ಜೂನ್ ಮಾಸ ಭವಿಷ್ಯ: ಸಿಂಹ ರಾಶಿಯವರಿಗೆ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತವೆ, ಕನ್ಯಾ ರಾಶಿಯವರು ಬಂಧುಗಳಿಂದ ದೂರ ಇರುತ್ತಾರೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜೂನ್ ಮಾಸ ಭವಿಷ್ಯ: ಸಿಂಹ ರಾಶಿಯವರಿಗೆ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತವೆ, ಕನ್ಯಾ ರಾಶಿಯವರು ಬಂಧುಗಳಿಂದ ದೂರ ಇರುತ್ತಾರೆ

ಜೂನ್ ಮಾಸ ಭವಿಷ್ಯ: ಸಿಂಹ ರಾಶಿಯವರಿಗೆ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತವೆ, ಕನ್ಯಾ ರಾಶಿಯವರು ಬಂಧುಗಳಿಂದ ದೂರ ಇರುತ್ತಾರೆ

ಜೂನ್ ತಿಂಗಳ ಮಾಸ ಭವಿಷ್ಯ: ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ 2025ರ ಜೂನ್ ತಿಂಗಳ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಕೆಲವು ರಾಶಿಯವರಿಗೆ ಸವಾಲುಗಳಿವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ತಿಂಗಳ ಭವಿಷ್ಯ ಇಲ್ಲಿದೆ.

ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಜೂನ್ ಮಾಸ ಭವಿಷ್ಯ
ಸಿಂಹ, ಕನ್ಯಾ, ತುಲಾ ಹಾಗೂ ವೃಶ್ಚಿಕ ರಾಶಿಯವರ ಜೂನ್ ಮಾಸ ಭವಿಷ್ಯ

'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ 2025ರ ಜೂನ್ ತಿಂಗಳ ಭವಿಷ್ಯದಲ್ಲಿ ಉತ್ತಮ ಫಲಗಳಿವೆ. ಆದರೆ ಕೆಲವೇ ಕೆಲವು ರಾಶಿಯವರಿಗೆ ಸವಾಲುಗಳು ಎದುರಾಗುತ್ತವೆ. ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಿಗೆ ತಿಂಗಳ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಸಿಂಹ ರಾಶಿ

ಜೀವನದಲ್ಲಿ ಸೋಲು ಗೆಲುವಿನ ಮಿಶ್ರಣ ಫಲಗಳಿರುತ್ತವೆ. ಐಷಾರಾಮಿ ಜೀವನವನ್ನು ಇಷ್ಟಪಡುವಿರಿ. ಉತ್ತಮ ಮುಂದಾಲೋಚನೆ ಇರುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಅನುಕೂಲ ದೊರೆಯುತ್ತದೆ. ಸಣ್ಣ ಪುಟ್ಟ ಕೆಲಸ ಕಾರ್ಯಗಳನ್ನು ಪೂರೈಸಲೂ ಹೆಚ್ಚಿನ ಪ್ರಯತ್ನ ಬೇಕಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚಿನ ಪರಿಶ್ರಮದಿಂದ ಗುರಿ ತಲುಪಲಿದ್ದಾರೆ. ಮನಸ್ಸಿನಲ್ಲಿ ಧನಾತ್ಮಕ ಚಿಂತನೆಗಳು ಮನೆಮಾಡಿರುತ್ತವೆ. ಮುಂಗೋಪದಿಂದ ಎಲ್ಲರ ಜೊತೆಯಲ್ಲಿ ವರ್ತಿಸುವಿರಿ. ಆತ್ಮವಿಶ್ವಾಸದಿಂದ ಉದ್ಯೋಗದಲ್ಲಿ ದೊಡ್ಡಮಟ್ಟದ ಜವಾಬ್ದಾರಿಗಳನ್ನು ಪೂರ್ಣಗೊಳಿಸುವಿರಿ. ಕೌಟುಂಬಿಕ ಕಲಹಗಳು ಹೆಚ್ಚಾಗುತ್ತವೆ. ದಂಪತಿ ನಡುವೆ ಉತ್ತಮ ಬಾಂಧವ್ಯ ಮೂಡುತ್ತದೆ. ಬಂಧು ಬಳಗದವರಿಂದ ದೂರ ಉಳಿಯುವಿರಿ. ಕಷ್ಟ ಎನಿಸಿದರೂ ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುವಿರಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಮನೆತನದ ಹಿರಿಯರ ಸಮಕ್ಷಮದಲ್ಲಿ ಶುಭಕಾರ್ಯವೊಂದನ್ನು ಪೂರ್ಣಗೊಳಿಸುವಿರಿ. ತಿಂಗಳಾಂತ್ಯದಲ್ಲಿ ನಿಮ್ಮ ಆಶಯಗಳು ಯಶಸ್ವಿಯಾಗುತ್ತವೆ.

ಪರಿಹಾರ: ಧಾರ್ಮಿಕ ಕೇಂದ್ರಕ್ಕೆ ಬೆಲ್ಲ ಮತ್ತು ಉಪ್ಪು ನೀಡಿ ದಿನದ ಕೆಲಸ ಆರಂಭಿಸಿ
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ಬೂದು ಬಣ್ಣ

ಕನ್ಯಾ ರಾಶಿ

ಮನದಲ್ಲಿ ಭಯವು ಮನೆಮಾಡಿರುತ್ತದೆ. ಆದರೆ ಕುಟುಂಬದ ಸದಸ್ಯರ ಸಹಾಯ ಸಹಕಾರ ನಿಮ್ಮ ಜೀವನವನ್ನು ಬದಲಿಸುತ್ತದೆ. ಉದ್ಯೋಗದಲ್ಲಿ ನಿಮ್ಮ ನಿರ್ಧಾರಗಳನ್ನು ಪರಿಶೀಲಿಸಿ ನಂತರ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ. ಸ್ಥಿರವಾದ ಮನಸ್ಸಿರಲಿ, ಆದರೆ ದುಡುಕುತನ ಒಳ್ಳೆಯದಲ್ಲ. ನಿಮ್ಮ ತಪ್ಪುಗಳಿಗೆ ಬೇರೆಯವರನ್ನು ಟೀಕಿಸುವಿರಿ. ನಿಮ್ಮಲ್ಲಿನ ಬುದ್ದಿಮೆತ್ತೆ ತೀಕ್ಷ್ಣವಾಗಿರುತ್ತದೆ. ಆದರೆ ಅದರ ಬಳಕೆ ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಆತ್ಮೀಯರ ಸಹಾಯ ದೊರೆಯುತ್ತದೆ. ಎದುರಾಗುವ ಸವಾಲುಗಳನ್ನು ಗೆಲ್ಲಬಲ್ಲ ಸಾಧ್ಯತೆಗಳ ಬಗ್ಗೆ ಮುಂಚಿತವಾಗಿ ಯೋಚಿಸುವಿರಿ. ಬಂದು ಬಳಗದವರಿಂದ ದೂರ ಉಳಿಯುವಿರಿ. ಸಮಯ ಸಂದರ್ಭವನ್ನು ಅರ್ಥಮಾಡಿಕೊಂಡು ವರ್ತಿಸುವಿರಿ. ನಿಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸುವಿರಿ. ದಾಂಪತ್ಯ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ಅಜೀರ್ಣದ ತೊಂದರೆ ನಿಮ್ಮನ್ನು ಕಾಡುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಮಕ್ಕಳ ಸಹಾಯ ದೊರೆಯುತ್ತದೆ. ಆದಾಯದಲ್ಲಿ ಯಾವುದೇ ತೊಂದರೆ ಇರುವುದಿಲ್ಲ.

ಪರಿಹಾರ: ಧಾರ್ಮಿಕ ಕೇಂದ್ರಗಳಿಗೆ ಹಾಲು ಮೊಸರು ನೀಡಿ ದಿನದ ಕೆಲಸ ಆರಂಭಿಸಿ
ಅದೃಷ್ಟದ ಸಂಖ್ಯೆ: 3
ಅದೃಷ್ಟದ ದಿಕ್ಕು: ಉತ್ತರ
ಅದೃಷ್ಟದ ಬಣ್ಣ: ಕಂದು ಬಣ್ಣ

ತುಲಾ ರಾಶಿ

ಗೆಲ್ಲಲೇ ಬೇಕೆಂಬ ಹಂಬಲ ನಿಮ್ಮಲ್ಲಿ ಇರುತ್ತದೆ. ಅತುರದಿಂದ ನಿಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ಇದರಿಂದ ತೊಂದರೆಗಳು ಎದುರಾಗುತ್ತವೆ. ನಿಮ್ಮಲ್ಲಿ ತಪ್ಪಿದ್ದರೂ ಬೇರೆಯವರು ಮಾಡುವ ತಪ್ಪುಗಳನ್ನು ಬೇರೆಯವರನ್ನು ಹೊಣೆಗಾರನ್ನಾಗಿ ಮಾಡುವಿರಿ. ಕುಟುಂಬದ ಸಂಪೂರ್ಣ ಜವಾಬ್ದಾರಿಯು ನಿಮ್ಮದಾಗಲಿದೆ. ಉದ್ಯೋಗದಲ್ಲಿ ನಿಧಾನಗತಿಯ ಪ್ರಗತಿ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಮಿಶ್ರ ರೀತಿಯ ಫಲಿತಾಂಶಗಳು ದೊರೆಯುತ್ತವೆ. ಉನ್ನತ ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಮಟ್ಟ ತಲುಪಲು ಸಾಧ್ಯವಾಗುವುದಿಲ್ಲ. ತಾಯಿಗೆ ತವರುಮನೆಯಿಂದ ಹಣ ಅಥವಾ ಸ್ಥಿರಾಸ್ತಿಯು ದೊರೆಯುವ ಸಂಭವ ಇದೆ. ವಯೋವೃದ್ಧರಿಗೆ ನೆನಪಿನ ಶಕ್ತಿಯ ಕೊರತೆ ಇರುತ್ತದೆ. ಹತಾಶೆಯಿಂದ ಉದ್ಯೋಗದ ವಿಚಾರದಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಹಣ ಕಾಸಿನ ವಿಚಾರದಲ್ಲಿ ಅನಾವಶ್ಯಕ ವಾದ ವಿವಾದಗಳು ಇರಲಿವೆ. ಅವಿವಾಹಿತರಿಗೆ ವಿವಾಹ ಯೋಗವಿದೆ. ದಂಪತಿಯಲ್ಲಿ ಹೊಂದಾಣಿಕೆ ಇರುತ್ತದೆ.

ಪರಿಹಾರ: ಗೋಶಾಲೆಗೆ ಧನಸಹಾಯ ಮಾಡಿದ ನಂತರ ದಿನದ ಕೆಲಸಗಳನ್ನು ಆರಂಭಿಸಿ
ಅದೃಷ್ಟದ ಸಂಖ್ಯೆ: 7
ಅದೃಷ್ಟದ ದಿಕ್ಕು: ಪೂರ್ವ
ಅದೃಷ್ಟದ ಬಣ್ಣ: ಕಪ್ಪು ಬಣ್ಣ

ವೃಶ್ಚಿಕ ರಾಶಿ

ಅನಿರೀಕ್ಷಿತ ಶುಭಫಲಗಳಿಂದ ಸಂತಸಗೊಳ್ಳುವಿರಿ. ಉದ್ಯೋಗದಲ್ಲಿ ಉನ್ನತ ಅಧಿಕಾರ ದೊರೆಯುತ್ತದೆ. ಉತ್ತಮ ಅವಕಾಶ ದೊರೆವ ಕಾರಣ ಉದ್ಯೋಗ ಬದಲಿಸುವ ಸಾಧ್ಯತೆಗಳಿವೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ವಿಶೇಷವಾದ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳ ನಿರೀಕ್ಷೆ ಹುಸಿಯಾಗುವ ಸಾಧ್ಯತೆಗಳಿವೆ. ಅತಿಯಾದ ಕೋಪದಿಂದ ಬೇಸರದ ಸನ್ನಿವೇಶ ಉಂಟಾಗುತ್ತದೆ. ದಾಂಪತ್ಯ ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ. ಹೊಸ ಭರವಸೆಯಿಂದ ನಿಮ್ಮ ಮಕ್ಕಳ ಜೀವನವನ್ನು ರೂಪಿಸುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಬದಲಾಯಿಸುವುದಿಲ್ಲ. ಹಠದ ಗುಣದಿಂದ ಕುಟುಂಬದಲ್ಲಿ ಗಂಭೀರದ ವಾತಾವರಣ ಉಂಟಾಗುತ್ತದೆ. ಅನಾವಶ್ಯಕ ಮಾನಸಿಕ ಒತ್ತಡದ ಕಾರಣ ತಲೆನೋವಿನಿಂದ ಬಳಲುವಿರಿ. ಉನ್ನತ ವಿದ್ಯಾಭ್ಯಾಸದಲ್ಲಿ ಉತ್ತಮ ಸ್ಥಾನ ಗಳಿಸುವಿರಿ. ಅನಿರೀಕ್ಷಿತವಾದ ಹಣಕಾಸಿನ ನೆರವು ನಿಮಗೆ ದೊರೆಯುತ್ತದೆ. ತಾಯಿಯವರಿಗೆ ಸೇರಿದ ಸ್ಥಿರಾಸ್ತಿಯಲ್ಲಿ ವಿವಾದ ಎದುರಾಗುತ್ತದೆ. ಶಾಂತಿ ಸಹನೆಯಿಂದ ವರ್ತಿಸುವುದು ಒಳ್ಳೆಯದು.

ಪರಿಹಾರ: ಎಡಗೈಯಲ್ಲಿ ಬೆಳ್ಳಿ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿ.
ಅದೃಷ್ಟದ ಸಂಖ್ಯೆ:11
ಅದೃಷ್ಟದ ದಿಕ್ಕು: ದಕ್ಷಿಣ
ಅದೃಷ್ಟದ ಬಣ್ಣ: ತಿಳಿಹಸಿರು ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.