ಜನವರಿ 10 ರಂದು ವೈಕುಂಠ ಏಕಾದಶಿ; ಇದನ್ನು ಮೋಕ್ಷದ ಏಕಾದಶಿ ಎಂದು ಕರೆಯಲು ಕಾರಣವೇನು? ಇಲ್ಲಿದೆ ಪುರಾಣ ಕಥೆ
Vaikuntha Ekadashi 2025: ಹಿಂದೂ ಧರ್ಮದಲ್ಲಿ ಏಕಾದಶಿಗೆ ಬಹಳ ಪ್ರಾಮುಖ್ಯತೆ ಇದೆ. ಈ ಬಾರಿ ಜನವರಿ 10, ಶುಕ್ರವಾರ ವರ್ಷದ ಮೊದಲ ಏಕಾದಶಿ ಆಚರಿಸಲಾಗುತ್ತಿದೆ. ಇದನ್ನು ವೈಕುಂಠ ಏಕಾದಶಿ, ಮೋಕ್ಷದ ಏಕಾದಶಿ ಎಂದೂ ಕರೆಯಲಾಗುತ್ತದೆ. ಈ ಆಚರಣೆ ಹಿಂದಿನ ಪುರಾಣ ಕಥೆ ಹೀಗಿದೆ. (ಬರಹ: ಎಚ್. ಸತೀಶ್, ಜ್ಯೋತಿಷಿ)
2025 ವರ್ಷದ ಮೊದಲ ಏಕಾದಶಿ ಜನವರಿ 10 ಶುಕ್ರವಾರದಂದು ಆಚರಿಸಲಾಗುತ್ತಿದೆ. ಹಿಂದೂ ಧರ್ಮದಲ್ಲಿ ವೈಕುಂಠ ಏಕಾದಶಿಗೆ ವಿಶೇಷವಾದ ಮಹತ್ವವಿದೆ. ವಿಷ್ಣುಪುರಾಣ ಮತ್ತು ಪದ್ಮಪುರಾಣಗಳಲ್ಲಿ ಇದರ ಬಗ್ಗೆ ತಿಳಿಯಬಹುದು. ಪದ್ಮಪುರಾಣದಲ್ಲಿ ಧರ್ಮರಾಯ ಮತ್ತು ಶ್ರೀ ಕೃಷ್ಣನ ನಡುವೆ ಸಂವಾದವಿದೆ. ಇದರಿಂದ ಪೂಜೆ ಪುನಸ್ಕಾರದ ಬಗ್ಗೆ ಮತ್ತು ಆಚಾರ ವಿಚಾರಗಳ ಬಗ್ಗೆ ಹಲವು ವಿಚಾರಗಳನ್ನು ತಿಳಿಯಬಹುದು. ಇದರಲ್ಲಿ ವೈಕುಂಠ ಏಕಾದಶಿ ಬಗ್ಗೆ ವಿಷ್ಣುವು ಧರ್ಮರಾಜನಿಗೆ ತಿಳಿಸುತ್ತಾನೆ.
ಶ್ರೀಕೃಷ್ಣನು ಧರ್ಮರಾಯನಿಗೆ ಹೇಳಿದ ವೈಕುಂಠ ಏಕಾದಶಿ ಕಥೆ
ಧರ್ಮರಾಯನು ವೈಕುಂಠ ಏಕಾದಶಿ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಬಯಸುತ್ತಾನೆ. ಆಗ ಕೃಷ್ಣನು ಧರ್ಮರಾಯನೊಂದಿಗೆ ಇದರ ಬಗ್ಗೆ ಮಾತಾಡುತ್ತಾನೆ. ಈ ದಿನವು ನನಗೆ ಅತ್ಯಂತ ಪ್ರೀತಿಯ ದಿನವಾಗಿದೆ. ಆದ್ದರಿಂದ ಈ ದಿನ ಮಾಡುವ ಪೂಜೆ-ಪುನಸ್ಕಾರಗಳು, ಉಪವಾಸ ವ್ರತಗಳು ಮತ್ತು ದಾನ ಧರ್ಮಗಳು ಹೆಚ್ಚಿನ ಶುಭಫಲಗಳನ್ನು ನೀಡುತ್ತದೆ. ಅಸುರರಿಂದ ತೊಂದರೆಗೆ ಒಳಗಾಗಿರುವ ದೇವತೆಗಳನ್ನು ಕಾಪಾಡುವ ಸಲುವಾಗಿ ಶುಕ್ಲಪಕ್ಷದ ದ್ವಾದಶಿಯ ದಿನ ಮತ್ತೆ ಬರುತ್ತೇನೆ ಎಂದು ಕೃಷ್ಣ ಹೇಳುತ್ತಾನೆ.
ಏಕಾದಶಿಯ ದಿನದಂದು ಉಪವಾಸ ಮಾಡಿದರೆ ಮೋಕ್ಷವನ್ನು ಪಡೆಯಬಹುದು ಎಂಬ ನಂಬಿಕೆ ಇದೆ. ಆ ದಿನ ಕುಲದೇವರು ಮತ್ತು ವಿಷ್ಣುವಿಗೆ ಪೂಜೆಯನ್ನು ಮಾಡಬೇಕು. ಬೆಲ್ಲದ ಅವಲಕ್ಕಿಯನ್ನು ನೇವೇದ್ಯವಾಗಿ ದೇವರಿಗೆ ಅರ್ಪಿಸಬೇಕು. ದೈಹಿಕವಾಗಿ ಸದೃಢರಾಗಿರುವರು ರಾತ್ರಿ ವೇಳೆ ಜಾಗರಣೆ ಮಾಡಬಹುದು. ಈ ದಿನ ಮತ್ಸ್ಯಪುರಾಣ, ವಿಷ್ಣುಪುರಾಣ, ಭಗವದ್ಗೀತೆಯಂತಹ ಗ್ರಂಥಗಳನ್ನು ಆಲಿಸಬೇಕು ಅಥವ ವಾಚಿಸಬೇಕು. ಇದರಿಂದಾಗಿ ಬ್ರಹ್ಮಹತ್ಯಾದೋಷ ಪರಿಹಾರವಾಗುತ್ತದೆ. ಇಂದಿನ ಪೂಜೆಯ ಆಚರಣೆಯಿಂದ ಗೋದಾನಕ್ಕೆ ಸಮನಾದ ಫಲ ದೊರೆಯುತ್ತದೆ.
ಮೈಖಾನಸ ಮಹಾರಾಜ ವೈಕುಂಠ ಏಕಾದಶಿ ಆಚರಿಸಿದ ಕಥೆ
ವೈಕುಂಠ ಏಕಾದಶಿಗೆ ಸಂಬಂಧಿಸಿದಂತೆ ಮತ್ತೊಂದು ಧಾರ್ಮಿಕ ಕಥೆ ಇದೆ. ಚಂಪಕಾ ಎಂಬ ನಗರದಲ್ಲಿ ನೆಲೆಸಿದ್ದ ಜನರು ವಿಷ್ಣುವಿನ ಆರಾಧಕರಾಗಿರುತ್ತಾರೆ. ಚಂಪಕಾನಗರವು ವೈಖಾನಸ ಎಂಬ ರಾಜನ ಅಧೀನದಲ್ಲಿ ಇತ್ತು. ಈತನು ತನ್ನ ಪ್ರಜೆಗಳನ್ನು ಸ್ವಂತ ಮಕ್ಕಳಂತೆ ಕಾಣುತ್ತಿರುತ್ತಾನೆ. ಶಾಂತಿ ನೆಮ್ಮದಿಗೆ ಕೊರತೆ ಇರುವುದಿಲ್ಲ. ಇದರ ಮಧ್ಯೆ ರಾಜನ ಕನಸಿನಲ್ಲಿ ನರಕ ದರ್ಶನವಾಗುತ್ತದೆ. ಆ ಕನಸಿನಲ್ಲಿ ಗತಿಸಿದ ವಂಶದ ಹಿರಿಯರು ಮೋಕ್ಷ ಇಲ್ಲದೆ ನರಕದಲ್ಲಿ ಕಷ್ಟ ಪಡುತ್ತಿರುತ್ತಾರೆ. ಮಹಾರಾಜನು ತಾನು ಕಂಡ ಕನಸಿನ ಬಗ್ಗೆ ಭಯಕ್ಕೆ ಒಳಗಾಗುತ್ತಾನೆ. ತಾನು ಕಂಡ ಕನಸಿನ ಒಳಾರ್ಥವನ್ನು ತಿಳಿಯಲು ಆಸ್ಥಾನದಲ್ಲಿ ಪಂಡಿತರ ಬಳಿ ಚರ್ಚಿಸುತ್ತಾನೆ. ಪಂಡಿತರು ನೀಡುವ ಉತ್ತರದಿಂದ ರಾಜನಿಗೆ ಸಮಾಧಾನವಾಗುವುದಿಲ್ಲ. ಈ ಕಷ್ಟಕಾರ್ಪಣ್ಯದಿಂದ ಪಿತೃದೇವತೆಗಳು ಹೇಗೆ ಬಿಡುಗಡೆ ಮಾಡುವುದು ಎಂಬುದನ್ನು ತಪೋನಿರತರಾಗಿರುವ ಋಷಿ ಮುನಿಗಳಿಂದ ತಿಳಿಯಲು ಬಯಸುತ್ತಾನೆ.
ಆಗ ಮಹಾಮುನಿಗಳು ಮಹಾರಾಜನನ್ನು ಕುರಿತು ನಿನ್ನ ತಂದೆಗೆ ಇಬ್ಬರು ಮಡದಿಯರಿರು. ಅವರಿಬ್ಬರ ಪೈಕಿ ಒಬ್ಬ ಮಡದಿ ನಿಮ್ಮ ತಂದೆಯಿಂದ ಬಹಳ ಕಷ್ಟ ಅನುಭವಿಸಿದ್ದಾಳೆ. ವಂಶದ ಹಿರಿಯರಿಗೆ ಮೋಕ್ಷ ದೊರೆಯದಿರಲು ಇದೇ ಕಾರಣ. ಆದರೆ ವೈಕುಂಠ ಏಕಾದಶಿ ವ್ರತ ಆಚರಿಸುವುದಿರಿಂದ ಸಮಸ್ಯೆ ಬಗೆಹರಿದು ಅವರಿಗೆ ಮೋಕ್ಷ ದೊರೆಯುತ್ತದೆ ಎಂದು ಸಲಹೆ ನೀಡುತ್ತಾರೆ.ಅದರಂತೆ ಮಹಾರಾಜನು ವೈಕುಂಠ ಏಕಾದಶಿ ವ್ರತವನ್ನು ಆಚರಿಸುತ್ತಾನೆ. ಭಗವಾನ್ ವಿಷ್ಣುವನ್ನು ದಾಮೋದರನ ರೂಪದಲ್ಲಿ ಪೂಜಿಸುತ್ತಾನೆ. ಪೂಜೆ ನಂತರ ಅರಮನೆಗೆ ತನ್ನ ರಾಜ್ಯದ ದಂಪತಿಯನ್ನು ಕರೆದು ಭೋಜನ ಹಾಕಿಸಿ, ಹೊಸ ಒಡವೆ ವಸ್ತ್ರಗಳನ್ನು ನೀಡುತ್ತಾನೆ. ಇದರಿಂದ ದಂಪತಿಗಳು ಸಂತೋಷದಿಂದ ಮಹಾರಾಜನನ್ನು ಹಾರೈಸಿ ತೆರಳುತ್ತಾರೆ. ಅದೇ ದಿನ ಮಹಾರಾಜನು ತನ್ನ ಪಿತೃ ದೇವತೆಗಳು ಕನಸಿನಲ್ಲಿ ಸುಖವಾಗಿರುವುದನ್ನು ಕಾಣುತ್ತಾನೆ. ಆದ್ದರಿಂದ ಇದನ್ನು ಮೋಕ್ಷದ ಏಕಾದಶಿ ಎಂದೂ ಕರೆಯುತ್ತಾರೆ.
ಈ ಕಾರಣದಿಂದ ವೈಕುಂಠ ಏಕಾದಶಿ ದಿನ ಪೂಜೆ ಪುರಸ್ಕಾರವನ್ನು ಮಾಡಿ ದಂಪತಿಗಳ ಆಶೀರ್ವಾದ ಪಡೆದರೆ ವಂಶಕ್ಕೆ ಒದಗಿರುವ ಶಾಪದಿಂದ ಪಾರಾಗಬಹುದು. ಗತಿಸಿದ ಪಿತೃ ವರ್ಗಕ್ಕೂ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ.
ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)
ಜ್ಯೋತಿಷಿ: ಹೆಚ್. ಸತೀಶ್, ಬೆಂಗಳೂರು
ಮೊಬೈಲ್: 8546865832