ಮಕರ ಸಂಕ್ರಾಂತಿ 2025: ಸಂಕ್ರಾಂತಿ ದಿನ ಅನುಸರಿಸಬೇಕಾದ ಕ್ರಮಗಳೇನು; ಈ ದಿನ ಪುಣ್ಯಸ್ನಾನ, ದಾನ ಮಾಡುವುದರ ಮಹತ್ವ ತಿಳಿಯಿರಿ
ಭಾರತದಲ್ಲಿ ಆಚರಿಸುವ ಪ್ರಮಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಕೂಡ ಒಂದು. ದಕ್ಷಿಣ ಭಾರತದಲ್ಲಿ ಮಕರ ಸಂಕ್ರಾಂತಿ ಆಚರಣೆ ಬಹಳ ವಿಶೇಷ. ಈ ಬಾರಿ ಮಕರ ಸಂಕ್ರಾಂತಿ ಯಾವಾಗ, ಈ ದಿನ ಅನುಸರಿಸಬೇಕಾದ ಕ್ರಮಗಳೇನು ಎಂಬಿತ್ಯಾದಿ ವಿವರ ಇಲ್ಲಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಮಕರ ಸಂಕ್ರಾಂತಿ ಹಿಂದೂಗಳ ಪವಿತ್ರ ಹಬ್ಬ. ಕ್ಯಾಲೆಂಡರ್ ವರ್ಷದ ಮೊದಲ ಹಬ್ಬವಾಗಿ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯ ನಂತರ ಉತ್ತರಾಯಣ ಆರಂಭವಾಗುತ್ತದೆ. ಅಂದರೆ ಸೂರ್ಯನು ಉತ್ತರ ದಿಕ್ಕಿನ ಕಡೆಗೆ ಪಯಣ ಬೆಳೆಸುತ್ತಾನೆ. ಈ ವರ್ಷ ಮಕರ ಸಂಕ್ರಾಂತಿ ಯಾವಾಗ, ಈ ಹಬ್ಬದ ದಿನ ಆಚರಿಸಬೇಕಾದ ಕ್ರಮಗಳೇನು ಎಂಬಿತ್ಯಾದಿ ವಿವರ ಇಲ್ಲಿದೆ.
ಮಕರ ಸಂಕ್ರಾಂತಿ 2025
ಪುಷ್ಯಮಾಸ ಕೃಷ್ಣಪಕ್ಷದ ಪಾಡ್ಯದ ದಿನ ಅಂದರೆ 2025 ಜನವರಿ 14, ಮಂಗಳವಾರದಂದು ಸಂಕ್ರಾಂತಿ ಹಬ್ಬವನ್ನು ಆಚರಿಸಬೇಕು. ಈ ದಿನವನ್ನು ಉತ್ತರಾಯಣ ಪುಣ್ಯಕಾಲ ಎಂದೂ ಕರೆಯುತ್ತಾರೆ. ಇದನ್ನು ಪರ್ವಕಾಲ ಎಂದು ಕೂಡ ಕರೆಯಲಾಗುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಈ ದಿನವು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ದಿನ ಮಾಡುವ ಪೂಜೆ ಪುನಸ್ಕಾರಗಳು ಮತ್ತು ಧಾನ ಧರ್ಮಗಳು ಹೆಚ್ಚಿನ ಶುಭ ಫಲಗಳನ್ನು ನೀಡುತ್ತವೆ ಎಂಬ ನಂಬಿಕೆ ಇದೆ. ಈ ದಿನ ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ತನ್ನ ಪಥವನ್ನು ಬದಲಾಯಿಸುತ್ತಾನೆ. ಜ್ಯೋತಿಷ್ಯದ ಪ್ರಕಾರ ಈ ದಿನ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಆದ್ದರಿಂದ ಈ ದಿನವನ್ನು ಮಕರ ಸಂಕ್ರಾಂತಿ ಎಂದೂ ಕರೆಯುತ್ತಾರೆ. ಮಕರ ಸಂಕ್ರವಣ ಎಂಬ ಹೆಸರೂ ಇದೆ.
ಮಕರ ಸಂಕ್ರಾಂತಿಯ ಪುಣ್ಯಸ್ನಾನದ ವಿಶೇಷ
ಮಕರ ಸಂಕ್ರಾಂತಿಯ ದಿನ ಸ್ನಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಈ ದಿನ ಸ್ನಾನ ಮಾಡದೇ ಹೋದರೆ ಮುಂದಿನ ಏಳು ಜನ್ಮಗಳವರೆಗೂ ರೋಗಿಯಾಗಿ ಜನ್ಮ ತಾಳುತ್ತಾರೆ. ಅಷ್ಟಲ್ಲದೆ ಇರುವ ಹಣವನ್ನು ಕಳೆದುಕೊಂಡು ಹಣದ ತೊಂದರೆಯಿಂದ ಬಳಲುತ್ತಾರೆ ಎಂದು ಹೇಳಲಾಗುತ್ತದೆ. ಆದ್ದರಿಂದ ಇಂದಿನ ಸ್ನಾನವು ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸೂರ್ಯನು ಉದಯಿಸುವ ಮುನ್ನ ಸ್ನಾನವನ್ನು ಮಾಡಿ ಸೂರ್ಯನಿಗೆ ಅರ್ಘ್ಯವನ್ನು ನೀಡುವುದರಿಂದ ಏಳು ಜನ್ಮಗಳಲ್ಲಿ ಮಾಡಿರುವ ಪಾಪಗಳಿಂದ ಮುಕ್ತರಾಗಬಹುದು.ಅಲ್ಲದೆ ಜನ್ಮ ಕುಂಡಲಿಯಲ್ಲಿ ಬ್ರಹ್ಮ ಹತ್ಯಾ ದೋಷವಿದ್ದಲ್ಲಿ ಅದರಿಂದ ಮುಕ್ತರಾಗಬಹುದು. ಮಕರ ಸಂಕ್ರಾಂತಿ ದಿನ ಪೂಜೆ ಮತ್ತು ದಾನ ಧರ್ಮಗಳಿಂದ ಕುಟುಂಬದಲ್ಲಿ ಹಿರಿಯರೊಂದಿಗೆ ಮನಸ್ತಾವಿದ್ದರೆ ಅದು ಬಗೆಹರಿಯುತ್ತದೆ. ಈ ದಿನದಂದು ಪುಣ್ಯಸ್ನಾನವನ್ನು ಮಾಡುವುದು ಅತಿ ಶ್ರೇಷ್ಠಕರ.
ಮಕರ ಸಂಕ್ರಾಂತಿ ದಿನ ದಾನ ಮಾಡುವುದರ ವಿಶೇಷ
ಈ ದಿನದಂದು ಶ್ರಾದ್ಧವನ್ನು ಸಹ ಮಾಡಬಹುದಾಗಿದೆ. ಆದರೆ ಪಿಂಡ ಸಹಿತ ಶ್ರಾದ್ದವನ್ನು ಮಾಡಬಾರದು. ಈ ದಿನ ಬೆಳಗಿನ ವೇಳೆ ಭೋಜನವನ್ನು ಸೇವಿಸಿ, ರಾತ್ರಿಯ ವೇಳೆಯಲ್ಲಿ ಉಪವಾಸವಿರುವ ಪರಿಪಾಠವಿದೆ. ಆದರೆ ಜೀವಂತ ಪಿತೃಗಳು ಉಪವಾಸವನ್ನು ಮಾಡಬಾರದು. ಕೆಲವು ಪ್ರಾಂತ್ಯಗಳಲ್ಲಿ ತಂದೆ ಮತ್ತು ಮಗನು ಒಂದೇ ಕಡೆ ವಾಸವಾಗಿದ್ದಲ್ಲಿ ಉಪವಾಸವನ್ನು ಮಾಡುವುದಿಲ್ಲ. ಇದರ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿ ಸೂಚಿಸಿದೆ. ಗತಿಸಿದ ಹಿರಿಯರ ಹೆಸರಿನಲ್ಲಿ ಈ ದಿನ ದಾನವಾಗಿ ನೀಡುವ ವಸ್ತುಗಳು ಮುಂದಿನ ಜನ್ಮಗಳಲ್ಲಿ ದಾನ ನೀಡಿದವನಿಗೆ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ದಿನದಂದು ಶಿವನ ದೇಗುಲದಲ್ಲಿ ಎಳ್ಳಿನ ಎಣ್ಣೆಯಿಂದ ದೀಪವನ್ನು ಬೆಳಗಿಸಿದರೆ ಉತ್ತಮ ಫಲಗಳು ದೊರೆಯುತ್ತವೆ. ಕರಿ ಎಳ್ಳಿನ ದಾನದಿಂದ ನಿರೀಕ್ಷಿತ ಫಲಗಳನ್ನು ಪಡೆಯಬಹುದು. ಈ ದಿನ ಗತಿಸಿದ ವಂಶದ ಹಿರಿಯರಿಗೆ, ಆಪ್ತರಿಗೆ, ಬಂದು ಮಿತ್ರರಿಗೆ ತಿಲತರ್ಪಣವನ್ನು ನೀಡಬಹುದು. ಈ ದಿನದಂದು ಶಿವನಿಗೆ ತುಪ್ಪದಿಂದ ಅಭಿಷೇಕವನ್ನು ಮಾಡಬೇಕು. ಕೆಲವು ರಾಜ್ಯಗಳಲ್ಲಿ ಶಿವನಿಗೆ ಶಾಲ್ಯಾನ್ನದ ಅಭಿಷೇಕವನ್ನು ಮಾಡುತ್ತಾರೆ. ಇದರಿಂದ ಅಪಮೃತ್ಯು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ತಾಮ್ರದ ತಂಬಿಗೆ ಅಥವಾ ತಾಮ್ರದ ಪಾತ್ರೆಯಲ್ಲಿ ಕರಿಎಳ್ಳನ್ನು ತುಂಬಿ ದಾನ ಮಾಡುವುದು ಹೆಚ್ಚಿನ ಪದದಾಯಕವಾಗಿದೆ. ಶಿವನಿಗೆ ಪೂಜೆಯನ್ನು ಮಾಡಿದ ನಂತರ ಯತಿಗಳಿಗೆ ಭೋಜನದ ವ್ಯವಸ್ಥೆಯನ್ನು ಮಾಡಿ, ದಕ್ಷಿಣ ಸಹಿತ ತಾಂಬೂಲವನ್ನು ನೀಡಿ ಆಶೀರ್ವಾದವನ್ನು ಪಡೆಯಬೇಕು, ಇದರಿಂದ ಗುರುಶಾಪದಿಂದ ಮುಕ್ತರಾಗಬಹುದು. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ.
ನವಗ್ರಹ ಪೂಜೆ ಅಥವ ನವಗ್ರಹ ಹೋಮವನ್ನು ಮಾಡಿ, ಸೂರ್ಯದೇವನಿಗೆ ಹಾಲಿನಿಂದ ಅಭಿಷೇಕವನ್ನು ಮಾಡಿದಲ್ಲಿ ಕುಟುಂಬದ ಹಿರಿಯರಿಗೆ ಒಳ್ಳೆಯದು. ಕಾನೂನಿನ ವಿಚಾರದಲ್ಲಿ ಜಯ ದೊರೆಯುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳ ಜೊತೆಯಲ್ಲಿನ ಮನಸ್ತಾಪ ಮತ್ತು ಭಿನ್ನಾಭಿಪ್ರಾಯಗಳು ದೂರವಾಗುತ್ತವೆ. ಬಹುದಿನದಿಂದ ಕಾಡುತ್ತಿರುವ ಅನಾರೋಗ್ಯ ಇದ್ದಲ್ಲಿ ವಸ್ತ್ರ ಮತ್ತು ಗೋದಾನ ಮಾಡಿದಲ್ಲಿ ಅರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ.
ಉದಯೇ ಬ್ರಹ್ಮ ಸ್ವರೂಪೋಯಂ ಮಧ್ಯಾನೇತು ಮಹೇಶ್ವರಃ
ಅಸ್ತಮಾನೇ ಸ್ವಯಂ ವಿಷ್ಣು ತ್ರಯಿಮೂರ್ತಿ ದಿವಾಕರ:
ಸೂರ್ಯನು ಉದಯಕಾಲದಲ್ಲಿ ಬ್ರಹ್ಮ, ಮಧ್ಯಾಹ್ನದ ವೇಳೆ ಪರಮೇಶ್ವರ ಮತ್ತು ಸೂರ್ಯಾಸ್ತದ ವೇಳೆ ಭಗವಾನ್ ವಿಷ್ಣುವಿನ ರೂಪ ಎಂದು ವೇದಗಳಲ್ಲಿ ಹೇಳಿದೆ. ಆದ್ದರಿಂದ ಈ ದಿನದಂದು ಯಾವುದೇ ವೇಳೆಯಲ್ಲಿ ಸೂರ್ಯನನ್ನು ಪೂಜಿಸಬಹುದು. ಆದರೆ ಅರ್ಘ್ಯವನ್ನು ಮಾತ್ರ ಬೆಳಗಿನ ವೇಳೆ ಮಾತ್ರ ನೀಡಬೇಕು. ಉಳಿದ ದಿನಗಳಲ್ಲಿ ಸೂರ್ಯಾಸ್ತವಾದ ನಂತರ ಸೂರ್ಯನಿಗೆ ಸಂಬಂಧಿಸಿದ ಮಂತ್ರಗಳನ್ನು ಸಹ ಜಪಿಸಬಾರದೆಂದು ಹೇಳಲಾಗುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)