ಮಕರ ಸಂಕ್ರಾಂತಿ 2025: ಸುಗ್ಗಿ ಹಬ್ಬದಂದು ಗಾಳಿಪಟ ಹಾರಿಸುವುದು ಏಕೆ, ಇದರ ಹಿಂದಿರುವ ವೈಜ್ಞಾನಿಕ, ಧಾರ್ಮಿಕ ಕಾರಣವೇನು?
Makara Sankranti 2025: ಸಂಕ್ರಾಂತಿ ಹಬ್ಬದಂದು ಆತ್ಮೀಯರಿಗೆ ಎಳ್ಳು ಬೆಲ್ಲ ಹಂಚುವುದು, ರಾಸುಗಳಿಗೆ ಕಿಚ್ಚು ಹಾಯಿಸುವ ಸಂಪ್ರದಾಯವಿದೆ. ಜೊತೆಗೆ ಮಕ್ಕಳು, ಹಿರಿಯರೆಲ್ಲಾ ಜೊತೆಗೆ ಸೇರಿ ಗಾಳಿಪಟ ಹಾರಿಸುತ್ತಾರೆ. ಸುಗ್ಗಿ ಹಬ್ಬದಂದು ಗಾಳಿಪಟ ಹಾರಿಸುವುದು ಏಕೆ? ಇದರ ಹಿಂದಿರುವ ವೈಜ್ಞಾನಿಕ, ಧಾರ್ಮಿಕ ಕಾರಣ ಹೀಗಿದೆ.

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಇಂದು (ಜ 14) ದೇಶಾದ್ಯಂತ ಈ ಹಬ್ಬವನ್ನು ವಿವಿಧ ಹೆಸರುಗಳಿಂದ ಆಚರಿಸಲಾಗುತ್ತಿದೆ. ದಕ್ಷಿಣದಲ್ಲಿ ಈ ಹಬ್ಬವನ್ನು ಎಳ್ಳು ಬೆಲ್ಲ ಹಂಚುವ ಮೂಲಕ ಆಚರಿಸಲಾಗುತ್ತದೆ. ಎಳ್ಳು, ಬೆಲ್ಲ, ಹುರಿಕಡಲೆ, ಕೊಬ್ಬರಿ, ಶೇಂಗಾ ಎಲ್ಲವನ್ನೂ ಬೆರೆಸಿ ಸಕ್ಕರೆ ಅಚ್ಚಿನ ಜೊತೆ ನೆರೆಹೊರೆಯವರಿಗೆ ಹಂಚಲಾಗುತ್ತದೆ. ಮಕ್ಕಳು, ಅದರಲ್ಲೂ ಹೆಣ್ಣು ಮಕ್ಕಳು ಹೊಸ ಬಟ್ಟೆ ಧರಿಸಿ ಎಳ್ಳು ಹಂಚಲು ಹೋಗುತ್ತಾರೆ. ಇದನ್ನು ನೋಡುವುದೇ ಚೆಂದ.
ಸಂಕ್ರಾಂತಿ ಹಬ್ಬದ ರಾತ್ರಿ ರಾಸುಗಳಿಗೆ ಅಲಂಕಾರ ಮಾಡಿ ಕಿಚ್ಚು ಹಾಯಿಸಲಾಗುತ್ತದೆ. ಈ ಎಲ್ಲಾ ಆಚರಣೆಗಳ ಜೊತೆಗೆ ಸಾಮಾನ್ಯವಾಗಿ ಸಂಕ್ರಾಂತಿ ದಿನ ಮಕ್ಕಳು, ಹಿರಿಯರೆಲ್ಲಾ ಗಾಳಿಪಟ ಹಾರಿಸುತ್ತಾರೆ. ಕೆಲಸಕ್ಕೆ ರಜೆ ಹಾಕಿ ತಮ್ಮ ತಮ್ಮ ಊರುಗಳಿಗೆ ತೆರಳಿ ಸಂತೋಷದಿಂದ ಹಬ್ಬ ಆಚರಿಸುತ್ತಾರೆ. ಸಂಕ್ರಾಂತಿ ಹಬ್ಬದಂದು ಗಾಳಿಪಟ ಹಾರಿಸುವುದು ಏಕೆ? ಇಲ್ಲಿದೆ ಮಾಹಿತಿ.
ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಏಕೆ?
ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಆಚರಣೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸುತ್ತಾ ಖುಷಿಯಿಂದ ಕಾಲ ಕಳೆಯುತ್ತಾರೆ. ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದರ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ. ತೆರೆದ ಮೈದಾನಗಳಲ್ಲಿ ನಿಂತು ಗಾಳಿಪಟಗಳನ್ನು ಹಾರಿಸುವುದರಿಂದ ದೇಹಕ್ಕೆ ವಿಟಮಿನ್ ಡಿ ಸಿಗುತ್ತದೆ. ವಿಟಮಿನ್ ಡಿ ದೇಹಕ್ಕೆ ಬಹಳ ಅತ್ಯಗತ್ಯ. ಬಿಸಿಲಿನಲ್ಲಿ ಸ್ವಲ್ಪ ಹೊತ್ತು ನಿಂತು ಗಾಳಿಪಟ ಹಾರಿಸಿದರೆ ಚಳಿಯಿಂದ ರಕ್ಷಣೆ ಸಿಗುತ್ತದೆ. ಯಾವ ರೋಗವೂ ದೇಹವನ್ನು ಸೋಕುವುದಿಲ್ಲ.
ಸಂಕ್ರಾಂತಿಯಂದು ಗಾಳಿಪಟ ಹಾರಿಸುವುದರ ಹಿಂದೆ ಧಾರ್ಮಿಕ ಕಾರಣವೂ ಇದೆ. ಪುರಾಣಗಳ ಪ್ರಕಾರ ಮಕರ ಸಂಕ್ರಾಂತಿಯಂದು ಗಾಳಿಪಟ ಹಾರಿಸುವ ಸಂಪ್ರದಾಯ ಆರಂಭವಾಗಿದ್ದು ಶ್ರೀರಾಮನಿಂದ. ಸಂಕ್ರಾಂತಿಯಂದು ಶ್ರೀರಾಮ ಮೊದಲ ಬಾರಿಗೆ ಗಾಳಿಪಟ ಹಾರಿಸುತ್ತಾನೆ. ರಾಮ ಹಾರಿಸಿದ ಗಾಳಿಪಟವು ಇಂದ್ರ ಲೋಕದವರೆಗೂ ಹೋಗುತ್ತದೆ. ಅಂದಿನಿಂದ ಹಿಂದೂಗಳು ರಾಮನು ಪ್ರಾರಂಭಿಸಿದ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇದಿಷ್ಟೇ ಅಲ್ಲದೆ, ಸಂಕ್ರಾಂತಿಯಂದು ಒಟ್ಟಿಗೆ ಸೇರಿ ಗಾಳಿಪಟ ಹಾರಿಸುವುದರಿಂದ ಎಲ್ಲರ ನಡುವೆ ಬಾಂಧವ್ಯ ವೃದ್ಧಿಯಾಗುತ್ತದೆ. ಗಾಳಿಪಟವನ್ನು ಸಂಪತ್ತು, ಸಂತೋಷ ಮತ್ತು ಸ್ವಾತಂತ್ರ್ಯದ ಸಂಕೇತ ಎಂದು ನಂಬಲಾಗಿದೆ.
ಕಬ್ಬು ಏಕೆ ಬಳಸಲಾಗುತ್ತದೆ?
ಸಂಕ್ರಾಂತಿಯಂದು ಎಳ್ಳು, ಬೆಲ್ಲ ಮಾತ್ರವಲ್ಲದೆ ಕಬ್ಬನ್ನು ಹೆಚ್ಚಾಗಿ ಬಳಸಲಾಗುತ್ತದೆ. ಎಳ್ಳು, ಬೆಲ್ಲ ಹಂಚುವಾಗ ಜೊತೆಗೆ ಕಬ್ಬನ್ನೂ ಹಂಚಲಾಗುತ್ತದೆ. ಬಹುತೇಕ ಕಡೆ ಕಪ್ಪು ಕಬ್ಬನ್ನು ಹೆಚ್ಚು ಬಳಸುತ್ತಾರೆ. ದಕ್ಷಿಣದ ರಾಜ್ಯಗಳಲ್ಲಿ ಕಬ್ಬು ಇಲ್ಲದೆ ಹಬ್ಬ ಪೂರ್ಣಗೊಳ್ಳುವುದೇ ಇಲ್ಲ. ಈ ಸಮಯದಲ್ಲಿ ಚಳಿ ಹೆಚ್ಚಾಗಿರುವುದರಿಂದ ಶೀತ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. ಔಷಧೀಯ ಗುಣಗಳಿರುವ ಕಬ್ಬು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣದಿಂದ ಹಿಂದಿನ ಕಾಲದಿಂದ ನಡೆದುಕೊಂಡು ಬಂದಿರುವ ನಂಬಿಕೆ, ಸಂಪ್ರದಾಯ.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಇದನ್ನೂ ಓದಿ: ಹೀಗಿರುತ್ತೆ ನಾಗಾಸಾಧುಗಳ ವೇಷ ಭೂಷಣ
