ಚೀನಾ ಪದ್ಧತಿ ವರ್ಷ ಭವಿಷ್ಯ 2025: ಕುದುರೆ ಗುಂಪಿಗೆ ಸೇರಿದವರಿಗೆ ಹೊಸ ವರ್ಷದಲ್ಲಿ ಉದ್ಯೋಕಾವಕಾಶ, ವ್ಯವಹಾರದಲ್ಲಿ ಲಾಭ
ಜ್ಯೋತಿಷ್ಯದ ನಂಬಿಕೆ ಒಂದೊಂದು ದೇಶದಲ್ಲಿ ಒಂದೊಂದು ಥರ. ಇಂದಿನ ವರ್ಷ ಭವಿಷ್ಯಕ್ಕೆ ಚೀನಾದಲ್ಲಿ ಅನುಸರಿಸುವ ಜ್ಯೋತಿಷ್ಯ ನಂಬಿಕೆ ಆಧರಿಸಿ ವಿವರ ನೀಡಲಾಗಿದೆ. ಚೀನಾದಲ್ಲಿ ಒಂದು ವರ್ಷಕ್ಕೆ ಒಂದು ಪ್ರಾಣಿಯ ಚಿಹ್ನೆ. ಅಂದರೆ 12 ವರ್ಷಕ್ಕೆ 12 ಪ್ರಾಣಿ. ಈ ಪದ್ಧತಿಯಲ್ಲಿ 7ನೇ ಚಿಹ್ನೆಯು ಕುದುರೆ ಆಗಿರುತ್ತದೆ. 2025ರಲ್ಲಿ ಕುದುರೆ ರಾಶಿಯವರ ಭವಿಷ್ಯ ಹೇಗಿರುತ್ತೆ ನೋಡೋಣ.
ವರ್ಷ ಭವಿಷ್ಯ 2025 ಚೀನಾ ಪದ್ಧತಿ: ಇಲ್ಲಿ ನೀಡಿರುವುದು 2025ರ ವರ್ಷ ಭವಿಷ್ಯ. ಆದರೆ ಇದು ಭಾರತದಲ್ಲಿ ಅಲ್ಲ; ಚೀನಾ ದೇಶದಲ್ಲಿ ಅನುಸರಿಸುವ ವಿಧಾನ. ಅಲ್ಲಿ ಹನ್ನೆರಡು ವರ್ಷಕ್ಕೆ ಒಂದು ಚಕ್ರ. ಅಂದರೆ ಪ್ರತಿ ವರ್ಷಕ್ಕೆ ಒಂದರಂತೆ ಹನ್ನೆರಡು ವರ್ಷಕ್ಕೆ ಒಂದೊಂದು ಪ್ರಾಣಿಯ ಚಿಹ್ನೆಯನ್ನು ಇರಿಸಿಕೊಂಡಿದ್ದಾರೆ. ಹನ್ನೆರಡು ವರ್ಷದ ನಂತರ ಅವೇ ಆರಂಭದಿಂದ ಪುನರಾವರ್ತನೆ ಆಗುತ್ತವೆ. ಹಾಗೆ ಅದು ಶುರುವಾಗುವುದು ಇಲಿಯಿಂದ. ಆ ನಂತರ ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಕುರಿ, ಕೋತಿ, ಹುಂಜ, ನಾಯಿ ಮತ್ತು ಹಂದಿ. ಥೇಟ್ ಭಾರತದಲ್ಲಿ ಇರುವಂತೆಯೇ; ಆದರೆ ಇಲ್ಲಿ ಮೇಷದಿಂದ ಮೀನದ ತನಕ ಹೆಸರನ್ನು ನೀಡಿದ್ದೇವೆ. ಆದರೆ ಚೀನಾದಲ್ಲಿ ಒಂದೊಂದು ಇಸವಿಗೆ ಒಂದೊಂದು ಪ್ರಾಣಿಗಳ ಹೆಸರನ್ನು ನೀಡುತ್ತಾರೆ. ಆ ಇಡೀ ವರ್ಷದಲ್ಲಿ ಯಾವುದೇ ತಿಂಗಳು ಅಥವಾ ದಿನದಂದು ಹುಟ್ಟಿದರೂ ಅವರಿಗೆ ಆ ಪ್ರಾಣಿಯೇ ರಾಶಿ ಅಂದುಕೊಳ್ಳಬೇಕು. 2025ನೇ ಇಸವಿಯನ್ನು ಪ್ರತಿನಿಧಿಸುವುದು ‘ಮರದ ಹಾವು (ವುಡ್ ಸ್ನೇಕ್)‘. ಇನ್ನು ಯಾರೆಲ್ಲಾ ‘ಕುದುರೆ‘ ಪ್ರತಿನಿಧಿಸುತ್ತಾರೋ ಅವರ ವರ್ಷ ಭವಿಷ್ಯ ಈ ಲೇಖನದಲ್ಲಿದೆ.
ಕುದುರೆ ರಾಶಿಯನ್ನು ಪ್ರತಿನಿಧಿಸುವವರು ಈ ವರ್ಷ ತಮ್ಮ ಖಾಸಗಿ ಮತ್ತು ವೃತ್ತಿ ಜೀವನದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಒತ್ತಡ ಮತ್ತು ಆತಂಕವು ವರ್ಷದಲ್ಲಿ ಎರಡು ದೊಡ್ಡ ಸವಾಲುಗಳಾಗಿರುತ್ತದೆ. ಆದರೆ ನೀವು ಇದನ್ನೆಲ್ಲಾ ಮೀರಿ ಮುಂದುವರೆಯಬೇಕು. ನಿಮ್ಮ ಕೆಲಸಗಳಿಗೆ ಕೆಲವೊಂದು ಅಡೆತಡೆಗಳು ಎದುರಾಗಬಹುದು. ಆದರೆ ಯೋಚಿಸಿ, ಶ್ರಮ ವಹಿಸಿ ಕೆಲಸ ಮಾಡಿದಾಗ ಉತ್ತಮ ಫಲಿತಾಂಶ ದೊರೆಯುತ್ತದೆ. ಜನರೊಂದಿಗೆ ಪರಿಣಾಮಕಾರಿ ಸಂವಹನ ಇದ್ದರೆ ಒಳಿತು.
1954, 1966, 1978, 1990, 2002, 2014, 2026 ಜನಿಸಿದವರು ʼಕುದುರೆʼ ಗುಂಪಿಗೆ ಸೇರಿದವರು
ಉದ್ಯೋಗ-ವೃತ್ತಿ ಭವಿಷ್ಯ
ಕುದುರೆ ಗುಂಪಿಗೆ ಸೇರಿದವರಿಗೆ 2025 ರಲ್ಲಿ ಹೊಸ ಉದ್ಯೋಗಾವಕಾಶಗಳು ದೊರೆಯುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಒಂದೊಳ್ಳೆ ಕಡೆ ಕೆಲಸ ದೊರೆಯಲಿದೆ. ನಿಮ್ಮ ಉದ್ಯಮದಲ್ಲಿ ಪೈಪೋಟಿ ಇರಬಹುದು. ಆದರೆ ನಿಮ್ಮ ಕೌಶಲ್ಯ, ಪ್ರತಿಭೆಯನ್ನು ಬಳಸಿಕೊಂಡು ನೀವು ಅಪ್ರತಿಮವಾದದ್ದನ್ನು ಸಾಧಿಸಬಹುದು. 2025 ರಲ್ಲಿ ಈ ಗುಂಪಿನವರಿಗೆ ಉದ್ಯೋಗದಲ್ಲಿ ಪ್ರಗತಿಗೆ ಸಾಕಷ್ಟು ಅವಕಾಶಗಳಿವೆ. ಅದರಲ್ಲೂ ಕಷ್ಟಪಟ್ಟು ಕೆಲಸ ಮಾಡಿದವರಿಗೆ ಮತ್ತು ಉತ್ತಮ ನಾಯಕತ್ವದ ಗುಣಗಳನ್ನು ತೋರಿಸಿದವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ. ನೀವು ಬಡ್ತಿ ಪಡೆಯುವ ಸಾಧ್ಯತೆ ಇದೆ. ನಿಮ್ಮ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವುದು ಮುಖ್ಯವಾಗಿದೆ.
ಹಣಕಾಸು ಭವಿಷ್ಯ
2025 ರಲ್ಲಿ ಕುದುರೆ ಗುಂಪಿಗೆ ಸೇರಿದವರಿಗೆ ಉತ್ತಮ ಆರ್ಥಿಕ ಲಾಭವಿದೆ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿರುವವರು ಈ ವರ್ಷ ಮುಂದುವರೆಯಬಹುದು. ಆಸ್ತಿ, ಮನೆ ಅಥವಾ ಫ್ಲಾಟ್, ಅಥವಾ ರಿಯಲ್ ಎಸ್ಟೇಟ್ ಎಲ್ಲೇ ಹೂಡಿಕೆ ಮಾಡುವುದಿದ್ದರೆ ಒಟ್ಟಾರೆ ಪರಿಸ್ಥಿತಿಯನ್ನು ಮೊದಲು ಪರಿಶೀಲಿಸಿ ನಂತರ ನಿರ್ಧಾರ ಕೈಗೊಳ್ಳಿ. ಬಾಂಡ್‌ಗಳು ಹೂಡಿಕೆಯ ಮತ್ತೊಂದು ರೂಪವಾಗಿದ್ದು, 2025 ರಲ್ಲಿ ಕುದುರೆ ರಾಶಿಯವರಿಗೆ ಇದು ಹೆಚ್ಚು ಸುರಕ್ಷಿತವಾಗಿರುತ್ತದೆ. ಷೇರು ಮಾರುಕಟ್ಟೆಯಲ್ಲೂ ಹೂಡಿಕೆ ಮಾಡಬಹುದು. ಒಟ್ಟಿನಲ್ಲಿ ಎಲ್ಲಿ ಹೂಡಿಕೆ ಮಾಡುವುದಿದ್ದರೂ ನಿಮ್ಮ ಆರ್ಥಿಕ ತಜ್ಞರೊಂದಿಗೆ ಚರ್ಚಿಸಿ ಹೂಡಿಕೆ ಮಾಡಿ.
ಪ್ರೀತಿ-ಪ್ರೇಮ, ಮದುವೆ ಭವಿಷ್ಯ
ಈ ವರ್ಷ ಕುದುರೆ ಗುಂಪಿನ ಜನರಿಗೆ ಬಹಳ ರೊಮ್ಯಾಂಟಿಕ್ ಅನುಭವ ನೀಡಲಿದೆ. ನೀವು ಹೊಸ ಜನರನ್ನು ಭೇಟಿ ಆಗುವ ಸಾಧ್ಯತೆ ಇದೆ. ಈ ಭೇಟಿ ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಒಂಟಿಯಾಗಿರುವವರು ಕೂಡಾ ತಮ್ಮ ಜೀವನ ಸಂಗಾತಿಯನ್ನು ಭೇಟಿ ಆಗಬಹುದು. ನಿಮ್ಮಂತೆ ಅಭಿರುಚಿ ಹೊಂದಿರುವ ವ್ಯಕ್ತಿಗಳೊಂದಿಗೆ ನಿಮಗೆ ಪ್ರೀತಿ ಉಂಟಾಗಬಹುದು. ಆದರೆ ನೇರವಾಗಿ ಪ್ರೀತಿಯಲ್ಲಿ ಮುಂದುವರೆಯುವ ಮುನ್ನ, ಮೊದಲು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಿ. ಸ್ನೇಹ ಬೆಳೆಸಿಕೊಳ್ಳಿ. ಈಗಾಗಲೇ ಪ್ರೀತಿಯಲ್ಲಿರುವವರು ಅಥವಾ ಮದುವೆ ಆಗಿರುವವರಿಗೆ 2025 ರಲ್ಲಿ ತಮ್ಮ ಭಾವನೆಯನ್ನು ಬಲಪಡಿಸುವ ವರ್ಷವಾಗಿರುತ್ತದೆ. ತಮ್ಮ ಸಂಗಾತಿಯ ಬಗ್ಗೆ ಕಾಳಜಿ ಇರಲಿ, ಅವರಿಗಾಗಿ ಸಮಯ ಕೊಡಿ, ಇಲ್ಲದಿದ್ದರೆ ನಿಮ್ಮ ನಡುವೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ.
ಆರೋಗ್ಯ ಭವಿಷ್ಯ
2025 ರಲ್ಲಿ ನೀವು ದೈಹಿಕ ಆರೋಗ್ಯದ ಕಡೆ ಬಹಳ ಗಮನ ನೀಡಬೇಕಾಗುತ್ತದೆ. ಜೊತೆಗೆ ಮಾನಸಿಕ ಆರೋಗ್ಯವೂ ಮುಖ್ಯವಾಗಿದೆ. ಅದಕ್ಕಾಗಿ ಮೆಡಿಟೇಷನ್, ವ್ಯಾಯಾಮ, ವಿಶ್ರಾಂತಿ, ಉತ್ತಮ ನಿದ್ರೆ ಬಹಳ ಅವಶ್ಯಕವಾಗಿದೆ. ಇದರಿಂದ ನಿಮ್ಮ ಆರೋಗ್ಯ ಬಹಳ ಸುಧಾರಿಸುತ್ತದೆ. ಸ್ನಾಯು ಸೆಳೆತ, ಕೀಲು ನೋವಿನ ಸಮಸ್ಯೆ ನಿಮ್ಮನ್ನು ಕಾಡಬಹುದು. ನಿಮ್ಮ ದೇಹದ ಸಂಕೇತಗಳ ಕಡೆ ಗಮನ ನೀಡಿ. ದೇಹಕ್ಕೆ ಅಗತ್ಯವಿರುವಷ್ಟು ವಿಶ್ರಾಂತಿ ನೀಡಿ, ಒತ್ತಡಕ್ಕೆ ಒಳಗಾಗುವಂಥ ಕೆಲಸಗಳಿಂದ ದೂರವಿರಿ. ನಿಮ್ಮ ಮಾನಸಿಕ ಅರೋಗ್ಯ ಚೆನ್ನಾಗಿದ್ದರೆ, ದೈಹಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಇವೆಲ್ಲಾ ಸಮಸ್ಯೆಗಳ ಜೊತೆಗೆ ನೀವು ಉದರ ಸಂಬಂಧಿ, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳೂ ಕೂಡಾ ನಿಮ್ಮನ್ನು ಕಾಡಬಹುದು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.