ಕಟಕ ರಾಶಿಯಲ್ಲಿ ವಕ್ರೀ ಕುಜನ ಪ್ರಭಾವ; 2025 ಫೆಬ್ರವರಿವರೆಗೆ ದ್ವಾದಶ ರಾಶಿಗಳಿಗೆ ವಿವಿಧ ಪಲಗಳನ್ನು ನೀಡಲಿರುವ ಮಂಗಳ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಟಕ ರಾಶಿಯಲ್ಲಿ ವಕ್ರೀ ಕುಜನ ಪ್ರಭಾವ; 2025 ಫೆಬ್ರವರಿವರೆಗೆ ದ್ವಾದಶ ರಾಶಿಗಳಿಗೆ ವಿವಿಧ ಪಲಗಳನ್ನು ನೀಡಲಿರುವ ಮಂಗಳ

ಕಟಕ ರಾಶಿಯಲ್ಲಿ ವಕ್ರೀ ಕುಜನ ಪ್ರಭಾವ; 2025 ಫೆಬ್ರವರಿವರೆಗೆ ದ್ವಾದಶ ರಾಶಿಗಳಿಗೆ ವಿವಿಧ ಪಲಗಳನ್ನು ನೀಡಲಿರುವ ಮಂಗಳ

Mars Transit: ಡಿಸೆಂಬರ್‌ 6 ರಂದು ಕುಜನು ಕಟಕ ರಾಶಿಗೆ ಪ್ರವೇಶಿಸಿ ವಕ್ರಿ ಸಂಚಾರ ಆರಂಭಿಸಿದ್ದಾನೆ. ಈ ಸಮಯದಲ್ಲಿ ಮಂಗಳನು 12 ರಾಶಿಗಳ ಮೇಲೆ ವಿವಿಧ ಪ್ರಭಾವ ಬೀರುತ್ತಾನೆ. ಕುಜನು ಯಾವ ರಾಶಿಯವರ ಮೇಲೆ ಏನು ಪರಿಣಾಮ ಬೀರಲಿದ್ದಾನೆ ನೋಡೋಣ.

ಕಟಕ ರಾಶಿಯಲ್ಲಿ ವಕ್ರೀ ಕುಜನ ಪ್ರಭಾವ
ಕಟಕ ರಾಶಿಯಲ್ಲಿ ವಕ್ರೀ ಕುಜನ ಪ್ರಭಾವ

ಕಟಕ ರಾಶಿಯಲ್ಲಿ ವಕ್ರೀ ಕುಜನ ಪ್ರಭಾವ: ಕುಜನು ಡಿಸೆಂಬರ್ 6 ರಂದು ಕಟಕ ರಾಶಿಯಲ್ಲಿ ವಕ್ರಿಯಾಗಿತ್ತಾನೆ. ಜನವರಿ 21 ರಂದು ಮಿಥುನದಲ್ಲಿ ಮುಂದುವರೆಯುತ್ತಾನೆ. ಫೆಬ್ರವರಿ 24 ರಂದು ವಕ್ರತ್ಯಾಗ ಮಾಡುತ್ತಾನೆ. ಈ ಅವಧಿಯಲ್ಲಿ ಪ್ರತಿಯೊಂದು ರಾಶಿಗಳಲ್ಲೂ ಹಲವಾರು ಬದಲಾವಣೆಗಳು ಉಂಟಾಗಲಿದೆ.

ಮೇಷ ರಾಶಿ

ಪ್ರಮುಖವಾಗಿ ಕುಟುಂಬದ ವಿಚಾರದಲ್ಲಿ ಮಹತ್ತರ ಬದಲಾವಣೆಗಳಾಗುತ್ತವೆ. ಕುಟುಂಬದ ಸ್ತ್ರೀಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಭೂವಿವಾದ ಇದ್ದಲ್ಲಿ ಸಂಧಾನದಿಂದ ಪರಿಹಾರವಾಗುತ್ತದೆ. ವಾಹನ ಕೊಳ್ಳುವ ಯೋಗವಿದೆ. ನಿಮ್ಮ ಪ್ರಯತ್ನಕ್ಕೆ ತಕ್ಕಂಥ ಯಶಸ್ಸು ದೊರೆಯುತ್ತದೆ. ಅನಾರೋಗ್ಯವು ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಹಣಕಾಸಿನ ತೊಂದರೆ ದೂರವಾಗುತ್ತದೆ. ನಿಮ್ಮ ತೀರ್ಮಾನಗಳನ್ನು ಎಲ್ಲರೂ ಗೌರವಿಸುತ್ತಾರೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ನೀಡುವಿರಿ. ರಕ್ತದ ದೋಷವಿದ್ದಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವವರೆಗೂ ವಿಶ್ರಮಿಸುವುದಿಲ್ಲ. ಉದ್ಯೋಗದಲ್ಲಿ ನೆಮ್ಮದಿಯ ವಾತಾವರಣ ಇರುವುದಿಲ್ಲ.

ವೃಷಭ ರಾಶಿ

ಪೂರ್ವ ನಿಯೋಜಿತ ಕೆಲಸ ಕಾರ್ಯಗಳಲ್ಲಿ ಮಾತ್ರ ಯಶಸ್ಸು ಗಳಿಸುವಿರಿ. ಖರ್ಚು ವೆಚ್ಚಗಳು ನಿಮ್ಮ ಹತೋಟಿಗೆ ಬರಲಿದೆ. ಪಾಲುದಾರಿಕೆ ವ್ಯಾಪಾರದಲ್ಲಿ ಆಸಕ್ತಿ ಇರುವುದಿಲ್ಲ. ಅನಿರೀಕ್ಷಿತವಾಗಿ ಆತ್ಮೀಯರೊಬ್ಬರು ನಿಮ್ಮಿಂದ ದೂರ ಉಳಿಯುತ್ತಾರೆ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯದಲ್ಲಿ ಮುಂದುವರೆಯುವುದು ಲಾಭದಾಯಕ. ಮಹಿಳಾ ಉದ್ಯಮಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯುತ್ತದೆ. ಆತ್ಮವಿಶ್ವಾಸದ ಕೊರತೆ ಇದ್ದರೂ ಮನದಲ್ಲಿ ಧನಾತ್ಮಕ ಚಿಂತನೆಗಳಿರುತ್ತವೆ. ಇದರಿಂದಾಗಿ ಸರಿಯಾದ ಮಾರ್ಗದಲ್ಲಿ ನಡೆಯುವಿರಿ. ಯಾವುದೇ ವಿಷಯದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ವಂದತಿಗಳನ್ನು ನಂಬಿದಲ್ಲಿ ದಂಪತಿ ನಡುವೆ ಮನಸ್ತಾಪ ಉಂಟಾಗುತ್ತದೆ. ಹೊಸ ಮನೆ ಅಥವಾ ಜಮೀನು ಕೊಳ್ಳುವ ಯೋಜನೆಯನ್ನು ರೂಪಿಸುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ.

ಮಿಥುನ ರಾಶಿ

ಬುದ್ಧಿವಂತಿಕೆಯ ಮಾತುಕತೆ ಜೀವನಕ್ಕೆ ಹೊಸ ಅರ್ಥವನ್ನು ನೀಡುತ್ತದೆ. ಹಣಕಾಸಿನ ವಿಚಾರದಲ್ಲಿ ಪ್ರಗತಿ ಕಂಡುಬರುತ್ತದೆ. ಕುಟುಂಬದ ಉನ್ನತ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಲಾಭವಿಲ್ಲದ ಕೆಲಸದಲ್ಲಿ ಆಸಕ್ತಿ ತೋರುವುದಿಲ್ಲ. ಪಾಲುದಾರಿಕೆಯ ವ್ಯಾಪಾರ ವ್ಯವಹಾರದಿಂದ ದೂರ ಉಳಿಯುವಿರಿ. ಸ್ವಂತ ಕೆಲಸದಲ್ಲಿ ಬೇರೊಬ್ಬರು ಮೂಗು ತೂರಿಸುವುದನ್ನು ಒಪ್ಪುವುದಿಲ್ಲ. ಹಣದ ತೊಂದರೆ ಇರುವುದಿಲ್ಲ. ಅತಿಯಾದ ನಿರೀಕ್ಷೆ ಇರದ ಕಾರಣ ನೆಮ್ಮದಿ ಇರುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ತಮ್ಮ ಗುರಿ ತಲುಪಲಿದ್ದಾರೆ. ಆರೋಗ್ಯದಲ್ಲಿ ತೊಂದರೆ ಇರುವುದಿಲ್ಲ. ಉದ್ಯೋಗದಲ್ಲಿ ಉನ್ನತ ಮಟ್ಟವನ್ನು ತಲುಪುವಿರಿ. ವಿದೇಶಕ್ಕೆ ತೆರಳುವ ಸಾಧ್ಯತೆಗಳಿವೆ. ಮನೆತನದ ಆಸ್ತಿ ವಿಚಾರದಲ್ಲಿನ ಮನಸ್ತಾಪ ದೂರವಾಗಿ ನ್ಯಾಯಯುತ ಪಾಲು ದೊರೆಯುತ್ತದೆ.

ಕಟಕ ರಾಶಿ

ಉದ್ಯೋಗದಲ್ಲಿ ಬದಲಾವಣೆ ಉಂಟಾಗುತ್ತದೆ. ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಒಳಗಾಗುವಿರಿ. ಸದಾ ಕ್ರಿಯಾಶೀಲ ಮನಸ್ಸಿರುವ ಕಾರಣ ಬಂಧು ಬಳಗದವರ ವಿಶ್ವಾಸ ಗಳಿಸುವಿರಿ. ಬಿಡುವಿನ ವೇಳೆ ಆತ್ಮೀಯರ ಕಷ್ಟಗಳು ದೂರವಾಗಲು ಸಹಕರಿಸುವಿರಿ. ಸಮಾಜದಲ್ಲಿ ನಾಯಕನ ಸ್ಥಾನವು ನಿಮ್ಮದಾಗುತ್ತದೆ. ಉತ್ತಮ ಆದಾಯವಿರುತ್ತದೆ. ಪ್ರಯೋಜನವಿಲ್ಲದ ವಿಚಾರಗಳಿಗಾಗಿ ಯೋಚನೆ ಮಾಡುವಿರಿ. ವಾದ ವಿವಾದಗಳಲ್ಲಿ ನಿಮ್ಮನ್ನು ಜಯಿಸಲು ಸಾಧ್ಯವಾಗುವುದಿಲ್ಲ. ವಿವಾಹದ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಬದಲಾಯಿಸುವಿರಿ. ದಾಂಪತ್ಯದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಹೊಗಳಿಕೆಗೆ ಮರುಳಾಗಿ ತೊಂದರೆಗೆ ಸಿಲುಕುವಿರಿ. ವಿದ್ಯಾರ್ಥಿಗಳು ಆಧುನಿಕತೆಗೆ ಮರುಳಾಗದೆ ಕಲಿಕೆಯಲ್ಲಿ ತಲ್ಲಿನರಾಗುತ್ತಾರೆ. ಯಾವುದೇ ಆತಂಕ ಎದುರಾದರೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವಿರಿ.

ಸಿಂಹ ರಾಶಿ

ಕುಟುಂಬಕ್ಕೆ ಸಂಬಂಧಪಟ್ಟಂತೆ ಖರ್ಚು ವೆಚ್ಚಗಳು ಅಧಿಕವಾಗಿರುತ್ತವೆ. ನಿಮ್ಮಲ್ಲಿರುವ ಆತ್ಮವಿಶ್ವಾಸ ಹೊಸ ಅವಕಾಶಗಳಿಗೆ ಹೊಂದಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಸ್ವಗೃಹ ಭೂಲಾಭವಿದೆ. ನಿರೀಕ್ಷೆಗೂ ಮೀರಿದ ಖರ್ಚು ನಿಮಗಿರುತ್ತದೆ. ಕುಟುಂಬದ ಮಹಿಳೆಯರ ಮುಖ್ಯವಾಗಿ ತಾಯಿಯ ಆರೋಗ್ಯದಲ್ಲಿ ಏರಿಳಿತ ಕಂಡುಬರುತ್ತದೆ. ಕುಟುಂಬದ ಹಿರಿಯರು ನಿಮಗೆ ಸಂಪೂರ್ಣ ಸಹಕಾರ ನೀಡುತ್ತಾರೆ. ಉದ್ಯೋಗದಲ್ಲಿ ವಿರೋಧಿಗಳ ಕಾರಣ ಮಾನಸಿಕ ಒತ್ತಡ ಹೆಚ್ಚುತ್ತದೆ. ಹೆಚ್ಚಿನ ಪ್ರಯತ್ನದಿಂದ ಉದ್ಯೋಗ ಬದಲಿಸಬಹುದು. ಸ್ವಂತ ಉದ್ಯಮ ಆರಂಭಿಸುವ ಕೆಲಸದಲ್ಲಿ ಯಶಸ್ಸು ಕಾಣುವಿರಿ. ಹಣಕಾಸಿನ ಕೊರತೆ ಇರುವುದಿಲ್ಲ. ಒಳ್ಳೆಯ ಯೋಜನೆಗಳಿಂದ ಹಣ ಉಳಿಸಲು ಸಾಧ್ಯವಾಗುತ್ತದೆ. ರಕ್ತದ ದೋಷದಿಂದ ಬಳಲುವವರು ಎಚ್ಚರಿಕೆ ವಹಿಸಬೇಕು. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆಯಿಂದ ಇರುವುದು ಒಳಿತು. ಷೇರಿನ ವ್ಯವಹಾರದಲ್ಲಿ ಆದಾಯ ಇರುತ್ತದೆ.

ಕನ್ಯಾ ರಾಶಿ

ಗೆಲುವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗುವಿರಿ. ಹಣಕಾಸಿನ ತೊಂದರೆ ಕಡಿಮೆಯಾಗುತ್ತದೆ. ಸೋದರದ ಜೊತೆಯಲ್ಲಿ ಇದ್ದ ಭಿನ್ನಾಭಿಪ್ರಾಯ ದೂರವಾಗಲಿದೆ. ಅನಿರೀಕ್ಷಿತ ಧನ ಲಾಭ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ. ವಿದ್ಯಾರ್ಥಿಗಳು ಕ್ರಮೇಣ ಅಭ್ಯಾಸದಲ್ಲಿ ತೊಡಗುತ್ತಾರೆ. ಅತಿಯಾದ ಆಸೆ ಇರುವುದಿಲ್ಲ. ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಕಂಡುಬರುತ್ತವೆ. ವಿದ್ಯಾರ್ಥಿನಿಯರು ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ನಿಮ್ಮ ಮನಸ್ಸಿಗೆ ಇಷ್ಟವೆನಿಸುವ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಮನಸ್ಸಿನಲ್ಲಿ ಸ್ವಾರ್ಥದ ಭಾವನೆ ಇಲ್ಲದೆ ಹೋದರೂ ಮೊದಲ ಆದ್ಯತೆಯನ್ನು ಸ್ವಂತ ಕೆಲಸ ಕಾರ್ಯಗಳಿಗೆ ನೀಡುವಿರಿ. ವಿವಾಹದ ಬಗ್ಗೆ ಇದ್ದ ಅಡಚಣೆಗಳು ದೂರವಾಗುತ್ತವೆ.

ತುಲಾ ರಾಶಿ

ಕುಟುಂಬದಲ್ಲಿ ಎಲ್ಲರ ಜೊತೆ ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳುವಿರಿ. ವಾದ ವಿವಾದಗಳನ್ನು ಮಾತುಕತೆಯಿಂದ ಪರಿಹರಿಸಿಕೊಳ್ಳುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಬಾಳ ಸಂಗಾತಿಯ ಸಹಕಾರವಿರುತ್ತದೆ. ಉದ್ಯೋಗದಲ್ಲಿ ನಿಮಗಿಂತ ಕಿರಿಯ ವ್ಯಕ್ತಿಗಳಿಂದ ಅನುಕೂಲತೆ ದೊರೆಯುತ್ತದೆ. ಅಧಿಕಾರಿಗಳೊಂದಿಗೆ ಮನ ಬಿಚ್ಚಿ ಮಾತನಾಡಿದರೆ ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ಮಹಿಳಾ ಉದ್ಯಮಿಗಳಿಗೆ ಉತ್ತಮ ಆದಾಯ ದೊರೆಯುತ್ತದೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಉಳಿಸಿದ ಹಣವನ್ನು ಅನಿವಾರ್ಯವಾಗಿ ಖರ್ಚು ಮಾಡಬೇಕಾಗುತ್ತದೆ. ಬೇರೆಯವರನ್ನು ಸುಲಭವಾಗಿ ನಂಬುವುದಿಲ್ಲ.

ವೃಶ್ಚಿಕ ರಾಶಿ

ಅನಿರೀಕ್ಷಿತವಾಗಿ ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಆತ್ಮವಿಶ್ವಾಸದಿಂದ ಜೀವನದಲ್ಲಿ ಮುಂದುವರೆಯುವಿರಿ. ಕುಟುಂಬದ ಹಿರಿಯರ ಕಾರಣದಿಂದ ನಿಮ್ಮ ನಿತ್ಯ ಜೀವನದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಕಾಣುವಿರಿ. ನಿಮ್ಮ ಕೆಲಸ ಕಾರ್ಯಗಳನ್ನು ತಾಳ್ಮೆಯಿಂದ ನಿರ್ವಹಿಸುವಿರಿ. ಯಾವುದೇ ವಿಚಾರದಲ್ಲಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಕಷ್ಟಗಳನ್ನು ಧೈರ್ಯದಿಂದ ಎದುರಿಸುವಿರಿ. ಆತ್ಮೀಯರಿಗೆ ಹಣದ ಸಹಾಯ ಮಾಡುವಿರಿ. ಸಾಲದ ವ್ಯವಹಾರದಲ್ಲಿ ನಂಬಿಕೆಯಾಗಲಿ ಆಸಕ್ತಿಯಾಗಲಿ ಇರುವುದಿಲ್ಲ. ದಾಂಪತ್ಯ ಜೀವನದಲ್ಲಿ ಉತ್ತಮ ಹೊಂದಾಣಿಕೆ ಕಂಡುಬರುತ್ತದೆ. ವಾಹನಗಳ ಮಾರಾಟ ಮಳಿಗೆ ಇದ್ದಲ್ಲಿ ಹೆಚ್ಚಿನ ಆದಾಯ ದೊರೆಯುತ್ತದೆ. ಮಾತುಕತೆಯಿಂದ ಬೇರೆಯವರ ಹಣಕಾಸಿನ ವಿವಾದವನ್ನು ಪರಿಹರಿಸುವಿರಿ. ಸಂಘ ಸಂಸ್ಥೆಗಳ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗುತ್ತದೆ. ಕಡಿಮೆ ಆದಾಯವಾದರೂ ಬುದ್ಧಿವಂತಿಕೆಯಿಂದ ಹಣ ಉಳಿಸುವಲ್ಲಿ ಯಶಸ್ವಿಯಾಗುವಿರಿ. ಗೃಹಿಣಿಯರು ಬೆಳ್ಳಿ ಬಂಗಾರದ ಒಡವೆಗಳಿಗೆ ಹಣ ವಿನಿಯೋಗಿಸುತ್ತಾರೆ.

ಧನಸ್ಸು ರಾಶಿ

ಮಕ್ಕಳಿಂದ ಎದುರಾಗಿದ್ದ ಕಷ್ಟ ಕಾರ್ಪಣ್ಯಗಳು ಕ್ರಮೇಣವಾಗಿ ದೂರವಾಗುತ್ತವೆ. ಆರೋಗ್ಯದ ಬಗ್ಗೆ ಕಾಳಜಿ ತೋರುವುದು ಬಹಳ ಮುಖ್ಯ. ಯಾವುದೇ ವಿಚಾರದಲ್ಲಿಯೂ ಸುಲಭವಾಗಿ ಧೃಡವಾದ ತೀರ್ಮಾನವನ್ನು ತೆಗೆದುಕೊಳ್ಳುವುದಿಲ್ಲ. ನಿಮ್ಮದೇ ತಪ್ಪಿನಿಂದಾಗಿ ಹಣದ ಕೊರತೆಗೆ ಒಳಗಾಗುವಿರಿ. ಆಡುವ ಮಾತಿನಲ್ಲಿ ಪ್ರೀತಿ ವಿಶ್ವಾಸ ತೋರುವುದಿಲ್ಲ. ಮನಸ್ಸಿನಲ್ಲಿ ಇರುವ ವಿಚಾರವನ್ನು ಯಾರಲ್ಲಿಯೂ ಹಂಚಿಕೊಳ್ಳುವುದಿಲ್ಲ. ಮಕ್ಕಳ ಜೀವನದಲ್ಲಿ ಉನ್ನತ ಮಟ್ಟದ ಬೆಳವಣಿಗೆಗಳು ಕಂಡುಬರುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲುವು ಸಾಧಿಸುತ್ತಾರೆ. ಸಂಗೀತ ನಾಟ್ಯವನ್ನು ಬಲ್ಲವರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಆಸಕ್ತಿ ತೋರುವುದಿಲ್ಲ. ವಂಶಾಧಾರಿತ ವ್ಯಾಪಾರ ವ್ಯವಹಾರವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಗುತ್ತದೆ. ನೋಡಲು ಸೌಮ್ಯವಾಗಿದ್ದರು ಕೋಪ ಹೆಚ್ಚಾಗಿರುತ್ತದೆ, ಆದರೆ ತಾಳ್ಮೆಯಿಂದ ಇದ್ದಷ್ಟೂ ಒಳ್ಳೆಯದು.

ಮಕರ ರಾಶಿ

ಕುಟುಂಬದಲ್ಲಿ ಮರೆಯಾಗಿದ್ದಆತ್ಮೀಯ ಭಾವನೆ ಮರುಕಳಿಸುತ್ತದೆ. ನಿಮಗೆ ಸವಾಲೆನಿಸುವ ಕೆಲಸ ಕಾರ್ಯಗಳನ್ನು ಮಾತ್ರ ಮಾಡಲು ಇಚ್ಚಿಸುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಸುಲಭವಾದ ಯಶಸ್ಸು ದೊರೆಯುತ್ತದೆ. ಮಕ್ಕಳೊಂದಿಗೆ ಉತ್ತಮ ಆತ್ಮೀಯತೆ ಬೆಳೆಯಲಿದೆ. ಉನ್ನತ ವಿದ್ಯಾಭ್ಯಾಸ ಗಳಿಸಲು ಗುರು ಹಿರಿಯರ ನೆರವು ದೊರೆಯುತ್ತದೆ. ನಿಮ್ಮ ಬಳಿ ಹಣವಿದ್ದರೂ ಬೇರೆಯವರಿಗೆ ಸಹಾಯ ಮಾಡುವುದಿಲ್ಲ. ಮೊದಲ ಆದ್ಯತೆಯನ್ನು ನಿಮ್ಮ ಸ್ವಂತ ಕೆಲಸ ಕಾರ್ಯಗಳಿಗೆ ನೀಡುವಿರಿ. ಭೂ ವ್ಯವಹಾರದಲ್ಲಿ ಹೆಚ್ಚಿನ ಆದಾಯ ದೊರೆಯುತ್ತದೆ. ಪಾಲುದಾರಿಕೆ ವ್ಯಾಪಾರ ಇದ್ದಲ್ಲಿ ಉತ್ತಮ ಲಾಭವಿರುತ್ತದೆ. ಹಣಕಾಸಿನ ಕೊರತೆ ಇರುವುದಿಲ್ಲ. ಹೊಸ ವಾಹನಕೊಳ್ಳುವ ವಿಚಾರಕ್ಕೆ ಎಲ್ಲರ ಸಹಮತ ದೊರೆಯುತ್ತದೆ. ಮನೆತನದ ಆಸ್ತಿಯಲ್ಲಿನ ವಿವಾದ ದೂರವಾಗುತ್ತದೆ. ಕೋಪ ಕಡಿಮೆ ಮಾಡಿಕೊಳ್ಳಿ.

ಕುಂಭ ರಾಶಿ

ಸೋಲಿನ ವೇಳೆ ಭಯಪಡದೆ ಯಶಸ್ವಿಗೆ ಪ್ರಯತ್ನಿಸುವಿರಿ. ಅಂತಿಮ ಕ್ಷಣದವರೆಗೂ ನಿಮ್ಮ ಮನದಲ್ಲಿನ ಯೋಜನೆಗಳ ಬಗ್ಗೆ ಬೇರೆಯವರಿಗೆ ತಿಳಿಸುವುದಿಲ್ಲ. ನಿಮ್ಮ ಉನ್ನತಿಯನ್ನು ಕಂಡು ಅಸೂಯೆ ಪಡುವ ಜನ ಉದ್ಯೋಗ ಕ್ಷೇತ್ರದಲ್ಲಿ ಇರುತ್ತಾರೆ. ಒತ್ತಡಕ್ಕೆ ಒಳಗಾಗದೆ ಶಾಂತಿ ನೆಮ್ಮದಿಯ ಜೀವನವನ್ನು ನಡೆಸಲು ಯಶಸ್ವಿಯಾಗುವಿರಿ. ಆರೋಗ್ಯದಲ್ಲಿ ತೊಂದರೆ ಇರುತ್ತದೆ. ನೆರೆ ಹೊರೆಯವರ ಜೊತೆ ಸ್ನೇಹ ವಿಶ್ವಾಸವಿರುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ವರಮಾನವಿರುತ್ತದೆ. ಪಾಲುದಾರಿಕೆಯ ವ್ಯವಹಾರದಲ್ಲಿ ನಂಬಿಕೆ ಇರುವುದಿಲ್ಲ. ಕುಟುಂಬದವರ ಉನ್ನತಿಗಾಗಿ ಪ್ರಯತ್ನಿಸುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ಹೊಂದಿಸಬೇಕಾಗುತ್ತದೆ. ವಿದೇಶಕ್ಕೆ ತೆರಳುವ ಅವಕಾಶವನ್ನು ತಿರಸ್ಕರಿಸುವ ಸಾಧ್ಯತೆಗಳಿವೆ.

ಮೀನ ರಾಶಿ

ಕಷ್ಟಇಲ್ಲದ ಕೆಲಸ ಕಾರ್ಯಗಳು ಮಾಡಲು ಇಚ್ಚಿಸುವಿರಿ. ಸುಖ ಸಂತೃಪ್ತಿಯ ಜೀವನವನ್ನು ನಡೆಸುವಿರಿ. ಕುಟುಂಬದಲ್ಲಿ ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ವರ್ತಿಸುವಿರಿ. ನಿಮ್ಮ ಮನದ ಚಿಂತೆಯನ್ನು ಬೇರೆಯವರಿಗೆ ತಿಳಿಸುವುದಿಲ್ಲ. ಕಷ್ಟದಲ್ಲಿಯೂ ಸಂತೋಷವನ್ನು ಹಂಚುವ ಕಾರಣ ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ. ಹಣಕಾಸಿನ ಕೊರತೆ ಎದುರಾಗುವುದಿಲ್ಲ. ನಿಮ್ಮ ಮಕ್ಕಳಿಗೆ ಸ್ವಂತ ಮನೆ ಅಥವಾ ಜಮೀನು ಖರೀದಿಸುವ ಯೋಗವಿದೆ. ವಿದ್ಯಾರ್ಥಿಗಳು ಹೆಚ್ಚು ಶ್ರಮ ಪಡದೆ ಕಲಿಕೆಯಲ್ಲಿ ಮುಂದುವರೆಯಲಿದ್ದಾರೆ. ನಿಮ್ಮ ಮನದ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಕುಟುಂಬದ ಸದಸ್ಯರನ್ನು ಅವಲಂಬಿಸುವಿರಿ. ತಾನಾಗಿಯೇ ಒಲಿದುಬಂದ ಅದೃಷ್ಟವನ್ನು ಉಪಯೋಗಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಸ್ವತಂತ್ರವಾಗಿ ನಿರ್ವಹಿಸುವ ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.