ಭೂಮಿ ತಾಯಿ ಋತುಮತಿಯಾಗಿದ್ದಾಳೆ, ಮೂರು ದಿನ ಕೆಡ್ಡಸ ಆಚರಿಸುತ್ತಿದ್ದಾರೆ ತುಳುನಾಡ ಜನ- ಇದು ನೆಲದ ಸಂಸ್ಕೃತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭೂಮಿ ತಾಯಿ ಋತುಮತಿಯಾಗಿದ್ದಾಳೆ, ಮೂರು ದಿನ ಕೆಡ್ಡಸ ಆಚರಿಸುತ್ತಿದ್ದಾರೆ ತುಳುನಾಡ ಜನ- ಇದು ನೆಲದ ಸಂಸ್ಕೃತಿ

ಭೂಮಿ ತಾಯಿ ಋತುಮತಿಯಾಗಿದ್ದಾಳೆ, ಮೂರು ದಿನ ಕೆಡ್ಡಸ ಆಚರಿಸುತ್ತಿದ್ದಾರೆ ತುಳುನಾಡ ಜನ- ಇದು ನೆಲದ ಸಂಸ್ಕೃತಿ

ಕರಾವಳಿಯಲ್ಲಿ ಕೃಷಿ ಆಧಾರಿತ ಹಿನ್ನೆಲೆಯಲ್ಲಿ ಕೆಡ್ಡಸವನ್ನು ಆಚರಿಸುತ್ತಾರೆ. ಭೂಮಿ ತಾಯಿ ಋತುಮತಿಯಾಗಿರುವುದರ ಆಚರಣೆ ಶುರುವಾಗಿದ್ದು, ಇನ್ನೆರಡು ದಿನ ನಡೆಯಲಿದೆ. ಇದು ನೆಲದ ಸಂಸ್ಕೃತಿಯಾಗಿದ್ದು, ಅದರ ವಿವರ ಇಲ್ಲಿದೆ.(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಭೂಮಿ ತಾಯಿ ಋತುಮತಿಯಾಗಿರುವುದನ್ನು ಆಚರಿಸುವುದಕ್ಕಾಗಿ ತುಳುನಾಡ ಜನರು ಮೂರು ದಿನ ಕೆಡ್ಡಸ ಆಚರಣೆ ಮಾಡುತ್ತಿದ್ದಾರೆ. ಇದು ನೆಲದ ಸಂಸ್ಕೃತಿ.
ಭೂಮಿ ತಾಯಿ ಋತುಮತಿಯಾಗಿರುವುದನ್ನು ಆಚರಿಸುವುದಕ್ಕಾಗಿ ತುಳುನಾಡ ಜನರು ಮೂರು ದಿನ ಕೆಡ್ಡಸ ಆಚರಣೆ ಮಾಡುತ್ತಿದ್ದಾರೆ. ಇದು ನೆಲದ ಸಂಸ್ಕೃತಿ. (HSM)

ಮಂಗಳೂರು: ಹಬ್ಬಗಳು ಕರಾವಳಿಯಲ್ಲಿ ಕೃಷಿ ಆಧಾರಿತ ಹಿನ್ನೆಲೆಯಲ್ಲಿ ಆಚರಿಸಲ್ಪತ್ತದೆ. ನೆಲಸಂಸ್ಕೃತಿಯನ್ನು ಬಿಂಬಿಸುವ ಆಚರಣೆಯೇ ಅಧಿಕ. ಕೆಡ್ಡಸ ಹಬ್ಬ ಅದರಲ್ಲೊಂದು. ಸಾಮಾನ್ಯವಾಗಿ ಮೂರುದಿನ ಕೆಡ್ಡಸ ಆಚರಿಸಲ್ಪಡುತ್ತದೆ. ಇದು ಶುರುಕೆಡ್ಡಸ, ನಡುಕೆಡ್ಡಸ ಮತ್ತು ಕಡೆಕೆಡ್ಡಸ ವೆಂದು ಆಚರಣೆಗೊಳ್ಳುತ್ತದೆ. ಫೆ.10ರಂದು ಸುರುಕೆಡ್ಡಸ, 11ರಂದು ನಡುಕೆಡ್ಡಸ 12ರಂದು ಕುಂಭಸಂಕ್ರಮಣದ ದಿನ ಕಡೆಕೆಡ್ಡಸ ನಡೆಯುತ್ತದೆ.

ಏನಿದು ಕೆಡ್ಡಸ ?

ಭೂಮಿಯನ್ನು ಹೆಣ್ಣೆಂದು ಪರಿಗಣಿಸಿ ಆರಾಧಿಸಲಾಗುತ್ತದೆ.. ಆದ್ದರಿಂದ ಹೆಣ್ಣಾದ ಭೂಮಿತಾಯಿಯು ವರ್ಷಕ್ಕೆ ಮೂರುದಿನ ರಜಸ್ವಲೆಯಾಗುತ್ತಾಳೆ (ಋತುಮತಿ) ಎಂದು ನಂಬಿಕೆ. ಈ ಹಿನ್ನೆಲೆಯಲ್ಲಿ ಕೆಡ್ಡಸವನ್ನು ಭೂಮಿತಾಯಿ ಮೀಯುವ ಹಬ್ಬವೆಂದು ಕರೆಯುತ್ತಾರೆ. ಋತುಮತಿ ಅಥವಾ ಪುಷ್ಪವತಿಯಾದ ಹೆಣ್ಣು ಹೆಂಗಸಾದಳು ಎಂದು ಅರ್ಥ. ಈ ಮೂಲಕ ಭೂಮಿದೇವಿಯು ಫಲವತಿಯಾಗುವ ಅರ್ಹತೆಯನ್ನು ಪಡೆಯುತ್ತಾಳೆ. ಆದ್ದರಿಂದ ಕೆಡ್ಡಸ ಹಬ್ಬವು ಫಲವಂತಿಕೆಯ ಸಂಕೇತವಾಗಿ ಆಚರಣೆಗೆ ಒಳಪಡುವ ತುಳುವರ ಪ್ರಮುಖ ಹಬ್ಬ.

ಕೆಡ್ಡಸದ ಸಮಯದಲ್ಲಿ ಮೂಡಣ ದಿಕ್ಕಿನಿಂದ ಒಂದು ವಿಲಕ್ಷಣವಾದ ಗಾಳಿ ಬೀಸುತ್ತದೆ ಇದನ್ನು ಕೆಡ್ಡಸದ ಗಾಳಿ ಎಂದು ಕರೆಯುತ್ತಾರೆ. ಈ ಸಂದರ್ಭ ಋತುಸ್ನಾನ ಮುಗಿಸಿ ಹೆಣ್ಣು ಹೋಗಿ ಹೆಂಗಸಾಗಿರುವ ಭೂಮಿದೇವಿಯು ಈ ಗಾಳಿಯಿಂದ ಪುಳಕಗೊಂಡು ಫಲವತಿಯಾಗಲು ಸಜ್ಜಾಗುತ್ತಾಳೆಂದು ನಂಬಿಕೆ.

ಕೆಡ್ಡಸದ ಮೂರುದಿನ ಭೂಮಿದೇವಿ ರಜಸ್ವಲೆಯಾದ ಕಾರಣ ಆಕೆ ಸೂಕ್ಷ್ಮವಾಗಿರುತ್ತಾಳೆ. ಆದ್ದರಿಂದ ಈ ದಿನಗಳಲ್ಲಿ ನೆಲ ಅಗೆಯುವುದು, ಉಳುವುದು, ಮರ ಕಡಿಯುವುದು ನಿಷಿದ್ಧ. ಈ ಸಂದರ್ಭ ಕೃಷಿಕಾರ್ಯದಲ್ಲಿ ತೊಡಗಿದರೆ ಭೂಮಿದೇವಿಯು ನೋವನ್ನನುಭವಿಸಿ ಬಂಜೆಯಾಗುತ್ತಾಳೆ ಎಂದು ನಂಬಿರುವ ತುಳುವರು ಕೃಷಿಕೆಲಸವನ್ನು ಸಂಪೂರ್ಣ ಸ್ಥಗಿತಗೊಳಿಸುತ್ತಾರೆ.

ಶುರುಕೆಡ್ಡಸ

ಕೆಡ್ಡಸದಂದು ಸ್ತ್ರೀಯರು ಅಂಗಳದ ಮೂಲೆಯಲ್ಲಿ ನೆಲವನ್ನು ಸಾರಿಸಿ, ಗೋಮಯದಿಂದ ಶುದ್ಧೀಕರಿಸಿ ವಿಭೂತಿಯಿಂದ ಅಗಲವಾದ ವೃತ್ತವನ್ನು ರಚಿಸುತ್ತಾರೆ. ಅದರಲ್ಲಿ ಬಿಳಿಯ ಮಡಿಬಟ್ಟೆ, ಗೆಜ್ಜಕತ್ತಿ, ತೆಂಗಿನ ಸೋಗೆಯ ಹಸಿಕಡ್ಡಿ ಇಟ್ಟು ಭೂಮಿದೇವಿಯ ಸಾನಿಧ್ಯ ರಚಿಸಿ ಪೂಜಿಸುತ್ತಾರೆ.

ಕೆಡ್ಡಸದ ಪ್ರಾರಂಭದ ದಿನ ಬೆಳಗ್ಗೆ ನವಧಾನ್ಯಗಳನ್ನು (ಇದರಲ್ಲಿ ಹುರುಳಿ ಪ್ರಮುಖವಾದುದು) ಹುರಿದು ಪುಡಿಮಾಡಿ ಬೆಲ್ಲ, ಅರಳು, ತೆಂಗಿನ ಚೂರುಗಳನ್ನು ಬೆರಸಿ ಭೂಮಿದೇವಿಯ ಸಾನಿಧ್ಯದೆದರು ತುದಿಬಾಳೆಯಲ್ಲಿ ಬಡಿಸಿ ನಮಿಸುತ್ತಾರೆ. ಇವು ಬಯಕೆಯ ಸಂಕೇತ. ನಂತರ ಇದನ್ನು ಮನೆಮಂದಿ ಹಂಚಿ ತಿನ್ನುತ್ತಾರೆ. ಇದನ್ನು ಕುಡುಅರಿ ಅಥವಾ ನನ್ನೆರಿ ಎಂದು ಕರೆಯುತ್ತಾರೆ.

ನಡುಕೆಡ್ಡಸ

ಅಂದು ಮೀನು-ಮಾಂಸ ತಿನ್ನುವ ಜಾತಿಯ ಗಂಡಸರು ಬೇಟೆಯಾಡಿ ಲಭಿಸಿದ ಮಾಂಸದ ಅಡುಗೆಯನ್ನು ಮನೆಮಂದಿಯೆಲ್ಲಾ ಸಂಭ್ರಮದಿಂದ ಸವಿಯುತ್ತಾರೆ.

ಈ ದಿನ ಪುಂಡದ ಹಕ್ಕಿಯ ಬೇಟೆ ವಿಶೇಷ. ಕೆಡ್ಡಸದ ಸಮಯದಲ್ಲಿ ಪುಂಡದ ಹಕ್ಕಿಗೆ ಜ್ವರ ಬರುತ್ತದೆ ಎಂಬ ಪ್ರತೀತಿಯಿದೆ. ಜ್ವರದಿಂದ ಬಳಲುವ ಈ ಹಕ್ಕಿ ಕೆರೆಯ ಬದಿಯಲ್ಲಿ ಪೊದೆಗಳ ಬದಿಯಲ್ಲಿ ಸುಲಭವಾಗಿ ಸಿಗುತ್ತದೆಯಂತೆ.

ಕಡೆಕೆಡ್ಡಸ

ಮೂರನೆಯ ದಿನ ಮುಂಜಾನೆ ಮುತ್ತೈದೆಯರು ಸ್ನಾನ ಮಾಡಿ ಏಳು ಸರೋಳಿಸೊಪ್ಪು ಎಲೆಗಳನ್ನು ಪಶ್ಚಿಮಕ್ಕೆ ತುದಿ ಬರುವಂತೆ ಸಾಲಾಗಿ ಇರಿಸಿ ದೀಪ, ಊದುಬತ್ತಿ ಹಚ್ಚಿ, ಮಣೆಯ ಮೇಲೆ ಎಣ್ಣೆ, ಸೀಗೆಪುಡಿ, ಅರಸಿನ ಕುಂಕುಮ, ಪಚ್ಚೆಹೆಸರು ಪುಡಿ, ವೀಳ್ಯದೆಲೆ ಇತ್ಯಾದಿಗಳನ್ನು ಭೂಮಿದೇವಿಯ ಸ್ನಾನಕ್ಕೋಸ್ಕರ ಇಡುತ್ತಾರೆ. ನಂತರ ಭೂಮಿದೇವಿಯ ಅಲಂಕಾರಕ್ಕಾಗಿ ಕನ್ನಡಿ, ಬಾಚಣಿಗೆ, ಕರಿಮಣಿಗಳನ್ನು ಇರಿಸುತ್ತಾರೆ. ಈ ಪ್ರಕಾರ ರಜಸ್ವಲೆಯಾದ ಭೂಮಿದೇವಿಯು ಮಿಂದು ಶುದ್ಧಳಾಗಿ ಫಲವತಿಯಾಗುತ್ತಾಳೆ ಎಂದು ತುಳುವರ ನಂಬಿಕೆ.

ಪ್ರಕೃತಿ ಮಾತೆಯಾದ ಭೂಮಿದೇವಿಯನ್ನು ಪೂಜಿಸುವ ಈ ಹಬ್ಬವು ಇಂದು ಸಂಪೂರ್ಣ ನಗಣ್ಯಕ್ಕೊಳಗಾಗಿದ್ದು ಅತ್ಯಂತ ಖೇದಕರ ಸಂಗತಿ. ಇನ್ನಾದರೂ ನಮ್ಮ ಪೂರ್ವಿಕರು ಹಬ್ಬ-ಹರಿದಿನಗಳಿಗೆ ನೀಡಿದ ಮಹತ್ವ, ಸಂಸ್ಕೃತಿಯ ಹಿನ್ನೆಲೆಯನ್ನು ಅರಿತು ಅವುಗಳನ್ನು ಸಾಧ್ಯವಾಗುವ ಮಟ್ಟಿಗೆ ಆಚರಿಸಲು ಪ್ರಯತ್ನ ಪಡೋಣ. (ಪೂರಕ ಮಾಹಿತಿ: ವಿಶ್ವನಾಥ ಪಂಜಿಮೊಗರು)

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.