ಮಕರ ಸಂಕ್ರಾಂತಿ 2025: ವರ್ಷದ ಮೊದಲ ಹಬ್ಬದಂದು ಸೂರ್ಯನನ್ನು ಈ ರೀತಿ ಪೂಜಿಸಿದರೆ ಶುಭ ಫಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಕರ ಸಂಕ್ರಾಂತಿ 2025: ವರ್ಷದ ಮೊದಲ ಹಬ್ಬದಂದು ಸೂರ್ಯನನ್ನು ಈ ರೀತಿ ಪೂಜಿಸಿದರೆ ಶುಭ ಫಲ

ಮಕರ ಸಂಕ್ರಾಂತಿ 2025: ವರ್ಷದ ಮೊದಲ ಹಬ್ಬದಂದು ಸೂರ್ಯನನ್ನು ಈ ರೀತಿ ಪೂಜಿಸಿದರೆ ಶುಭ ಫಲ

ಮಕರ ಸಂಕ್ರಾಂತಿ 2025: ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲರೂ ಸಜ್ಜಾಗಿದ್ಧಾರೆ. ಹಾಗೇ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಆಚರಣೆಗೆ ಸಕಲ ಸಿದ್ಧತೆ ಕೂಡಾ ನಡೆಯುತ್ತಿದೆ. ಸಂಕ್ರಾಂತಿಯಂದು ಸೂರ್ಯದೇವನನ್ನು ಈ ರೀತಿ ಪೂಜಿಸಿದರೆ ಶುಭಫಲ ದೊರೆಯುತ್ತದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)

ಮಕರ ಸಂಕ್ರಾಂತಿಯಂದು ಸೂರ್ಯನನ್ನು ಈ ರೀತಿ ಪೂಜಿಸಿದರೆ ಶುಭ ಫಲ
ಮಕರ ಸಂಕ್ರಾಂತಿಯಂದು ಸೂರ್ಯನನ್ನು ಈ ರೀತಿ ಪೂಜಿಸಿದರೆ ಶುಭ ಫಲ

ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ. ಸೂರ್ಯನು ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ದಿನ ಸೂರ್ಯನನ್ನು ಪೂಜಿಸಿದಲ್ಲಿ ಶುಭಫಲಗಳು ದೊರೆಯುತ್ತದೆ. ಸೂರ್ಯನ ದಶಾಭುಕ್ತಿ ಅಥವಾ ಅಂತರ್ಭುಕ್ತಿ ನಡೆಯುತ್ತಿದ್ದಲ್ಲಿ ತ್ವರಿತ ಗತಿಯಲ್ಲಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ.

  • ಸೂರ್ಯೋದಯದ ನಂತರ ಒಂದು ತಾಸಿನ ಒಳಗೆ ಶಿವನಿಗೆ ರುದ್ರಾಭಿಷೇಕ ಮಾಡಿ, ಶಾಲ್ಯಾನ್ನವನ್ನು ನೇವೇದ್ಯವನ್ನಾಗಿ ನೀಡಿದಲ್ಲಿ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಕುಟುಂಬದಲ್ಲಿ ಒಮ್ಮತ ಉಂಟಾಗುತ್ತದೆ. ಕೆಲವರು ಮಂಗಳಾರತಿಯನ್ನು ತೆಗೆದುಕೊಂಡು ಹೊರನಡೆಯುತ್ತಾರೆ. ಆದರೆ ತೀರ್ಥವನ್ನು ಸೇವಿಸಿ , ಶಿವನಿಗೆ ನಮಸ್ಕರಿಸಬೇಕು. ಕನಿಷ್ಠಪಕ್ಷ ಐದು ನಿಮಿಷವಾದರೂ ದೇವಾಲಯದ ಒಳಗೆ ಕುಳಿತು ನಂತರವಷ್ಟೇ ಹೊರ ಬರಬೇಕು.
  • ಕುಲದೇವರ ದೇವಾಲಯದಲ್ಲಿ ಇರುವ ನವಗ್ರಹಗಳಿಗೆ ಪೂಜೆ ಮಾಡಬೇಕು. ಗೋಧಿಯಿಂದ ತಯಾರಿಸಿದ ಆಹಾರ ಪದಾರ್ಥವನ್ನು ಭಕ್ತಾಧಿಗಳಿಗೆ ನೀಡಬೇಕು. ಹಂಚಲೆಂದು ತಂದ ಪ್ರಸಾದವನ್ನು ಉಳಿಸಿಕೊಂಡು ಮನೆಗೆ ವಾಪಸ್‌ ತೆಗೆದುಕೊಂಡು ಹೋಗಬಾರದು. ದೇವಾಲಯದಲ್ಲಿಯೇ ಪ್ರಸಾದವನ್ನಾಗಿ ಸೇವಿಸಬಹುದು. ಇದರಿಂದ ಕುಟುಂಬದಲ್ಲಿನ ಕಷ್ಟ ಗಳು ದೂರವಾಗುತ್ತವೆ. ನೆರೆಹೊರೆಯವರ ಜೊತೆಯಲ್ಲಿ ಮನಸ್ತಾಪ ಇದ್ದಲ್ಲಿ ಕೊನೆಗೊಂಡು ಉತ್ತಮ ಸ್ನೇಹ ಬೆಳೆಯುತ್ತದೆ.

ಇದನ್ನೂ ಓದಿ:  ವೈಕುಂಠ ಏಕಾದಶಿ ಏಕೆ ಆಚರಿಸಲಾಗುತ್ತಿದೆ, ವಿಷ್ಣುವನ್ನು ಪೂಜಿಸುವುದರಿಂದ ಏನು ಫಲ? ಇಲ್ಲಿವೆ ಪೌರಾಣಿಕ ಕಥೆಗಳು

  • ಸಂಜೆ ಸೂರ್ಯಾಸ್ತಕ್ಕೂ ಮುನ್ನ ಸಾಧು ಸಂತರ ಸೇವೆ ಮಾಡಿ ಅವರ ಆಶೀರ್ವಾದ ಪಡೆಯುವುದು ಮುಖ್ಯ. ಇದರಿಂದ ಮನದಲ್ಲಿ ಧನಾತ್ಮಕ ಚಿಂತನೆಗಳು ಮೂಡುತ್ತವೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿಸಿದ ಯಶಸ್ಸು ದೊರೆಯುತ್ತದೆ. ಸೇವಾ ಮನೋಭಾವನೆ ಮೂಡುತ್ತದೆ.
  • ಸೂರ್ಯದೇವನಿಗೆ ಕುಟುಂಬದ ಸದಸ್ಯರ ಜೊತೆ ಪೂಜೆ ಸಲ್ಲಿಸಬೇಕು. ಗೋಧಿ ಅಥವಾ ರವೆ ಜೊತೆಯಲ್ಲಿ ಕೆಂಪು ಬಣ್ಣದ ಬಟ್ಟೆಯನ್ನು ದೇವಾಲಯಕ್ಕೆ ತಾಂಬೂಲ ರಕ್ಷಣೆಯ ಸಮೇತವಾಗಿ ನೀಡಬೇಕು. 12 ಪ್ರದಕ್ಷಿಣೆ ಸಹಿತ ನಮಸ್ಕಾರ ಮಾಡಿ ಹಿರಿಯರ ಆಶೀರ್ವಾದ ಪಡೆಯಬೇಕು. ಆರು ಬತ್ತಿಗಳುಳ್ಳ ಎರಡು ದೀಪಗಳನ್ನು ಬೆಳಗಿಸಿದರೆ ಸ್ವಂತ ಕೆಲಸ ಕಾರ್ಯಗಳಲ್ಲಿ ಸುಲಭವಾಗಿ ಯಶಸ್ಸು ದೊರೆಯುತ್ತದೆ.
  • ಮನೆಯಲ್ಲಿ ಶಿವನಿಗೆ ಮೊದಲು ರುದ್ರಾಭಿಷೇಕ ಮಾಡಬೇಕು. ನಂತರ ಸೂರ್ಯದೇವನಿಗೆ ಪೂಜೆ ಮಾಡಿ ಪೌರಾಣಿಕ ಸ್ತೋತ್ರದ ಮುಖಾಂತರ ಅಥವಾ ಅರುಣಪ್ರಶ್ನೆಯ ಮುಖಾಂತರ ಸೂರ್ಯ ನಮಸ್ಕಾರವನ್ನು ಮಾಡಬೇಕು. ಒಂದು ವೇಳೆ ಸೂರ್ಯ ನಮಸ್ಕಾರವನ್ನು ಮಾಡಲು ಸಾಧ್ಯವಾಗದೆ ಹೋದಲ್ಲಿ ಕನಿಷ್ಠಪಕ್ಷ ಸೂರ್ಯದೇವನಿಗೆ 12 ನಮಸ್ಕಾರಗಳನ್ನಾದರೂ ಮಾಡಬೇಕು. 
  • ಆರೋಗ್ಯ ಸಮಸ್ಯೆ ಇಲ್ಲದಿದ್ದಲ್ಲಿ ಉಪವಾಸ ಮಾಡಬಹುದು. ಉಪವಾಸ ಸಾಧ್ಯವಿಲ್ಲದೆ ಹೋದಲ್ಲಿ ಫಲಹಾರ ಸೇವಿಸಬಹುದು. ಇದರಿಂದ ದೀರ್ಘಕಾಲದಿಂದ ಬಳಲುತ್ತಿರುವ ಆರೋಗ್ಯದ ಸಮಸ್ಯೆ ದೂರವಾಗುತ್ತದೆ. ಮುಖ್ಯವಾಗಿ ಹೃದಯ ಸಂಬಂಧಿ ತೊಂದರೆಗಳು ದೂರವಾಗುತ್ತದೆ. ರವೆಯಿಂದ ಮಾಡಿದ ಪಾಯಸವನ್ನು ನೇವೇದ್ಯ ಮಾಡಿದರೆ ಉತ್ತಮ.

ಇದನ್ನೂ ಓದಿ: ವೃಶ್ಚಿಕ ಸೇರಿ ಈ 5 ರಾಶಿಯವರಿಗೆ ಹೆಚ್ಚಾಗಿ ಕೆಟ್ಟ ಕಣ್ಣು ದೃಷ್ಟಿ ಬೀಳುತ್ತೆ; ಎಷ್ಟು ಎಚ್ಚರಿಕೆಯಿಂದ ಇದ್ದರೆ ಅಷ್ಟು ಒಳ್ಳೆಯದು

  • ಸೂರ್ಯನ ದೇವಾಲಯದಲ್ಲಿ ಅಭಿಷೇಕ ಮತ್ತು ಪೂಜೆ ಮಾಡಿಸಬೇಕು. ಸೂರ್ಯನಿಗೆ ಸಂಬಂಧಿಸಿದ ಹೋಮ ಹವನಗಳನ್ನು ಮಾಡಿಸುವುದರಿಂದ ಕುಟುಂಬದ ಹಿರಿಯರ ಜೊತೆಯಲ್ಲಿ ಉತ್ತಮ ಬಾಂಧವ್ಯ ಉಂಟಾಗುತ್ತದೆ. ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ಸಹೋದ್ಯೋಗಿಗಳು ಮತ್ತು ಅಧಿಕಾರಿಗಳ ಜೊತೆ ಹೊಂದಾಣಿಕೆ ಇರುತ್ತದೆ. ಉದ್ಯೋಗದಲ್ಲಿ ಯಶಸ್ಸು ದೊರೆಯುತ್ತದೆ.
  • ಆಂಜನೇಯ ಸ್ವಾಮಿ, ಶ್ರೀರಾಮಚಂದ್ರ ಸ್ವಾಮಿ ಅಥವಾ ಉಮಾಮಹೇಶ್ವರ ದೇವಸ್ಥಾನದಲ್ಲಿ ಅನ್ನದಾನ ಮಾಡಿಸಬೇಕು, ಸಾಧ್ಯವಾಗದೆ ಹೋದಲ್ಲಿ ಅನ್ನದಾನಕ್ಕೆ ದೇಣಿಗೆ ನೀಡಬೇಕು. ಇದರಿಂದ ಕುಟುಂಬದಲ್ಲಿನ ದಾರಿದ್ರ್ಯ ದೂರವಾಗುತ್ತದೆ. ಹಣಕಾಸಿನ ಕೊರತೆ ಮರೆಯಾಗುತ್ತದೆ. 
  • ಪೂರ್ವ ದಿಕ್ಕಿನಲ್ಲಿ ಇರುವ, ಮುಳ್ಳಿರದ ಗಿಡಗಳಿಗೆ ಸೂರ್ಯನ ದ್ವಾದಶ ನಾಮಗಳನ್ನು ಹೇಳಿಕೊಂಡು ತಾಮ್ರದ ಪಾತ್ರೆಯಿಂದ 12 ಬಾರಿ ನೀರನ್ನು ಹಾಕಿದರೆ ಉತ್ತಮ ಆರೋಗ್ಯ ಲಭಿಸುತ್ತದೆ. ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದರಿಂದ ವಿರೋಧಿಗಳ ಸ್ನೇಹವನ್ನು ಸಂಪಾದಿಸಬಹುದು. ಈ ಅಭ್ಯಾಸದಿಂದಾಗಿ ಮುಂಗೋಪವು ಕಡಿಮೆಯಾಗುತ್ತದೆ. ಶಾಂತಿ ಸಂಯಮದಿಂದಾಗಿ ಎಲ್ಲರ ಮನಗೆಲ್ಲಬಹುದು.

ಜ್ಯೋತಿಷಿ: ಹೆಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ. 

 

 

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.