ನವರಾತ್ರಿಯಲ್ಲಿ ದುರ್ಗೆಯ ಆರಾಧನೆಗೆ ಪ್ರಾಶಸ್ತ್ಯ, ಕರ್ನಾಟಕದ ಆಯ್ದ 5 ಪುರಾತನ ದೇವಿ ದೇವಸ್ಥಾನಗಳಿವು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನವರಾತ್ರಿಯಲ್ಲಿ ದುರ್ಗೆಯ ಆರಾಧನೆಗೆ ಪ್ರಾಶಸ್ತ್ಯ, ಕರ್ನಾಟಕದ ಆಯ್ದ 5 ಪುರಾತನ ದೇವಿ ದೇವಸ್ಥಾನಗಳಿವು

ನವರಾತ್ರಿಯಲ್ಲಿ ದುರ್ಗೆಯ ಆರಾಧನೆಗೆ ಪ್ರಾಶಸ್ತ್ಯ, ಕರ್ನಾಟಕದ ಆಯ್ದ 5 ಪುರಾತನ ದೇವಿ ದೇವಸ್ಥಾನಗಳಿವು

ನವರಾತ್ರಿ ಉತ್ಸವ ಆದಶಕ್ತಿ, ದುರ್ಗೆಯ ಆರಾಧನೆಗೆ ಪ್ರಾಶಸ್ತ್ಯ. ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸುವ ಈ ಹಬ್ಬದ ಸಂದರ್ಭದಲ್ಲಿ ದೇವಸ್ಥಾನಗಳಿಗೆ ಹೋಗಿ ದೇವಿ ದರ್ಶನ ಮಾಡಿ ಪೂಜೆ ಮಾಡಿಸುವುದು ವಾಡಿಕೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಆಯ್ದ 5 ಪುರಾತನ ದೇವಿ ದೇವಸ್ಥಾನಗಳ ವಿವರ ಇಲ್ಲಿದೆ.

ಕೊಲ್ಲೂರು ಶ್ರೀ ಮೂಕಾಂಬಿಕೆ, ಮೈಸೂರು ಶ್ರೀ ಚಾಮುಂಡೇಶ್ವರಿ ದೇವಿ, ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ.
ಕೊಲ್ಲೂರು ಶ್ರೀ ಮೂಕಾಂಬಿಕೆ, ಮೈಸೂರು ಶ್ರೀ ಚಾಮುಂಡೇಶ್ವರಿ ದೇವಿ, ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ.

ನವರಾತ್ರಿ ಉತ್ಸವವು ಈ ಬಾರಿ ಅಕ್ಟೋಬರ್ 3 ರಿಂದ 12 ರ ತನಕ ನಡೆಯಲಿದ್ದು, ದೇವಿ ದೇವಸ್ಥಾನಗಳಲ್ಲಿ ಶರನ್ನವರಾತ್ರಿ ಹಬ್ಬದ ಸಂಭ್ರಮ ಸಡಗರ ಇರಲಿದೆ. ಈಗಾಗಲೇ ಹಬ್ಬದ ಆಚರಣೆಗೆ ಸಿದ್ಧತೆ ನಡೆದಿದೆ. ಈ ಸಲ ನವರಾತ್ರಿ ಸಂದರ್ಭದಲ್ಲಿ ಕರ್ನಾಟಕದಲ್ಲಿ ಸಂದರ್ಶಿಸಬಹುದಾದ ದೇವಿ ದೇವಸ್ಥಾನಗಳು ಯಾವುವು ಎಂದು ಹುಡುಕಾಡುತ್ತಿದ್ದೀರಾ? ಕರ್ನಾಟಕದಲ್ಲಿ ಕೂಡ ಹತ್ತಾರು ದೇವಿ ದೇವಸ್ಥಾನಗಳಿವೆ. ಈ ಪೈಕಿ ಪುರಾತನ ಮತ್ತು ಜನಪ್ರಿಯವಾಗಿರುವ ಆಯ್ದ ದೇವಿ ದೇವಸ್ಥಾನಗಳ ವಿವರ ಗಮನಿಸೋಣ. ನಾಡ ದೇವಿ ಚಾಮುಂಡೇಶ್ವರಿ ದೇವಿ ದೇವಾಲಯ ಮೈಸೂರು, ಶೃಂಗೇರಿ ಶಾರದಾಂಬ ದೇವಸ್ಥಾನ, ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ, ಶಿರಸಿಯ ಮಾರಿಕಾಂಬಾ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಪ್ರಮುಖ ಐದು ದೇವಿ ದೇವಸ್ಥಾನಗಳು.

ಕರ್ನಾಟಕದ 5 ಪ್ರಮುಖ ದೇವಿ ದೇವಸ್ಥಾನಗಳಿವು

1) ನಾಡ ದೇವತೆ ಚಾಮುಂಡೇಶ್ವರಿ ದೇವಿ ದೇಗುಲ, ಮೈಸೂರು: ನಮ್ಮ ರಾಜ್ಯದ ನಾಡ ದೇವತೆ ಚಾಮುಂಡೇಶ್ವರಿ ದೇವಿ. ಚಾಮುಂಡಿ ಬೆಟ್ಟದ ಮೇಲೆ ನೆಲೆಸಿರುವ ಚಾಮುಂಡಿದೇವಿಯ ಜಾತ್ರಾ ಮಹೋತ್ಸವ ನವರಾತ್ರಿ ಸಮಯದಲ್ಲೇ. ಕರ್ನಾಟಕ ಪ್ರಮುಖ ದೇವಿ ದೇವಾಲಯ. ಮಹಿಷಾಸುರನನ್ನು ವಧಿಸಿದ ದೇವಿಯಾದ ಕಾರಣ ದೇವಿಗೆ ಮಹಿಷಮರ್ದಿನಿ, ಮಹಿಷಾಸುರ ಮರ್ದಿನಿ ಎಂಬ ಹೆಸರೂ ಇದೆ. ಈ ದೇವಸ್ಥಾನದ ಸಮೀಪದಲ್ಲೇ ದೊಡ್ಡ ಗಾತ್ರದ ನಂದಿ ವಿಗ್ರಹ ಮತ್ತು ಮಹಿಷಾಸುರ ವಿಗ್ರಹವೂ ಇದೆ. ಮೈಸೂರು ಒಡೆಯರ್ ವಂಶಸ್ಥರ ಕುಲದೇವತೆಯಾಗಿರುವ ಚಾಮುಂಡೇಶ್ವರಿ ಅಷ್ಟ ಭುಜ ಹೊಂದಿದ್ದು, ಖಡ್ಗ, ಬಾಣ, ವಜ್ರ, ಚಾಕು, ಈಟಿ, ಶಂಖ ಮತ್ತು ಸರ್ಪವಿದೆ. ಕೂತಿರುವ ದೇವತೆಯು ಹೊಯ್ಸಳರ ಕಲೆಯನ್ನು ನೆನಪಿಸುತ್ತದೆ. ಬೆಳ್ಳಿ ಮಂಟಪದಲ್ಲಿ ದೇವಿಯ ಹಲವಾರು ಅವತಾರಗಳಿವೆ. ಉತ್ಸವ ಮೂರ್ತಿಯಲ್ಲೂ ಇದೇ ರೀತಿ ಲಕ್ಷಣಗಳಿವೆ. ಜಂಬೂ ಸವಾರಿ ವೇಳೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ.

2) ಶೃಂಗೇರಿ ಶಾರದಾಂಬ ದೇವಸ್ಥಾನ: ಶೃಂಗೇರಿ ಶ್ರೀ ಶಾರದಾ ಪೀಠ ಅಥವಾ ಶ್ರೀ ಶಾರದಾಂಬ ದೇವಸ್ಥಾವನ್ನು ಪರಮಗುರು ಆದಿಶಂಕರರು ಸ್ಥಾಪಿಸಿದರು ಎಂಬ ಐತಿಹ್ಯವಿದೆ. ಶೃಂಗೇರಿ ಶಾರದಾಂಬ ದೇವಸ್ಥಾನವು ಜ್ಞಾನ ದೇವತೆ ಸರಸ್ವತಿಗೆ ಮೀಸಲಾದ ದೇಗುಲ. ಕರ್ನಾಟಕದ ಪ್ರಮುಖ ಧಾರ್ಮಿಕ ಚಟುವಟಿಕೆಯ ಕೇಂದ್ರ ಸ್ಥಾನ ಶೃಂಗೇರಿ. ಚಿಕ್ಕಮಗಳೂರು ಜಿಲ್ಲೆಯ ತುಂಗಾ ತಟದಲ್ಲಿರುವ ಪುಟ್ಟ ಊರು ಶೃಂಗೇರಿ. ವಿಜಯನಗರದ ಕಾಲದ ಶಿಲ್ಪಕಲೆ ಮತ್ತು ಹೊಯ್ಸಳ ಶಿಲ್ಪಕಲೆ - ಎರಡರ ಸಮಾಗಮವನ್ನು ಈ ದೇವಸ್ಥಾನದಲ್ಲಿದೆ.

3) ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು: ಉಡುಪಿ ಜಿಲ್ಲೆಯ ಕೊಡಚಾದ್ರಿ ಬೆಟ್ಟದ ತಪ್ಪಲು ಪ್ರದೇಶದಲ್ಲಿರುವ ದೇವಸ್ಥಾನ ಇದು. ಶ್ರೀ ಮೂಕಾಂಬಿಕಾ ದೇವಿಯ ವಿಗ್ರಹವನ್ನು ಇಲ್ಲಿ ಶ್ರೀಚಕ್ರದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಆದಿ ಶಂಕರರು ಕೊಡಚಾದ್ರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೂಕಾಂಬಿಕಾ ದೇವಿಯನ್ನು ಪ್ರತಿಷ್ಠಾಪಿಸಿದ್ದಾಗಿ ಐತಿಹ್ಯವಿದೆ. ಒಂದು ದಂತಕಥೆಯ ಪ್ರಕಾರ, ಮೂಕಾಂಬಿಕಾ ದೇವಿಯು ಕೇರಳದ ಚೋಟಾನಿಕ್ಕರದಲ್ಲಿದ್ದು, ನಿತ್ಯವೂ ಬೆಳಗ್ಗೆ ಪೂಜೆಯನ್ನು ಅಲ್ಲಿ ಸ್ವೀಕರಿಸಿ ಮಧ್ಯಾಹ್ನದ ಪೂಜೆ ಸ್ವೀಕರಿಸಲು ಕೊಲ್ಲೂರಿಗೆ ಹಿಂದಿರುಗುವುದು ವಾಡಿಕೆ.

4) ರೇಣುಕಾ ಯಲ್ಲಮ್ಮ ದೇವಸ್ಥಾನ, ಸವದತ್ತಿ: ಉತ್ತರ ಕರ್ನಾಟಕ ಭಾಗದ ಪ್ರಮುಖ ದೇವಿ ದೇವಸ್ಥಾನ. ಫಲವಂತಿಕೆಯ ದೇವಿಯಾಗಿ ರೇಣುಕಾ ಯಲ್ಲಮ್ಮ ದೇವಿಯನ್ನು ಆರಾಧಿಸಲಾಗುತ್ತದೆ. ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ದೇಗುಲ ಬಹಳ ಪುರಾತನವಾದುದು. ಇಲ್ಲಿ ತರಳಬಾಳು ಹುಣ್ಣಿಮೆಗೆ ವಿಶೇಷ ಪೂಜೆ, ಜಾತ್ರಾ ಮಹೋತ್ಸವ ನಡೆಯುತ್ತದೆ. ವರ್ಷವಿಡೀ ಇಲ್ಲಿ ಭಕ್ತ ದಟ್ಟಣೆ ಕಂಡುಬರುತ್ತದೆ.

5) ಮಾರಿಕಾಂಬ ದೇವಸ್ಥಾನ, ಶಿರಸಿ: ಕರ್ನಾಟಕದ ಪುರಾತನ ದೇವಾಲಯಗಳ ಪೈಕಿ ಮಾರಿಕಾಂಬ ದೇವಸ್ಥಾನವೂ ಒಂದು. ಶಿರಸಿ ಬಸ್‌ನಿಲ್ದಾಣದಿಂದ ಒಂದು ಕಿಲೋಮೀಟರ್ ಅಂತರದಲ್ಲಿರುವ ದೇವಸ್ಥಾನದಲ್ಲಿ ನವಾತ್ರಿ ಉತ್ಸವ ಕೂಡ ನಡೆಯಲಿದೆ. ಬಂಗಾಳದ ಕಾಳಿಕಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಅಂಬಾ ಭವಾನಿಯಂತೆ, ಶಿರಸಿಯ ಶ್ರೀ ಮಾರಿಕಾಂಬೆ ಕರ್ನಾಟಕದ ಅತ್ಯಂತ ಜಾಗೃತ ಶಕ್ತಿ ಪೀಠವೆನಿಸಿದೆ. ಕೇವಲ ಪ್ರಾರ್ಥನೆಯಿಂದ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡರಿಸುತ್ತಾಳೆ ಎಂಬ ನಂಬಿಕೆ ಭಕ್ತರದ್ದು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.