದೆ. ಕಲುಷಿತ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಕಂಡುಬರುತ್ತದೆ. ಅಜೀರ್ಣದ ತೊಂದರೆ ಕಾಣಿಸಿಕೊಳ್ಳಬಹುದು. ದೈಹಿಕ ವ್ಯಾಯಾಮದಿಂದ ಉತ್ತಮ ಬದಲಾವಣೆಗಳನ್ನು ಕಾಣಬಹುದು. ಹೆಣ್ಣು ಮಕ್ಕಳಿಗೆ ಉತ್ತಮ ಆರೋಗ್ಯ ಇರಲಿದೆ. ಆಗ್ಗಾಗ್ಗ ಕೆಮ್ಮು ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.

ಮಕರ ರಾಶಿಗೆ ಪರಿಹಾರಗಳು

1) ಪ್ರತಿದಿನ ಮಹಾ ಮೃತ್ಯುಂಜಯ ಮಂತ್ರ ಪಠಿಸುವುದರಿಂದ ಅಥವಾ ಕೇಳುವುದರಿಂದ ಮಾತಿನ ಮೇಲೆ ಹತೋಟಿ ಸಾಧಿಸುವಿರಿ. ಹಣಕಾಸಿನ ತೊಂದರೆ ಉಂಟಾಗುವುದಿಲ್ಲ.

2) ಕಡಲೆ ಬೇಳೆ ಮತ್ತು ಹಳದಿ ವಸ್ತ್ರವನ್ನು ದಾನ ನೀಡುವುದರಿಂದ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುತ್ತದೆ.

3) ಶ್ರೀ ವಿಷ್ಣು ದೇವಾಲಯದಲ್ಲಿ ಪೂಜೆ ಮಾಡಿಸಿದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ.

4) ಶ್ರೀ ಪಂಚಮುಖಿ ಆಂಜನೇಯಸ್ವಾಮಿ ಪೂಜೆ ಮಾಡುವುದರಿಂದ ಮನದ ಆತಂಕ ದೂರವಾಗಲಿದೆ. ದಂಪತಿ ನಡುವೆ ಉತ್ತಮ ಸಾಮರಸ್ಯ ಏರ್ಪಡುತ್ತದೆ.

5) ಹಸಿರು ಮತ್ತು ನೀಲಿ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.

ಬರಹ: ಎಚ್‌.ಸತೀಶ್, ಜ್ಯೋತಿಷಿ, ಬೆಂಗಳೂರು.ಇಮೇಲ್: sathishaapr23@gmail.com

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮ ಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು.

(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್‌ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ಯುಗಾದಿ ಹಬ್ಬ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ಮಾಹಿತಿಗೆ kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.