ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mythological Story: ಯಕ್ಷ ಎಂದರೆ ಯಾರು? ಮಹಾಭಾರತದಲ್ಲಿ ಯುಧಿಷ್ಠಿರನಿಗೆ ಯಕ್ಷ ಪ್ರಶ್ನೆಗಳನ್ನು ಕೇಳಿದ್ದು ಯಾರು, ಏಕೆ?

Mythological Story: ಯಕ್ಷ ಎಂದರೆ ಯಾರು? ಮಹಾಭಾರತದಲ್ಲಿ ಯುಧಿಷ್ಠಿರನಿಗೆ ಯಕ್ಷ ಪ್ರಶ್ನೆಗಳನ್ನು ಕೇಳಿದ್ದು ಯಾರು, ಏಕೆ?

Yaksha: ಅನೇಕ ಧರ್ಮ ಗ್ರಂಥಗಳಲ್ಲಿ ಯಕ್ಷರ ಬಗ್ಗೆ ಉಲ್ಲೇಖವಿದೆ. ಆದರೆ ಮಹಾಭಾರತದಲ್ಲಿ ಯಮಧರ್ಮನು ಯಕ್ಷನ ರೂಪದಲ್ಲಿ ಯುಧಿಷ್ಠಿರನಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಾನೆ. ಇವುಗಳನ್ನೇ ಯಕ್ಷಪ್ರಶ್ನೆಗಳು ಎಂದು ಕರೆಯುತ್ತಾರೆ. ಇದು ಮಹಾಭಾರತದ ಅರಣಿಯೋಪಾಖ್ಯಾನದಲ್ಲಿ ಬರುತ್ತದೆ.

ಯಕ್ಷ ಎಂದರೆ ಯಾರು? ಮಹಾಭಾರತದಲ್ಲಿ ಯುಧಿಷ್ಠಿರನಿಗೆ ಯಕ್ಷ ಪ್ರಶ್ನೆಗಳನ್ನು ಕೇಳಿದ್ದು ಯಾರು, ಏಕೆ?
ಯಕ್ಷ ಎಂದರೆ ಯಾರು? ಮಹಾಭಾರತದಲ್ಲಿ ಯುಧಿಷ್ಠಿರನಿಗೆ ಯಕ್ಷ ಪ್ರಶ್ನೆಗಳನ್ನು ಕೇಳಿದ್ದು ಯಾರು, ಏಕೆ? (PC: Live Hindustan)

ಯಕ್ಷಪ್ರಶ್ನೆ: ಯಾವುದಾದರೂ ಕಠಿಣ ಪ್ರಶ್ನೆ ಎದುರಾದಾಗ ಅದನ್ನು ಯಕ್ಷ ಪ್ರಶ್ನೆ ಎಂದು ಉದ್ಘರಿಸುವುದು ಸಹಜ. ಯಕ್ಷ ಎಂದರೆ ಯಾರು? ಪ್ರಶ್ನೆಗಳನ್ನು ಯಕ್ಷ ಪ್ರಶ್ನೆಗೆ ಹೋಲಿಸುವುದು ಏಕೆ ಎಂಬುದರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಧರ್ಮ ಗ್ರಂಥಗಳಲ್ಲಿ ಯಕ್ಷರ ಬಗ್ಗೆ ಉಲ್ಲೇಖವಿದೆ. ಯಕ್ಷರನ್ನು ಸಂಪತ್ತಿನ ಭಂಡಾರ ಎಂದು ಕರೆಯಲಾಗುತ್ತದೆ. ವೃಕ್ಷ ದೇವತೆಗಳು ಎಂದು ಪೂಜಿಸಲಾಗುತ್ತದೆ. ಹಾಗೇ ಕುಬೇರನನ್ನು ಯಕ್ಷರ ರಾಜ ಎಂದು ಪರಿಗಣಿಸಲಾಗಿದೆ.

ಮಹಾಭಾರತ ಮಹಾಕಾವ್ಯವನ್ನು ಒಟ್ಟು 18 ಪರ್ವಗಳಾಗಿ ವಿಂಗಡಿಸಲಾಗಿದೆ. ಆ ಪರ್ವಗಳಲ್ಲಿ ಬರುವ ಘಟನೆಗಳನ್ನು ಉಪ ಪರ್ವಗಳನ್ನಾಗಿ ನಂತರ ಆಖ್ಯಾನಗಳು, ಪ್ರಸಂಗಗಳು ಹಾಗೂ ಕಥೆಗಳ ರೂಪದಲ್ಲಿ ವಿವರಿಸಲಾಗಿದೆ. ಇವುಗಳಲ್ಲಿ ಅರಣಿಯೋಪಾಖ್ಯಾನ ಕೂಡಾ ಒಂದು. ಇದು ಯಕ್ಷಪ್ರಶ್ನೆ ಪ್ರಸಂಗ ಎಂದೇ ಹೆಸರಾಗಿದೆ.

ಬ್ರಾಹ್ಮಣನ ಮನವಿಗೆ ಸ್ಪಂದಿಸಿದ ಪಾಂಡವರು

ಪಗಡೆ ಆಟದಲ್ಲಿ ಸೋತ ಪಾಂಡವರು ದುರ್ಯೋಧನನೊಂದಿಗೆ ಮಾಡಿಕೊಂಡಿದ್ದ ಒಪ್ಪದಂದ ಪ್ರಕಾರ ಸುಮಾರು 12 ವರ್ಷಗಳ ಕಾಲ ಅರಣ್ಯವಾಸವನ್ನು ಒಂದು ವರ್ಷಗಳ ಕಾಲ ಅಜ್ಞಾತವಾಸವನ್ನು ಮಾಡುತ್ತಾರೆ. ಒಮ್ಮೆ ಪಾಂಡವರು ಕಾಮ್ಯಕವನಕ್ಕೆ ಪ್ರವೇಶಿಸುತ್ತಾರೆ. ಆ ಸಮಯಲ್ಲಿ ಪಾಂಡವರ ಬಳಿಗೆ ಬಂದ ಬ್ರಾಹ್ಮಣರೊಬ್ಬರು, ನಾನು ಪ್ರತಿದಿನ ಯಜ್ಞ ಮಾಡುವ ಅರಣಿಗಳನ್ನು ಒಂದು ಜಿಂಕೆ ತನ್ನ ಕೊಂಬಿನಲ್ಲಿ ಕೊಂಡೊಯ್ದಿದೆ ಅದನ್ನು ದೊರಕಿಸಿಕೊಡಬೇಕೆಂದು ಪ್ರಾರ್ಥಿಸುತ್ತಾನೆ. ಆ ಜಿಂಕೆಯು ಓಡಿ ತಪ್ಪಿಸಿಕೊಂಡ ದಿಕ್ಕನ್ನು ತೋರಿಸುತ್ತಾನೆ. ಬ್ರಾಹ್ಮಣನ ಮನವಿಗೆ ಸ್ಪಂದಿಸಿದ ಯುಧಿಷ್ಠಿರನು ಜಿಂಕೆಯಿಂದ ಅರಣಿಗಳನ್ನು ತಂದುಕೊಡುವುದಾಗಿ ಹೇಳಿ ತನ್ನ ಸಹೋದರನ್ನು ಕರೆದುಕೊಂಡು ಆ ಜಿಂಕೆ ಹೋದ ದಿಕ್ಕಿಗೆ ಹೋಗುತ್ತಾನೆ.

ಜಿಂಕೆಯನ್ನು ಹಿಂಬಾಲಿಸಿಕೊಂಡು ಬಂದ ಪಾಂಡವರಿಗೆ ಕೊನೆಗೂ ಅದು ಸಿಗದೆ ಒಂದು ಆಲದ ಮರದ ಕೆಳಗೆ ಕುಳಿತು ವಿಶ್ರಮಿಸುತ್ತಾರೆ. ಈ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸುವ ನಕುಲನು ಅಣ್ಣನನ್ನು ಕುರಿತು, ನಾವು ಇದುವರೆಗೂ ಯಾರು ಏನು ಕೇಳಿದರೂ ಇಲ್ಲ ಎನ್ನಲಿಲ್ಲ. ಆದರೂ ಈಗ ಇಂಥ ಪರಿಸ್ಥಿತಿ ಏಕೆ ಉಂಟಾಯಿತು ಎಂದು ಕೇಳುತ್ತಾನೆ. ಇದಕ್ಕೆ ಉತ್ತರಿಸುವ ಧರ್ಮರಾಜ(ಯುಧಿಷ್ಠಿರ) ದುರದೃಷ್ಟಕ್ಕೆ ಮಿತಿ ಎಂಬುದು ಇಲ್ಲ ಮತ್ತು ಅದರ ಕಾರಣವನ್ನು ಕಂಡು ಹಿಡಿಯಲು ಕೂಡಾ ಸಾಧ್ಯವಿಲ್ಲ. ಪುಣ್ಯ ಪಾಪಗಳ ಫಲವನ್ನು ಧರ್ಮನು ಹಂಚುತ್ತಾನೆ ಎನ್ನುತ್ತಾನೆ. ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ಅವಮಾನಿಸಿದ ದುಶ್ಶಾಸನನಿಗೆ ಶಿಕ್ಷಿಸದೆ ಇದ್ದದ್ದು ಈಗಿನ ನಮ್ಮ ಸ್ಥಿತಿಗೆ ಕಾರಣ ಎಂದು ಭೀಮ ಹೇಳುತ್ತಾನೆ. ಆತನ ಮಾತುಗಳನ್ನು ಕೇಳಿಯೂ ನಾನು ಸುಮ್ಮನೆ ಇದ್ದಿದ್ದು ಇಂದಿನ ನಮ್ಮ ಪರಿಸ್ಥಿತಿಗೆ ಕಾರಣ ಎನ್ನುತ್ತಾನೆ. ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತಾರೆ.

ಯುಧಿಷ್ಠಿರನ ಮುಂದೆ ಪ್ರತ್ಯಕ್ಷನಾಗುವ ಯಕ್ಷ

ಎಲ್ಲರಿಗೂ ಬಾಯಾರಿಕೆ ಆದ್ದರಿಂದ ಹತ್ತಿರದಲ್ಲಿದ್ದ ಸರೋವರದಲ್ಲಿ ನೀರು ತರಲು ಯುಧಿಷ್ಠಿರನು ನಕುಲನಿಗೆ ಹೇಳುತ್ತಾನೆ. ಆದರೆ ಎಷ್ಟೇ ಹೊತ್ತಾದರೂ ಆತ ಬರದಿದ್ಧಾಗ ಆತನನ್ನು ಹುಡುಕಿ ಸಹದೇವ ಹೋಗುತ್ತಾನೆ. ಆತ ಕೂಡಾ ಬಹಳ ಹೊತ್ತು ವಾಪಸ್‌ ಬರದಿದ್ದಾಗ ಅರ್ಜುನ, ನಂತರ ಭೀಮ ಹೋಗುತ್ತಾರೆ. ಆದರೆ ಯಾರೂ ವಾಪಸ್‌ ಬರುವುದಿಲ್ಲ. 

ತಮ್ಮಂದಿರನ್ನು ಹುಡುಕಿಕೊಂಡು ಧರ್ಮರಾಯ ಸರೋವರದ ಬಳಿ ಹೋದಾಗ ಎಲ್ಲರೂ ಅಲ್ಲಿ ಪ್ರಜ್ಞೆ ಇಲ್ಲದೆ ಬಿದ್ದಿರುವುದನ್ನು ನೋಡುತ್ತಾನೆ. ಅಷ್ಟರಲ್ಲಿ ಅಶರೀರವಾಣಿಯೊಂದು ಯುಧಿಷ್ಠಿರನಿಗೆ ಎಚ್ಚರಿಸುತ್ತದೆ. ನನ್ನ ಮಾತನನ್ನು ಲೆಕ್ಕಿಸದೆ ನಿನ್ನ ಸಹೋದರರು ಈ ಸರೋವರದಲ್ಲಿ ನೀರು ಕುಡಿದ ಕಾರಣ ಈ ರೀತಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ನೀನೂ ಕೂಡಾ ಮಾತು ಮೀರಿದರೆ ನಿನಗೂ ಇಂಥ ಗತಿ ಬರುತ್ತದೆ ಎನ್ನುತ್ತದೆ.

ನೀನು ಯಾರೇ ಆದರೂ ನನ್ನ ಮುಂದೆ ಬಂದು ನಿಲ್ಲಬೇಕು ಎಂದು ಯುಧಿಷ್ಠಿರ ಹೇಳಿದಾಗ ಯಮಧರ್ಮರಾಜನು, ಯಕ್ಷನ ರೂಪದಲ್ಲಿ ಯುಧಿಷ್ಠಿರನ ಬಳಿ ಬಂದು ನಿಲ್ಲುತ್ತಾನೆ. ನಾನು ಕೇಳು ಪ್ರಶ್ನೆಗಳಿಗೆ ನೀನು ಉತ್ತರಿಸಿದರೆ ನಿನ್ನ ತಮ್ಮಂದಿರನ್ನು ಬದುಕಿಸುತ್ತೇನೆ ಎಂದು ಯಕ್ಷನು ಹೇಳುತ್ತಾನೆ. ಆಗ ಯುಧಿಷ್ಠಿರ ಹಾಗೂ ಯಕ್ಷನ ನಡುವೆ ನಡೆಯುವ ಪ್ರಶ್ನೋತ್ತರಗಳನ್ನು ಯಕ್ಷ ಪ್ರಶ್ನೆ ಎಂದು ಕರೆಯುತ್ತಾರೆ. ರಾಮಾಯಣ ಹಾಗೂ ಬೌದ್ಧ ಧರ್ಮದಲ್ಲಿ ಕೂಡಾ ಯಕ್ಷರ ಬಗ್ಗೆ ಉಲ್ಲೇಖವಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.