ಚೀನಾ ಪದ್ಧತಿ ವರ್ಷ ಭವಿಷ್ಯ 2025: ಮೊಲದ ಗುಂಪಿಗೆ ಸೇರಿದವರು ಹಣಕಾಸಿನ ವಿಚಾರದಲ್ಲಿ ಎಚ್ಚರವಿರಬೇಕು, ಆರೋಗ್ಯದ ಕಡೆಗೂ ಗಮನವಿರಲಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಚೀನಾ ಪದ್ಧತಿ ವರ್ಷ ಭವಿಷ್ಯ 2025: ಮೊಲದ ಗುಂಪಿಗೆ ಸೇರಿದವರು ಹಣಕಾಸಿನ ವಿಚಾರದಲ್ಲಿ ಎಚ್ಚರವಿರಬೇಕು, ಆರೋಗ್ಯದ ಕಡೆಗೂ ಗಮನವಿರಲಿ

ಚೀನಾ ಪದ್ಧತಿ ವರ್ಷ ಭವಿಷ್ಯ 2025: ಮೊಲದ ಗುಂಪಿಗೆ ಸೇರಿದವರು ಹಣಕಾಸಿನ ವಿಚಾರದಲ್ಲಿ ಎಚ್ಚರವಿರಬೇಕು, ಆರೋಗ್ಯದ ಕಡೆಗೂ ಗಮನವಿರಲಿ

ಜ್ಯೋತಿಷ್ಯದ ನಂಬಿಕೆ ಒಂದೊಂದು ದೇಶದಲ್ಲಿ ಒಂದೊಂದು ಥರ. ಇಂದಿನ ವರ್ಷ ಭವಿಷ್ಯಕ್ಕೆ ಚೀನಾದಲ್ಲಿ ಅನುಸರಿಸುವ ಜ್ಯೋತಿಷ್ಯ ನಂಬಿಕೆ ಆಧರಿಸಿ ವಿವರ ನೀಡಲಾಗಿದೆ. ಚೀನಾದಲ್ಲಿ ಒಂದು ವರ್ಷಕ್ಕೆ ಒಂದು ಪ್ರಾಣಿಯ ಚಿಹ್ನೆ. ಅಂದರೆ 12 ವರ್ಷಕ್ಕೆ 12 ಪ್ರಾಣಿ. ಈ ಪದ್ಧತಿಯಲ್ಲಿ 4ನೇ ಚಿಹ್ನೆಯು ಮೊಲ ಆಗಿರುತ್ತದೆ. 2025ರಲ್ಲಿ ಮೊಲ ರಾಶಿಯವರ ಭವಿಷ್ಯ ಹೇಗಿರುತ್ತೆ ಎಂದು ತಿಳಿಯೋಣ.

ಚೀನಾ ಪದ್ಧತಿ ವರ್ಷ ಭವಿಷ್ಯ 2025: ಮೊಲದ ಗುಂಪಿಗೆ ಸೇರಿದವರ ಹೊಸ ವರ್ಷದ ರಾಶಿಫಲ
ಚೀನಾ ಪದ್ಧತಿ ವರ್ಷ ಭವಿಷ್ಯ 2025: ಮೊಲದ ಗುಂಪಿಗೆ ಸೇರಿದವರ ಹೊಸ ವರ್ಷದ ರಾಶಿಫಲ (PC: Canva)

ವರ್ಷ ಭವಿಷ್ಯ 2025 ಚೀನಾ ಪದ್ಧತಿ: ಇಲ್ಲಿ ನೀಡಿರುವುದು 2025ರ ವರ್ಷಭವಿಷ್ಯ. ಆದರೆ ಇದು ಭಾರತದಲ್ಲಿ ಅಲ್ಲ; ಚೀನಾ ದೇಶದಲ್ಲಿ ಅನುಸರಿಸುವ ವಿಧಾನ. ಅಲ್ಲಿ ಹನ್ನೆರಡು ವರ್ಷಕ್ಕೆ ಒಂದು ಚಕ್ರ. ಅಂದರೆ ಪ್ರತಿ ವರ್ಷಕ್ಕೆ ಒಂದರಂತೆ ಹನ್ನೆರಡು ವರ್ಷಕ್ಕೆ ಒಂದೊಂದು ಪ್ರಾಣಿಯ ಚಿಹ್ನೆಯನ್ನು ಇರಿಸಿಕೊಂಡಿದ್ದಾರೆ. ಹನ್ನೆರಡು ವರ್ಷದ ನಂತರ ಅವೇ ಆರಂಭದಿಂದ ಪುನರಾವರ್ತನೆ ಆಗುತ್ತವೆ. ಹಾಗೆ ಅದು ಶುರುವಾಗುವುದು ಇಲಿಯಿಂದ. ಆ ನಂತರ ಎತ್ತು, ಹುಲಿ, ಮೊಲ, ಡ್ರ್ಯಾಗನ್, ಹಾವು, ಕುದುರೆ, ಕುರಿ, ಕೋತಿ, ಹುಂಜ, ನಾಯಿ ಮತ್ತು ಹಂದಿ. ಥೇಟ್ ಭಾರತದಲ್ಲಿ ಇರುವಂತೆಯೇ; ಆದರೆ ಇಲ್ಲಿ ಮೇಷದಿಂದ ಮೀನದ ತನಕ ಹೆಸರನ್ನು ನೀಡಿದ್ದೇವೆ. ಆದರೆ ಚೀನಾದಲ್ಲಿ ಒಂದೊಂದು ಇಸವಿಗೆ ಒಂದೊಂದು ಪ್ರಾಣಿಗಳ ಹೆಸರನ್ನು ನೀಡುತ್ತಾರೆ. ಆ ಇಡೀ ವರ್ಷದಲ್ಲಿ ಯಾವುದೇ ತಿಂಗಳು ಅಥವಾ ದಿನದಂದು ಹುಟ್ಟಿದರೂ ಅವರಿಗೆ ಆ ಪ್ರಾಣಿಯೇ ರಾಶಿ ಅಂದುಕೊಳ್ಳಬೇಕು. 2025ನೇ ಇಸವಿಯನ್ನು ಪ್ರತಿನಿಧಿಸುವುದು ‘ಮರದ ಹಾವು (ವುಡ್ ಸ್ನೇಕ್)‘. ಇನ್ನು ಯಾರೆಲ್ಲಾ ‘ಮೊಲ‘ವನ್ನು ಪ್ರತಿನಿಧಿಸುತ್ತಾರೋ ಅವರ ವರ್ಷ ಭವಿಷ್ಯ ಈ ಲೇಖನದಲ್ಲಿದೆ.

ಈ ಮೊಲದ ರಾಶಿಯನ್ನು ಪ್ರತಿನಿಧಿಸುವವರು ತಮ್ಮ ಕಳೆದುಹೋದ ವಿಚಾರಗಳ ಬಗ್ಗೆ ಒಮ್ಮೆ ಯೋಚಿಸಬೇಕು. ಇದು ಭವಿಷ್ಯದಲ್ಲಿ ಉತ್ತಮ ಪಾಠಗಳನ್ನು ಕಲಿಯುವರಲ್ಲಿ ಬಹಳ ಸಹಕಾರಿಯಾಗಿದೆ. ಈ ವರ್ಷ ಆರ್ಥಿಕವಾಗಿ ಬಹಳ ಉತ್ತಮವಾಗಿದೆ. ಅದರೆ ಅನಗತ್ಯ ಖರ್ಚುಗಳು, ಬೇಡದ ಹೂಡಿಕೆಗಳಿಂದ ದೂರವಿದ್ದರೆ ಒಳಿತು. ನೀವು ಮಾಡಬೇಕೆಂದಿರುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ , ನಿಮ್ಮ ಮನಸ್ಸನ್ನು ಮುಕ್ತವಾಗಿಟ್ಟುಕೊಳ್ಳಿ.

1951, 1963, 1975, 1987, 1999, 2011, 2023 ರಲ್ಲಿ ಜನಿಸಿದವರು ʼಮೊಲʼ

ಉದ್ಯೋಗ-ವೃತ್ತಿ ಭವಿಷ್ಯ

ನಿಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಉದ್ಯೋಗನ್ನು ಬದಲಾಯಿಸಲು ಅಥವಾ ಕೆಲಸ ಹುಡುಕುತ್ತಿರುವವರಿಗೆ ಇದು ಸೂಕ್ತ ಸಮಯ. ಆದರೆ ನಿಮ್ಮ ಪ್ರತಿಭೆ ಮತ್ತು ಸಾಧನೆ ನಿಮ್ಮ ವೃತ್ತಿ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ನೆನಪಿಡಿ. ನಿಮಗೆ ಕೊಟ್ಟ ಜವಾಬ್ದಾರಿಗಳನ್ನು ನೀವು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ಆದರೂ ನಿಮ್ಮ ವೃತ್ತಿಯಲ್ಲಿ ನೀವು ಸಣ್ಣ ಪುಟ್ಟ ಅಡೆತಡೆಗಳನ್ನು ಎದುರಿಸುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಕೆಲಸದಲ್ಲಿ ಪ್ರತಿಫಲ ಪಡೆಯಲು ಆರಂಭದಲ್ಲಿ ಸ್ವಲ್ಪ ಸಮಯ ಬೇಕಾಗಬಹುದು. ಮೊಲದ ಗುಂಪಿಗೆ ಸೇರಿದ ಜನರು ಸಾಕಷ್ಟು ಸಾಮರ್ಥ್ಯಗಳನ್ನು ಹೊಂದಿದ್ದರೂ ಕಾರಣಾಂತರಗಳಿಂದ ಅವರ ಕೌಶಲ್ಯಗಳು ಎಲೆಮರೆ ಕಾಯಿಯಂತೆ ಉಳಿದುಹೋಗಬಹುದು. ಆದರೆ ನೀವು ಏನೆಂದು ಸಾಬೀತು ಮಾಡಲು ನಿರಂತರ ಕಲಿಕೆ, ಕಠಿಣ ಪರಿಶ್ರಮ ಅಗತ್ಯ. ಕೆಲಸದ ಸ್ಥಳದಲ್ಲಿ ಏರ್ಪಡಿಸುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನಿಮಗೆ ಅನುಕೂಲವಾಗಬಹುದು.

ಹಣಕಾಸು ವಿಚಾರ

2025 ಆರ್ಥಿಕ ಜಾತಕದ ಪ್ರಕಾರ ಮೊಲದ ಚಿಹ್ನೆಗೆ ಸೇರಿದ ಜನರು, ಹಣಕಾಸು ಮತ್ತು ಹೂಡಿಕೆ ಮಾಡುವ ಮುನ್ನ ತಜ್ಞರ ಬಳಿ ಸಲಹೆ ಪಡೆದುಕೊಳ್ಳಬೇಕು. ಒಂದು ವೇಳೆ ಹಣಕಾಸಿನ ಸಮಸ್ಯೆ ಎದುರಾದಲ್ಲಿ ಅದನ್ನು ಸರಿದೂಗಿಸುವ ಸಾಮರ್ಥ್ಯದ ಬಗ್ಗೆ ಅರಿವು ಇರಬೇಕು. ಸಮಸ್ಯೆ ಬಾರದಂತೆ ತಡೆಯಲು ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಷೇರುಗಳು, ಬಾಂಡ್‌ಗಳು, ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬಹುದು. ಆದರೆ ಅದಕ್ಕೂ ಮುನ್ನ ಆಯಾ ಕ್ಷೇತ್ರಗಳ ಬಗ್ಗೆ ನೀವು ಕೂಲಂಕಶವಾಗಿ ತಿಳಿದುಕೊಂಡಿರಬೇಕು. ಹಣ ಕಳೆದುಕೊಳ್ಳುವುದನ್ನು ತಪ್ಪಿಸಲು ನೀವು ಸರ್ಕಾರಿ ಯೋಜನೆಗಳು ಅಥವಾ ಉತ್ತಮ ಗುಣಮಟ್ಟದ ಕಾರ್ಪೊರೇಟ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಇದು ಕಡಿಮೆ ಆದಾಯ ನೀಡಿದರೂ ನಿಮ್ಮ ಹಣಕ್ಕೆ ಯಾವುದೇ ಮೋಸವಾಗುವುದಿಲ್ಲ.

ಪ್ರೀತಿ-ಪ್ರೇಮ, ಮದುವೆ ಇತ್ಯಾದಿ

ಒಬ್ಬಂಟಿ ಇರುವ ಮೊಲದ ಗುಂಪಿಗೆ ಸೇರಿದವರು 2025ರಲ್ಲಿ ಹೊಸ ವ್ಯಕ್ತಿಯನ್ನು ಭೇಟಿಯಾಗಬಹುದು. ಆನ್‌ಲೈನ್‌ ಡೇಟಿಂಗ್‌ ಸಂಬಂಧಗಳು ನಿಮ್ಮ ಪ್ರಾಮಾಣಿಕತೆಯ ಮೇಲೆ ಅವಲಂಬಿತವಾಗಿದೆ. ಇದರಿಂದ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಪರಸ್ಪರ ಕಾಳಜಿ ಮಾಡಬೇಕು. ಒಬ್ಬರಿಗೊಬ್ಬರು ಮೆಚ್ಚುಗೆ ವ್ಯಕ್ತಪಡಿಸಬೇಕು. ಪರಸ್ಪರ ಕಷ್ಟ, ಇಷ್ಟಗಳನ್ನು ಕೇಳಬೇಕು. ಅವರ ಅಭಿರುಚಿಗಳನ್ನು ತಿಳಿದುಕೊಳ್ಳಬೇಕು. ಇದರಿಂದ ನಿಮ್ಮ ಬಂಧ ಹೆಚ್ಚಾಗುವುದರಲ್ಲಿ ಅನುಮಾನವೇ ಇಲ್ಲ. ತಮ್ಮ ನಿರೀಕ್ಷೆಗಳು, ಕನಸುಗಳು ಮತ್ತು ಆತಂಕಗಳನ್ನು ಸಂಗಾತಿಯೊಂದಿಗೆ ಹಂಚಿಕೊಳ್ಳುವ ಜನರು ಬಲವಾದ ಸಂಬಂಧಗಳನ್ನು ನಿರ್ಮಿಸುತ್ತಾರೆ ಎಂಬುದು ನೆನಪಿರಲಿ.

ಆರೋಗ್ಯ ಭವಿಷ್ಯ

2025ರಲ್ಲಿ ನೀವು ಯಾವುದೇ ಅನಾರೋಗ್ಯ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ಆರೋಗ್ಯದ ಕಾಳಜಿ ಮಾಡುವುದು ಬಹಳ ಅಗತ್ಯವಾಗಿದೆ. ಅಥವಾ ಈಗಾಗಲೇ ನೀವು ಯಾವುದಾದರೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅದನ್ನು ಹೋಗಲಾಡಿಸಿಕೊಳ್ಳಲು ಕಾಳಜಿ ಮಾಡಬೇಕಾಗಿದೆ. ಇದಕ್ಕಾಗಿ ನೀವು ಯೋಗ, ಈಜು, ಸೈಕ್ಲಿಂಗ್‌ನಂಥ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಏರೋಬಿಕ್ಸ್‌ನಂಥ ವರ್ಕೌಟ್‌ಗಳನ್ನು ಮಾಡಬೇಕು. ಇದರಿಂದ ನೀವು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿ ಕೂಡಾ ಸದೃಢರಾಗಿರುತ್ತೀರಿ. ಶ್ವಾಸಕೋಶ ಹಾಗೂ ಬೆನ್ನುಮೂಲೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಕಾಡುವ ಸಾಧ್ಯತೆ ಹೆಚ್ಚಾಗಿದೆ. ನಿಮ್ಮ ಉಸಿರಾಟದ ಸಮಸ್ಯೆಯನ್ನು ನೀವು ಕಡಿಮೆ ಮಾಡಿಕೊಳ್ಳಲು ಧೂಮಪಾನ ತ್ಯಜಿಸಬೇಕು. ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಿ, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸದೆ ವೈದ್ಯರನ್ನು ಭೇಟಿ ಮಾಡಬೇಕು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.