ಕನ್ನಡ ಸುದ್ದಿ  /  Astrology  /  Mithuna Rashi Yugagi Varsha Bhavishya Gemini Ugadi Predictions For Krodhi Nama Samvatsara Yearly Horoscope 2024 Sts

ಮಿಥುನ ರಾಶಿಯ ಕ್ರೋಧಿನಾಮ ಸಂವತ್ಸರದ ವರ್ಷ ಭವಿಷ್ಯ: ಕೋಪದ ಕೈಗೆ ಬುದ್ಧಿಕೊಟ್ಟು ಆತ್ಮೀಯರನ್ನು ಕಳೆದುಕೊಳ್ಳಬೇಡಿ, ನಿಮ್ಮವರೇ ನಿಮಗೆ ಸಂಪತ್ತು

ಯುಗಾದಿ ರಾಶಿ ಭವಿಷ್ಯ: ಮಿಥುನ ರಾಶಿಗೆ ಈ ವರ್ಷ ಯಾವುದರಲ್ಲಿ ಬೇವು, ಯಾವುದಲ್ಲಿ ಬೆಲ್ಲ? ಯಾವ ನಕ್ಷತ್ರಗಳಲ್ಲಿ ಜನಿಸಿದವರು ಮಿಥುನ ರಾಶಿಗೆ ಸೇರುತ್ತಾರೆ? ಮಿಥುನ ರಾಶಿಯವರ ಗುಣ ಸ್ವಭಾವಗಳು ಏನು? ಗ್ರಹಗತಿ ದೋಷಕ್ಕೆ ಏನು ಪರಿಹಾರ? -ಜ್ಯೋತಿಷಿ ಎಚ್.ಸತೀಶ್ ಅವರು ಈ ಬರಹದಲ್ಲಿ ವಿವರ ನೀಡಿದ್ದಾರೆ.

ಮಿಥುನ ರಾಶಿ ಯುಗಾದಿ ವರ್ಷ ಭವಿಷ್ಯ
ಮಿಥುನ ರಾಶಿ ಯುಗಾದಿ ವರ್ಷ ಭವಿಷ್ಯ

ಮಿಥುನ ರಾಶಿಯ ಯುಗಾದಿ ವರ್ಷ ಭವಿಷ್ಯ 2024: ನೀವು ಮೃಗಶಿರ ನಕ್ಷತ್ರದ 3 ಮತ್ತು 4ನೇ ಪಾದಗಳು, ಆರ್ದ್ರಾ (ಆರಿದ್ರಾ) ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಪುನರ್ವಸು ನಕ್ಷತ್ರದ 1, 2 ಮತ್ತು 3ನೇ ಪಾದದಲ್ಲಿ ಜನಿಸಿದ್ದರೆ ನಿಮ್ಮದು ಮಿಥುನ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಕ, ಕಿ ಆದಲ್ಲಿ ಮೃಗಶಿರ ನಕ್ಷತ್ರ. ಕು, ಘ, ಜ್ಞ, ಛ ಆದಲ್ಲಿ ಆರ್ದ್ರಾ ನಕ್ಷತ್ರ. ಕೆ, ಕೊ, ಹ ಆಗಿದ್ದಲ್ಲಿ ಪುನರ್ವಸು ನಕ್ಷತ್ರ ಮತ್ತು ಮಿಥುನ ರಾಶಿ ಆಗುತ್ತದೆ ಎಂದು ತಿಳಿಯಬೇಕು. 12 ರಾಶಿಗಳಿರುವ ರಾಶಿ ಚಕ್ರದಲ್ಲಿ 3ನೇ ರಾಶಿ ಮಿಥುನ. ಈ ರಾಶಿ ಚಕ್ರದ ಚಿಹ್ನೆ ಗಂಡು-ಹೆಣ್ಣು. ಹೀಗಾಗಿ ಎರಡೂ ಲಿಂಗಗಳ ಸ್ವಭಾವವೂ ಇವರಲ್ಲಿ ಮೈಗೂಡಿರುತ್ತದೆ. ದ್ವಂದ್ವ ಮನಸ್ಸು, ನಿರ್ಧಾರಗಳನ್ನು ಆಗಾಗ ಬದಲಿಸುವ ಮನಸ್ಥಿತಿ ಈ ರಾಶಿಯವರ ಸಾಮರ್ಥ್ಯವೂ ಹೌದು, ದೌರ್ಬಲ್ಯವೂ ಹೌದು. ಮಿಥುನ ರಾಶಿಯ ಈ ವರ್ಷದ ಭವಿಷ್ಯ ಹೇಗಿದೆ ಎನ್ನುವುದನ್ನು ಮುಂದೆ ತಿಳಿಯೋಣ.

ಮಿಥುನ ರಾಶಿಯ ಗುಣಲಕ್ಷಣಗಳು (Gemini characteristics in Kannada)

ಮಿಥುನ ರಾಶಿಯ ಮಹಿಳೆಯರು ಸಾಮಾನ್ಯವಾಗಿ ಬುದ್ಧಿವಂತರಾಗಿರುತ್ತಾರೆ. ಯಾವುದೇ ವಿಚಾರವಾದರೂ ಸುಲಭವಾಗಿ ಅರಿತುಕೊಳ್ಳಬಲ್ಲರು. ಸೋಲು-ಗೆಲುವನ್ನು ಸಮಾನ ಭಾವನೆಯಿಂದ ಸ್ವೀಕರಿಸುತ್ತಾರೆ. ಯಾವುದಾದರೂ ನಿರ್ಧಾರ ತೆಗೆದುಕೊಂಡು, ಅದರಿಂದ ನಿರೀಕ್ಷಿತ ಪ್ರಯೋಜನ ಸಿಗುತ್ತಿಲ್ಲ ಎಂದಾದರೆ ಅಂಥವನ್ನು ದಿಢೀರನೆ ಬದಲಾಯಿಸಬಲ್ಲರು. ಯಾವುದೇ ಕೆಲಸ ಕಾರ್ಯಗಳನ್ನು ಅವಸರದಲ್ಲಿ ಆರಂಭಿಸುವುದಿಲ್ಲ. ಹಾಸ್ಯ ಪ್ರಿಯರು. ತಪ್ಪು ಕಂಡಾಗ ನಿಷ್ಠುರವಾಗಿ ಮಾತನಾಡುವವರು. ಇವರ ಉಪಸ್ಥಿತಿಯು ವಾತಾವರಣದಲ್ಲಿ ಉತ್ಸಾಹ ತುಂಬುತ್ತದೆ. ಎಲ್ಲರಿಗೂ ಇಷ್ಟವೆನಿಸುವಂತೆ ಬುದ್ಧಿವಂತಿಕೆಯಿಂದ ಮಾತನಾಡುತ್ತಾರೆ. ಗಾಳಿಮಾತು ಬಲು ಇಷ್ಟ. ಬೇಗನೆ ಕೋಪ ಬರುತ್ತದೆ. ಸಂಕೋಚದ ಮನಸ್ಸಿನವರು.

ಮಿಥುನ ರಾಶಿಯಲ್ಲಿ ಜನಿಸಿದ ಪುರುಷರು ಸಹ ಬುದ್ದಿವಂತರಾಗಿರುತ್ತಾರೆ. ಸದಾಕಾಲ ಉತ್ಸಾಹದಿಂದ ವರ್ತಿಸುತ್ತಾರೆ. ಯಾವುದೇ ಸಂದರ್ಭದಲ್ಲಿ ಸುಲಭವಾಗಿ ಹೊಂದಿಕೊಂಡು ಹೋಗಬಲ್ಲರು. ಮಾನಸಿಕವಾಗಿ ಸದೃಢವಾಗಿರುತ್ತಾರೆ. ಇವರು ಇದ್ದ ಕಡೆ ಹಾಸ್ಯಕ್ಕೆ ಬರವಿರುವುದಿಲ್ಲ. ಯಾವುದೇ ವಿಚಾರವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲರು. ನಿರೀಕ್ಷಿಸಿದಂತೆ ತಮ್ಮ ಗುರಿಯನ್ನು ಸಾಧಿಸುತ್ತಾರೆ. ನಿಮ್ಮದು ಮಿಥುನ ರಾಶಿಯಾಗಿದ್ದರೆ ಮಕ್ಕಳಿಗೆ ನಿಮ್ಮ ಮೇಲೆ ವಿಶೇಷ ಪ್ರೀತಿ, ಗೌರವ ಇರುವುದು ನಿಮ್ಮ ಗಮನಕ್ಕೆ ಬಂದಿರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ದುಡುಕು ಬುದ್ಧಿ ಇರುತ್ತದೆ. ಉದ್ವೇಗಕ್ಕೆ ಒಳಗಾಗಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವುದು ಆಗಾಗ ಸಂಭವಿಸುತ್ತಿರುತ್ತದೆ.

ಮಿಥುನ ರಾಶಿಗೆ ಶುಭ ದಿನಾಂಕ, ವಾರ, ಬಣ್ಣ

ಮಿಥುನ ರಾಶಿಯಲ್ಲಿ ಜನಿಸಿದವರು ನೆನಪಿಟ್ಟುಕೊಳ್ಳಬೇಕಾದ ವಿಚಾರಗಳಿವು. ಶುಭ ದಿನಾಂಕಗಳು: 1, 4, 12, 20, 29, 30. ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ಮತ್ತು ಗುರುವಾರ. ಶುಭ ವರ್ಣ: ಕೆಂಪು, ಹಳದಿ, ಬಿಳಿ ಮತ್ತು ಹಸಿರು. ಅಶುಭ ವರ್ಣ: ನೀಲಿ ಮಿಶ್ರಿತ ಹಸಿರು, ಶುಭ ದಿಕ್ಕು: ಉತ್ತರ ಮತ್ತು ಪಶ್ಚಿಮ, ಶುಭ ತಿಂಗಳು: ಜುಲೈ 15ರಿಂದ ಆಗಸ್ಟ್ 15 ಮತ್ತು ಮಾರ್ಚ್ 15ರಿಂದ ಮೇ 14. ಶುಭ ಹರಳು: ಪಚ್ಚೆ ಹಸಿರು, ಝೆರ್ಕೋನ್ ಮತ್ತು ನೀಲಮಣಿ. ಶುಭ ರಾಶಿ: ತುಲಾ ಮತ್ತು ಕುಂಭ. ಅಶುಭ ರಾಶಿ: ಸಿಂಹ, ವೃಶ್ಚಿಕ ಮತ್ತು ಮೇಷ.

ಶ್ರೀ ಕ್ರೋಧಿನಾಮ ಸಂವತ್ಸರದ ಮಿಥುನ ರಾಶಿಯ ಗೋಚಾರ ಫಲ

ಮಿಥುನ ರಾಶಿಗೆ ಸೇರಿದವರಿಗೆ ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಏಪ್ರಿಲ್ ತಿಂಗಳ ಕೊನೆಯವರೆಗೂ ಉತ್ತಮ ಫಲಗಳು ಕಂಡುಬರುತ್ತವೆ. ಆನಂತರ ಯಾವುದೇ ತೊಂದರೆ ಎದುರಾಗದು. ಆದರೆ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಲಿವೆ. ಕೆಲವೊಮ್ಮೆ ಆತ್ಮೀಯರ ಸಹಾಯ, ಸಹಕಾರ ಮುಖ್ಯವಾಗುತ್ತದೆ. ಆತ್ಮೀಯರ ಜೊತೆ ಅರಿತು ಬೆರೆತು ಬಾಳುವ ಬುದ್ಧಿ ನಿಮ್ಮಲ್ಲಿರುತ್ತದೆ. ಹಣಕಾಸಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಯಾವುದೇ ವಿಚಾರದಲ್ಲಿ ಹೆಚ್ಚಿನ ನಿರೀಕ್ಷೆ ಇರುವುದಿಲ್ಲ. ಸ್ವಾರ್ಥವಿಲ್ಲದ ಮನಸ್ಸಿನಿಂದ ಎಲ್ಲರ ಜೊತೆ ವರ್ತಿಸುವಿರಿ. ಕಷ್ಟ ನಷ್ಟವನ್ನು ಗೆದ್ದು ಜೀವನದಲ್ಲಿ ಯಶಸ್ವಿಯಾಗಿ ಮುಂದುವರೆಯುವಿರಿ. ಕುಟುಂಬದ ಬಗ್ಗೆ ವಿಶೇಷವಾದ ಅಕ್ಕರೆ ಇರುತ್ತದೆ. ನಿಮ್ಮಲ್ಲಿರುವ ಒಂದು ದೋಷ ಎಂದರೆ ಯಾರನ್ನೂ ಸುಲಭವಾಗಿ ನಂಬುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ಹಿಂದಿನ ತೀರ್ಮಾನಗಳನ್ನು ಬದಲಾಯಿಸುವಿರಿ. ಮನಸ್ಸು ಮಗುವಿನಂತೆ ಮೃದುವಾಗಿದ್ದರೂ ಆಡುವ ಮಾತು ಕಠೋರ. ಇದರಿಂದ ಕೆಟ್ಟ ಹೆಸರನ್ನು ಗಳಿಸುವ ಸಂಭವವಿದೆ. ಆದ್ದರಿಂದ ಮಾತನ್ನು ಆಡುವ ಮುನ್ನ ಯೋಚಿಸಿ ನೋಡಿ. ಬದುಕಿನಲ್ಲಿ ಹೀಗೆ ಬಂದು ಹಾಗೆ ಹೋಗುವ ಸಾಮಾನ್ಯ ವ್ಯಕ್ತಿಯನ್ನು ಮೆಚ್ಚಿಸಲು ಹೋಗಿ ಆತ್ಮೀಯರನ್ನು ದೂರ ಮಾಡಿಕೊಳ್ಳುವಿರಿ.

ಮಿಥುನ ರಾಶಿಯವರಿಗೆ ಈ ವರ್ಷದ ಸ್ನೇಹ, ವಿಶ್ವಾಸದ ಬಂಧ

ಮಾಡುವ ತಪ್ಪುಗಳನ್ನು ಮನ್ನಿಸುವ ಕ್ಷಮಾಗುಣ ನಿಮ್ಮಲ್ಲಿ ಇರುತ್ತದೆ. ಇದರಿಂದ ಎಲ್ಲರಿಂದಲೂ ವಿಶೇಷ ಪ್ರೀತಿ, ವಿಶ್ವಾಸ ದೊರೆಯುತ್ತದೆ. ಸಾಮಾನ್ಯವಾಗಿ ಶಾಂತಿಯಿಂದಲೇ ವರ್ತಿಸುವ ನೀವು ಕೋಪಗೊಂಡಾಗ ಮಾತ್ರ ತಪ್ಪು ನಿರ್ಧಾರವನ್ನು ಕೈಗೊಳ್ಳುವಿರಿ. ಆದರೆ ಬರುವ ಕೋಪ ಕ್ಷಣಮಾತ್ರದಲ್ಲಿ ಮರೆಯಾಗುತ್ತದೆ. ಹಿಡಿದ ಕೆಲಸ ಪೂರ್ಣಗೊಳಿಸಲು ಕಠಿಣ ಪರಿಶ್ರಮ ಬೇಕು. ಸೋಲು ಎದುರಾದಾಗ ಸಹನೆ ಕಳೆದುಕೊಂಡು ಉದ್ವೇಗದಿಂದ ಮಾತನಾಡುವಿರಿ. ಸಂಗಾತಿಯನ್ನು ಮಗುವಿನಂತೆ ನೋಡಿಕೊಳ್ಳುವಿರಿ. ಪ್ರೀತಿ-ವಿಶ್ವಾಸದಿಂದ ನಡೆದುಕೊಳ್ಳುವ ಕಾರಣ ವಿವಾದಕ್ಕೆ ಆಸ್ಪದವಿರುವುದಿಲ್ಲ. ಆದರ್ಶದ ಜೀವನ ನಡೆಸುವಿರಿ. ಆಪ್ತರ ಬಳಿ ನಿಮ್ಮ ಗೌಪ್ಯ ವಿಚಾರಗಳನ್ನು ಹಂಚಿಕೊಳ್ಳುವಿರಿ.

ಉದ್ಯೋಗ: ಆತುರದ ಬುದ್ಧಿಗೆ ಹಾಕಿ ಕಡಿವಾಣ

ಮಿಥುನ ರಾಶಿಯವರಿಗೆ ಆತುರ ಒಂದು ದೌರ್ಬಲ್ಯ. ಅದು ಉದ್ಯೋಗದ ವಿಚಾರದಲ್ಲಿಯೂ ಕಂಡು ಬರುತ್ತದೆ. ಆದರೆ ಸದ್ಯದ ಪರಿಸ್ಥಿತಿಗೆ ಹೊಂದಿಕೊಳ್ಳುವ ಗುಣ ಇರುವುದರಿಂದ ಸಾಮಾನ್ಯವಾಗಿ ದೊಡ್ಡಮಟ್ಟದ ಸಮಸ್ಯೆ ಎದುರಾಗುವುದಿಲ್ಲ. ನಿಮ್ಮ ಮೇಲಿನ ಅಧಿಕಾರಿಗಳ ಪ್ರೋತ್ಸಾಹ ಮತ್ತು ಸಲಹೆಗಳು ನಿಮ್ಮ ಉದ್ಯೋಗದ ದಿಕ್ಕನ್ನೇ ಬದಲಿಸುತ್ತವೆ. ಸ್ವತಂತ್ರವಾಗಿ ಯಾವುದೇ ಕೆಲಸ ಮಾಡಿದರೂ ಯಶಸ್ಸು ದೊರೆಯಲಿದೆ. ಅನವಶ್ಯಕವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗದಿದ್ದರೆ ಯಾವುದೇ ತೊಂದರೆ ಎದುರಾಗುವುದಿಲ್ಲ. ನಿರೀಕ್ಷಿತ ವೇಳೆಗಿಂತ ಮುಂಚಿತವಾಗಿ ಕೆಲಸ ಕಾರ್ಯಗಳನ್ನು ಪೂರೈಸುವಿರಿ. ಉನ್ನತ ಅಧಿಕಾರ ಮತ್ತು ಒಳ್ಳೆಯ ಹೆಸರು ಗಳಿಸುವಿರಿ. ಉದ್ಯೋಗದ ಸಲುವಾಗಿ ದೀರ್ಘಕಾಲದ ಪ್ರಯಾಣ ಮಾಡುವಿರಿ. ಅವಶ್ಯಕತೆ ಇದ್ದಲ್ಲಿ ಉದ್ಯೋಗ ಬದಲಿಸಬಹುದು. ಕ್ರೋಧಿನಾಮ ಸಂವತ್ಸರದಲ್ಲಿ ನಿಮ್ಮ ಕೆಲಸದ ಒತ್ತಡವು ಅಧಿಕವಾಗಿರುತ್ತದೆ.

ವಿದ್ಯಾಭ್ಯಾಸ: ಗುರುವಿನ ಅನುಗ್ರಹವೇ ನಿಮ್ಮ ಪಾಲಿಗೆ ದೊಡ್ಡ ಶಕ್ತಿ

ಮಿಥುನ ರಾಶಿಯವರು ಕ್ರೋಧಿನಾಮ ಸಂವತ್ಸರದ ಆರಂಭದಲ್ಲಿ ವಿದ್ಯಾಭ್ಯಾಸದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಆದರೆ ಕ್ರಮೇಣ ಗುರುವಿನ ಅನುಗ್ರಹದಿಂದ ಶುಭಫಲಗಳು ದೊರೆಯುತ್ತವೆ. ನಿರಂತರ ಪ್ರಯತ್ನವು ಹೊಸ ಸಾಧನೆಗೆ ದಾರಿಯಾಗುತ್ತದೆ. ವಿಶೇಷ ಜ್ಞಾನವನ್ನು ಸಂಪಾದಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಶ್ರಮದಿಂದ ಯಶಸ್ಸನ್ನು ಗಳಿಸುವಿರಿ. ವಿದೇಶದಲ್ಲಿ ಅಧ್ಯಯನ ಮಾಡಲು ಬಯಸಿದರೆ ಅನುಕೂಲಕರ ವಾತಾವರಣ ದೊರೆಯುತ್ತದೆ. ಉನ್ನತ ವಿದ್ಯಾಭ್ಯಾಸದ ಸಲುವಾಗಿ ಮನೆಯಿಂದ ದೂರ ಉಳಿಯಬೇಕಾಗುತ್ತದೆ. ಅಧ್ಯಯನದ ಜೊತೆಯಲ್ಲಿ ಮನರಂಜನಾ ಮಾಧ್ಯಮದಲ್ಲಿ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುವ ಅನುಭವ ಪಡೆಯುವಿರಿ.

ಹಣಕಾಸು: ಸಂಪಾದನೆಗೆ ತಕ್ಕಂತೆ ಖರ್ಚೂ ಹೆಚ್ಚು

ಮಿಥುನ ರಾಶಿಯವರು ಉತ್ತಮ ಆದಾಯದ ನಡುವೆಯೂ ಹಣವನ್ನು ಉಳಿಸಲು ಸಾಧ್ಯವಾಗದು. ಗುಟ್ಟಾಗಿ ಹಣ ಸಂಪಾದನೆ ಮಾಡುವಿರಿ. ಖರ್ಚು ನಿಯಂತ್ರಿಸುವಿರಿ. ಆದಾಯದ ವಿಚಾರದಲ್ಲಿ ಮಾನಸಿಕ ಒತ್ತಡ ಇರುತ್ತದೆ. ಹಣಕಾಸಿನ ವ್ಯವಹಾರವನ್ನು ಸ್ವತಂತ್ರವಾಗಿ ನಿರ್ವಹಿಸುವಿರಿ. ಏಪ್ರಿಲ್ ತಿಂಗಳು ಮುಗಿವವರೆಗೂ ಆದಾಯದಲ್ಲಿ ಯಾವುದೇ ತೊಂದರೆ ಕಾಣುವುದಿಲ್ಲ. ಸ್ನೇಹಿತರ ಸಹಕಾರದಿಂದ ತಕ್ಕಮಟ್ಟಿಗೆ, ಸಾತ್ವಿಕ ರೀತಿಯಲ್ಲಿಯೇ ಹಣ ಸಂಪಾದಿಸುವಿರಿ. ತೆರೆಮರೆಯ ಕಲಾವಿದರಿಗೆ ಹೆಚ್ಚಿನ ಲಾಭ ದೊರೆಯಲಿದೆ. ಮಿಥುನ ರಾಶಿಯವರಿಗೆ ಈ ವರ್ಷ ಅನಿರೀಕ್ಷಿತವಾಗಿ ಲಾಭ ದೊರೆಯುತ್ತದೆ. ಯಾವುದೇ ಹೊಸ ಕೆಲಸ ಆರಂಭಿಸುವ ಮೊದಲು ಸಾಮಾನ್ಯವಾಗಿ ಆದಾಯ-ವೆಚ್ಚದ ಲೆಕ್ಕಾಚಾರ ಮಾಡುವಿರಿ. ಮೇ ತಿಂಗಳಿಂದ ಖರ್ಚು ವೆಚ್ಚಗಳು ಹೆಚ್ಚೆಲಿವೆ. ಹತ್ತಿರದವರ ನೆರವಿನಿಂದ ಪಾಲುದಾರಿಕೆ ವ್ಯಾಪಾರ ಆರಂಭಿಸುವಿರಿ. ಉತ್ತಮ ಆದಾಯದ ಜೊತೆಯಲ್ಲಿ ಹಣ ಗಳಿಸುವ ಮೂಲಗಳು ದೊರೆಯುತ್ತವೆ. ವಿದೇಶಿ ಸಂಸ್ಥೆಯ ನಿರ್ವಹಣೆಯಿಂದ ಉತ್ತಮ ಲಾಭ ಗಳಿಸುವಿರಿ. ಹಣಕಾಸಿನ ಕೊರತೆ ಕಂಡು ಬಂದು ಕೂಡಿಟ್ಟ ಹಣವನ್ನು ಬಳಸಬೇಕಾಗುತ್ತದೆ. ಏರುಪೇರುಗಳಿದ್ದರೂ ಒಟ್ಟಾರೆ ಹಣಕಾಸಿನ ಪರಿಸ್ಥಿತಿಯು ತೊಂದರೆ ಇಲ್ಲದೆ ಸಾಗುತ್ತದೆ.

ಕೌಟುಂಬಿಕ ಜೀವನ: ಸಂಗಾತಿಯ ಆರೋಗ್ಯದಲ್ಲಿ ಏಳುಬೀಳು

ಮಿಥುನ ರಾಶಿಗೆ ಸೇರಿದವರ ಕೌಟುಂಬಿಕ ಜೀವನದಲ್ಲಿ ಯಾವುದೇ ತೊಂದರೆ ಇಲ್ಲದೆ ಸಂತೋಷ ನೆಮ್ಮದಿ ನೆಲೆಸಿರುತ್ತದೆ. ಆರಂಭದಲ್ಲಿ ಭಿನ್ನಾಭಿಪ್ರಾಯ, ಭಿನ್ನಮತ ಕಂಡು ಬಂದರೂ ಕ್ರಮೇಣ ಮಾತುಕತೆ, ಸಂಧಾನದಿಂದ ಸಾಮರಸ್ಯ ನೆಲೆಯಾಗುತ್ತದೆ. ಹೊಸದಾಗಿ ಮದುವೆಯಾದ ನವದಂಪತಿಗಳ ನಡುವೆ ಹೊಂದಾಣಿಕೆ, ಅನ್ಯೋನ್ಯತೆ ಇರುತ್ತದೆ. ಮಕ್ಕಳ ವಿಚಾರದಲ್ಲಿ ಒಮ್ಮತ ಇರದಿರುವುದು ಕೆಲಮಟ್ಟಿಗೆ ಸಮಸ್ಯೆ ಎನಿಸಬಹುದು. ಸಂಗಾತಿಯ ಆರೋಗ್ಯದಲ್ಲಿ ಏಳುಬೀಳು ಕಂಡು ಬರುತ್ತವೆ. ಆಗಾಗ್ಗೆ ತುಸು ಸಮಯ ಮಾಡಿಕೊಂಡು ಸಂಗಾತಿಯೊಂದಿಗೆ ಮನಬಿಚ್ಚಿ ಮಾತನಾಡಿ. ಸಂಗಾತಿಯೊಂದಿಗೆ ಮನದ ಯೋಚನೆ ಹೇಳಿಕೊಂಡರೆ ನಿಮಗೂ ಮನಸ್ಸು ತುಸು ಹಗುರ ಎನ್ನಿಸುತ್ತದೆ. ಪತಿ-ಪತ್ನಿಯ ನಡುವೆ ಉತ್ತಮ ಸಹಕಾರ ಇರುವ ಕಾರಣ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ. ಅವಿವಾಹಿತರಿಗೆ ಈ ವರ್ಷ ವಿವಾಹ ಯೋಗವಿದೆ.

ಮಕ್ಕಳ ವಿಚಾರ: ಪ್ರತಿಭಾವಂತ ಮಕ್ಕಳಿಂದ ಮನಸ್ಸಿಗೆ ಹಿತ

ಮಿಥುನ ರಾಶಿಗೆ ಸೇರಿದವರಿಗೆ ಈ ವರ್ಷ ಸಂತಾನ ಲಾಭವಿದೆ. ಈಗಾಗಲೇ ಸಂತಾನ ಇರುವ ಕುಟುಂಬಗಳಲ್ಲಿ ಮಕ್ಕಳು ಯಾರ ಆಶ್ರಯವನ್ನೂ ಬಯಸುವುದಿಲ್ಲ. ಗುರುಹಿರಿಯರ ಮಾರ್ಗದರ್ಶನ ಹೊಸ ಆಸೆಗೆ ಕಾರಣವಾಗಲಿದೆ. ಮಕ್ಕಳು ಸನ್ಮಾರ್ಗದಲ್ಲಿ ಬೆಳೆಯುತ್ತಾರೆ. ಮಕ್ಕಳಿಂದ ಕುಟುಂಬದ ಕಷ್ಟನಷ್ಟಗಳು ಕಡಿಮೆಯಾಗಲಿದೆ. ಮಕ್ಕಳು ಕ್ರೀಡಾ ಸ್ಪರ್ದೆಯಲ್ಲಿಯೂ ಮುಂಚೂಣಿಯಲ್ಲಿ ಇರುತ್ತಾರೆ. ವಿದ್ಯಾಭ್ಯಾಸ ಮುಗಿಯುವ ಮುನ್ನವೇ ಕೆಲವರಿಗೆ ಉದ್ಯೋಗ ಲಭಿಸಲಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ದೊರೆಯುತ್ತದೆ. ವಿದೇಶಿ ಭಾಷೆಯಲ್ಲಿ ಪ್ರಬುದ್ದತೆ ಮರೆಯುವಿರಿ. ಉತ್ತಮ ಆರೋಗ್ಯವಿರುತ್ತದೆ.

ವಿವಾಹ ಮತ್ತು ದಾಂಪತ್ಯ: ಮದುವೆಗೆ ಆತ್ಮೀಯರ ನೆರವು

ಮಿಥುನ ರಾಶಿಯವರು ಈ ವರ್ಷ ದಾಂಪತ್ಯ ಜೀವನದಲ್ಲಿ ನೆಮ್ಮದಿ ನಿರೀಕ್ಷಿಸಬಹುದು. ಅವಿವಾಹಿತರಿಗೆ ಆತ್ಮೀಯರ ಸಹಾಯದಿಂದ ವಿವಾಹವಾಗಲಿದೆ. ಪರಸ್ಪರ ಪ್ರೀತಿ ಮತ್ತು ಗೌರವವನ್ನು ಹೊಂದಿರುವ ಕಾರಣ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ದಂಪತಿಗಳ ನಡುವಿನ ವಾದ-ವಿವಾದ ಈ ವರ್ಷ ಕಡಿಮೆ ಇರುತ್ತದೆ. ಹೆಚ್ಚಿನ ಪ್ರಯತ್ನದಿಂದ ವಿವಾಹವು ಸಾಧ್ಯವಾಗುತ್ತದೆ. ವೈವಾಹಿಕ ಜೀವನದಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಸಂಗಾತಿಯ ಜೊತೆಯಲ್ಲಿ ಯಾತ್ರಾಸ್ಥಳಗಳಿಗೆ ತೆರಳುವಿರಿ. ಸಂಗಾತಿಗೆ ಕಷ್ಟಪಟ್ಟು ದುಡಿಯುವ ಗುಣವಿರುತ್ತದೆ ಕುಟುಂಬದ ಸಮಸ್ಯೆಗಳಿಗೆ ಸಂಗಾತಿಯ ಜೊತೆಗೂಡಿ ಪರಿಹಾರವನ್ನು ಕಂಡುಹಿಡಿಯುವಿರಿ. ಸಮಯ ಕಳೆಯಲೆಂದು ಆರಂಭಿಸಿದ ವ್ಯಾಪಾರವೊಂದು ಜೀವನಾಧಾರವಾಗಲಿದೆ.

ವ್ಯಾಪಾರ ವ್ಯವಹಾರ: ನಿರ್ಧಾರ ದೃಢವಾಗಿರಲಿ

ಮಿಥುನ ರಾಶಿಯವರಿಗೆ ಕ್ರೋಧಿನಾಮ ಸಂವತ್ಸರದಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ನಷ್ಟವಿರುವುದಿಲ್ಲ. ಶನಿ ಮತ್ತು ರಾಹುಗ್ರಹಗಳ ಅನುಗ್ರಹ ಉತ್ತಮ ಆದಾಯ ನೀಡಲಿದೆ. ಆದರೆ ತೆಗೆದುಕೊಳ್ಳುವ ನಿರ್ಧಾರವನ್ನು ಬದಲಾಯಿಸಬಾರದು. ಸಂಗಾತಿಯ ಸಹಾಯ ಸಹಕಾರ ಸದಾ ಇರಲಿದೆ. ಆದಾಯದಲ್ಲಿ ಸ್ಥಿರತೆ ಇರುವುದಿಲ್ಲ. ಒಂದೇ ರೀತಿಯ ಜೀವನ ಇಷ್ಟವಾಗದು. ಆದ್ದರಿಂದ ವ್ಯಾಪಾರ ವ್ಯವಹಾರದಲ್ಲಿಯೂ ವೈವಿಧ್ಯ ಇರಲಿದೆ. ಒಂದಕ್ಕಿಂತಲೂ ಹೆಚ್ಚಿನ ಮೂಲಗಳಿಂದ ಆದಾಯ ನಿಮಗಿರುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಎಚ್ಚರಿಕೆ ಇರಲಿ. ಸರ್ಕಾರದ ಅನುದಾನವನ್ನು ನಿರೀಕ್ಷಿಸಿದಲ್ಲಿ ಏಪ್ರಿಲ್ ಅಥವಾಮೇ ತಿಂಗಳಿನಲ್ಲಿ ಸಾಧ್ಯವಾಗಲಿದೆ. ಒಟ್ಟಾರೆ ಈ ಸಂವತ್ಸರದಲ್ಲಿ ಉತ್ತಮ ಆದಾಯ ದೊರೆಯುತ್ತದೆ.

ವಾಹನ ವಿಚಾರ: ವಾಹನಗಳಿಂದಲೂ ಆದಾಯ ಬರಬಹುದು

ಮಿಥುನ ರಾಶಿಯವರಿಗೆ ಈ ವರ್ಷ ಒಂದಕ್ಕಿಂತಲೂ ಹೆಚ್ಚು ವಾಹನ ಕೊಳ್ಳುವ ಸಾಧ್ಯತೆ ಕಾಣಿಸುತ್ತಿದೆ. ಸಾರಿಗೆ ಸೌಲಭ್ಯ ಕಲ್ಪಿಸುವ ಸಂಸ್ಥೆಯ ಒಡೆತನ ಲಭ್ಯವಾಗಬಹುದು. ವಾಹನಗಳ ಮೂಲಕ ಆದಾಯ ಗಳಿಸುವಿರಿ. ಸ್ವಂತ ಬಳಕೆಗಾಗಿ ಐಷಾರಾಮಿ ವಾಹನವೊಂದನ್ನು ಕೊಳ್ಳುವ ಸಾಧ್ಯತೆಗಳಿವೆ. ನಿಮ್ಮ ವಾಹನವನ್ನು ಬೇರೆಯವರಿಗೆ ನೀಡಿದರೆ ಕಷ್ಟಕ್ಕೆ ಸಿಲುಕುವಿರಿ. ನೀವು ಬಳಸುವ ವಾಹನವನ್ನು ಶುಚಿಯಾಗಿ ಇಟ್ಟುಕೊಂಡರೆ ಕಷ್ಟನಷ್ಟಗಳು ಕಡಿಮೆ ಆಗುತ್ತವೆ. ವಾಹನವನ್ನು ಶುಚಿಗೊಳಿಸಿದಲ್ಲಿ ಶನಿದೇವನು ಪ್ರಸನ್ನನಾಗುತ್ತಾನೆ ಎಂಬ ಮಾತು ಕೆಲವು ಧಾರ್ಮಿಕ ಗ್ರಂಥಗಳಲ್ಲಿ ಇವೆ. ಇದು ನಿಮಗೆ ತಿಳಿದರಬೇಕು, ಶನಿಯ ಅನುಗ್ರಹಕ್ಕಾಗಿಯಾದರೂ ನಿಮ್ಮ ವಾಹನವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ.

ಆರೋಗ್ಯದ ವಿಚಾರ: ಕುಡಿಯುವ ನೀರು ಶುದ್ಧವಾಗಿರಲಿ

ಮಾನಸಿಕವಾಗಿ ಮಿಥುನ ರಾಶಿಯವರಿಗೆ ಅತಿಯಾದ ಆಲೋಚನೆ ಕಾಡುತ್ತದೆ. ಈ ವರ್ಷ ಆರೋಗ್ಯ ಅಷ್ಟಾಗಿ ಸರಿಯಿರುವುದು ಕಡಿಮೆ. ಕಣ್ಣಿನ ತೊಂದರೆ ಉಂಟಾದರೂ ಅಪಾಯವಿಲ್ಲ. ಕಾಲಿನಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಎದುರಿಸುವ ಸಾಧ್ಯತೆಯಿದೆ. ಸ್ತ್ರೀಯರನ್ನು ಹಾರ್ಮೋನಿನ ವ್ಯತ್ಯಾಸ ಕಾಡುತ್ತದೆ. ಮಧುಮೇಹದಂತಹ ದೀರ್ಘಕಾಲ ಕಾಡುವ ರೋಗಗಳಿದ್ದಲ್ಲಿ ಎಚ್ಚರಿಕೆ ವಹಿಸಿ. ರಾಹುವು ಮೀನದಲ್ಲಿರುವ ಕಾರಣ ಕಲುಷಿತ ನೀರಿನ ಸೇವನೆಯಿಂದ ಸೋಂಕಿಗೆ ಒಳಗಾಗುವಿರಿ. ಮಕ್ಕಳಿಗೆ ಉತ್ತಮ ಆರೋಗ್ಯ ಇರುತ್ತದೆ. ವೃದ್ದರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ವಾಹನ ಪ್ರಯಾಣ ಮಾಡುವ ವೇಳೆ ಎಚ್ಚರಿಕೆ ವಹಿಸಬೇಕು. ತುಕ್ಕು ಹಿಡಿದ ಲೋಹದ ವಸ್ತುಗಳ ಬಗ್ಗೆ ಎಚ್ಚರಿಕೆಯಿರಲಿ. ಗಾಯ ಮಾಡಿಕೊಂಡರೆ ವಾಸಿಯಾಗಲು ಸಮಯಬೇಕು. ಅದು ಇತರ ಅರೋಗ್ಯ ಸಮಸ್ಯೆಗೂ ಕಾರಣವಾಗಬಹುದು.

ಮಿಥುನ ರಾಶಿಗೆ ಶುಭ ಫಲಕ್ಕಾಗಿ ಪರಿಹಾರಗಳು

1) ಪ್ರತಿದಿನ ಶ್ರೀ ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ಅಥವಾ ಕೇಳಿಸಿಕೊಳ್ಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

2) ಕೆಂಪು ಅಥವಾ ಕೇಸರಿ ಬಣ್ಣದ ಬಟ್ಟೆ ಮತ್ತು ಕಡಲೆಬೇಳೆಯನ್ನು ದಾನ ನೀಡುವುದರಿಂದ ಖರ್ಚು ಕಡಿಮೆ ಆಗಲಿವೆ.

3) ಒಣಗಿದ ಹೂ ಬಿಡುವ ಗಿಡಗಳನ್ನು ವಿಲೇವಾರಿ ಮಾಡಿ. ಹಳದಿ ಹೂ ಬಿಡುವ ಗಿಡಗಳಿಗೆ ನೀರು ಎರೆದರೆ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ. ಹೂ ಗಳನ್ನು ಕಸದಲ್ಲಿ ಎಸೆಯದಿರಿ.

4) ಲಕ್ಷ್ಮೀದೇವಿ ಅಥವಾ ಅನ್ನಪೂರ್ಣೇಶ್ವರಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮಕರ. ಪ್ರತಿದಿನ ಮನೆಯಲ್ಲಿರುವ ಚಿಕ್ಕ ಹೆಣ್ಣುಮಕ್ಕಳಿಗೆ ಕುಡಿಯಲು ಹಾಲನ್ನುನೀಡಿ ದಿನದ ಕೆಲಸ ಆರಂಭಿಸಿರಿ.

5) ದುರ್ಗಾ ದೇವಾಲಯಕ್ಕೆ ಮಡಿಲು ತುಂಬುವ ಪದಾರ್ಥಗಳನ್ನು ನೀಡಿ ಹೊಸ ಕೆಲಸ ಆರಂಭಿಸಿರಿ. ಹೀಗೆ ಮಾಡುವ ಮೂಲಕ ಶುಭ ಫಲ ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ.

6) ಹಸಿರು, ನೀಲಿ ಅಥವಾ ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.