New Year 2025 Mantras: ಈ 8 ಶಕ್ತಿಶಾಲಿ ಮಂತ್ರ ಪಠಿಸುತ್ತ ಹೊಸ ವರ್ಷ ಶುರುಮಾಡಿಕೊಂಡರೆ ಶುಭಫಲ ಪ್ರಾಪ್ತಿಯಾಗಿ ಒಳಿತಾಗಬಹುದು
New Year 2025 Mantras: ಕಳೆದ ವರ್ಷ ಸಿಕ್ಕಾಪಟ್ಟೆ ಕಷ್ಟ ಕೋಟಲೆಗಳನ್ನು ಎದುರಿಸಿದ್ದು, ಅಂತಹ ತೊಂದರೆಗಳು ಈ ವರ್ಷ ಬರದೇ ಇರಲಿ ಎಂದು ಪ್ರಾರ್ಥಿಸುತ್ತಿದ್ದೀರಾ, ಹಾಗಾದರೆ, ಈ 8 ಮಂತ್ರ ಪಠಿಸುತ್ತ ಹೊಸ ವರ್ಷ ಶುರುಮಾಡಿಕೊಂಡರೆ ಶುಭಫಲ ಪ್ರಾಪ್ತಿಯಾಗಿ, ಒಳತಾಗಬಹುದು.
New Year 2025 Mantras: ಹೊಸ ವರ್ಷ 2025 ಶುರುವಾಗಿದೆ. ಹೊಸ ವರ್ಷ ಪೂರ್ತಿ ಸಂತೋಷವಾಗಿ, ದುಃಖವಿಲ್ಲದೇ ಖುಷಿಯಾಗಿ, ತೊಂದರೆ ಇಲ್ಲದೇ ಬದುಕು ಸಾಗಿಸಬೇಕು ಎಂಬುದು ಎಲ್ಲರ ಹಾರೈಕೆ, ಆಶಯ ಕೂಡ. ವರ್ಷ ಪೂರ್ತಿ ಯಾವುದೇ ವಿಪತ್ತು ಸಂಭವಿಸದಿರಲಿ ಎಂಬ ಪ್ರಾರ್ಥನೆಯೂ ಇದ್ದೇ ಇದೆ. 2025ರಲ್ಲಿ ಬದುಕಿನಲ್ಲಿ ಎದುರಾಗಬಲ್ಲ ಅಡ್ಡಿ ಆತಂಕ, ಅಡಚಣೆಗಳನ್ನು ನಿವಾರಿಸಲು ದೇವರ ಮೊರೆ ಹೋಗುವುದು ಸಹಜ. ಅನೇಕರು ತಮ್ಮ ತಮ್ಮ ಪ್ರೀತಿಯ ದೇವರ ಶ್ಲೋಕಗಳನ್ನು ಹೇಳುತ್ತ ಹೊಸ ವರ್ಷವನ್ನು ಶುರುಮಾಡುತ್ತಾರೆ. ಇನ್ನು ಹಲವರು ಯಾವ ದೇವರನ್ನು, ಯಾವ ಶ್ಲೋಕದಿಂದ ಅಥವಾ ಮಂತ್ರದೊಂದಿಗೆ ಆರಾಧಿಸಬೇಕು ಎಂದು ಹುಡುಕಾಡುತ್ತಿರುತ್ತಾರೆ. ಅಂಥವರ ಅನುಕೂಲಕ್ಕಾಗಿ ಇಲ್ಲಿವೆ ಕೆಲವು ಸಣ್ಣ ಶ್ಲೋಕ, ಮಂತ್ರಗಳು.
ಈ ಮಂತ್ರಗಳು / ಶ್ಲೋಕಗಳೊಂದಿಗೆ ಹೊಸ ವರ್ಷ ಶುರುಮಾಡಿಕೊಳ್ಳಿ
1) ಓಂ ಗಂ ಗಣಪತಯೇ ನಮಃ : ಗಣೇಶನನ್ನು ಪೂಜಿಸುವಾಗ ಓಂ ಗಂ ಗಣಪತಯೇ ನಮಃ ಎಂಬ ಈ ಮಂತ್ರವನ್ನು ಜಪಿಸಿದರೆ ತೊಂದರೆಗಳಿಂದ ಮುಕ್ತಿ ಹೊಂದಿ ಸಂತೋಷದಿಂದ ಇರಬಹುದು. ಯಾವುದೇ ಪೂಜೆ ಮಾಡುವಾಗಲೂ ಮೊದಲ ಪೂಜೆ ವಿಘ್ನನಾಶಕ ಗಣೇಶನಿಗೇ ಸಲ್ಲುತ್ತದೆ. ಕೈಗೆತ್ತಿಕೊಂಡ ಕೆಲಸವನ್ನು ಯಾವುದೇ ತೊಂದರೆಗಳಿಲ್ಲದೆ ಪೂರ್ಣಗೊಳಿಸಲು ನಾವು ಗಣಪತಿಯನ್ನು ಪೂಜಿಸುತ್ತೇವೆ. ಹೊಸ ವರ್ಷ ಪೂರ್ತಿ ಯಾವುದೇ ವಿಘ್ನಗಳಿಲ್ಲದೇ, ಸಂತೋಷದಿಂದ ಬದುಕು ಸಾಗಿಸಬಲು ಈ ಗಣೇಶ ಮಂತ್ರ ನೆರವಾಗಬಹುದು.
2) ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ, ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ: ಗಣೇಶನನ್ನು ಪೂಜಿಸುವಾಗ ಈ ಸ್ತೋತ್ರವನ್ನು ಪಠಿಸಬೇಕು. ಯಾವುದೇ ಶುಭಕಾರ್ಯ ಶುರುಮಾಡುವಾಗ ಗಣಪತಿಯನ್ನು ಸ್ತುತಿಸುವ ಶ್ಲೋಕ. ಇದನ್ನು ಪಠಿಸಿದವರು ಗಣಪತಿಯ ಕೃಪೆಗೆ ಪಾತ್ರರಾಗುತ್ತಾರೆ. ಅವರ ಬದುಕಿನ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ.
3) ಓಂ ಶಾಂತಿ: ಶಾಂತಿ: ಶಾಂತಿಃ: ಬದುಕು ಪ್ರಶಾಂತವಾಗಿರಬೇಕಾದರೆ ಮನಸ್ಸು ಶಾಂತವಾಗಿರಬೇಕು. ಮನಸ್ಸಿನ ಶಾಂತ ಸ್ಥಿತಿಯನ್ನು ಕಾಪಾಡಿಕೊಳ್ಳಲು ಓಂ ಶಾಂತಿಃ ಶಾಂತಿಃ ಶಾಂತಿಃ ಎಂಬ ಮಂತ್ರವನ್ನು ಪಠಿಸಿದರೆ ಶುಭಫಲ ನಿರೀಕ್ಷಿಸಬಹುದು. ಹೊಸ ವರ್ಷ ಶುರುವಾಗಿದ್ದು, ಮೊದಲ ದಿನದಿಂದಲೇ ಈ ಮಂತ್ರ ಪಠಿಸಲಾರಂಭಿಸಿದರೆ ಉತ್ತಮ.
4) ಓಂ ನಮಃ ಶಿವಾಯ: ಬದುಕಿನಲ್ಲಿ ಧನಾತ್ಮಕ ಶಕ್ತಿ ಹೆಚ್ಚಳವಾಗಬೇಕಾದರೆ, ಶಿವನ ಆರಾಧನೆ ಮುಖ್ಯ. ಹೊಸ ವರ್ಷ ಶುರುವಾದ ಕಾರಣ, ಓಂ ನಮಃ ಶಿವಾಯ ಮಂತ್ರವನ್ನು ಪಠಿಸಬಹುದು. ಇದು ಶಕ್ತಿಶಾಲಿ ಮಂತ್ರ. ಶಿವನನ್ನು ಆರಾಧಿಸುವಾಗ ಈ ಮಂತ್ರ ಪಠಿಸುವುದರಿಂದ ಉತ್ತಮ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂಬುದು ನಂಬಿಕೆ. ಬದುಕಿನ ಸಂತೋಷ, ಸಮೃದ್ಧಿಯನ್ನೂ ನಿರೀಕ್ಷಿಸಬಹುದು. ಶಿವಾನುಗ್ರಹವೂ ಪಠಿಸುವವರ ಮೇಲಾಗುತ್ತದೆ ಎನ್ನುತ್ತಾರೆ ಆಸ್ತಿಕರು.
5) ಲೋಕಾಃ ಸಮಸ್ತಃ ಸುಖಿನೋ ಭವಂತು: ಜೀವನ ಎಂದರೆ ತನ್ನದೊಬ್ಬನದ್ದೇ ಅಲ್ವಲ್ಲ. ಎಲ್ಲರ ಬದುಕೂ ಬರುತ್ತದೆ. ಎಲ್ಲ ಜನರೂ ಸುಖವಾಗಿ ಸಂತೋಷವಾಗಿ ಇರಬೇಕು ಎಂದು ಬಯಸಬೇಕು. ಅದು ಉತ್ತಮ ಲಕ್ಷಣ. ನಾವಷ್ಟೇ ಅಲ್ಲ, ನಮ್ಮ ಜತೆಗಿರುವವರು, ನಮ್ಮ ಸುತ್ತಮುತ್ತ ಇರುವವರು ಕೂಡ ಒಳ್ಳೆಯವರಾಗಬೇಕು, ಅವರಿಗೂ ಒಳಿತಾಗಬೇಕು. ಆಗ ನಮಗೂ ಒಳ್ಳೆಯದಾಗುತ್ತದೆ. ಶುಭಫಲ ಪ್ರಾಪ್ತಿಯಾಗುತ್ತದೆ. ಈ ಹೊಸ ವರ್ಷವನ್ನು “ಲೋಕಾಃ ಸಮಸ್ತಃ ಸುಖಿನೋ ಭವಂತು” ಎಂಬ ಮಂತ್ರ ಪಠಿಸುತ್ತ ಶುರುಮಾಡಿ. ವರ್ಷ ಪೂರ್ತಿ ಇದನ್ನೇ ಬಯಸಿ. ಶುಭಫಲ ನಿರೀಕ್ಷಿಸಬಹುದು.
6) ಓಂ ಶ್ರೀ ಮಹಾಲಕ್ಷ್ಮ್ಯೈ ಚ ವಿದ್ಮಹೇ. ವಿಷ್ಣು ಪತ್ನೈ ಚ ಧೀಮಹಿ. ತನ್ನೋ ಲಕ್ಷ್ಮೀ ಪ್ರಚೋದಯಾತ್ : ಹೊಸ ವರ್ಷ ಶುಭಫಲ ಅಪೇಕ್ಷಿಸುವವರು “ಓಂ ಶ್ರೀ ಮಹಾಲಕ್ಷ್ಮ್ಯೈ ಚ ವಿದ್ಮಹೇ. ವಿಷ್ಣು ಪತ್ನೈ ಚ ಧೀಮಹಿ. ತನ್ನೋ ಲಕ್ಷ್ಮೀ ಪ್ರಚೋದಯಾತ್ ” ಈ ಶ್ಲೋಕವನ್ನು ಪಠಿಸುವುದು ಸೂಕ್ತ. ಈ ಶ್ಲೋಕ ಪಠಿಸುವುದರಿಂದ ಧನಕನಕಾದಿ ಸೌಭಾಗ್ಯ ಪ್ರಾಪ್ತಿಯಾಗುವುದೆಂಬ ನಂಬಿಕೆ.
7) ಓಂ ನಮೋ ನಾರಾಯಣಾಯ: ಹೊಸ ವರ್ಷ ಪೂರ್ತಿ ಶ್ರೀಮನ್ನಾರಾಯಣನ ಕೃಪೆಗೆ ಪಾತ್ರರಾಗಿ ನೆಮ್ಮದಿಯ ಜೀವನ ಸಾಗಿಸಬೇಕಾದರೆ “ಓಂ ನಮೋ ನಾರಾಯಣಾಯ” ಎಂಬ ಹರಿನಾಮ ಜಪಿಸಬೇಕು ಎನ್ನುತ್ತಾರೆ ಬಲ್ಲವರು. ಓಂ ನಮೋ ನಾರಾಯಣಾಯ ಮಂತ್ರ ಪಠಣದಿಂದ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ.
8) ಮಹಾಮೃತ್ಯುಂಜಯ ಮಂತ್ರ: ಮೃತ್ಯ ಭಯ ಕಾಡದೇ ಇರಲು ಸದಾ ಮಹಾಮೃತ್ಯುಂಜಯ ಮಂತ್ರ ಪಠಿಸಬೇಕು ಎನ್ನುತ್ತಾರೆ ತಿಳಿದವರು. “ಓಂ ತ್ರಯಂಬಕಮ್ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯ ಮಾಮೃತಾಆತ್” ಈ ಮಹಾಮೃತ್ಯುಂಜಯ ಮಂತ್ರ ಪಠಣದಿಂದ ಧನಾತ್ಮಕ ಭಾವ ತುಂಬಿ ತುಳುಕುತ್ತದೆ ಎನ್ನುತ್ತಾರೆ ಪ್ರಾಜ್ಞರು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.