Melkote festival: ಮೇಲುಕೋಟೆಯಲ್ಲಿ ಕೋಠಾರೋತ್ಸವ ವೈಭವ, ಪುಷ್ಪ ಕೈಂಕರ್ಯ
melkote news ಮಂಡ್ಯ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಒಂದು ವಾರ ಕಾಲ ಕೊಠಾರೋತ್ಸವ ಸಡಗರದಿಂದ ನಡೆಯುತ್ತಿದೆ.
ಮಂಡ್ಯ: ಮಂಡ್ಯ ಜಿಲ್ಲೆಯ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ಚೆಲುವನಾರಾಯಣಸ್ವಾಮಿಗೆ ಜನವರಿ 5 ರಿಂದ ಕೊಠಾರೋತ್ಸವ ವೈಭವದಿಂದ ನೆರವೇರುತ್ತಿದ್ದು ಜ.14ರವರೆಗೆ ನಡೆಯಲಿದೆ. ರಾಮಾನುಜಾಚಾರ್ಯರ ಅಣತಿಯಂತೆ ಸೇವೆಗಾಗಿ ನೇಮಿಸಲ್ಪಟ್ಟ ಕೈಂಕರ್ಯಪರರ ವಂಶಸ್ಥರಿಂದ ಅನೂಚಾನ ಸಂಪ್ರದಾಯ ಹಾಗೂ ಪರಂಪರೆಯಂತೆ ಕೊಠಾರೋತ್ಸವದಲ್ಲಿ ಪ್ರತಿದಿನ ಕೈಂಕರ್ಯಪರರಿಂದ ತಿರುವೀದಿಯಲ್ಲಿ ಪುಷ್ಪಕೈಂಕರ್ಯ ಸೇವೆ ನಡೆಯುತ್ತಿದೆ. ಈಗಲೂ ಒಂದು ವಾರ ಕಾಲ ನಡೆಯುವ ಈ ಉತ್ಸವಕ್ಕೆ ಮೇಲುಕೋಟೆಯಲ್ಲದೇ ಅಕ್ಕಪಕ್ಕದ ಗ್ರಾಮಗಳಿಂದಲೂ ಭಕ್ತರು ಆಗಮಿಸಿ ಪೂಜಾ ಚಟುವಟಿಕೆಗಳು ಹಾಗೂ ಮೆರವಣಿಗೆಗಳಲ್ಲಿ ಭಾಗಿಯಾಗುತ್ತಾರೆ.
ಕೊಠಾರೋತ್ಸವದ 4ನೇ ದಿನವಾದ ಸೋಮವಾರ ಸಂಜೆ ಆಯಿತಿರುಮಾಳಿಗೆಯವತಿಯಿಂದ ವಿದ್ವಾನ್ ಆಯಿನರಸಿಂಹನ್ ನೇತೃತ್ವದಲ್ಲಿ ಪುಷ್ಪಕೈಂಕರ್ಯ ಸೇವೆ ಹಾಗೂ ಇತರ ಕೈಂಕರ್ಯಗಳು ನೆರವೇರಿತು.
ತಮಿಳುನಾಡಿನ ಶ್ರೀರಂಗದಿಂದ ವಿಶಿಷ್ಠಪುಷ್ಪಗಳಿಂದ ವಿಶೇಷವಾಗಿ ತಯಾರಿಸಿದ ಕಿಳಿಮಾಲೆ (ಗಿಣಿಮಾಲೆ) ತಂದು ಚೆಲುವನಾರಾಯಣಸ್ವಾಮಿಗೆ ಧರಿಸಿ ಭಗವದ್ರಾಮಾನುಜಾಚಾರ್ಯರ ಸಮೇತ ಮಂಗಳವಾದ್ಯಗಳೊಂದಿಗೆ ಉತ್ಸವ ನೆರವೇರಿಸಲಾಯಿತು. ಕೊಠಾರೋತ್ಸವದ ಅಂಗವಾಗಿ ಕೊಠಾರಮಂಟಪದಲ್ಲಿ ಶ್ರೀವೈಷ್ಣವ ಸಿದ್ಧಾಂತದ 12 ಮಂದಿ ಆಳ್ವಾರರುಗಳಿಗೆ ವಿಶೇಷ ಮಾಲೆ ಮರ್ಯಾದೆ ಸೇವೆ ನೆರವೇರಿಸಲಾಗುತ್ತಿದೆ.
ಕೊಠಾರೋತ್ಸವದ ಅಂಗವಾಗಿ 14ರವರೆಗೆ ರಾಜಬೀದಿಯಲ್ಲಿ ಪುಷ್ಪಕೈಂಕರ್ಯಸೇವೆಗಳು ಮತ್ತು ಆಳ್ವಾರ್ ಆಚಾರ್ಯರಿಗೆ ವಿಶೇಷಗೌರವಗಳು ನೆರವೇರುತ್ತಿದ್ದು ಚೆಲುವನಾರಾಯಣಸ್ವಾಮಿ ಪ್ರತಿದಿನ ಉತ್ಸವದಲ್ಲಿ ವಿಶೇಷ ಪುಷ್ಪಾಹಾರಗಳಿಂದ ಕಂಗೊಳಿಸುತ್ತಿದ್ದಾನೆ. ಹತ್ತು ದಿನಗಳಲ್ಲಿ ಅತ್ಯಂತ ಮಹತ್ವದ ದಿನವಾದ ಜನವರಿ 14 ರಂದು ರಾತ್ರಿ ನಮ್ಮಾಳ್ವಾರ್ ಪರಮಪದ ಉತ್ಸವ ನಡೆಯಲಿದ್ದು ಪರಿಚಾರಕ ಎಂ.ಎನ್ ಪಾರ್ಥಸಾರಥಿ ಸೇವೆ ನಡೆಸಲಿದ್ದಾರೆ.
ಮೇಲುಕೋಟೆಯ ಚೆಲುವನಾರಾಯಣಸ್ವಾಮಿಗೆ ಸೋಮವಾರ ಸಂಜೆ ಕೊಠಾರೋತ್ಸವ ನಾಲ್ಕನೇ ದಿನದ ಅಂಗವಾಗಿ ಶ್ರೀರಂಗದಿಂದ ತರಿಸಿದ ವಿಶೇಷ ಕಿಳಿಮಾಲೆ ಧರಿಸಿ ಉತ್ಸವ ನೆರವೇರಿಸಲಾಯಿತು.
12 ಆಯಿ ತಿರುಮಾಳಿಗೆಯಲ್ಲಿ ಚೆಲುವನಾರಾಯಣನ ಕೈಂಕರ್ಯಕ್ಕಾಗಿ ಜೋಡಿಸಿದ್ದ ಹೂ ಮತ್ತು ಹಣ್ಣುಗಳ ತಟ್ಟೆಯ ನೋಟ ಮೇಲುಕೋಟೆ ದೇಗುಲದ ಅಂಗಳದಲ್ಲಿ ಗಮನ ಸೆಳೆಯಿತು.