ಚೀನಾ ಪದ್ಧತಿ ವರ್ಷ ಭವಿಷ್ಯ 2025: ಕೋತಿ ಗುಂಪಿಗೆ ಸೇರಿದವರು ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಿರಿ, ಪ್ರೀತಿಪಾತ್ರರಿಗೆ ಸಮಯ ಮೀಸಲಿಡಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಚೀನಾ ಪದ್ಧತಿ ವರ್ಷ ಭವಿಷ್ಯ 2025: ಕೋತಿ ಗುಂಪಿಗೆ ಸೇರಿದವರು ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಿರಿ, ಪ್ರೀತಿಪಾತ್ರರಿಗೆ ಸಮಯ ಮೀಸಲಿಡಿ

ಚೀನಾ ಪದ್ಧತಿ ವರ್ಷ ಭವಿಷ್ಯ 2025: ಕೋತಿ ಗುಂಪಿಗೆ ಸೇರಿದವರು ಹೂಡಿಕೆ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಿರಿ, ಪ್ರೀತಿಪಾತ್ರರಿಗೆ ಸಮಯ ಮೀಸಲಿಡಿ

ಜ್ಯೋತಿಷ್ಯದ ನಂಬಿಕೆ ಒಂದೊಂದು ದೇಶದಲ್ಲಿ ಒಂದೊಂದು ಥರ. ಇಂದಿನ ವರ್ಷ ಭವಿಷ್ಯಕ್ಕೆ ಚೀನಾದಲ್ಲಿ ಅನುಸರಿಸುವ ಜ್ಯೋತಿಷ್ಯ ನಂಬಿಕೆ ಆಧರಿಸಿ ವಿವರ ನೀಡಲಾಗಿದೆ. ಚೀನಾದಲ್ಲಿ ಒಂದು ವರ್ಷಕ್ಕೆ ಒಂದು ಪ್ರಾಣಿಯ ಚಿಹ್ನೆ. ಅಂದರೆ 12 ವರ್ಷಕ್ಕೆ 12 ಪ್ರಾಣಿ. ಈ ಪದ್ಧತಿಯಲ್ಲಿ 9ನೇ ಚಿಹ್ನೆ ಕೋತಿ ಆಗಿರುತ್ತದೆ. 2025ರಲ್ಲಿ ಕೋತಿ ರಾಶಿಯವರ ಭವಿಷ್ಯ ಹೇಗಿರುತ್ತೆ ನೋಡೋಣ.

ಚೀನಾ ಪದ್ಧತಿ ವರ್ಷ ಭವಿಷ್ಯ 2025: ಕೋತಿ ಗುಂಪಿಗೆ ಸೇರಿದವರ ಹೊಸ ವರ್ಷದ ರಾಶಿಫಲ
ಚೀನಾ ಪದ್ಧತಿ ವರ್ಷ ಭವಿಷ್ಯ 2025: ಕೋತಿ ಗುಂಪಿಗೆ ಸೇರಿದವರ ಹೊಸ ವರ್ಷದ ರಾಶಿಫಲ (PC: Canva)

ವರ್ಷ ಭವಿಷ್ಯ 2025 ಚೀನಾ ಪದ್ಧತಿ: ಇಲ್ಲಿ ನೀಡಿರುವುದು 2025ರ ವರ್ಷ ಭವಿಷ್ಯ. ಆದರೆ ಇದು ಭಾರತದಲ್ಲಿ ಅಲ್ಲ; ಚೀನಾ ದೇಶದಲ್ಲಿ ಅನುಸರಿಸುವ ವಿಧಾನ. ಅಲ್ಲಿ ಹನ್ನೆರಡು ವರ್ಷಕ್ಕೆ ಒಂದು ಚಕ್ರ. ಅಂದರೆ ಪ್ರತಿ ವರ್ಷಕ್ಕೆ ಒಂದರಂತೆ ಹನ್ನೆರಡು ವರ್ಷಕ್ಕೆ ಒಂದೊಂದು ಪ್ರಾಣಿಯ ಚಿಹ್ನೆಯನ್ನು ಇರಿಸಿಕೊಂಡಿದ್ದಾರೆ. ಹನ್ನೆರಡು ವರ್ಷದ ನಂತರ ಅವೇ ಆರಂಭದಿಂದ ಪುನರಾವರ್ತನೆ ಆಗುತ್ತವೆ. ಹಾಗೆ ಅದು ಶುರುವಾಗುವುದು ಇಲಿಯಿಂದ. ಆ ನಂತರ ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಕುರಿ, ಕೋತಿ, ಹುಂಜ, ನಾಯಿ ಮತ್ತು ಹಂದಿ. ಥೇಟ್ ಭಾರತದಲ್ಲಿ ಇರುವಂತೆಯೇ; ಆದರೆ ಇಲ್ಲಿ ಮೇಷದಿಂದ ಮೀನದ ತನಕ ಹೆಸರನ್ನು ನೀಡಿದ್ದೇವೆ. ಆದರೆ ಚೀನಾದಲ್ಲಿ ಒಂದೊಂದು ಇಸವಿಗೆ ಒಂದೊಂದು ಪ್ರಾಣಿಗಳ ಹೆಸರನ್ನು ನೀಡುತ್ತಾರೆ. ಆ ಇಡೀ ವರ್ಷದಲ್ಲಿ ಯಾವುದೇ ತಿಂಗಳು ಅಥವಾ ದಿನದಂದು ಹುಟ್ಟಿದರೂ ಅವರಿಗೆ ಆ ಪ್ರಾಣಿಯೇ ರಾಶಿ ಅಂದುಕೊಳ್ಳಬೇಕು. 2025ನೇ ಇಸವಿಯನ್ನು ಪ್ರತಿನಿಧಿಸುವುದು ‘ಮರದ ಹಾವು (ವುಡ್ ಸ್ನೇಕ್)‘. ಇನ್ನು ಯಾರೆಲ್ಲಾ ‘ಕೋತಿ‘ಯನ್ನು ಪ್ರತಿನಿಧಿಸುತ್ತಾರೋ ಅವರ ವರ್ಷ ಭವಿಷ್ಯ ಈ ಲೇಖನದಲ್ಲಿದೆ.

ಕೋತಿ ರಾಶಿಯನ್ನು ಪ್ರತಿನಿಧಿಸುವವರಿಗೆ 2025 ಮಿಶ್ರ ಪ್ರತಿಫಲ ನೀಡುತ್ತದೆ. ಕೋತಿಯು ಬುದ್ಧಿವಂತಿಕೆ, ಸೃಜನಶೀಲತೆ ಸಂಬಂಧಿಸಿದೆ. ಈ ರಾಶಿಯ ಜನರಿಗೆ ಈ ವರ್ಷ ಸೂಕ್ತ ರೀತಿಯಲ್ಲಿ ನಡೆಸಲು ಸಹಾಯವಾಗಲಿದೆ. ನೀವು ಎಷ್ಟೇ ಬುದ್ಧಿವಂತರಾದರೂ ಕೆಲವೊಂದು ವಿಚಾರಗಳಲ್ಲಿ ನೀವು ಸಣ್ಣ ಪುಟ್ಟ ಸಮಸ್ಯೆಗಳನ್ನು ಎದುರಿಸಬಹುದು. ನೀವು ನಂಬುವ ಜನರು ನಿಮಗೆ ಪ್ರಾಮಾಣಿಕರಾಗಿದ್ದಾರೆಯೇ ಇಲ್ಲವೇ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ.

1956, 1968, 1980, 1992, 2004, 2016, 2028 ರಲ್ಲಿ ಜನಿಸಿದವರು ʼಕೋತಿʼ ಗುಂಪಿಗೆ ಸೇರಿದವರು

ಉದ್ಯೋಗ-ವೃತ್ತಿ ಭವಿಷ್ಯ

ಈ ವರ್ಷ ಕೋತಿ ಗುಂಪಿಗೆ ಸೇರಿದ ಜನರು ವೃತ್ತಿ ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ. ನಿಮ್ಮ ದಾರಿಯಲ್ಲಿ ಬರುವ ಸಮಸ್ಯೆಗಳನ್ನು ಪರಿಹರಿಸಲು ನಿಮ್ಮ ಸಾಮರ್ಥ್ಯ, ಪ್ರತಿಭೆ ಸಹಾಯ ಮಾಡುತ್ತದೆ. ಉದ್ಯೋಗ ಬದಲಾಯಿಸಲು ಬಯಸುತ್ತಿರುವವರಿಗೆ ಹೊಸ ಕ್ಷೇತ್ರದಲ್ಲಿ ಅವಕಾಶಗಳು ದೊರೆಯಲಿದೆ. ನೀವು ಈಗಾಗಲೇ ಉದ್ಯೋಗದಲ್ಲಿದ್ದರೆ, ಈ ವರ್ಷ ನೀವು ಬಡ್ತಿಗಾಗಿ ಪ್ರಯತ್ನಪಡಬೇಕಾಗಬಹುದು. ಶ್ರದ್ಧೆಯಿಂದ ಕೆಲಸ ಮಾಡುವ ಉದ್ಯೋಗಿಗಳು ಹೆಚ್ಚುವರಿ ಜವಾಬ್ದಾರಿಗಳನ್ನು ಪಡೆಯಬಹುದು. ಆದರೆ ಇಲ್ಲಿ ನಿಮ್ಮ ಕಠಿಣ ಪರಿಶ್ರಮ ಮುಖ್ಯವಾಗಿರುತ್ತದೆ. ಆದರೆ ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ ಆದ್ದರಿಂದ ತಾಳ್ಮೆ ಇರಲಿ.

ಹಣಕಾಸು ಭವಿಷ್ಯ

ಕೋತಿ ಗುಂಪಿಗೆ ಸೇರಿದವರ ಆರ್ಥಿಕ ಪರಿಸ್ಥಿತಿ ಈ ವರ್ಷ ಸರಾಸರಿ ಮಟ್ಟದಲ್ಲಿದೆ. ಈ ಗುಂಪಿಗೆ ಸೇರಿದವರು ಹಣಕಾಸಿನ ನಿರ್ಧಾರಗಳನ್ನು ಮಾಡುವವರು ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಹಣಕಾಸಿನ ವಿಚಾರದಲ್ಲಿ ನೀವು ಬಹಳಷ್ಟು ಜಾಗರೂಕರಾಗಿರಬೇಕು. ನೀವು ಆರಂಭಿಸಿದ ಹೊಸ ವ್ಯವಹಾರಗಳು ಯಶಸ್ವಿಯಾಗಬಹುದು. ಆದರೆ ಯಾವುದೇ ಹೊಸ ಯೋಜನೆ ಆರಂಭಿಸುವ ಮುನ್ನ ಹಣಕಾಸು ತಜ್ಞರ ಸಲಹೆ ಪಡೆಯುವುದು ಉತ್ತಮ. ಯೋಜನೆ ಇಲ್ಲದೆ ಯಾವುದೇ ವ್ಯವಹಾರದಲ್ಲಿ ತೊಡಗಬೇಡಿ. ಬದಲಾಗಿ, ನಿಮ್ಮ ಅನುಭವ ಮತ್ತು ಜ್ಞಾನಕ್ಕೆ ಸರಿಹೊಂದುವ ವ್ಯಾಪಾರ ಅವಕಾಶಗಳನ್ನು ಗುರಿಯಾಗಿರಿಸಿ ಅದರಲ್ಲಿ ಹೂಡಿಕೆ ಮಾಡಿ. ವೈಯಕ್ತಿಕ ಹಣಕಾಸಿನ ವಿಷಯದಲ್ಲಿ ಬಜೆಟ್ ಮತ್ತು ಉಳಿತಾಯ ತಂತ್ರಗಳನ್ನು ಮರುಪರಿಶೀಲಿಸಲು ಇದು ಸರಿಯಾದ ಸಮಯವಾಗಿದೆ. ಹೀಗೆ ಮಾಡಿದರೆ ಭವಿಷ್ಯದಲ್ಲಿ ನಿಮಗೆ ಆರ್ಥಿಕ ಸಮಸ್ಯೆಗಳು ಉದ್ಭವಿಸುವುದಿಲ್ಲ.

ಪ್ರೀತಿ-ಪ್ರೇಮ, ಮದುವೆ ಭವಿಷ್ಯ

ಸಂಬಂಧಗಳ ವಿಚಾರಕ್ಕೆ ಸಂಬಂಧಿಸಿದಂತೆ ಕೋತಿ ಗುಂಪಿಗೆ ಸೇರಿದವರು 2025 ರಲ್ಲಿ ಬಹಳ ಜಾಗರೂಕರಾಗಿರಬೇಕು. ತಪ್ಪು ತಿಳುವಳಿಕೆಯನ್ನು ತಪ್ಪಿಸಲು, ನಿಮ್ಮ ಆತ್ಮೀಯರೊಂದಿಗೆ, ಪ್ರೀತಿಪಾತ್ರರೊಂದಿಗೆ ಕುಳಿತು ಸಣ್ಣ ಪುಟ್ಟ ಮನಸ್ತಾಪಗಳನ್ನು ಪರಿಹರಿಸಿಕೊಳ್ಳಿ. ಕೆಲವರು ನಿಮ್ಮ ದೃಷ್ಟಿಕೋನ, ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಇರಬಹುದು. ಆ ನಿರೀಕ್ಷೆಗಳನ್ನು ಬಿಟ್ಟು ನಿವೇ ಹೊಂದಿಕೊಳ್ಳುವವರಾದರೆ ಎಲ್ಲಾ ಸಮಸ್ಯೆ ಬಗೆಹರಿದಂತೆ. ಒಬ್ಬಂಟಿ ಇರುವವರು ಶೀಘ್ರವೇ ಹೊಸ ವ್ಯಕ್ತಿಗಳನ್ನು ಭೇಟಿ ಆಗಲಿದ್ದೀರಿ. ಆದರೆ ದೈಹಿಕ ಆಕರ್ಷಣೆಯ ಮೇಲೆ ಕೇಂದ್ರೀಕರಿಸುವುದಕ್ಕಿಂತ ಹೆಚ್ಚಾಗಿ ಜೀವನದ ಮೌಲ್ಯಗಳು, ಗುರಿಗಳು ಮತ್ತು ಜೀವನ ಪದ್ಧತಿಗಳನ್ನು ಹೊಂದಿದ್ದೀರಾ ಅಥವಾ ಇಲ್ಲವೇ ಎಂಬುದರ ಕುರಿತು ಯೋಚಿಸುವುದು ಮುಖ್ಯವಾಗಿದೆ. ಈಗಾಗಲೇ ನೀವು ಸಂಬಂಧದಲ್ಲಿದ್ದರೆ 2025 ಅನ್ಯೋನ್ಯತೆಯನ್ನು ಹೆಚ್ಚಿಸುವ ವರ್ಷವಾಗಿರುತ್ತದೆ. ಆದರೆ ನಿಮ್ಮ ಪ್ರೀತಿಪಾತ್ರರಿಗಾಗಿ ನೀವು ಸಮಯ ಕೊಡಿ, ಇಲ್ಲದಿದ್ದರೆ ಸಣ್ಣ ಪುಟ್ಟ ಸಮಸ್ಯೆಗಳು ಉಂಟಾಗಬಹುದು.

ಆರೋಗ್ಯ ಭವಿಷ್ಯ

2025 ರಲ್ಲಿ ಈ ಗುಂಪಿಗೆ ಸೇರಿದವರ ಆರೋಗ್ಯ ಸ್ವಲ್ಪ ಏರುಪೇರಾಗಬಹುದು. ಕೋತಿ ಗುಂಪಿಗೆ ಸೇರಿದವರು ಸದಾ ಸಕ್ರಿಯರಾಗಿ, ಉತ್ಸಾಹಭರಿತರಾಗಿರುವುದರಿಂದ ದೈಹಿಕವಾಗಿ ಬಳಲಬಹುದು. ಒತ್ತಡ, ನಿದ್ರೆಯ ಕೊರತೆತೆಯಿಂದ ಅನಾರೋಗ್ಯ ಕಾಡಬಹುದು. ನರಮಂಡಲದ ಸಮಸ್ಯೆ ಜೊತೆಗೆ ತಲೆ ನೋವು, ನಿದ್ರಾಹೀನತೆಯಿಂದ ನೀವು ಬಳಲುವ ಸಾಧ್ಯತೆ ಇದೆ. ಫೆಬ್ರವರಿ ಮತ್ತು ಜುಲೈ ತಿಂಗಳಲ್ಲಿ ನೀವು ಹೆಚ್ಚು ಅನಾರೋಗ್ಯದಿಂದ ಬಳಲುವ ಸಾಧ್ಯತೆ ಇದೆ. ದೈಹಿಕ ಆರೋಗ್ಯದಷ್ಟೇ, ಮಾನಸಿಕ ಆರೋಗ್ಯದ ಕಡೆಗೂ ಗಮನ ಹರಿಸಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.