ಮಹಾಭಾರತ ಕಥೆಗಳು: ದ್ರೋಣಾಚಾರ್ಯರಿಗೆ ಸಹಾಯ ಮಾಡಬೇಕೆಂದು ಭೀಷ್ಮ ಪಣತೊಡಲು ಆ ಒಂದು ಛಲದ ಮಾತು ಸಾಕಾಯಿತು-mythology mahabharata stories kaurava and pandava bhishma decided to help dronacharya sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಭಾರತ ಕಥೆಗಳು: ದ್ರೋಣಾಚಾರ್ಯರಿಗೆ ಸಹಾಯ ಮಾಡಬೇಕೆಂದು ಭೀಷ್ಮ ಪಣತೊಡಲು ಆ ಒಂದು ಛಲದ ಮಾತು ಸಾಕಾಯಿತು

ಮಹಾಭಾರತ ಕಥೆಗಳು: ದ್ರೋಣಾಚಾರ್ಯರಿಗೆ ಸಹಾಯ ಮಾಡಬೇಕೆಂದು ಭೀಷ್ಮ ಪಣತೊಡಲು ಆ ಒಂದು ಛಲದ ಮಾತು ಸಾಕಾಯಿತು

ಮಹಾಭಾರತದಲ್ಲಿ ದ್ರೋಣಾಚಾರ್ಯ ಕೌರವರು ಮತ್ತು ಪಾಂಡವರ ಗುರುಗಳು. ಅದಕ್ಕೂ ಮುನ್ನ ದ್ರೋಣಾಚಾರ್ಯರ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅವರೇ ಭೀಷ್ಮನ ಬಳಿ ವಿವರಿಸುತ್ತಾರೆ. ಇವರ ಅರಮನೆ ಪ್ರವೇಶ ಹೇಗಾಯಿತು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)

ದರ್ಬೆಯಿಂದ ಬಾಣವನ್ನು ಸೃಷ್ಟಿಸಿ ಬಾವಿಯಲ್ಲಿ ಇರುವ ವಸ್ತುವನ್ನು ದ್ರೋಣಾಚಾರ್ಯರು ಮೇಲೆ ತೆಗೆಯುತ್ತಾರೆ. ಇದನ್ನು  ರಾಜಕುಮಾರರು ಕುತೂಹಲದಿಂದ ನೋಡುತ್ತಿದ್ದಾರೆ. ಫೋಟೊ - Chandra's Notes.
ದರ್ಬೆಯಿಂದ ಬಾಣವನ್ನು ಸೃಷ್ಟಿಸಿ ಬಾವಿಯಲ್ಲಿ ಇರುವ ವಸ್ತುವನ್ನು ದ್ರೋಣಾಚಾರ್ಯರು ಮೇಲೆ ತೆಗೆಯುತ್ತಾರೆ. ಇದನ್ನು ರಾಜಕುಮಾರರು ಕುತೂಹಲದಿಂದ ನೋಡುತ್ತಿದ್ದಾರೆ. ಫೋಟೊ - Chandra's Notes.

ದ್ರೋಣಾಚಾರ್ಯರು ತುಂಬಾ ಬಡವರಾಗಿರುತ್ತಾರೆ. ತನ್ನ ಪತ್ನಿ ಹಾಗೂ ಮಗನನ್ನು ಸಾಕಲು ಆತನ ಬಳಿ ಏನೂ ಇರುವುದಿಲ್ಲ. ಇದೇ ಸಂದರ್ಭದಲ್ಲಿ ದ್ರೋಣಾಚಾರ್ಯರಿಗೆ ಸ್ನೇಹಿತ ಅವಮಾನ ಮಾಡಿರುತ್ತಾನೆ. ತನ್ನ ವಿದ್ಯೆಗಳನ್ನು ಬಳಸಿಕೊಂಡು ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳುವ ಶಪಥ ಮಾಡುತ್ತಾನೆ. ಈ ಎಲ್ಲಾ ವಿಚಾರಗಳನ್ನು ಭೀಷ್ಮನ ಬಳಿ ದ್ರೋಣಾಚಾರ್ಯ ಹೇಳುತ್ತಾರೆ. ಇದಕ್ಕೂ ಮುನ್ನ ದ್ರೋಣಾಚಾರ್ಯರು ಅರಮನೆ ಪ್ರವೇಶಿಸಿದ್ದು ಹೇಗೆ, ಕೌರವರು ಮತ್ತು ಪಾಂಡವರ ಗುರುಗಳಾಗಿದ್ದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.

ಭಾರದ್ವಾಜರ ಮಾತನ್ನು ದ್ರುಪದ ರಾಜನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮತ್ತೊಮ್ಮೆ ತನ್ನ ಸಿಂಹಾಸನವನ್ನು ಏರಿ ಮುಗುಳ್ನಗುತ್ತಾನೆ. ಅಶ್ವತ್ಥಾಮನು ಹಸ್ತಿನಾವತಿಯ ರಾಜಕುಮಾರರಿಗೆ ಬಿಲ್ಲು ವಿದ್ಯೆಯನ್ನು ಕಲಿಸಿಕೊಡುತ್ತಿದ್ದನು. ಒಮ್ಮೆ ರಾಜಕುಮಾರರು ಬಯಲಿನಲ್ಲಿ ಚಿನ್ನಿಕೋಲಿನ ಆಟವಾಡುತ್ತಿದ್ದರು. ಆಕಸ್ಮಿಕವಾಗಿ ಆಟದ ವಸ್ತು ಹತ್ತಿರದಲ್ಲೇ ಇದ್ದ ಪಾಳು ಬಾವಿಗೆ ಬೀಳುತ್ತದೆ. ಆಗ ಬಾವಿಯಿಂದ ಆ ಆಟದ ವಸ್ತುವನ್ನು ತೆಗೆಯುವುದು ಯಾರು ಎಂಬ ಪ್ರಶ್ನೆ ಬರುತ್ತದೆ. ಆ ವೇಳೆಗೆ ವ್ಯಕ್ತಿಯೊಬ್ಬನು ಅಲ್ಲಿಗೆ ಬರುತ್ತಾನೆ. ನಡೆದಿರುವ ವಿಚಾರವನ್ನು ತಿಳಿದ ಆ ವ್ಯಕ್ತಿಯು ಬಿಲ್ವಿದ್ಯೆಯನ್ನು ಕಲಿತ ನೀವು ನಿಮ್ಮ ಬುದ್ಧಿಶಕ್ತಿಯನ್ನು ಉಪಯೋಗಿಸಿ. ಬಿಲ್ಲು ಬಾಣದ ಸಹಾಯದಿಂದ ಬಾವಿಯಲ್ಲಿ ಬಿದ್ದಿರುವ ವಸ್ತುವನ್ನು ಮೇಲೆ ತೆರೆಯಲು ಪ್ರಯತ್ನಿಸಿ. ಇಲ್ಲವಾದರೆ ಮುಂದಿನ ದಿನಗಳಲ್ಲೂ ನೀವು ಏನನ್ನು ಸಾಧಿಸಲಾರಿರಿ ಎಂದು ಹೇಳುತ್ತಾನೆ.

ಬಳಿಕ ಆತ ತನ್ನ ಬಳಿ ಇದ್ದ ದರ್ಬೆಯಿಂದ ಬಾಣವನ್ನು ಸೃಷ್ಟಿಸಿ ಬಾವಿಯಲ್ಲಿ ಇರುವ ವಸ್ತುವನ್ನು ಮೇಲೆ ತೆಗೆಯುತ್ತಾನೆ. ಹಾಗೆಯೇ ತನ್ನ ಕೈಯಲ್ಲಿರುವ ಉಂಗುರವನ್ನು ಸಹ ಅದೇ ರೀತಿ ಬಾವಿಗೆ ಎಸೆದು ಮತ್ತೆ ಹೊರ ತೆಗೆಯುತ್ತಾನೆ. ಈ ವಿಚಾರವು ರಾಜಕುಮಾರರಿಂದ ಭೀಷ್ಮನಿಗೆ ತಿಳಿಯುತ್ತದೆ. ಆ ಕ್ಷಣವೇ ಭೀಷ್ಮನು ಆ ವ್ಯಕ್ತಿಯನ್ನು ಅರಮನೆಗೆ ಕರೆಸಿ ಅವರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಆಗ ಅವರು ನಾನು ಭಾರದ್ವಾಜ ಮುನಿಗಳ ಪುತ್ರ. ನನ್ನ ಹೆಸರು ದ್ರೋಣಾಚಾರ್ಯ. ನನಗೆ ವಿದ್ಯಾಭ್ಯಾಸ ಹೇಳಿಕೊಟ್ಟವರು ಭಗವಾನ್ ಪರಶುರಾಮರು. ಆದರು ಸಹ ನಾನು ಬಡವನಾಗಿಯೇ ಬಾಳುತ್ತಿದ್ದೇನೆ. ನನ್ನ ಮಗನಿಗೆ ಕುಡಿಯಲು ಹಾಲನ್ನು ಕೊಡಲು ಸಹ ಶಕ್ತನಲ್ಲ. ಅಕ್ಕಿ ಹಿಟ್ಟು ಕಲಸಿದ ನೀರನ್ನು ಹಾಲು ಎಂದು ತಿಳಿದಿರುತ್ತಾನೆ. ಹಣವಿಲ್ಲದವನಿಗೆ ಎಷ್ಟೇ ವಿದ್ಯೆ ಬುದ್ಧಿ ಇದ್ದರು ಸಮಾಜಕ್ಕೆ ಪ್ರಯೋಜನವಿಲ್ಲವನಾಗಿ ಬಾಳುತ್ತಾನೆ. ಅಂತಹ ಪಂಕ್ತಿಯಲ್ಲಿ ನಾನು ನಿಂತಿದ್ದೇನೆ.

ನಿನಗೆ ಆಶ್ರಯ ನೀಡಬಹುದಾದ ಯಾರು ಇಲ್ಲವೆ ಎಂದು ಭೀಷ್ಮರು ಪ್ರಶ್ನಿಸುತ್ತಾರೆ. ಆಗ ದ್ರೋಣಾಚಾರ್ಯ ನನ್ನ ಆತ್ಮಭಿಮಾನವನ್ನು ಮರೆತು ನನ್ನ ಸಹಪಾಠಿಯಾಗಿದ್ದ ದ್ರುಪದ ಮಹಾರಾಜನ ಬಳಿ ತೆರಳಿ ಅವನ ಆಶ್ರಯವನ್ನು ಬೇಡಿದೆ. ವಿದ್ಯಾಭ್ಯಾಸದ ಕಾಲದಲ್ಲಿ ನಾನು ಮತ್ತು ದ್ರುಪದನು ಒಂದು ಕ್ಷಣವೂ ದೂರವಾಗದೆ ಬಾಳುತ್ತಿದ್ದೆವು. ದೈವಾನುಗ್ರಹದಿಂದ ಅವನು ಒಂದು ರಾಜ್ಯದ ಮಹಾರಾಜನಾದ. ಆದ್ದರಿಂದ ನಾನು ಅವನನ್ನು ಭೇಟಿಯಾದಾಗ ಮರ್ಯಾದೆಯನ್ನು ನೀಡದೆ ಸ್ನೇಹವನ್ನು ಮರೆತು ಹೀನಾಯವಾಗಿ ಮಾತನಾಡಿದ. ಆದ್ದರಿಂದ ಅವನ ರಾಜ್ಯವನ್ನೇ ತೊರೆದು ಹೊರಬಂದಿದ್ದೇನೆ. ಅವನ ಅಹಂಕಾರವನ್ನು ಧ್ವಂಸ ಮಾಡುವ ಪ್ರತಿಜ್ಞೆಯನ್ನು ಕೈಗೊಂಡಿದ್ದೇನೆ. ಅದಕ್ಕಾಗಿ ಒಳ್ಳೆಯ ಶಿಷ್ಯನನ್ನು ಹುಡುಕುತ್ತಿದ್ದೇನೆ ಎಂದು ಹೇಳುತ್ತಾನೆ.

ನಿನ್ನ ಮಡದಿ ಮತ್ತು ಮಗನನ್ನು ನೋಡಬೇಕೆನ್ನುವ ಆಸೆ ಇಲ್ಲವೇ ಎಂದು ಭೀಷ್ಮರು ಪ್ರಶ್ನಿಸುತ್ತಾರೆ. ಆಗ ದ್ರೋಣಾಚಾರ್ಯರು, ಹೊಟ್ಟೆ ತುಂಬಾ ತಿನ್ನಲು ಅನ್ನವಿಲ್ಲದ ನನ್ನ ಪತ್ನಿ ಮತ್ತು ನನ್ನ ಮಗನನ್ನು ನೋಡಲು ನನ್ನ ಮನಸ್ಸಿಗೆ ನೋವುಂಟಾಗುತ್ತದೆ. ಅವರನ್ನು ಸುಖವಾಗಿ ಸಾಕಲು ಸಹಾಯವಾಗದ ಈ ವಿದ್ಯೆಯು ನನ್ನ ಬಳಿ ಇದ್ದರು ಒಂದೇ ಹೋದರು ಒಂದೇ. ಆದ್ದರಿಂದ ನಾನು ಉನ್ನತ ಮಟ್ಟ ತಲುಪುವವರೆಗೂ ಅವರನ್ನು ನೆನಪು ಮಾಡಿಕೊಳ್ಳಲು ಯೋಗ್ಯನಲ್ಲ ಎಂದು ಹೇಳುತ್ತಾರೆ.

ಈ ಮಾತನ್ನು ಕೇಳಿದ ಭೀಷ್ಮರಿಗೆ ಅವರ ಬಗ್ಗೆ ಪ್ರೀತಿ ಮತ್ತು ಗೌರವ ಮೂಡುತ್ತದೆ. ಇಂತಹ ಸರಸ್ವತಿ ಪುತ್ರನಿಗೆ ನಾನು ಸಹ ಕಾಯುತ್ತಿದ್ದೆ. ಆದ್ದರಿಂದ ಇವರಿಗೆ ನಾವು ಆಶ್ರಯವನ್ನು ನೀಡಲೇಬೇಕು. ಹೀಗೆಂದು ಯೋಚಿಸಿದ ಭೀಷ್ಮರು ದ್ರೋಣಾಚಾರ್ಯರಲ್ಲಿ ಒಂದು ಭಿನ್ನಹವನ್ನು ಮಾಡಿಕೊಳ್ಳುತ್ತಾರೆ. ಪೂಜ್ಯರೆ ನಮ್ಮಲ್ಲಿರುವ ಆಸ್ತಿಯನ್ನು, ಹಣವನ್ನು ಬೇರೆಯವರು ಅಪಹರಿಸಬಹುದು. ಆದರೆ ನಮ್ಮಲ್ಲಿರುವ ವಿದ್ಯೆಯನ್ನು ಬೇರೆಯವರು ಕಲಿಯಬಹುದಷ್ಟೇ. ಆದ್ದರಿಂದ ನಿಮ್ಮನ್ನು ಆ ದೈವವೇ ನಮ್ಮಲ್ಲಿಗೆ ಕಳುಹಿಸಿದ್ದಾನೆ ಎಂಬುದೇ ನನ್ನ ನಂಬಿಕೆ. ಮುಂದೆ ನಿಮಗೆ ಬಡತನ ಇರುವುದಿಲ್ಲ. ನಿಮ್ಮ ಮಕ್ಕಳಿಗೆ ಹಸಿವೆಯ ಹಂಗಿರುವುದಿಲ್ಲ. ನಾವು ನಿಮ್ಮನ್ನು ಕೇವಲ ಗುರುಗಳೆಂದು ಪರಿಗಣಿಸುವುದಿಲ್ಲ. ಅದಕ್ಕಿಂತಲೂ ಮೇಲ್ಮಟ್ಟದ ಗೌರವ ನಿಮಗೆ ನೀಡುತ್ತೇವೆ ಎಂದು ಹೇಳುತ್ತಾರೆ.

ಭೀಷ್ಮನ ಮಾತು ಕೇಳಿ ದ್ರೋಣಾಚಾರ್ಯರಿಗೆ ರೋಮಾಂಚನವಾಗುತ್ತೆ

ಕೈ ಮುಗಿದು ವಿನಂತಿಸುತ್ತೇನೆ ನಮ್ಮ ಮಕ್ಕಳಿಗೆ ನಿಮ್ಮ ವಿದ್ಯೆಯನ್ನು ಕಲಿಸಿಕೊಡಿ. ಈ ಕ್ಷಣದಿಂದಲೇ ನಿಮಗೆ, ನಿಮ್ಮ ಮಡದಿಗೆ ಮತ್ತು ಮಗನಿಗೆ ನಾವು ರಾಜಾಶ್ರಯವನ್ನು ನೀಡುತ್ತಿದ್ದೇವೆ ಎನ್ನುತ್ತಾರೆ. ಇದನ್ನು ಕೇಳಿದ ದ್ರೋಣಾಚಾರ್ಯರಿಗೆ ರೋಮಾಂಚನವಾಗುತ್ತದೆ. ತಮ್ಮ ವಿದ್ಯೆಗೆ ಬೆಲೆ ನೀಡಬಲ್ಲ, ಗೌರವ ನೀಡಬಲ್ಲ ವ್ಯಕ್ತಿಯನ್ನು ನೋಡಿ ಸಂತಸ ಗೊಳ್ಳುತ್ತಾರೆ. ಕೌರವ ಮತ್ತು ಪಾಂಡವರಿಗೆ ತಮ್ಮಲ್ಲಿರುವ ವಿದ್ಯೆಯನ್ನು ಕಲಿಸುವ ತವಕದಲ್ಲಿ ತಮ್ಮ ಕರ್ತವ್ಯವನ್ನು ಆರಂಭಿಸುತ್ತಾರೆ. ಅಂದಿನಿಂದ ಕೌರವರು ಮತ್ತು ಪಾಂಡವರು ದ್ರೋಣಾಚಾರ್ಯರ ಶಿಷ್ಯರಾಗುತ್ತಾರೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.