ಚೀನಾ ಪದ್ಧತಿ ವರ್ಷ ಭವಿಷ್ಯ 2025: ಎತ್ತು ರಾಶಿಯವರ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗಲಿದೆ, ಹಣ ಗಳಿಸುವ ಹಟಕ್ಕೆ ಬಿದ್ದು ಅಪಾಯ ತಂದುಕೊಳ್ಳದಿರಿ
ಜ್ಯೋತಿಷ್ಯದ ನಂಬಿಕೆ ಒಂದೊಂದು ದೇಶದಲ್ಲಿ ಒಂದೊಂದು ಥರ. ಇಂದಿನ ವರ್ಷ ಭವಿಷ್ಯಕ್ಕೆ ಚೀನಾದಲ್ಲಿ ಅನುಸರಿಸುವ ಜ್ಯೋತಿಷ್ಯ ನಂಬಿಕೆ ಆಧರಿಸಿ ವಿವರ ನೀಡಲಾಗಿದೆ. ಚೀನಾದಲ್ಲಿ ಒಂದು ವರ್ಷಕ್ಕೆ ಒಂದು ಪ್ರಾಣಿಯ ಚಿಹ್ನೆ. ಅಂದರೆ 12 ವರ್ಷಕ್ಕೆ 12 ಪ್ರಾಣಿ. ಈ ಪದ್ಧತಿಯಲ್ಲಿ 2ನೇ ಚಿಹ್ನೆಯು ಎತ್ತು ಆಗುತ್ತದೆ. 2025ರಲ್ಲಿ ಎತ್ತು ರಾಶಿಯ ಭವಿಷ್ಯ ಹೇಗಿರುತ್ತೆ ಎಂದು ತಿಳಿಯೋಣ.
ವರ್ಷ ಭವಿಷ್ಯ 2025 ಚೀನಾ ಪದ್ಧತಿ: ಇಲ್ಲಿ 2025ರ ವರ್ಷ ಭವಿಷ್ಯವನ್ನು ನೀಡಲಾಗಿದೆ. ಇದು ಚೀನಾ ದೇಶದಲ್ಲಿ ಅನುಸರಿಸುವ ವಿಧಾನ. ಅಲ್ಲಿ ಹನ್ನೆರಡು ವರ್ಷಕ್ಕೆ ಒಂದು ಚಕ್ರ. ಅಂದರೆ ಪ್ರತಿ ವರ್ಷಕ್ಕೆ ಒಂದರಂತೆ ಹನ್ನೆರಡು ವರ್ಷಕ್ಕೆ ಒಂದೊಂದು ಪ್ರಾಣಿಯ ಚಿಹ್ನೆ. ಹನ್ನೆರಡು ವರ್ಷದ ನಂತರ ಅವೇ ಆರಂಭದಿಂದ ಪುನರಾವರ್ತನೆ ಆಗುತ್ತದೆ. ಹಾಗೆ ಅದು ಶುರುವಾಗುವುದು ಇಲಿಯಿಂದ. ಆ ನಂತರ ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಕುರಿ, ಕೋತಿ, ಹುಂಜ, ನಾಯಿ ಮತ್ತು ಹಂದಿ. ಹೀಗೆ ಒಂದೊಂದು ಇಸವಿಗೆ ಒಂದೊಂದು ಪ್ರಾಣಿಗಳ ಹೆಸರನ್ನು ನೀಡುತ್ತಾರೆ. ಆ ಇಡೀ ವರ್ಷ ಯಾರೇ ಹುಟ್ಟಿದರೂ ಅವರಿಗೆ ಆ ಪ್ರಾಣಿಯೇ ರಾಶಿ ಅಂದುಕೊಳ್ಳಬೇಕು. 2025ನೇ ಇಸವಿಯನ್ನು ಪ್ರತಿನಿಧಿಸುವುದು ‘ಮರದ ಹಾವು (ವುಡ್ ಸ್ನೇಕ್)‘. ಇನ್ನು ಈ ಲೇಖನದಲ್ಲಿ ಎರಡನೇ ರಾಶಿ ಅಂದರೆ ಎತ್ತು ರಾಶಿಯವರ ಭವಿಷ್ಯ 2025ರಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿಯೋಣ.
1937, 1949, 1961, 1973, 1985, 1997, 2009, 2021ನೇ ಇಸವಿಯಲ್ಲಿ ಹುಟ್ಟಿದವರು ‘ಎತ್ತು‘. ಈ ವರ್ಷ ನೀವು ಅವಕಾಶಗಳು ಹಾಗೂ ಸವಾಲುಗಳು ಎರಡನ್ನೂ ಎದುರುಗೊಳ್ಳುತ್ತೀರಿ. ಇದನ್ನು ದಾಟುವುದಕ್ಕೆ ಹಾಗೂ ಬಳಸಿಕೊಳ್ಳುವುದಕ್ಕೆ ಕಠಿಣವಾದ ಪರಿಶ್ರಮ ಬೇಕು ಹಾಗೂ ಸಂಯಮ ಇರಲೇಬೇಕು. ಮೂಲತಃ ನಿಮ್ಮ ಗುಣವೇ ಪರಿಶ್ರಮ ಪಡುವಂಥದ್ದು, ಪ್ರಾಮಾಣಿಕತೆ ಹಾಗೂ ಗಟ್ಟಿಯಾದ ಸಂಕಲ್ಪಶಕ್ತಿ ನಿಮ್ಮಲ್ಲಿರುತ್ತದೆ. ಆ ಗುಣಗಳನ್ನು ಉಳಿಸಿಕೊಳ್ಳಿ. ನಿಮ್ಮ ಉದ್ಯೋಗ ಸ್ಥಳದಲ್ಲಿ ಕೆಲವು ಸವಾಲುಗಳು ಉದ್ಭವಿಸುತ್ತವೆ. ನಿಮಗೆ ಮುಖ್ಯವಾಗಿ ತಿಳಿಯಬೇಕಾದದ್ದು ಏನೆಂದರೆ ನೀವು ತಾರ್ಕಿಕವಾಗಿ ಆಲೋಚನೆ ಮಾಡಬೇಕು ಎಂಬುದು. ಒಬ್ಬ ವ್ಯಕ್ತಿಯನ್ನು ನಿಮ್ಮ ಮಾಹಿತಿಯ ಮೂಲವನ್ನಾಗಿ ಮಾಡಿಕೊಳ್ಳಿ. ಇವೆಲ್ಲಕ್ಕಿಂತ ಹೆಚ್ಚಾಗಿ ನಿಮ್ಮದೇ ಸಾಮರ್ಥ್ಯವು ಯಶಸ್ಸನ್ನು ಖಾತ್ರಿ ಪಡಿಸುತ್ತದೆ. ಆದ್ದರಿಂದ ಅದನ್ನು ನೀವು ಬಲವಾಗಿ ನಂಬಬೇಕು.
ಉದ್ಯೋಗ-ವೃತ್ತಿ ಭವಿಷ್ಯ
ಅವಕಾಶಗಳು ಬಾಗಿಲನ್ನು ತೆರೆಯುತ್ತವೆ. ಇದರ ಅರ್ಥ ಹಲವು ಅವಕಾಶಗಳು ನಿಮ್ಮನ್ನು ಹುಡುಕಿ ಬರುತ್ತವೆ. ಯಾರು ಉದ್ಯೋಗ ಬದಲಾವಣೆ ಮಾಡಬೇಕು ಎಂದು ನಿಶ್ಚಲವಾದ ಮನಸ್ಸು ಹೊಂದಿದ್ದೀರೋ ಅಂಥವರಿಗೆ ಇದು ಉತ್ತಮ ವರ್ಷವಾಗಿರುತ್ತದೆ. ವರ್ಷದ ಮೊದಲ ಮೂರು ತಿಂಗಳಲ್ಲಿ ಉದ್ಯೋಗ ಬದಲಿಸುವುದಕ್ಕೆ ಗಟ್ಟಿಯಾಗಿಯೇ ಪ್ರಯತ್ನಿಸಿ. ನಿಮ್ಮ ಬಲ ಹಾಗೂ ಆ ನಿರ್ದಿಷ್ಟ ಕೆಲಸಕ್ಕೆ ನೀವು ಸಿದ್ಧರಿದ್ದೀರಿ ಎಂಬುದು ಉದ್ಯೋಗದಾತರಿಗೆ ನಂಬಿಕೆ ಮೂಡುವಂತೆ ನಿಮ್ಮ ಧ್ವನಿ ಹಾಗೂ ಬಾಡಿ ಲಾಂಗ್ವೇಜ್ ಇರಲಿ. ನಿಮ್ಮಲ್ಲಿ ಹಲವರಿಗೆ ಬಡ್ತಿ ಸಿಗುವ ಅವಕಾಶಗಳಿವೆ. ಏನೆಂದರೆ ಕೆಲವು ಕೆಲಸಗಳನ್ನು ನೀವಾಗಿಯೇ ಮುನ್ನಡೆಸುವುದಕ್ಕೆ ಮುಂದೆ ನುಗ್ಗಿ ಹಾಗೂ ನಿಮ್ಮ ನಾಯಕತ್ವದ ಗುಣಗಳು ಸಂಬಂಧಪಟ್ಟವರಿಗೂ ತಿಳಿದುಬರಲಿ. ಹಾಗಂತ ಉದ್ಯೋಗ- ವೃತ್ತಿಯಲ್ಲಿ ಯಶಸ್ಸಿನ ಏಣಿ ಏರಬೇಕು ಅಂದಾಗ ಬರೀ ಕಠಿಣವಾಗಿ ಪರಿಶ್ರಮ ಹಾಕಿದರಷ್ಟೇ ಸಾಲದು, ಚಾಣಾಕ್ಷತೆಯನ್ನು ಬಳಸಿ, ಒಂದು ಮುಷ್ಟಿ ಹೆಚ್ಚಿನ ಅಚ್ಚುಕಟ್ಟುತನ- ಒಪ್ಪ- ಓರಣ ನಿಮ್ಮ ಕೆಲಸದಲ್ಲಿ ಕಾಣಿಸಿಕೊಳ್ಳುವಂತೆ ನೋಡಿಕೊಳ್ಳಿ.
ಈ ವರ್ಷ ಕೆಲವು ಆತಂಕದ ಕ್ಷಣಗಳನ್ನು ಸಹ ಎದುರಿಸುತ್ತೀರಿ. ಅಂಥವುಗಳ ಬಗ್ಗೆ ಮೈ ಮೇಲೆ ಎಚ್ಚರಿಕೆ ಇರಲಿ. ಸಾಮಾನ್ಯವಾಗಿ ಎತ್ತು ಚಿಹ್ನೆಯವರು ಸಂಕೋಚ- ನಾಚಿಕೆ ಸ್ವಭಾವದವರು. ಆದರೆ ಈ ವರ್ಷ ಸಾಮಾನ್ಯಕ್ಕಿಂತ ಹೆಚ್ಚಾಗಿಯೇ ಆಕ್ರಮಣಕಾರಿಯಾಗಿ ಇರಬೇಕಾಗುತ್ತದೆ, ಏಕೆಂದರೆ ನಿಮ್ಮ ಮೇಲೆ ಮೇಲಾಧಿಕಾರಿಗಳ ಲಕ್ಷ್ಯ ಬರಬೇಕು. ನಿಮ್ಮದೊಂದು ಸಮಸ್ಯೆ ಏನೆಂದರೆ, ಎಲ್ಲ ಕೆಲಸವನ್ನು ಮೈ ಮೇಲೆ ಎಳೆದುಕೊಂಡು, ಗಡಿಯಾರ ನೋಡದೆ ಅವುಗಳನ್ನು ಪೂರ್ಣಗೊಳಿಸುತ್ತಾ ಸಾಗುತ್ತೀರಿ. ಈ ರೀತಿ ಒಬ್ಬರೇ ಸಿಕ್ಕಾಪಟ್ಟೆ ಕೆಲಸಗಳನ್ನು ತಲೆ ಮೇಲೆ ಹೊತ್ತುಕೊಳ್ಳುವುದನ್ನು ಕಡಿಮೆ ಮಾಡಿಕೊಳ್ಳಿ. ಅದೇ ರೀತಿ ಒಂದೇ ಕೆಲಸಕ್ಕೆ ಬಹಳ ಸಮಯ ಹೋಗಿಬಿಡ್ತಲ್ಲ ಅಂತ ಆ ನಂತರ ಚಿಂತೆ ಮಾಡುವಂಥ ಸನ್ನಿವೇಶ ತಂದುಕೊಳ್ಳಬೇಡಿ.
ಹಣಕಾಸು ವಿಚಾರ
ನೀವು ಯಾವ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತೀರಿ, ಎಷ್ಟು ಸಮಯ ಸಿಗುತ್ತದೆ, ಅದರಲ್ಲಿ ಹೂಡಿಕೆ ವಿಚಾರಗಳಿಗಾಗಿ ಎಷ್ಟು ಸಮಯವನ್ನು ಮೀಸಲಿಡುವುದಕ್ಕೆ ಸಾಧ್ಯವಾಗುತ್ತದೆ ಎಂಬ ಬಗ್ಗೆ ಸರಿಯಾದ ಆಲೋಚನೆ- ಯೋಜನೆ ಇರಲಿ. ಸಾಧ್ಯವಾದಷ್ಟು ಹೆಚ್ಚು ವಿಶ್ವಾಸಾರ್ಹವಾದ ಹಾಗೂ ಸ್ಥಿರವಾದ ಆದಾಯ ತರುವಂಥದ್ದರ ಮೇಲೆಯೇ ಹೂಡಿಕೆಯನ್ನು ಮಾಡಿ. ದೊಡ್ಡ ಮೊತ್ತದ ಲಾಭ ಮಾಡಿಬಿಡಬೇಕು ಎಂಬ ಹಠಕ್ಕೆ ಬಿದ್ದು, ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳಬೇಡಿ. ನಿಮ್ಮದೊಂದು ಹೂಡಿಕೆ ಪೋರ್ಟ್ ಫೋಲಿಯೋ ಮಾಡಿಕೊಂಡು, ಅದನ್ನು ನಿಯಮಿತವಾಗಿ ಪರಿಶೀಲನೆ ಮಾಡಿಕೊಳ್ಳಿ. ಇದು ಮೌಲ್ಯಮಾಪನ. ಅಂದರೆ ಎಷ್ಟು ರಿಸ್ಕ್ ತೆಗೆದುಕೊಂಡಿದ್ದೀರಿ, ಯಾವುದು ಸುರಕ್ಷಿತ ಹೀಗೆ. ಅಗತ್ಯ ಕಂಡುಬಂತು ಅಂದರೆ, ಮಾರ್ಕೆಟ್ ಪರಿಸ್ಥಿತಿ, ನೀವು ಇರಿಸಿಕೊಂಡಿರುವ ಗುರಿಗಳು ಹಾಗೂ ಟ್ರೆಂಡ್ ಹೇಗಿದೆ ಅಂತ ನೋಡಿಕೊಂಡು ಬದಲಾವಣೆಗಳನ್ನು ಮಾಡಿಕೊಳ್ಳುವುದು ಒಳ್ಳೆಯದು.
ಇನ್ನು ನಿಮ್ಮಲ್ಲಿ ಯಾರು ಉದ್ಯಮ- ವ್ಯವಹಾರ ಅಂತ ಮಾಡಬೇಕು ಅಂತಿದ್ದೀರಿ, ಅಂಥವರು ಆನ್‌ಲೈನ್ ಕಲಿಕೆ ಹಾಗೂ ಶೈಕ್ಷಣಿಕ ತಂತ್ರಜ್ಞಾನ ಇಂಥದ್ದರ ಮೇಲೆ ಆಸಕ್ತಿ ಇದ್ದಲ್ಲಿ ಅವುಗಳನ್ನು ಪರಿಗಣಿಸಬಹುದು. ಈ ಪ್ಲಾಟ್ ಫಾರ್ಮ್‌ಗಳ ಜನಪ್ರಿಯತೆ ಹೆಚ್ಚಾಗುತ್ತಾ ಇದೆ. ಇಂಥ ಸನ್ನಿವೇಶದಲ್ಲಿ ನೀವು ಮಾಡುವ ಹೂಡಿಕೆಗೆ ಒಳ್ಳೆ ಲಾಭವನ್ನು ನಿರೀಕ್ಷಿಸಬಹುದು. ಇನ್ನೂ ಒಂದು ಮುಖ್ಯ ವಿಚಾರ ಏನೆಂದರೆ, ಏರಿಳಿತದ ಆತಂಕ ಕಾಣುವ ಸನ್ನಿವೇಶದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದನ್ನು ಸಹ ಗಂಭೀರವಾಗಿ ಪರಿಗಣಿಸಬಹುದು. ಅಂದರೆ ಚಿನ್ನದ ನಾಣ್ಯ, ಗಟ್ಟಿ ಇಂಥದ್ದರ ಮೇಲೆ ಹಣ ಹೂಡಿಕೆ ಮಾಡಬೇಕು ಅಂತೇನಿಲ್ಲ. ಗೋಲ್ಡ್ ಇಟಿಎಫ್, ಸವರನ್ ಗೋಲ್ಡ್ ಬಾಂಡ್ ಈ ರೀತಿಯಾದುದರ ಮೇಲೆ ಕೂಡ ಹಣ ಹೂಡಿಕೆ ಮಾಡಬಹುದು. ಒಟ್ಟಿನಲ್ಲಿ ನಿಮ್ಮ ಹೂಡಿಕೆ ಪೋರ್ಟ್ ಫೋಲಿಯೋದಲ್ಲಿ ಚಿನ್ನವೂ ಒಂದಾಗಿರಲಿ.
ಪ್ರೀತಿ-ಪ್ರೇಮ, ಮದುವೆ ಇತ್ಯಾದಿ
ವಿವಾಹ ವಯಸ್ಕರಿಗೆ ಮದುವೆ ಆಗುವ ಸಾಧ್ಯತೆ ಈ ವರ್ಷ ಹೆಚ್ಚಾಗಿದೆ. ಅದರಲ್ಲೂ ನಾನಾ ಸಾಮಾಜಿಕ ಸಮಾರಂಭ, ಕಾರ್ಯಕ್ರಮಗಳಲ್ಲಿ, ಯಾವುದೋ ಸಮಸ್ಯೆಗೆ ಸಿಲುಕಿಕೊಂಡಿದ್ದಾಗ ಅಚಾನಕ್ ಆಗಿ ಅಥವಾ ನಿಮ್ಮದೇ ಹೊಸ ಹವ್ಯಾಸ ಅಥವಾ ಅಭ್ಯಾಸದ ವೇಳೆಯಲ್ಲಿ ಸಂಗಾತಿಯನ್ನು ಕಂಡುಕೊಳ್ಳಲಿದ್ದೀರಿ. ಪಾರ್ಟಿಗಳು- ಗೆಟ್ ಟು ಗೆದರ್‌ಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳಿ, ಸಂಕೋಚ- ಮೈ ಚಳಿ ಬಿಡುವುದು ತುಂಬ ಮುಖ್ಯ. ಇನ್ನು ನಿಮಗೆ ಆಸಕ್ತಿ ಮೂಡಿಸುವಂಥ ಕ್ಲಬ್‌ಗಳು, ಗುಂಪು ಚಟುವಟಿಕೆಗಳು ಅಥವಾ ಕ್ಲಾಸ್‌ಗಳಿಗೆ ಸೇರುವ ಮನಸ್ಸಾದರೆ ಸೇರಿಕೊಳ್ಳಿ. ಅಂಥ ಕಡೆಗಳಲ್ಲಿಯೇ ನಿಮ್ಮ ಮನಸ್ಸಿಗೆ ಇಷ್ಟವಾಗುವಂಥ ಸಂಗಾತಿ ಸಿಗಬಹುದು.
ಈಗಾಗಲೇ ಪ್ರೀತಿ-ಪ್ರೇಮದಲ್ಲಿ ಇದ್ದೀರಿ ಅಂತಾದರೆ ತಾಳ್ಮೆ-ಸಂಯಮದಿಂದ ವರ್ತಿಸಿ. ಗೆಳೆಯ ಅಥವಾ ಗೆಳತಿಯಿಂದ ಏನಾದರೂ ಸಣ್ಣ-ಪುಟ್ಟ ತಪ್ಪುಗಳಾದಲ್ಲಿ ಅದನ್ನು ದೊಡ್ಡದು ಮಾಡಿಕೊಂಡು ಮಾತು ಬಿಡೋದು, ಫೋನ್‌ಗೆ- ಭೇಟಿಗೆ ಸಿಗದೆ ಓಡಾಡುವಂಥದ್ದು ಇದೆಲ್ಲ ಮಾಡಬೇಡಿ. ನಿಧಾನದ ನಿರ್ಧಾರಗಳು ಪ್ರೀತಿ- ಪ್ರೇಮದ ಹೊಸತರಲ್ಲಿ ನಡೆಯುತ್ತದೆ. ಆದರೆ ಪ್ರೀತಿ ಚಿಗುರಿ ಅದನ್ನು ಮುಂದಿನ ಹಂತಕ್ಕೆ ಒಯ್ಯಬೇಕು ಅಂತಾದಾಗ ಸೂಕ್ತವಾದ ತೀರ್ಮಾನಗಳನ್ನು ತೆಗೆದುಕೊಳ್ಳಲೇಬೇಕು. ಈ ವರ್ಷವಿಡೀ ಕಮ್ಯುನಿಕೇಷನ್ ಸರಿಯಾಗಿರಲಿ, ನಂಬಿಕೆಯನ್ನು ಇಡಿ. ಪಾರದರ್ಶಕವಾಗಿ ನಡೆದುಕೊಳ್ಳುವ ಮೂಲಕ ಹಾಗೂ ಪರಸ್ಪರ ಮಾತನಾಡುವ ಮೂಲಕ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕೆ ಪ್ರಾಮುಖ್ಯ ನೀಡಿ.
ನಿಮ್ಮ ಬಿಜಿನೆಸ್ ಶುರು ಮಾಡುವ ಯೋಜನೆಗಳು, ವಿದೇಶಕ್ಕೆ ತೆರಳಬೇಕು ಅಂದುಕೊಂಡಿದ್ದಂಥ ವಿಚಾರಗಳು, ಮನೆ ಅಥವಾ ಫ್ಲ್ಯಾಟ್ ಖರೀದಿ ಮಾಡಬೇಕು ಹೀಗೆ ನೀವು ಮತ್ತು ನಿಮ್ಮ ಸಂಗಾತಿ ಇಬ್ಬರಿಗೂ ಸಮಾನವಾಗಿ ಇರುವಂಥ ಗುರಿಯನ್ನು ಈಡೇರಿಸಿಕೊಳ್ಳುವುದಕ್ಕೆ ಉತ್ತಮ ಸಮಯವಿದು. ಉದ್ಯಮ- ವ್ಯವಹಾರದಲ್ಲಿ ಪಾರ್ಟನರ್‌ಶಿಪ್ ವ್ಯವಹಾರ ಮಾಡುತ್ತಿರುವವರಿಗೆ ಪರಸ್ಪರ ನಂಬಿಕೆ- ವಿಶ್ವಾಸ ಹೆಚ್ಚಾಗಲಿದೆ.
ಆರೋಗ್ಯ ಸ್ಥಿತಿ ಹೀಗಿರುತ್ತೆ
ಈ ವರ್ಷ ಕುತ್ತಿಗೆ ಹಾಗೂ ಭುಜದ ನೋವಿನ ಸಮಸ್ಯೆ ಬಹುವಾಗಿ ಕಾಡಲಿವೆ. ಯಾರು ಹೆಚ್ಚು ಸಮಯ ಒಂದೇ ಕಡೆ ಕೂತು ಕೆಲಸ ಮಾಡುತ್ತಾರೋ ಅಥವಾ ಒಂದೇ ಥರನಾದ ಫ್ಯಾಕ್ಟರಿಗಳಲ್ಲಿ ಮಾಡುವಂಥ ಕೆಲಸಗಳಲ್ಲಿ ತೊಡಗಿಕೊಳ್ಳುವವರಿಗೆ ಸಮಸ್ಯೆ ಹೆಚ್ಚು ಕಂಡುಬರುತ್ತದೆ. ಕೆಲಸದ ಮಧ್ಯೆ ಸ್ವಲ್ಪವಾದರೂ ಬಿಡುವು ತೆಗೆದುಕೊಂಡು ಓಡಾಟ, ಸಣ್ಣಪುಟ್ಟ ವ್ಯಾಯಾಮಗಳನ್ನು ರೂಢಿಸಿಕೊಳ್ಳಿ. ಇನ್ನು ರಕ್ತದೊತ್ತಡದ ಬಗ್ಗೆ ಲಕ್ಷ್ಯ ನೀಡಬೇಕು. ಉದ್ಯೋಗ- ವೃತ್ತಿಯ ಒತ್ತಡಗಳು ರಕ್ತದೊತ್ತಡ ಹೆಚ್ಚಿಸಬಹುದು. ಆಹಾರ ಪಥ್ಯ ಅಂತ ನೋಡುವುದಾದರೆ, ಪೊಟ್ಯಾಷಿಯಂ ಪ್ರಮಾಣ ಹೆಚ್ಚಿರುವ ಹಾಗೂ ಸೋಡಿಯಂ ಕಡಿಮೆ ಇರುವ ಆಹಾರಗಳ ಸೇವನೆಗೆ ಆದ್ಯತೆ ನೀಡಿ. ಧೂಮಪಾನ ಹಾಗೂ ಮದ್ಯಪಾನದ ಅಭ್ಯಾಸ ಇರುವವರು ಸಂಪೂರ್ಣ ಕಡಿಮೆ ಮಾಡಿ ಅಥವಾ ಸಾಧ್ಯವಾದಲ್ಲಿ ಅದನ್ನು ನಿಲ್ಲಿಸಿಬಿಡಿ. ಏಪ್ರಿಲ್ ಹಾಗೂ ಆಗಸ್ಟ್ ತಿಂಗಳಲ್ಲಿ ಆರೋಗ್ಯ ವಿಚಾರದಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಲರ್ಜಿಯಂಥ ಅಸ್ವಸ್ಥ್ಯ ಇರುವವರಿಗೆ ಪರಿಸ್ಥಿತಿ ವಿಪರೀತ ಹದಗೆಡಬಹುದು. ನೀವು ವಾಸಿಸುವ ಸ್ಥಳದ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಿ. ಸಣ್ಣ- ಪುಟ್ಟ ಅನಾರೋಗ್ಯ ಎಂದು ಸ್ವಯಂವೈದ್ಯ ಮಾಡಿಕೊಳ್ಳುವ ಬದಲಿಗೆ ವೈದ್ಯರ ಬಳಿ ಸೂಕ್ತ ಔಷಧೋಪಚಾರ ಪಡೆದುಕೊಳ್ಳಿ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)