ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಉಗ್ರ ನರಸಿಂಹ ಸ್ವಾಮಿಯಿಂದ ವಧಿಸಲ್ಪಟ್ಟ ಹಿರಣ್ಯಕಶಿಪು ಕೂಡಾ ವಿಷ್ಣುವಿನ ಪರಮ ಭಕ್ತ; ಪೂರ್ವ ಜನ್ಮದ ವೃತ್ತಾಂತ ಹೀಗಿದೆ

ಉಗ್ರ ನರಸಿಂಹ ಸ್ವಾಮಿಯಿಂದ ವಧಿಸಲ್ಪಟ್ಟ ಹಿರಣ್ಯಕಶಿಪು ಕೂಡಾ ವಿಷ್ಣುವಿನ ಪರಮ ಭಕ್ತ; ಪೂರ್ವ ಜನ್ಮದ ವೃತ್ತಾಂತ ಹೀಗಿದೆ

Mythology: ವಿಷ್ಣು ಹೆಸರು ಕೇಳಿದರೆ ಕೆಂಡಾಮಂಡಲವಾಗುತ್ತಿದ್ದ , ಉಗ್ರ ನರಸಿಂಹ ಸ್ವಾಮಿಯಿಂದ ವಧಿಸಲ್ಪಟ್ಟ ಹಿರಣ್ಯಕಶಿಪು ಕೂಡಾ ಹಿಂದಿನ ಜನ್ಮದಲ್ಲಿ ವಿಷ್ಣುವಿನ ಪರಮ ಭಕ್ತನಾಗಿದ್ದನು. ವೈಕುಂಠದ ದ್ವಾರಪಾಲಕರಾಗಿದ್ದ ಜಯ ವಿಜಯರ ಪೂರ್ವ ಜನ್ಮದ ವೃತ್ತಾಂತ ಹೀಗಿದೆ.

ಉಗ್ರ ನರಸಿಂಹ ಸ್ವಾಮಿಯಿಂದ ವಧಿಸಲ್ಪಟ್ಟ ಹಿರಣ್ಯಕಶಿಪು ಕೂಡಾ ವಿಷ್ಣುವಿನ ಪರಮ ಭಕ್ತ; ಪೂರ್ವ ಜನ್ಮದ ವೃತ್ತಾಂತ ಹೀಗಿದೆ
ಉಗ್ರ ನರಸಿಂಹ ಸ್ವಾಮಿಯಿಂದ ವಧಿಸಲ್ಪಟ್ಟ ಹಿರಣ್ಯಕಶಿಪು ಕೂಡಾ ವಿಷ್ಣುವಿನ ಪರಮ ಭಕ್ತ; ಪೂರ್ವ ಜನ್ಮದ ವೃತ್ತಾಂತ ಹೀಗಿದೆ

ಪ್ರಹ್ಲಾದ ಹಾಗೂ ಹಿರಣ್ಯಕಶಿಪನ ಕಥೆಯನ್ನು ಎಲ್ಲರೂ ಕೇಳಿರುತ್ತಾರೆ. ಹಿರಣ್ಯಕಶಿಪು, ಶ್ರೀಹರಿಯನ್ನು ದ್ವೇಷಿಸುತ್ತಾನೆ. ಅವನನ್ನು ಪೂಜಿಸುವ ತನ್ನ ಮಗ ಭಕ್ತ ಪ್ರಹ್ಲಾದನನ್ನೂ ಶಿಕ್ಷಿಸುತ್ತಾನೆ. ಕೊನೆಗೆ ಶ್ರೀಹರಿಯು ನರಸಿಂಹಸ್ವಾಮಿಯ ಅವತಾರವನ್ನು ಎತ್ತಿ ಕಂಬದಿಂದ ಹೊರ ಬಂತು ಹಿರಣ್ಯಕಶಿಪನನ್ನು ಸಂಹರಿಸುತ್ತಾನೆ.

ಆದರೆ ಎಲ್ಲರೂ ತಿಳಿದಿರುವಂತೆ ಹಿರಣ್ಯಕಶಿಪು ಜನರನ್ನು ಪೀಡಿಸಲು ಬಂದ ರಾಕ್ಷಸನಲ್ಲ. ಇವನ ಜನ್ಮದ ಹಿಂದೆ ಸ್ಫಾರಸ್ಯಕರವಾದ ಕಥೆಯೊಂದಿದೆ. ಅಸಲಿಗೆ ಹಿರಣ್ಯಕಶಿಪು, ವಿಷ್ಣುವಿನ ಪರಮ ಭಕ್ತ. ಇದೊಂದು ಪುರಾಣ ಕಥೆ. ಕಾಳಿ ಎಂಬಾತನ ಮಕ್ಕಳಾದ ಜಯ ಮತ್ತು ವಿಜಯ ಇಬ್ಬರೂ ವಿಷ್ಣುವಿನ ಅರಮನೆಯ ದ್ವಾರಪಾಲಕರಾಗಿ ನೇಮಕಗೊಳ್ಳುತ್ತಾರೆ. ಜಯ ವಿಜಯರ ತಾಯಿಯ ಸಹೋದರಿ ಕುಬೇರನ ತಾಯಿ. ಈ ಕಾರಣದಿಂದ ಶ್ರೀವಿಷ್ಣುವು ಸದ್ಗತಿಯನ್ನು ಅನುಗ್ರಹಿಸಿ ಜಯ ವಿಜಯರನ್ನು ಅರಮನೆಯ ದ್ವಾರಪಾಲಕರನ್ನಾಗಿ ನೇಮಕ ಮಾಡುತ್ತಾನೆ.

ಋಷಿಮುನಿಗಳ ಶಾಪಕ್ಕೆ ಒಳಗಾಗುವ ಜಯ ವಿಜಯ

ಈ ಸಮಯದಲ್ಲಿ ಸನಕ ಸನಂದನ ಮೊದಲಾದ ಋಷಿ ಮುನಿಗಳು ಶ್ರೀ ವಿಷ್ಣುವನ್ನು ಭೇಟಿ ಮಾಡಲು ವೈಕುಂಠಕ್ಕೆ ಬರುತ್ತಾರೆ. ಆಗ ಜಯ ವಿಜಯರು ಅವರಿಗೆ ಅರಮನೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ. ಈ ಸಂದರ್ಭದಲ್ಲಿ ವಿಷ್ಣು ವಿಶ್ರಾಂತಿಯನ್ನು ಪಡೆಯುತ್ತಿರುತ್ತಾನೆ. ಈ ವಿಚಾರವನ್ನು ಜಯ ವಿಜಯರು ಮನಿಗಳಿಗೆ ತಿಳಿಸುತ್ತಾರೆ. ಆದರೆ ಈ ಮಾತಿಗೆ ಓಗೊಡದ ಮುನಿಗಳ ಕೋಪವು ಎಲ್ಲೆ ಮೀರುತ್ತದೆ. ಜಯ ವಿಜಯರ ಮಾತಿಗೆ ಸ್ಪಂದಿಸದೆ ಕೋಪಗೊಂಡ ಋಷಿ ಮುನಿಗಳು ಅವರಿಬ್ಬರಿಗೂ ಭೂಲೋಕದಲ್ಲಿ ಹುಟ್ಟುವಂತೆ ಶಾಪ ನೀಡುತ್ತಾರೆ. ಹಾಗೆಯೇ ವಿಷ್ಣುವಿನ ದರ್ಶನ ಮಾಡಿ ಆಶ್ರಮಕ್ಕೆ ತೆರಳುತ್ತಾರೆ.

ಈ ಆಘಾತದಿಂದ ಎಚ್ಚರಗೊಂಡ ಜಯ ವಿಜಯರು ಭಯಗೊಂಡು ವಿಷ್ಣುವಿನ ಬಳಿ ತೆರಳುತ್ತಾರೆ. ತಮ್ಮಿಂದ ಆದ ತಪ್ಪನ್ನು ಸಹ ತಿಳಿಸುತ್ತಾರೆ. ಋಷಿಮುನಿಗಳ ಶಾಪದಿಂದ ಪಾರಾಗಲು ಸೂಕ್ತ ಪರಿಹಾರ ಕೇಳಿದಾಗ ಭಗವಾನ್ ವಿಷ್ಣುವು ಋಷಿಮುನಿಗಳ ಶಾಪದಿಂದ ಪಾರಾಗಲು ಯಾರಿಂದಲೂ ಸಾಧ್ಯವಾಗದು ಎಂಬ ವಿಚಾರವನ್ನು ತಿಳಿಸುತ್ತಾನೆ. ಆಗ ವಿಧಿ ಇಲ್ಲದೆ ಜಯ ವಿಜಯರು ತಮ್ಮನ್ನು ಈ ಕಷ್ಟದಿಂದ ಪಾರು ಮಾಡೆಂದು ಬೇಡಿಕೊಳ್ಳುತ್ತಾರೆ. ಇದರಿಂದ ವಿಷ್ಣುವು ಕನಿಕರಗೊಂಡು ಭೂಮಿಯ ಮೇಲೆ ನನ್ನ ಭಕ್ತರಾಗಿ ಹತ್ತು ಜನ್ಮಗಳನ್ನು ತಾಳಿರಿ ಎಂದು ಹೇಳುತ್ತಾನೆ. ಆದರೆ ಜಯ ವಿಜಯಯರು ವಿಷ್ಣುವನ್ನು ತೊರೆದು ದೀರ್ಘಕಾಲ ದೂರವಿರಲು ಒಪ್ಪುವುದಿಲ್ಲ. ಆದ್ದರಿಂದ ವಿಷ್ಣುವು ನನ್ನ ಶತ್ರುಗಳಾಗಿ ಭೂಲೋಕದಲ್ಲಿ ಕಡಿಮೆ ಅವಧಿಯಲ್ಲಿ ಜನ್ಮಗಳನ್ನು ಕಳೆದು ನಂತರ ವೈಕುಂಠಕ್ಕೆ ಬನ್ನಿ ಎಂದು ತಿಳಿಸುತ್ತಾನೆ. ಇದಕ್ಕೆ ಒಪ್ಪಿದ ಜಯವಿಜಯರು ಭೂಲೋಕದಲ್ಲಿ ಜನ್ಮ ತಾಳುತ್ತಾರೆ.

ಹಿರಣ್ಯಕಶಿಪುವನ್ನು ಸಂಹರಿಸುವ ಉಗ್ರ ನರಸಿಂಹ

ಅವರ ಮೊದಲನೆಯ ರಾಕ್ಷಸ ಜನ್ಮವೇ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷ. ವರಾಹ ರೂಪದಲ್ಲಿ ಬಂದ ವಿಷ್ಣುವು ಹಿರಣ್ಯಾಕ್ಷನನ್ನು ಕೊಲ್ಲುತ್ತಾನೆ. ಹಾಗೆಯೇ ಹಿರಣ್ಯಕಶಿಪನನ್ನು ನರಸಿಂಹ ಸ್ವಾಮಿಯ ಅವತಾರ ತಾಳಿ ಕೊಂದು ಅವನಿಗೆ ಮೋಕ್ಷ ನೀಡುತ್ತಾನೆ. ಜಯ ವಿಜಯರ ಎರಡನೆಯ ಜನ್ಮವೇ ರಾವಣ ಮತ್ತು ಕುಂಭಕರ್ಣ. ಇಲ್ಲಿಯೂ ಸಹ ರಾಮನಾಗಿ ಜನ್ಮ ತಾಳಿದ ಶ್ರೀವಿಷ್ಣುವು ರಾವಣ ಮತ್ತು ಕುಂಭಕರ್ಣರನ್ನು ವಧಿಸುತ್ತಾನೆ.

ಮೂರನೇ ಜನ್ಮದಲ್ಲಿ ಶಿಶುಪಾಲ ಮತ್ತು ದಂತವಕ್ರರಾಗಿ ಜಯವಿಜಯರು ಜನ್ಮ ತಾಳುತ್ತಾರೆ. ಇಲ್ಲಿಯೂ ಸಹ ಶ್ರೀಕೃಷ್ಣನು ಇವರಿಬ್ಬರನ್ನು ಕೊಲ್ಲುವ ಮೂಲಕ ಶಾಪ ವಿಮೋಚನೆಯಾಗಲು ಕಾರಣನಾಗುತ್ತಾನೆ. ಹೀಗೆಯೇ ಒಮ್ಮೆ ಅಶ್ವಿನಿ ದೇವತೆಗಳು ನಾರಾಯಣನ ಸನ್ನಿಧಿಗೆ ಹೋಗಲು ಬರುತ್ತಾರೆ. ಆದರೆ ವಿಷ್ಣುವನ್ನು ದರ್ಶನ ಮಾಡದಂತೆ ಅವರನ್ನು ತಡೆದ ತಪ್ಪಿಗೆ ಜಯ ವಿಜಯರು ಅಶ್ವಿನಿ ದೇವತೆಗಳ ಶಾಪಕ್ಕೆ ಈಡಾಗುತ್ತಾರೆ. ಅದರಂತೆ ಶ್ರೀರಾಮನ ಕಾಲದಲ್ಲಿ ಅಹಿರಾವಣ ಮತ್ತು ಮಹಿರಾವಣರಾಗಿ ಜನ್ಮ ತಾಳುತ್ತಾರೆ. ಇಲ್ಲಿಯೂ ಇವರಿಬ್ಬರೂ ಶ್ರೀರಾಮನಿಂದ ಕೊಲ್ಲಲ್ಪಡುತ್ತಾರೆ.

ಈ ರೀತಿ ವಿಷ್ಣುವಿನಿಂದ ದೂರ ಇರಲಾರದೆ ಭಗವಾನ್ ವಿಷ್ಣುವಿನ ಪರಮ ಭಕ್ತರಾದ ಜಯ ವಿಜಯರು ಭಗವಾನ್ ವಿಷ್ಣುವಿನ ಶತ್ರುಗಳಾಗಿ ಜನಿಸಿ ವಿಷ್ಣುವಿನಿಂದಲೇ ಪ್ರಾಣತ್ಯಾಗ ಮಾಡಿ ಮರಳಿ ವೈಕುಂಠವನ್ನು ಸೇರುತ್ತಾರೆ. ಈ ವಿಚಾರಗಳನ್ನು ಧಾರ್ಮಿಕ ಗ್ರಂಥಗಳಲ್ಲಿ ಓದಬಹುದು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).