ಚೀನಾ ಪದ್ಧತಿ ವರ್ಷ ಭವಿಷ್ಯ 2025: ಇಲಿ ರಾಶಿಯವರಿಗೆ ಹಲವು ಶುಭಫಲ, ಕೆಲಸದಲ್ಲಿ ಬದಲಾವಣೆ, ಮದುವೆಯಾಗುವ ಯೋಗ
ಜ್ಯೋತಿಷ್ಯದ ನಂಬಿಕೆ ಒಂದೊಂದು ದೇಶದಲ್ಲಿ ಒಂದೊಂದು ಥರ. ಇಂದಿನ ವರ್ಷ ಭವಿಷ್ಯಕ್ಕೆ ಚೀನಾದಲ್ಲಿ ಅನುಸರಿಸುವ ಜ್ಯೋತಿಷ್ಯ ನಂಬಿಕೆ ಆಧರಿಸಿ ವಿವರ ನೀಡಲಾಗಿದೆ. ಚೀನಾದಲ್ಲಿ ಒಂದು ವರ್ಷಕ್ಕೆ ಒಂದು ಪ್ರಾಣಿಯ ಚಿಹ್ನೆ. ಅಂದರೆ 12 ವರ್ಷಕ್ಕೆ 12 ಪ್ರಾಣಿ. ಈ ಪದ್ಧತಿಯಲ್ಲಿ 1ನೇ ಚಿಹ್ನೆಯು ಇಲಿ ಆಗುತ್ತದೆ. 2025ರಲ್ಲಿ ಇಲಿ ರಾಶಿಯ ಭವಿಷ್ಯ ಹೇಗಿರುತ್ತೆ ಎಂದು ತಿಳಿಯೋಣ.
ವರ್ಷ ಭವಿಷ್ಯ 2025 ಚೀನಾ ಪದ್ಧತಿ: ಇಲ್ಲಿ ಚೀನಾ ಪದ್ಧತಿಯ 2025ರ ವರ್ಷಭವಿಷ್ಯವನ್ನು ನೀಡಲಾಗಿದೆ. ಇದು ಸ್ವಲ್ಪ ವಿಭಿನ್ನ ಹಾಗೂ ವಿಶೇಷ. ಏಕೆಂದರೆ ಜ್ಯೋತಿಷ್ಯದ ನಂಬಿಕೆ ಒಂದೊಂದು ದೇಶದಲ್ಲಿ ಒಂದೊಂದು ಥರ ಇದೆ. ಈಗ ನಿಮಗೆ ಹೇಳಲು ಹೊರಟಿರುವುದು ಚೀನಾ ದೇಶದಲ್ಲಿ ಅನುಸರಿಸುವ ವಿಧಾನ. ಅಲ್ಲಿ ಹನ್ನೆರಡು ವರ್ಷಕ್ಕೆ ಒಂದು ಚಕ್ರ. ಅಂದರೆ ಪ್ರತಿ ವರ್ಷಕ್ಕೆ ಒಂದರಂತೆ ಹನ್ನೆರಡು ವರ್ಷಕ್ಕೆ ಒಂದೊಂದು ಪ್ರಾಣಿಯ ಚಿಹ್ನೆ. ಹನ್ನೆರಡು ವರ್ಷದ ನಂತರ ಮೊದಲಿಂದ ಪುನರಾವರ್ತನೆ ಆಗುತ್ತಾ ಇರುತ್ತದೆ. ಹಾಗೆ ಅದು ಶುರುವಾಗುವುದು ಇಲಿಯಿಂದ. ಆ ನಂತರ ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಕುರಿ, ಕೋತಿ, ಹುಂಜ, ನಾಯಿ ಮತ್ತು ಹಂದಿ. ಹೀಗೆ ಒಂದೊಂದು ಇಸವಿಗೆ ಒಂದೊಂದು ಪ್ರಾಣಿಗಳ ಹೆಸರನ್ನು ನೀಡುತ್ತಾರೆ. ಆ ಇಡೀ ವರ್ಷ ಯಾರೇ ಹುಟ್ಟಿದರೂ ಅವರಿಗೆ ಆ ಪ್ರಾಣಿಯೇ ರಾಶಿ ಅಂದುಕೊಳ್ಳಬೇಕು. ಈಗ ಭಾರತೀಯ ಪದ್ಧತಿಯಲ್ಲಿ ಮೇಷದಿಂದ ಮೀನ ರಾಶಿ ಹೇಗಿದೆಯೋ ಹಾಗೆಯೇ ಈ ಹನ್ನೆರಡು ಪ್ರಾಣಿಗಳು ಆಯಾ ಇಸವಿಯಲ್ಲಿ ಹುಟ್ಟಿದವರನ್ನು ಪ್ರತಿನಿಧಿಸುತ್ತವೆ. 2025ನೇ ಇಸವಿಯನ್ನು ಪ್ರತಿನಿಧಿಸುವುದು ‘ಮರದ ಹಾವು‘ (ವುಡ್ ಸ್ನೇಕ್). ಈ ಲೇಖನದಲ್ಲಿ ಯಾರ್ಯಾರು ಇಲಿಯನ್ನು ಪ್ರತಿನಿಧಿಸುತ್ತಾರೋ ಅವರ ವರ್ಷ ಭವಿಷ್ಯ ಹೀಗಿದೆ.
1936, 1948, 1960, 1972, 1984, 1996, 2008, 2020ನೇ ಇಸವಿಯಲ್ಲಿ ಹುಟ್ಟಿದವರು ‘ಇಲಿ‘.
ಈ ವರ್ಷ ನೀವು ಎಷ್ಟು ಚೆನ್ನಾಗಿ ಹೊಂದಿಕೆ ಆಗುತ್ತೀರಿ ಎಂಬುದು ಬಹಳ ಮುಖ್ಯವಾಗುತ್ತದೆ. ಈ ವರ್ಷದ ‘ಮರದ ಹಾವು‘ ಕ್ರಿಯಾತ್ಮಕ ಮತ್ತು ಅನ್ವೇಷಣೆಯನ್ನು ಸಂಕೇತಿಸುತ್ತದೆ. ತುಂಬ ಚತುರ ಹಾಗೂ ಚಾಣಾಕ್ಷ ಇಲಿಗಳಿಗೆ ಪ್ರೋತ್ಸಾಹ ದೊರೆಯಲಿದೆ. ಈ ವರ್ಷ ನಿಮ್ಮ ಕೌಶಲ ಹಾಗೂ ಆಲೋಚನೆಯ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಪ್ರದರ್ಶಿಸುವ ಅವಕಾಶಗಳು ತೆರೆದುಕೊಳ್ಳಲಿವೆ. ಇತರರು ನಿಮಗೆ ಏನು ಹೇಳುತ್ತಾರೆ, ಸಲಹೆ ನೀಡುತ್ತಾರೆ ಎಂಬುದಕ್ಕೆ ಕಿವಿಗಳನ್ನು ತೆರೆದಿಟ್ಟುಕೊಳ್ಳಿ. ನಿಮ್ಮ ಕೆಲಸ-ಕಾರ್ಯ-ಯೋಜನೆಗಳಲ್ಲಿ ಏನೇ ಬದಲಾವಣೆ ಮಾಡಿಕೊಳ್ಳಬೇಕು ಎಂದೆನಿಸಿದಲ್ಲಿ ಮಾಡಿಕೊಳ್ಳಿ. ಹೊಸ ಪ್ರಾಜೆಕ್ಟ್‌ಗಳನ್ನು ಆರಂಭಿಸುವುದಕ್ಕೆ ಬಹಳ ಉತ್ತಮವಾದ ವರ್ಷವಿದು.
ಉದ್ಯೋಗ- ವೃತ್ತಿ ಭವಿಷ್ಯ
ಉದ್ಯೋಗ- ವೃತ್ತಿಯಲ್ಲಿ ಯಶಸ್ಸು ಎದುರು ನೋಡಬಹುದು. ನಿಮ್ಮ ಪರಿಶ್ರಮ ಹಾಗೂ ಬದ್ಧತೆಗೆ ಒಳ್ಳೆ ಫಲಿತಾಂಶ ಸಿಗುತ್ತದೆ. ಒಂದು ವೇಳೆ ಬಡ್ತಿಯ ನಿರೀಕ್ಷೆಯಲ್ಲಿದ್ದರೆ ನೀವಾಗಿಯೇ ಕೆಲವು ಜವಾಬ್ದಾರಿ- ಕೆಲಸಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ನಿಮ್ಮಲ್ಲಿ ಕೆಲವರು ಹೊಸದಾಗಿ ಉದ್ಯೋಗವನ್ನು ಆರಂಭಿಸಬಹುದು ಅಥವಾ ಉದ್ಯೋಗ ಬದಲಾವಣೆ ಮಾಡಬೇಕು ಅಂದುಕೊಂಡಿದ್ದಲ್ಲಿ ಅದು ಕೂಡ ಸಾಧ್ಯವಾಗಲಿದೆ. ನಿಮ್ಮ ನೆಟ್‌ವರ್ಕ್ ಅಂದರೆ ಸ್ನೇಹಿತರು, ಸಹೋದ್ಯೋಗಿಗಳು ಅಥವಾ ಸಂಬಂಧಿಗಳ ನೆಟ್‌ವರ್ಕ್ ಅನ್ನು ಸರಿಯಾಗಿ ನಿರ್ವಹಿಸಿ. ಏಕೆಂದರೆ ಅವಕಾಶಗಳು ಅಂಥವರ ಮೂಲಕವೇ ನಿಮಗೆ ಗೊತ್ತಾಗುತ್ತದೆ. ಕಾಂಟ್ಯಾಕ್ಟ್‌ಗಳನ್ನು ಯಾವುದೇ ಕಾರಣಕ್ಕೆ ಕಳಚಿಕೊಳ್ಳುವುದಕ್ಕೆ ಹೋಗಬೇಡಿ. ನಿರಂತರವಾಗಿ ಬದಲಾವಣೆಗಳನ್ನು ಕಾಣುವ, ಕಲಿಯುತ್ತಲೇ ಇರಬೇಕಾದ ಹಾಗೂ ಹೊಸದಕ್ಕೆ ಹೊಂದಿಕೊಳ್ಳಬೇಕಾದ ಕ್ಷೇತ್ರಗಳತ್ತ ಲಕ್ಷ್ಯ ನೀಡಿ. ಅಂದರೆ ಟೆಕ್ನಾಲಜಿ, ಕ್ರಿಯೇಟಿವ್ ಕಲೆಗಳು ಅಥವಾ ರಿನೀವಬಲ್ ಎನರ್ಜಿ ಇಂಥದ್ದನ್ನು ಉದಾಹರಣೆಯಾಗಿ ಹೇಳಬಹುದು.
ಹಾಗಂತ ನಿಮಗೆ ಸವಾಲುಗಳೇ ಇರುವುದಿಲ್ಲ ಅಂತಲ್ಲ. ಈ ವರ್ಷ ಉದ್ಯೋಗ ಸ್ಥಳದಲ್ಲಿ ಭಾರೀ ಸ್ಪರ್ಧೆ ಇರುತ್ತದೆ. ನಿಮಗೆ ಇದು ಯಾಕೋ ಜಾಸ್ತಿ ಆಯಿತು ಅನ್ನೋ ಥರವೇ ಸ್ಪರ್ಧೆ ಇರುತ್ತದೆ. ಭಯ- ಆತಂಕವನ್ನೂ ಮೂಡಿಸುತ್ತದೆ. ಇದರಿಂದ ಹೊರಗೆ ಬರಬೇಕು ಅಂತಾದರೆ ಏನಾದರೂ ವಿಶೇಷವಾದದ್ದನ್ನು ಕಲಿಯಿರಿ, ರೂಢಿಸಿಕೊಳ್ಳಿ ಮತ್ತು ಅದೇ ವೇಳೆ ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳು, ಮೇಲಧಿಕಾರಿಗಳು ಹಾಗೂ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಜತೆಗೆ ಉತ್ತಮ ಸ್ನೇಹ- ಬಾಂಧವ್ಯವನ್ನು ಇರಿಸಿಕೊಳ್ಳಿ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ, ನಿಮ್ಮಲ್ಲಿ ಕೆಲವರು ಕೆಲಸವನ್ನು ಕಳೆದುಕೊಳ್ಳಬಹುದು. ಇದರಿಂದ ಆರ್ಥಿಕವಾಗಿ ಒತ್ತಡಕ್ಕೆ ಸಿಕ್ಕಿ ಹಾಕಿಕೊಳ್ತೀರಾ. ಹೀಗೆ ಕೆಲಸ ಕಳೆದುಕೊಳ್ಳಬಾರದು ಅಂತಾದರೆ ನೀವು ಯಾವ ಕಾರ್ಯಕ್ಷೇತ್ರದಲ್ಲಿ ಇದ್ದೀರೋ ಅಲ್ಲಿಗೆ ಅಗತ್ಯ ಇರುವ ಆಯಾ ಸಮಯದ ಹಾಗೂ ಆಯಾ ಕಾಲಕ್ಕೆ ಬೇಕಾದಂತಹ ಕೌಶಲಗಳನ್ನು ಕಲಿಯಿರಿ. ಒಟ್ಟಿನಲ್ಲಿ ಹೇಳಬೇಕು ಅಂದರೆ, ಟ್ರೆಂಡಿ ಆಗಿರಿ. ಎಂಥದ್ದೇ ಕಷ್ಟದ ಸನ್ನಿವೇಶ ಬಂದುಬಿಡಬಹುದು ಎಂಬ ಮುಂಜಾಗ್ರತೆಯಲ್ಲೇ ಆದಾಯವನ್ನು ತಂದುಕೊಳ್ಳುವುದಕ್ಕೆ ಬೇಕಾದ ಬೇರೆ ಕೌಶಲಗಳನ್ನು ಕಲಿತುಕೊಳ್ಳಿ ಮತ್ತು ಬೇರೆ-ಬೇರೆ ಆದಾಯದ ಮಾರ್ಗಗಳನ್ನು ಹುಡುಕಿಕೊಳ್ಳಿ.
ಹಣಕಾಸು ವಿಚಾರ
ಈ ವರ್ಷ ಹಣಕಾಸಿನ ವಿಚಾರದಲ್ಲಿ ಎಷ್ಟು ಬುದ್ಧಿವಂತಿಕೆಯಿಂದ ತೀರ್ಮಾನ ಮಾಡುತ್ತೀರೋ ಅಷ್ಟು ನಿಮಗೆ ನೀವೇ ಸಹಾಯ ಮಾಡಿಕೊಂಡಂತೆ ಆಗುತ್ತದೆ. ಅದೇ ವಿವಿಧ ಅವಕಾಶಗಳನ್ನು ತರುತ್ತದೆ. ನೀವು ಮಾಡುವ ಹೂಡಿಕೆ ಹಾಗೂ ಅದರಲ್ಲಿ ಅಪಾಯ ಯಾವ ಪ್ರಮಾಣದ್ದು ಎಂಬ ಬಗ್ಗೆ ಸರಿಯಾದ ಲೆಕ್ಕಾಚಾರ ಇರಲಿ. ನಷ್ಟವಾದರೆ ಒಂದು ರೂಪಾಯಿ, ಲಾಭ ಬಂದರೆ ಹದಿನೈದೋ- ಇಪ್ಪತ್ತು ಪೈಸೆ ಎಂಬಂಥ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬಾರದು ಎಂಬ ಮಾತಿನಂತೆ, ಹೂಡಿಕೆಯನ್ನು ವಿವಿಧ ಕಡೆಗಳಲ್ಲಿ ಮಾಡಿ, ನಷ್ಟದ ಅಪಾಯವನ್ನು ಕಡಿಮೆ ಮಾಡಿಕೊಳ್ಳಿ. ಈ ವರ್ಷ ನಿಮಗೆ ಸಾಧ್ಯವಾದಲ್ಲಿ ರಿಯಲ್ ಎಸ್ಟೇಟ್- ಷೇರು ಮಾರ್ಕೆಟ್ ಮೇಲೆ ಸರಿಯಾದ ಲೆಕ್ಕಾಚಾರದಲ್ಲಿ ಹೂಡಿಕೆ ಮಾಡಿ. ಷೇರುಗಳಲ್ಲಿ ಹೂಡಿಕೆ ಮಾಡುವವರು ಎಐ, ಸೈಬರ್ ಸೆಕ್ಯೂರಿಟಿ, ಬಯೋಟೆಕ್ನಾಲಜಿ ಕಂಪನಿಗಳಲ್ಲಿ ಹಾಗೂ ಇದೇ ಕ್ಷೇತ್ರದಲ್ಲಿನ ಸ್ಟಾರ್ಟ್ ಅಪ್‌ಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ರಿಯಲ್ ಎಸ್ಟೇಟ್‌ನಲ್ಲಾದರೆ ಈಗಿನ್ನೂ ಬೆಳವಣಿಗೆ ಆರಂಭವಾಗಿದೆ ಎಂಬಂಥ ಕಡೆಗಳಲ್ಲಿ ಗಟ್ಟಿಯಾದ ಇನ್ವೆಸ್ಟ್‌ಮೆಂಟ್ ಮಾಡಬಹುದು.
ಪ್ರೀತಿ-ಪ್ರೇಮ, ಮದುವೆ ಇತ್ಯಾದಿ
ಪ್ರೀತಿ- ಪ್ರೇಮದ ವಿಚಾರದಲ್ಲಿ ಅದೃಷ್ಟ ಹಾಗೂ ಬದಲಾವಣೆ ಎರಡೂ ಇರುತ್ತದೆ. ವಿವಾಹ ವಯಸ್ಕರಿಗೆ ಮದುವೆ ಆಗುವ ಅವಕಾಶಗಳಿವೆ. ಸಾಮಾಜಿಕವಾಗಿಯೂ ನಿಮಗೆ ಪ್ರಭಾವಿಗಳ ಸ್ನೇಹ-ಸಂಪರ್ಕ ದೊರೆಯಲಿದೆ. ಹೊಸ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಭಾಗೀ ಆಗುವ ವೇಳೆಯಲ್ಲಿ ನಿಮ್ಮ ಮನಸ್ಸಿಗೆ ಒಪ್ಪುವ ಸಂಗಾತಿ ದೊರೆಯುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಪ್ರೀತಿ-ಪ್ರೇಮದಲ್ಲಿ ಇದ್ದೀರಿ ಅಂತಾದರೆ ಪರಸ್ಪರ ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸೂಕ್ತ ವರ್ಷ ಇದಾಗಿರುತ್ತದೆ. ನಿಮ್ಮಲ್ಲಿ ಕೆಲವರು ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಯೋಜನೆ, ಉದ್ಯೋಗ ಅಥವಾ ಒಟ್ಟಾಗಿ ಸೇರಿ ಮಾಡಬೇಕು ಅಂದುಕೊಂಡ ವ್ಯಾಪಾರ- ವ್ಯವಹಾರ ಇವೆಲ್ಲವನ್ನೂ ಅಂತಿಮಗೊಳಿಸುತ್ತೀರಿ. ದಾಂಪತ್ಯ ಜೀವನವನ್ನು ಶುರು ಮಾಡುವ ಯೋಗ ಸಹ ಇದೆ. ಇನ್ನೂ ಕೆಲವರು ಉದ್ಯೋಗ, ಮನೆ, ಕಾರು ಇತ್ಯಾದಿ ತೆಗೆದುಕೊಂಡು ಮದುವೆ ಆಗಬೇಕು ಎಂದು ಆಲೋಚಿಸುತ್ತಿರುವವರಿಗೂ ಗುರಿ ಈಡೇರಿ, ಈ ವರ್ಷ ಮದುವೆ ಆಗಲಿದೆ. ಪ್ರೇಮಿಗಳು ಅಥವಾ ದಂಪತಿ ಮಧ್ಯೆ ಅಭಿಪ್ರಾಯ ಭೇದ-ಮನಸ್ತಾಪಗಳು ಇದ್ದಲ್ಲಿ ಅದನ್ನು ಕೂತು ಮಾತಾಡಿ ಬಗೆಹರಿಸಿಕೊಳ್ಳಬಹುದು.
ಆರೋಗ್ಯ
ಈ ವರ್ಷ ಉದ್ಯೋಗ ಹಾಗೂ ವೈಯಕ್ತಿಕ ಬದುಕಿನ ಮಧ್ಯೆ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ವರ್ಷ ನಿಮ್ಮ ಉತ್ಸಾಹದ ಕಾರಣಕ್ಕೆ ಕೆಲಸವು ದೈಹಿಕ- ಮಾನಸಿಕ ಒತ್ತಡ ಆಗದಂತೆ ನೋಡಿಕೊಳ್ಳಿ. ಆಹಾರದ ಜೀರ್ಣ ಪ್ರಕ್ರಿಯೆ- ಉಸಿರಾಟಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಫೈಬರ್ ಅಂಶ ಹೆಚ್ಚಿರುವಂಥ ಆಹಾರ ಪದಾರ್ಥಗಳನ್ನು ಸೇವಿಸಿ, ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯಿರಿ. ಇನ್ನು ಯಾರಿಗೆ ಧೂಳು ಅಥವಾ ಗಾಳಿಗೆ ಸಂಬಂಧಿಸಿದಂತೆ ಅಲರ್ಜಿ ಈಗಾಗಲೇ ಇದೆಯೋ ಅಂಥವರು ಇನ್ನೂ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಿ. ವರ್ಷದ ಮಾರ್ಚ್, ಜುಲೈ ಹಾಗೂ ನವೆಂಬರ್ ತಿಂಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)