ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Nail Astrology: ನಮ್ಮ ಜೀವನದಲ್ಲಿ ಉಗುರುಗಳ ಪಾತ್ರ: ಚೌಕಾಕಾರದ ಉಗುರುಗಳನ್ನು ಹೊಂದಿರುವವರ ಗುಣ ಲಕ್ಷಣ

Nail Astrology: ನಮ್ಮ ಜೀವನದಲ್ಲಿ ಉಗುರುಗಳ ಪಾತ್ರ: ಚೌಕಾಕಾರದ ಉಗುರುಗಳನ್ನು ಹೊಂದಿರುವವರ ಗುಣ ಲಕ್ಷಣ

Nail Astrology: ಜ್ಯೋತಿಷ್ಯಶಾಸ್ತ್ರದಲ್ಲಿ ಉಗುರುಗಳಿಗೆ ಕೂಡಾ ಪ್ರಾಮುಖ್ಯತೆ ಇದೆ. ಶನಿ ದೇವನನ್ನು ಉಗುರಿನ ಅಧಿಪತಿ ಎಂದು ನಂಬಲಾಗಿದೆ. ಉಗುರುಗಳು ಸೌಂದರ್ಯವನ್ನು ಕೂಡಾ ಪ್ರತಿನಿಧಿಸುತ್ತದೆ. ಶುಕ್ರನು, ಸೌಂದರ್ಯದ ದೇವತೆಯಾಗಿದ್ದಾನೆ. ಉಗುರಿನ ಆಕಾರ ನೋಡಿ ಆ ವ್ಯಕ್ತಿಗಳ ಸ್ವಭಾವ ಹೇಗೆ ಎಂದು ಗುರುತಿಸಿಬಹುದು. (ಬರಹ: ಎಚ್‌. ಸತೀಶ್, ಜ್ಯೋತಿಷಿ)

 ನಮ್ಮ ಜೀವನದಲ್ಲಿ ಉಗುರುಗಳ ಪಾತ್ರ: ಚೌಕಾಕಾರದ ಉಗುರುಗಳನ್ನು ಹೊಂದಿರುವವರ ಗುಣ ಲಕ್ಷಣ (ಸಾಂದರ್ಭಿಕ ಚಿತ್ರ)
ನಮ್ಮ ಜೀವನದಲ್ಲಿ ಉಗುರುಗಳ ಪಾತ್ರ: ಚೌಕಾಕಾರದ ಉಗುರುಗಳನ್ನು ಹೊಂದಿರುವವರ ಗುಣ ಲಕ್ಷಣ (ಸಾಂದರ್ಭಿಕ ಚಿತ್ರ)

ಕೆಲವರ ಉಗುರುಗಳು ಸ್ವಲ್ಪಮಟ್ಟಿಗೆ ಚೌಕಾಕಾರವಾಗಿರುತ್ತದೆ. ಇವರುಗಳು ಸದಾ ಕಾಲ ಯಾವುದಾದರೂ ಒಂದು ಕೆಲಸ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ಪ್ರೀತಿ ವಿಶ್ವಾಸದಿಂದ ಇರುವ ಇವರಿಗೆ ಯಾವುದೇ ತೊಂದರೆ ಕಂಡುಬರುವುದಿಲ್ಲ. ಯಾವುದೇ ತಾರತಮ್ಯ ತೋರದೆ ತಮಗೆ ತೋಚಿದ ಕೆಲಸ ಕಾರ್ಯಗಳಲ್ಲಿ ಸಂಪೂರ್ಣ ಯಶಸ್ಸನ್ನು ಗಳಿಸುತ್ತಾರೆ.

ಚಿಕ್ಕ ವಯಸ್ಸಿನಿಂದ ಕಂಡ ಕನಸುಗಳೆಲ್ಲಾ ಸುಲಭವಾಗಿ ನೆರವೇರುತ್ತವೆ. ಕೇವಲ ತಂದೆ ತಾಯಿ ಮಾತ್ರವಲ್ಲದೆ ಬೇರೆಯವರ ಅನುಕಂಪವೂ ಇವರಿಗೆ ದೊರೆಯುತ್ತದೆ. ಉತ್ತಮ ಆರೋಗ್ಯವಿರುವ ಕಾರಣ ಕೆಲಸ ಕಾರ್ಯಗಳಲ್ಲಿ ಸದಾ ಕಾಲ ಮುಂದಿರುತ್ತಾರೆ. ಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಸುಲಭವಾದ ಮಾರ್ಗದಲ್ಲಿ ಹಣ ಗಳಿಸಲು ಇಷ್ಟಪಡುವುದಿಲ್ಲ. ಇವರ ಕಷ್ಟಕ್ಕೆ ತಕ್ಕಂತೆ ಆದಾಯವಿರುತ್ತದೆ. ತಾವು ಸಂಪಾದಿಸಿದ ಹಣವನ್ನು ಸಮಾಜಸೇವೆಯಲ್ಲಿ ಬಳಸುತ್ತಾರೆ. 

ಯಾರನ್ನೂ ಅವಲಂಬಿಸದೆ ಸ್ವತಂತ್ರ್ಯ ಜೀವನ ನಡೆಸುತ್ತಾರೆ

ಇವರ ವೈವಾಹಿಕ ಜೀವನ ಸುಖ ಸಂತೋಷಗಳಿಂದ ಕೂಡಿರುತ್ತದೆ. ದಂಪತಿ ನಡುವೆ ಜಗಳ ಉಂಟಾದರೂ ಬಹುಕಾಲ ನಿಲ್ಲುವುದಿಲ್ಲ. ಇವರ ಮನಸ್ಸನ್ನು ತೃಪ್ತಿಗೊಳಿಸುವಂತಹ ಕೆಲಸ ಕಾರ್ಯಗಳನ್ನು ಮಕ್ಕಳು ಮಾಡುತ್ತಾರೆ. ಇಳಿ ವಯಸ್ಸಿನಲ್ಲಿ ಯಾರನ್ನೂ ಅವಲಂಬಿಸದೆ ಸ್ವತಂತ್ರವಾಗಿ ಜೀವನವನ್ನು ನಡೆಸುತ್ತಾರೆ. ಹಣ ಗಳಿಸುವುದು ಒಂದೇ ಇವರ ಗುರಿಯಾಗುವುದಿಲ್ಲ. ಅವಶ್ಯಕತೆ ಇದ್ದಷ್ಟು ಆದಾಯ ದೊರೆತರೆ ತೃಪ್ತಿಯಿಂದ ಬಾಳುತ್ತಾರೆ.

ಕೆಲವರ ಉಗುರಿನ ತುದಿಯು ಚೂಪಾಗಿ ಅಥವಾ ತ್ರಿಕೋನದ ಆಕಾರದಲ್ಲಿ ಇರುತ್ತದೆ. ಇವರು ನೇರವಾದ ನಡೆ ನುಡಿಯಿಂದ ಜೀವನ ನಡೆಸುತ್ತಾರೆ. ತಾವು ಮಾಡಿದ ತಪ್ಪನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ತಪ್ಪು ಮಾಡಿದಾಗ ಕ್ಷಮೆ ಕೇಳಲು ಹಿಂಜರಿಯುವುದಿಲ್ಲ. ಇವರ ಜೀವನವು ಸಾಮಾನ್ಯವಾಗಿ ಸರಿಯಾದ ಹಾದಿಯಲ್ಲಿ ನಡೆಯುತ್ತದೆ. ತಮ್ಮ ಮನಸ್ಸಿಗೆ ಇಷ್ಟವಾಗುವ ಮತ್ತು ತಮಗೆ ಸಾಧ್ಯವಾಗುವ ಕೆಲಸವನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ನಾಯಕತ್ವದ ಗುಣ ಬೆಳೆಸಿಕೊಳ್ಳುತ್ತಾರೆ. ಗುರು ಹಿರಿಯರಿಗೆ ಗೌರವ ನೀಡುವುದು ಇವರ ಹೆಗ್ಗಳಿಕೆ. ಬಂಧು ಬಳಗದವರಿಂದ ದೂರವಿರುತ್ತಾರೆ. ಒಮ್ಮೆ ಆರಂಭಿಸಿದ ಕೆಲಸವನ್ನು ಪೂರ್ಣಗೊಳಿಸುವವರೆಗೂ ವಿಶ್ರಾಂತಿ ಬಯಸುವುದಿಲ್ಲ. 

ಇವರ ಜೀವನದಲ್ಲಿ ಸೋಲು ಎಂಬುದೇ ಇರುವುದಿಲ್ಲ

ಇವರ ಮಾತುಕತೆಯನ್ನು ಒಪ್ಪದ ಕೆಲವರು ಇವರ ಬಗ್ಗೆ ತಪ್ಪು ಅಭಿಪ್ರಾಯವನ್ನು ಹರಡುತ್ತಾರೆ. ಇವರ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಆದರೆ ದಂಪತಿ ನಡುವೆ ಅನಾವಶ್ಯಕ ವಾದ ವಿವಾದಗಳು ಇರುತ್ತವೆ. ಬೇರೆಯವರ ಅಧೀನದಲ್ಲಿ ಕೆಲಸ ನಿರ್ವಹಿಸಲು ಇಷ್ಟಪಡುವುದಿಲ್ಲ. ಆತ್ಮೀಯರ ನೆರವಿನಿಂದ ಸ್ವಂತ ಉದ್ದಿಮೆ ಆರಂಭಿಸಲು ಬಯಸುತ್ತಾರೆ. ಸಾಮಾನ್ಯವಾಗಿ ಇವರು ತಮ್ಮ ಇಳುವಯಸ್ಸಿನಲ್ಲಿಯೂ ವ್ಯಾಪಾರ ವ್ಯವಹಾರಗಳಲ್ಲಿ ತೊಡಗುತ್ತಾರೆ. ಇವರಿಗೆ ಸೋಲು ಎಂಬುವುದೇ ಇರುವುದಿಲ್ಲ. ಕುಟುಂಬದಲ್ಲಿ ಕೆಲವೊಮ್ಮೆ ಇವರಿಂದ ಸಂದಿಗ್ದತೆಯ ವಾತಾವರಣ ಉಂಟಾಗುತ್ತದೆ.

ಕೆಲವರ ಉಗುರನ್ನು ಸ್ಪರ್ಶಿಸಿದರೆ ಅದು ಗಡುಸಾಗಿರುವಂತೆ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದು ಕೆಂಪು ಬಣ್ಣದಿಂದ ಕೂಡಿರುತ್ತದೆ. ಇಂತಹ ಜನರು ಜೀವನದಲ್ಲಿ ಕಷ್ಟಪಟ್ಟು ಮುಂದೆ ಬರುತ್ತಾರೆ. ಆರಂಭದಲ್ಲಿ ಬೇರೆಯವರ ಮೇಲೆ ಅವಲಂಬಿತರಾದರೂ ಕಾಲಕ್ರಮೇಣ ತಮ್ಮ ಸ್ವಂತ ಪ್ರತಿಭೆ ಮತ್ತು ಸಾಮರ್ಥ್ಯದಿಂದ ಜೀವನದಲ್ಲಿ ಯಶಸ್ಸು ಕಾಣುತ್ತಾರೆ. ಕಷ್ಟ ಜೀವಿಗಳನ್ನು ಕಂಡರೆ ಇವರಿಗೆ ಎಲ್ಲದ ಪ್ರೀತಿ. ಅವರಿಗೆ ಎಲ್ಲಾ ರೀತಿಯ ಅನುಕೂಲತೆಗಳನ್ನು ಮಾಡಿಕೊಡುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಮತ್ತು ವಯೋವೃದ್ಧರಿಗೆ ಸಹಾಯ ಮಾಡುವಲ್ಲಿ ಇವರು ಮೊದಲಿಗರು. 

ಧೈರ್ಯವಂತರು

ಎಂತಹ ಕಷ್ಟದ ಸಂದರ್ಭವೆಂದರೂ ಆತಂಕಕ್ಕೆ ಒಳಗಾಗುವುದಿಲ್ಲ. ವಿದ್ಯಾರ್ಥಿಗಳು ಕಲಿಕೆಯ ವಿಚಾರದಲ್ಲಿ ಸದಾ ಮುಂದಿರುತ್ತಾರೆ. ಇವರಿಗೆ ಅರಿಯದ ವಿಚಾರಗಳು ಯಾವುದು ಇರುವುದಿಲ್ಲ. ವೈವಾಹಿಕ ಜೀವನದಲ್ಲಿ ಅನಾವಶ್ಯಕ ವಾದ ವಿವಾದಗಳು ಇರುತ್ತವೆ. ಆದರೆ ಸಂಗಾತಿಯ ತಪ್ಪನ್ನು ಮನ್ನಿಸುವ ಕಾರಣ ಅದು ಬಹುಕಾಲ ನಿಲ್ಲದು. ಎಲ್ಲರೊಂದಿಗೆ ಹೊಂದಿಕೊಂಡು ಬಾಳುವ ಇವರಿಗೆ ವಿರೋಧಿಗಳು ಕಡಿಮೆ. ಭವಿಷ್ಯದ ಜೀವನಕ್ಕಾಗಿ ಚಿಕ್ಕ ವಯಸ್ಸಿನಲ್ಲಿ ಯೋಜನೆಗಳನ್ನು ರೂಪಿಸುತ್ತಾರೆ. ಇವರನ್ನು ನಂಬಿದವರಿಗೆ ಯಾವುದೇ ರೀತಿ ಮೋಸವಾಗುವುದಿಲ್ಲ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.